AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

6 ಆಟಗಾರರು… ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ಪಡೆಗೆ ಸೋಲು ಖಚಿತ..!

ICC Champions Trophy 2025: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯು ಫೆಬ್ರವರಿ 19 ರಿಂದ ಶುರುವಾಗಲಿದೆ. ಏಕದಿನ ಮಾದರಿಯಲ್ಲಿ ನಡೆಯಲಿರುವ ಈ ಬಾರಿಯ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯಲಿವೆ. ಆ ತಂಡಗಳೆಂದರೆ ಭಾರತ, ಪಾಕಿಸ್ತಾನ್, ಆಸ್ಟ್ರೇಲಿಯಾ, ಬಾಂಗ್ಲಾದೇಶ್, ಇಂಗ್ಲೆಂಡ್, ನ್ಯೂಝಿಲೆಂಡ್, ಅಫ್ಘಾನಿಸ್ತಾನ್ ಮತ್ತು ಸೌತ್ ಆಫ್ರಿಕಾ.

6 ಆಟಗಾರರು... ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕ್ ಪಡೆಗೆ ಸೋಲು ಖಚಿತ..!
Pakistan
ಝಾಹಿರ್ ಯೂಸುಫ್
|

Updated on: Feb 04, 2025 | 3:10 PM

Share

ಬಹುನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಟೂರ್ನಿಗಾಗಿ ಆತಿಥೇಯ ಪಾಕಿಸ್ತಾನ್ ತಂಡವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ತಂಡದ ಆಯ್ಕೆಯ ಬೆನ್ನಲ್ಲೇ ಅಪಸ್ವರಗಳು ಕೇಳಿ ಬಂದಿದೆ. ಅದರಲ್ಲೂ ಪಾಕಿಸ್ತಾನ್ ತಂಡದ ಮಾಜಿ ನಾಯಕ ವಾಸಿಂ ಅಕ್ರಂ, ಅಬ್ದುರ್ ರೌಫ್ ಖಾನ್ ತಂಡದ ಬಲಿಷ್ಠತೆಯ ಬಗ್ಗೆ ಪ್ರಶ್ನೆಗಳೆನ್ನೆತ್ತಿದ್ದಾರೆ.

ಚಾಂಪಿಯನ್ಸ್ ಟ್ರೋಫಿ ತಂಡದ ಬಗ್ಗೆ ಪ್ರಶ್ನೆಗಳನ್ನು ಎತ್ತಿರುವ ಪಾಕಿಸ್ತಾನದ ಲೆಜೆಂಡ್ ಕ್ರಿಕೆಟರ್ ಅಬ್ದುರ್ ರೌಫ್ ಖಾನ್, ಈ ತಂಡದಿಂದ ಟೂರ್ನಿ ಗೆಲ್ಲುವುದು ಅಸಾಧ್ಯ ಎಂದಿದ್ದಾರೆ. ಪಾಕ್ ಟಿವಿ ಚಾನೆಲ್​ ಚರ್ಚೆಯಲ್ಲಿ ಕಾಣಿಸಿಕೊಂಡ ರೌಫ್ ಖಾನ್, ತಂಡದಲ್ಲಿನ ಪ್ರಮುಖ ನೂನ್ಯತೆಗಳನ್ನು ಎತ್ತಿ ತೋರಿಸಿದ್ದಾರೆ.

6 ಆಟಗಾರರು…!

