ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ನಿರ್ಮಿಸಿದ ಶಿವಂ ದುಬೆ
Shivam Dube: ಶಿವಂ ದುಬೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಈವರೆಗೆ 35 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ ಟೀಮ್ ಇಂಡಿಯಾ ಸೋತಿರುವುದು ಕೇವಲ 2 ಮ್ಯಾಚ್ಗಳಲ್ಲಿ ಮಾತ್ರ. ಇನ್ನುಳಿದ 33 ಪಂದ್ಯಗಳಲ್ಲಿ ದುಬೆ ಗೆಲುವಿನ ನಗೆ ಬೀರಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಯಾರಿಂದಲೂ ಸಾಧ್ಯವಾಗದ ವಿಶೇಷ ವಿಶ್ವ ದಾಖಲೆಯನ್ನು ಸಹ ನಿರ್ಮಿಸಿದ್ದಾರೆ.

ಟೀಮ್ ಇಂಡಿಯಾ ಪರ ಶಿವಂ ದುಬೆ ಕಣಕ್ಕಿಳಿದರೆ ಗೆಲುವು ಖಚಿತ. ಇದಕ್ಕೆ ಸಾಕ್ಷಿ ಕಳೆದ 30 ಟಿ20 ಪಂದ್ಯಗಳ ಫಲಿತಾಂಶ. ಈ ಫಲಿತಾಂಶಗಳೊಂದಿಗೆ ಇದೀಗ ಶಿವಂ ದುಬೆ ಟಿ20 ಕ್ರಿಕೆಟ್ನಲ್ಲಿ ಯಾರಿಂದಲೂ ಸಾಧ್ಯವಾಗದ ವಿಶೇಷ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾರೆ. ಅದು ಕೂಡ ಸತತ 30 ಗೆಲುವುಗಳೊಂದಿಗೆ..! ಹೌದು, ಟಿ20 ಕ್ರಿಕೆಟ್ನಲ್ಲಿ ಸತತ 30 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ ವಿಶ್ವದ ಮೊದಲ ಆಟಗಾರನೆಂಬ ವಿಶ್ವ ದಾಖಲೆ ಶಿವಂ ದುಬೆ ಪಾಲಾಗಿದೆ. ಅಂದರೆ ದುಬೆ ಕಣಕ್ಕಿಳಿದ ಕಳೆದ 30 ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಒಮ್ಮೆಯೂ ಸೋತಿಲ್ಲ.
ಜನವರಿ 2020 ರಿಂದ ಶುರುವಾದ ಈ ಗೆಲುವಿನ ನಾಗಾಲೋಟ ಇದೀಗ ಇಂಗ್ಲೆಂಡ್ ವಿರುದ್ಧದ ಸರಣಿವರೆಗೆ ಮುಂದುವರೆದಿದೆ. 2020 ರಲ್ಲಿ ಟೀಮ್ ಇಂಡಿಯಾ ನ್ಯೂಝಿಲೆಂಡ್ ತಂಡವನ್ನು 5-0 ಅಂತರದಿಂದ ಸೋಲಿಸಿದಾಗ ದುಬೆ ಭಾರತ ತಂಡದ ಭಾಗವಾಗಿದ್ದರು.
ಇನ್ನು 2024 ರಲ್ಲಿ ಟೀಮ್ ಇಂಡಿಯಾ ಆಡಿದ 15 ಪಂದ್ಯಗಳಲ್ಲಿ ದುಬೆ ಕಣಕ್ಕಿಳಿದಿದ್ದರು. ಈ ಎಲ್ಲಾ ಮ್ಯಾಚ್ಗಳಲ್ಲೂ ಟೀಮ್ ಇಂಡಿಯಾ ಗೆಲುವು ದಾಖಲಿಸಿದೆ. ಹಾಗೆಯೇ ಟಿ20 ವಿಶ್ವಕಪ್ 2024ರಲ್ಲಿ ಭಾರತ ತಂಡವು 8 ಗೆಲುವುಗಳೊಂದಿಗೆ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ಎಲ್ಲಾ ಪಂದ್ಯಗಳಲ್ಲೂ ದುಬೆ ಕಣಕ್ಕಿಳಿದಿದ್ದರು.
ಇದೀಗ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ದುಬೆ ಕಣಕ್ಕಿಳಿದಿದ್ದಾರೆ. ಈ ಮ್ಯಾಚ್ಗಳಲ್ಲೂ ಟೀಮ್ ಇಂಡಿಯಾ ಗೆಲುವು ದಾಖಲಿಸಿದೆ. ಇದರೊಂದಿಗೆ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಸತತ 30 ಪಂದ್ಯಗಳಲ್ಲಿ ಗೆಲುವು ನೋಡಿದ ವಿಶ್ವದ ಮೊದಲ ಆಟಗಾರ ಎಂಬ ವಿಶ್ವ ದಾಖಲೆ ಶಿವಂ ದುಬೆ ಪಾಲಾಯಿತು.
33 ಪಂದ್ಯಗಳಲ್ಲಿ ಜಯ:
ಶಿವಂ ದುಬೆ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದು 2019 ರಲ್ಲಿ. ಬಾಂಗ್ಲಾದೇಶ್ ವಿರುದ್ಧದ ಸರಣಿಯ ಮೂಲಕ ಅಂತಾರಾಷ್ಟ್ರೀಯ ಕಾಲಿಟ್ಟ ದುಬೆಗೆ ಸೋಲಿನ ಸ್ವಾಗತ ದೊರೆತಿತ್ತು. ಅಂದರೆ ದುಬೆ ಆಡಿದ ಮೊದಲ ಪಂದ್ಯದಲ್ಲೇ ಟೀಮ್ ಇಂಡಿಯಾ 7 ವಿಕೆಟ್ಗಳ ಸೋಲನುಭವಿಸಿತ್ತು.
ಇದಾದ ಬಳಿಕ ಶಿವಂ ದುಬೆ ಕಣಕ್ಕಿಳಿದ ಮೂರು ಪಂದ್ಯಗಳಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿತ್ತು. ಆದರೆ 5ನೇ ಮ್ಯಾಚ್ನಲ್ಲಿ ಟೀಮ್ ಇಂಡಿಯಾ ಮತ್ತೆ ಸೋಲನುಭವಿಸಿದೆ.
ಇದನ್ನೂ ಓದಿ: ಆ್ಯಂಡ್ರೆ ರಸೆಲ್ ಆರ್ಭಟಕ್ಕೆ ಮ್ಯಾಕ್ಸ್ವೆಲ್ ವಿಶ್ವ ದಾಖಲೆ ಉಡೀಸ್
ಈ ಸೋಲಿನ ಬಳಿಕ ಶಿವಂ ದುಬೆ ಒಮ್ಮೆಯೂ ಪರಾಜಯ ಕಂಡಿಲ್ಲ ಎಂಬುದು ವಿಶೇಷ. ಅಂದರೆ 2020 ರಿಂದ ದುಬೆ ಕಣಕ್ಕಿಳಿದ 30 ಪಂದ್ಯಗಳಲ್ಲೂ ಟೀಮ್ ಇಂಡಿಯಾ ಗೆಲುವು ಸಾಧಿಸಿದೆ. ಈ ಮೂಲಕ ಇದೀಗ ಸತತ ಗೆಲುವಿನ ಸರದಾರನಾಗಿ ಶಿವಂ ದುಬೆ ಹೊಸ ಇತಿಹಾಸ ನಿರ್ಮಿಸಿದ್ದಾರೆ.