India vs Sri Lanka 2nd T20: ಟೀಮ್ ಇಂಡಿಯಾದಲ್ಲಿ 2 ಬದಲಾವಣೆ ಸಾಧ್ಯತೆ
India vs Sri lanka 2nd T20 Predicted Playing 11: ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಸರಣಿ ಭಾರತದ ವಶವಾಗಲಿದೆ. ಹೀಗಾಗಿ ಮೊದಲ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ಆಟಗಾರರನ್ನು ಕೈಬಿಟ್ಟು ಬಲಿಷ್ಠ ಪ್ಲೇಯಿಂಗ್ ಇಲೆವೆನ್ನೊಂದಿಗೆ ಹಾರ್ದಿಕ್ ಪಾಂಡ್ಯ ಪಡೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.
India vs Sri Lanka 2nd T20: ಭಾರತ-ಶ್ರೀಲಂಕಾ ನಡುವಣ 3 ಪಂದ್ಯಗಳ ಟಿ20 ಸರಣಿಯ 2ನೇ ಪಂದ್ಯ ನಾಳೆ (ಜ.5) ನಡೆಯಲಿದೆ. ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಷಿಯೇಷನ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) ಮಹತ್ವದ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೂ, ಬ್ಯಾಟ್ಸ್ಮನ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಇದಾಗ್ಯೂ ಬೌಲರ್ಗಳ ಪರಾಕ್ರಮದಿಂದಾಗಿ ಭಾರತ ತಂಡವು 2 ರನ್ಗಳಿಂದ ರೋಚಕ ಜಯ ಸಾಧಿಸಿತ್ತು.
ಇದೀಗ 2ನೇ ಪಂದ್ಯಕ್ಕೆ ಸಜ್ಜಾಗಿರುವ ಟೀಮ್ ಇಂಡಿಯಾ ಬ್ಯಾಟಿಂಗ್ ಲೈನಪ್ನಲ್ಲಿ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಏಕೆಂದರೆ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ (5 ರನ್) ಅವರಿಂದ ನಿರೀಕ್ಷಿತ ಆಟ ಮೂಡಿಬಂದಿರಲಿಲ್ಲ. ಅದರಲ್ಲೂ ಒಂದು ಜೀವದಾನ ಸಿಕ್ಕ ಬಳಿಕ ಎಚ್ಚರಿಕೆಯಿಂದ ಬ್ಯಾಟ್ ಬೀಸುವುದನ್ನು ಮರೆತ ಸ್ಯಾಮ್ಸನ್ ಬೇಜವಾಬ್ದಾರಿಯುತ ಹೊಡೆತಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದರು. ಹೀಗಾಗಿ 2ನೇ ಪಂದ್ಯದಿಂದ ಸ್ಯಾಮ್ಸನ್ ಅವರನ್ನು ಕೈ ಬಿಡುವ ಸಾಧ್ಯತೆಯಿದೆ.
ಅಲ್ಲದೆ 4ನೇ ಕ್ರಮಾಂಕದಲ್ಲಿ ರಾಹುಲ್ ತ್ರಿಪಾಠಿಗೆ ಅವಕಾಶ ನೀಡಬಹುದು. ಏಕೆಂದರೆ ಕಳೆದ ಕೆಲ ಸರಣಿಗಳಿಂದ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಳ್ಳುತ್ತಿರುವ ತ್ರಿಪಾಠಿಗೆ ಇನ್ನೂ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದರ್ಪಣೆ ಮಾಡುವ ಅವಕಾಶ ಸಿಕ್ಕಿಲ್ಲ. ಹೀಗಾಗಿ 2ನೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಬದಲಿಗೆ ರಾಹುಲ್ ತ್ರಿಪಾಠಿಗೆ ಚೊಚ್ಚಲ ಅವಕಾಶ ನೀಡುವ ಸಾಧ್ಯೆತೆಯಿದೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಎಲ್ಲಾ ಬೌಲರ್ಗಳು ಉತ್ತಮ ಪ್ರದರ್ಶನ ನೀಡಿದರೂ ಹರ್ಷಲ್ ಪಟೇಲ್ ದುಬಾರಿಯಾಗಿದ್ದರು. 4 ಓವರ್ ಬೌಲಿಂಗ್ ಮಾಡಿದ್ದ ಹರ್ಷಲ್ 2 ವಿಕೆಟ್ ಕಬಳಿಸಿ 41 ರನ್ ನೀಡಿದ್ದರು. ಅತ್ತ ಜ್ವರದ ಕಾರಣ ಮೊದಲ ಪಂದ್ಯ ತಪ್ಪಿಸಿಕೊಂಡಿದ್ದ ಅರ್ಷದೀಪ್ ಸಿಂಗ್ 2ನೇ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಒಂದು ವೇಳೆ ಅರ್ಷದೀಪ್ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಂಡರೆ ಹರ್ಷಲ್ ಪಟೇಲ್ ಸ್ಥಾನ ಕಳೆದುಕೊಳ್ಳಬಹುದು.