ಪಾಕಿಸ್ತಾನ್ ತಂಡದಲ್ಲಿ 6 ಆಟಗಾರರನ್ನು ಯಾವ ಆಧಾರದ ಮೇಲೆ ಆಯ್ಕೆ ಮಾಡಿದ್ದಾರೆ ಎಂಬುದೇ ತಿಳಿಯುತ್ತಿಲ್ಲ ಎಂದು ಅಬ್ದುರ್ ರೌಫ್ ಖಾನ್ ಹೇಳಿದ್ದಾರೆ. ಏಕೆಂದರೆ ಈ ಆಟಗಾರರು ಏಕದಿನ ಟೂರ್ನಿ ಆಡಿ ವರ್ಷಗಳೇ ಕಳೆದಿವೆ. ಇನ್ನು ಕೆಲವರಿಗೆ ಅನುಭವದ ಕೊರತೆಯಿದೆ. ಆ ಆಟಗಾರರೆಂದರೆ…

  • ಫಖರ್ ಝಮಾನ್- 2023ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ಪರ ತಮ್ಮ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು.
  • ಉಸ್ಮಾನ್ ಖಾನ್ – ಚಾಂಪಿಯನ್ಸ್ ಟ್ರೋಫಿಯ ಮೂಲಕ ಪಾಕಿಸ್ತಾನ್ ಪರ ಏಕದಿನ ಕ್ರಿಕೆಟ್​ಗೆ ಪಾದಾರ್ಪಣೆ ಮಾಡುವುದನ್ನು ಎದುರು ನೋಡುತ್ತಿದ್ದಾರೆ.
  • ಫಹೀಮ್ ಅಶ್ರಫ್- 2023ರ ಏಷ್ಯಾಕಪ್‌ನಲ್ಲಿ ಕೊನೆಯ ಬಾರಿ ಪಾಕಿಸ್ತಾನ್ ಪರ ಕಾಣಿಸಿಕೊಂಡಿದ್ದರು.
  • ಖುಶ್ದಿಲ್ ಶಾ- ಅಕ್ಟೋಬರ್ 2023 ರಿಂದ ಖುಶ್ದಿಲ್ ಶಾ ಪಾಕಿಸ್ತಾನ್ ಪರ ಯಾವುದೇ ಏಕದಿನ ಪಂದ್ಯವನ್ನು ಆಡಿಲ್ಲ.
  • ಅಬ್ರಾರ್ ಅಹ್ಮದ್- ಪಾಕಿಸ್ತಾನ್ ತಂಡಕ್ಕೆ ಸ್ಪಿನ್ನರ್ ಆಗಿ ಆಯ್ಕೆಯಾಗಿರುವ ಅಬ್ರಾರ್ ಅಹ್ಮದ್ ಅವರ ಅನುಭವ ಕೇವಲ 4 ಏಕದಿನ ಪಂದ್ಯಗಳು ಮಾತ್ರ.
  • ತಯ್ಯಬ್ ತಾಹಿರ್- ಪ್ರಮುಖ ಬ್ಯಾಟರ್ ಆಗಿ ತಂಡದಲ್ಲಿ ಸ್ಥಾನ ಪಡೆದಿರುವ ತಯ್ಯಬ್ ತಾಹಿರ್ ಅವರ ಅನುಭವ ಕೇವಲ 3 ಏಕದಿನ ಪಂದ್ಯಗಳು.

ಹೀಗೆ ಅನಾನುಭವಿ ಹಾಗೂ ವರ್ಷಗಳ ಹಿಂದೆ ಕಣಕ್ಕಿಳಿದಿದ್ದ ಆಟಗಾರರನ್ನು ಆಯ್ಕೆ ಮಾಡಿ ಪಾಕಿಸ್ತಾನ್ ತಂಡವು ಚಾಂಪಿಯನ್ಸ್ ಟ್ರೋಫಿ ಗೆಲ್ಲಲು ಹೊರಟಿದೆ. ಆದರೆ ಈ ಟೂರ್ನಿಯಲ್ಲಿ ಎಲ್ಲರೂ ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸಲಿದೆ. ಹೀಗಾಗಿ ಇಂತಹ ತಂಡದೊಂದಿಗೆ ಪಾಕ್ ಚಾಂಪಿಯನ್ಸ್ ಟ್ರೋಫಿ ಗೆಲ್ಲುವುದು ಹೇಗೆ ಎಂದು ಅಬ್ದುರ್ ರೌಫ್ ಖಾನ್ ಪ್ರಶ್ನಿಸಿದ್ದಾರೆ.

