ಶರ್ಟ್ ಬಿಚ್ಚಿ ಸಂಭ್ರಮಿಸಲು ಸೂಚಿಸಿದ್ದ ಗಂಗೂಲಿ, ಎಲ್ಲರನ್ನು ತಡೆದ ಸಚಿನ್ ತೆಂಡೂಲ್ಕರ್..!
England vs India, Final: 2002ರ ನ್ಯಾಟ್ವೆಸ್ಟ್ ಸರಣಿಯ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 325 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ 49.3 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ 2 ವಿಕೆಟ್ಗಳ ರೋಚಕ ಜಯ ಸಾಧಿಸಿತು. ಈ ಗೆಲುವಿನ ಬೆನ್ನಲ್ಲೇ ಟೀಮ್ ಇಂಡಿಯಾ ನಾಯಕ ಸೌರವ್ ಗಂಗೂಲಿ ಟಿ-ಶರ್ಟ್ ಬೆಚ್ಚಿ ಸಂಭ್ರಮಿಸಿದ್ದರು.

ಅದು 2002, ಲಾರ್ಡ್ಸ್ ಮೈದಾನದಲ್ಲಿ ನಡೆದ ನ್ಯಾಟ್ವೆಸ್ಟ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 50 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 325 ರನ್ ಕಲೆಹಾಕಿತು. 326 ರನ್ಗಳ ಕಠಿಣ ಗುರಿ ಬೆನ್ನತ್ತಿದ ಟೀಮ್ ಇಂಡಿಯಾ 146 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಆದರೆ ಆಗಷ್ಟೇ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದ ಯುವ ತರುಣರಿಬ್ಬರು ಕೆಚ್ಚೆದೆಯ ಹೋರಾಟ ಪ್ರದರ್ಶಿಸಿದರು.
ಅನುಭವಿ ಇಂಗ್ಲೆಂಡ್ ಬೌಲರ್ಗಳ ದಾಳಿಯ ಮುಂದೆ ಸೆಟೆದು ನಿಂತರು. ಈ ಮೂಲಕ 7ನೇ ವಿಕೆಟ್ಗೆ ಯುವರಾಜ್ ಸಿಂಗ್ ಹಾಗೂ ಮೊಹಮ್ಮದ್ ಕೈಫ್ 121 ರನ್ಗಳ ಜೊತೆಯಾಟವಾಡಿದರು. ಇದರ ಬೆನ್ನಲ್ಲೇ 63 ಎಸೆತಗಳಲ್ಲಿ 69 ರನ್ ಬಾರಿಸಿದ ಯುವರಾಜ್ ಸಿಂಗ್ ಔಟಾದರು.
ಇದಾಗ್ಯೂ ಏಕಾಂಗಿ ಹೋರಾಟ ಮುಂದುವರೆಸಿದ ಮೊಹಮ್ಮದ್ ಕೈಫ್ 75 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ ಅಜೇಯ 87 ರನ್ ಬಾರಿಸಿ, 49.3 ಓವರ್ಗಳಲ್ಲಿ ಗುರಿ ಮುಟ್ಟಿಸಿದರು. ಈ ಮೂಲಕ ಭಾರತ ತಂಡವು 2 ವಿಕೆಟ್ಗಳ ರೋಚಕ ಜಯ ಸಾಧಿಸಿತು.
ಗೆಲುವಿನ ಬೆನ್ನಲ್ಲೇ ಲಾರ್ಡ್ಸ್ ಬಾಲ್ಕನಿಯಲ್ಲಿ ನಿಂತು ಅಂದಿನ ಟೀಮ್ ಇಂಡಿಯಾ ನಾಯಕ ಸೌರವ್ ಗಂಗೂಲಿ ಶರ್ಟ್ ಬಿಚ್ಚಿ ಸಂಭ್ರಮಿಸಿದ್ದರು. ಇದುವೇ ದಾದಾ ಸ್ಟೈಲ್ ಸೆಲೆಬ್ರೇಷನ್ ಆಗಿ ಗುರುತಿಸಿಕೊಂಡಿತು. ಇಂತಹದೊಂದು ಸಂಭ್ರಮಕ್ಕೆ ಮುಖ್ಯ ಕಾರಣ ಆಂಡ್ರ್ಯೂ ಫ್ಲಿಂಟಾಫ್.
ಇದಕ್ಕೂ ಮುನ್ನ ಭಾರತದಲ್ಲಿ ನಡೆದ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಸೋಲಿಸಿ ಆಂಡ್ರ್ಯೂ ಫ್ಲಿಂಟಾಫ್ ಶರ್ಟ್ ಬಿಚ್ಚಿ ವಾಂಖೆಡೆ ಮೈದಾನದಲ್ಲಿ ಓಡುತ್ತಾ ಸಂಭ್ರಮಿಸಿದ್ದರು. ಇದಕ್ಕೆ ಪ್ರತೀಕಾರವಾಗಿ ಸೌರವ್ ಗಂಗೂಲಿ ಕ್ರಿಕೆಟ್ ಕಾಶಿಯ ಬಾಲ್ಕನಿಯಲ್ಲಿ ನಿಂತು ತಿರುಗೇಟು ನೀಡಿದ್ದರು.