ಹಾಗೆಯೇ ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ವಿಫಲವಾಗಿರುವ ಕಾರಣ ಟೀಮ್ ಇಂಡಿಯಾ 2ನೇ ಪಂದ್ಯದಲ್ಲಿ ಹೆಚ್ಚುವರಿ ಆಲ್ರೌಂಡರ್ನ ಆಡಿಸಬಹುದು. ಈ ಪಟ್ಟಿಯಲ್ಲಿ ವಾಷಿಂಗ್ಟನ್ ಸುಂದರ್ ಹೆಸರು ಮುಂಚೂಣಿಯಲ್ಲಿದೆ. ಒಂದು ವೇಳೆ ಅರ್ಷದೀಪ್ ಸಿಂಗ್ ಆಡದಿದ್ದರೆ, ಹರ್ಷಲ್ ಬದಲಿಗೆ ಸುಂದರ್ಗೆ ಚಾನ್ಸ್ ನೀಡುವ ಸಾಧ್ಯತೆಯನ್ನು ಕೂಡ ತಳ್ಳಿಹಾಕುವಂತಿಲ್ಲ.
ಇದನ್ನೂ ಓದಿ: RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
ಈ ಎರಡು ಬದಲಾವಣೆಯೊಂದಿಗೆ ಟೀಮ್ ಇಂಡಿಯಾ 2ನೇ ಪಂದ್ಯದಲ್ಲಿ ಕಣಕ್ಕಿಳಿಯಬಹುದು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆದ್ದರೆ ಸರಣಿ ಭಾರತದ ವಶವಾಗಲಿದೆ. ಹೀಗಾಗಿ ಮೊದಲ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ಆಟಗಾರರನ್ನು ಕೈಬಿಟ್ಟು ಬಲಿಷ್ಠ ಪ್ಲೇಯಿಂಗ್ ಇಲೆವೆನ್ನೊಂದಿಗೆ ಹಾರ್ದಿಕ್ ಪಾಂಡ್ಯ ಪಡೆ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ. ಅದರಂತೆ ಟೀಮ್ ಇಂಡಿಯಾದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್ ಹೀಗಿರಲಿದೆ.
- ಇಶಾನ್ ಕಿಶನ್ (ವಿಕೆಟ್ ಕೀಪರ್)
- ಶುಭ್ಮನ್ ಗಿಲ್
- ಸೂರ್ಯಕುಮಾರ್ ಯಾದವ್
- ರಾಹುಲ್ ತ್ರಿಪಾಠಿ
- ಹಾರ್ದಿಕ್ ಪಾಂಡ್ಯ (ನಾಯಕ)
- ದೀಪಕ್ ಹೂಡಾ
- ಅಕ್ಷರ್ ಪಟೇಲ್
- ಅರ್ಷದೀಪ್ ಸಿಂಗ್/ವಾಷಿಂಗ್ಟನ್ ಸುಂದರ್
- ಶಿವಂ ಮಾವಿ
- ಉಮ್ರಾನ್ ಮಲಿಕ್
- ಯುಜುವೇಂದ್ರ ಚಾಹಲ್
ಟೀಮ್ ಇಂಡಿಯಾ ಟಿ20 ತಂಡ:
ಹಾರ್ದಿಕ್ ಪಾಂಡ್ಯ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ರುತುರಾಜ್ ಗಾಯಕ್ವಾಡ್, ಶುಭಮನ್ ಗಿಲ್, ಸೂರ್ಯಕುಮಾರ್ ಯಾದವ್ (ಉಪನಾಯಕ), ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಉಮ್ರಾನ್ ಮಲಿಕ್, ಶಿವಂ ಮಾವಿ, ಮುಖೇಶ್ ಕುಮಾರ್.