ದಾದಾ ಸಂಭ್ರಮ:
#OnThisDay in 2002 📍 Lord’s, London
A moment to remember for #TeamIndia as the @SGanguly99-led unit beat England to win the NatWest Series Final. 🏆 👏 pic.twitter.com/OapFSWe2kk
— BCCI (@BCCI) July 13, 2021
ಹೀಗೆ ತಿರುಗೇಟು ನೀಡಲು ಸೌರವ್ ಗಂಗೂಲಿ ಮೊದಲೇ ನಿರ್ಧರಿಸಿದ್ದರು ಎಂಬ ವಿಚಾರವನ್ನು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಬಹಿರಂಗಪಡಿಸಿದ್ದಾರೆ. ರಣವೀರ್ ಅಲ್ಲಾಬಾಡಿಯಾ ಅವರ ಪಾಡ್ಕಾಸ್ಟ್ನಲ್ಲಿ ಕಾಣಿಸಿಕೊಂಡ ರಾಜೀವ್ ಶುಕ್ಲಾ 2002ರ ನ್ಯಾಟ್ವೆಸ್ಟ್ ಸರಣಿ ಗೆಲುವನ್ನು ನೆನಪಿಸಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ರಾಜೀವ್ ಶುಕ್ಲಾ, ಅಂದು ನಾನು ಟೀಮ್ ಇಂಡಿಯಾದ ಮ್ಯಾನೇಜರ್ ಆಗಿದ್ದೆ. ಲಾರ್ಡ್ಸ್ನಲ್ಲಿ ನಾವು ಸೋಲುತ್ತೇವೆ ಎಂದೇ ಭಾವಿಸಿದ್ದೆ. ಏಕೆಂದರೆ ನಮ್ಮ ಮುಂದೆ 326 ರನ್ಗಳ ಕಠಿಣ ಗುರಿ ನೀಡಲಾಗಿತ್ತು. ಹೀಗಾಗಿ ನಾನು ಒತ್ತಡಕ್ಕೊಳಗಾಗಿದ್ದೆ. ಅಲ್ಲದೆ ರಕ್ತದೊತ್ತಡವನ್ನು ನಿಯಂತ್ರಿಸಲು ಬಿಪಿ ಮಾತ್ರೆಗಳನ್ನು ಸೇವಿಸಿದ್ದೆ ಎಂದು ಶುಕ್ಲಾ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ಈ ಪಂದ್ಯದಲ್ಲಿ ಭಾರತ ತಂಡ ಗೆಲ್ಲುತ್ತೆ ಎಂಬ ಸಂಪೂರ್ಣ ವಿಶ್ವಾಸ ಸೌರವ್ ಗಂಗೂಲಿಗೆ ಇತ್ತು. ಟೀಮ್ ಇಂಡಿಯಾ ಗೆಲುವಿನತ್ತ ಸಾಗುತ್ತಿದ್ದಂತೆ ಎಲ್ಲರೂ ಶರ್ಟ್ ಬಿಚ್ಚಿ ಸಂಭ್ರಮಾಚರಣೆ ಮಾಡುವಂತೆ ದಾದಾ ಸಹ ಆಟಗಾರರಿಗೆ ತಿಳಿಸಿದ್ದರು.
ಆದರೆ ಇದಕ್ಕೆ ಸಚಿನ್ ತೆಂಡೂಲ್ಕರ್ ಒಪ್ಪಿರಲಿಲ್ಲ. ನನ್ನನ್ನು ಡ್ರೆಸ್ಸಿಂಗ್ ರೂಮ್ನಲ್ಲಿ ಭೇಟಿಯಾದ ಸಚಿನ್, ಕ್ರಿಕೆಟ್ ಜಂಟಲ್ಮ್ಯಾನ್ ಗೇಮ್. ಇಡೀ ತಂಡವನ್ನು ಶರ್ಟ್ ಬಿಚ್ಚಿ ಸಂಭ್ರಮಿಸಲು ಬಿಡಬೇಡಿ ಎಂದು ತಿಳಿಸಿದ್ದರು.
ಹೀಗಾಗಿ ನಾನು ಸೌರವ್ ಗಂಗೂಲಿಗೆ, ಈ ರೀತಿಯ ಸಂಭ್ರಮಾಚರಣೆ ಸರಿ ಕಾಣುವುದಿಲ್ಲ. ನೀವು ಶರ್ಟ್ ಬಿಚ್ಚಿ ಸಂಭ್ರಮಿಸುವುದಾದರೆ, ಅದನ್ನು ಮಾಡಿ ಎಂದಿದ್ದೆ. ಅದುವೇ ಸ್ಮರಣೀಯ ಸಂಭ್ರಮಾಚರಣೆಯಾಯಿತು ಎಂದು ರಾಜೀವ್ ಶುಕ್ಲಾ ತಿಳಿಸಿದ್ದಾರೆ.
ಈ ಒಂದು ಸಂಭ್ರಮಾಚರಣೆಯೊಂದಿಗೆ ಟೀಮ್ ಇಂಡಿಯಾ ಆಕ್ರಮಣಕಾರಿ ಕ್ರಿಕೆಟ್ಗೆ ಮುನ್ನುಡಿ ಬರೆಯಿತು. ಅಲ್ಲದೆ ಭಾರತ ತಂಡದಲ್ಲಿ ಆಕ್ರಮಣಶೀಲತೆಯನ್ನು ತಂದ ಮೊದಲ ನಾಯಕ ಸೌರವ್ ಗಂಗೂಲಿ ಎಂದು ದಾದಾ ಅವರನ್ನು ರಾಜೀವ್ ಶುಕ್ಲಾ ಹಾಡಿ ಹೊಗಳಿದ್ದಾರೆ.
Published On - 11:55 am, Tue, 4 February 25