ಮತ್ತೊಂದೆಡೆ ವಾಸಿಂ ಅಕ್ರಂ ಕೂಡ ಪಾಕಿಸ್ತಾನ್ ತಂಡದ ಆಯ್ಕೆಯನ್ನು ಪ್ರಶ್ನಿಸಿದ್ದು, ಎಲ್ಲಾ ತಂಡಗಳು ಆಲ್​ರೌಂಡರ್​ಗಳ ಆಯ್ಕೆಗೆ ಹೆಚ್ಚಿನ ಒತ್ತು ನೀಡಿದೆ. ಈ ಎಲ್ಲಾ ತಂಡಗಳ ಘೋಷಣೆಯಾದ ಬಳಿಕವಷ್ಟೇ ಪಾಕಿಸ್ತಾನ್ ತನ್ನ ತಂಡವನ್ನು ಪ್ರಕಟಿಸಿದೆ. ಬೇರೆ ತಂಡಗಳ ಸ್ಟ್ರಾಟಜಿಯನ್ನೂ ಕೂಡ ಗಮನಿಸದೇ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಚಾಂಪಿಯನ್ಸ್​ ಟ್ರೋಫಿಗೆ ತಂಡವನ್ನು ಆಯ್ಕೆ ಮಾಡಿದೆ ಎಂದು ವಾಸಿಂ ಅಕ್ರಂ ಅಸಮಾಧಾನ ಹೊರಹಾಕಿದ್ದಾರೆ.

ಅಲ್ಲದೆ ಇಂತಹ ತಂಡದೊಂದಿಗೆ ಐಸಿಸಿಯಂತಹ ಮಹತ್ವದ ಟೂರ್ನಿಗಳನ್ನು ಗೆಲ್ಲುವುದು ಕಷ್ಟಸಾಧ್ಯ ಎಂದು ವಾಸಿಂ ಅಕ್ರಂ ಹಾಗೂ ಅಬ್ದುರ್ ರೌಫ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.

ಪಾಕ್ ತಂಡದ ಲೆಜೆಂಡ್ ಕ್ರಿಕೆಟಿಗರ ಈ ಹೇಳಿಕೆಗಳ ಬೆನ್ನಲ್ಲೇ ಚಾಂಪಿಯನ್ಸ್ ಟ್ರೋಫಿ ಆರಂಭಕ್ಕೂ ಮುನ್ನವೇ ಪಾಕಿಸ್ತಾನ್ ತಂಡ ಸೋಲೊಪ್ಪಿಕೊಂಡಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗುತ್ತಿದೆ.

ಇದನ್ನೂ ಓದಿ: ಆ್ಯಂಡ್ರೆ ರಸೆಲ್ ಆರ್ಭಟಕ್ಕೆ ಮ್ಯಾಕ್ಸ್​ವೆಲ್ ವಿಶ್ವ ದಾಖಲೆ ಉಡೀಸ್

ಚಾಂಪಿಯನ್ಸ್​ ಟ್ರೋಫಿಗೆ ಪಾಕಿಸ್ತಾನ್ ತಂಡ: ಬಾಬರ್ ಆಝಂ, ಫಖರ್ ಝಮಾನ್, ಕಮ್ರಾನ್ ಗುಲಾಮ್, ಸೌದ್ ಶಕೀಲ್, ತಯ್ಯಬ್ ತಾಹಿರ್, ಫಹೀಮ್ ಅಶ್ರಫ್, ಖುಶ್ದಿಲ್ ಶಾ, ಸಲ್ಮಾನ್ ಅಲಿ ಅಘಾ (ಉಪನಾಯಕ), ಮೊಹಮ್ಮದ್ ರಿಝ್ವಾನ್ (ನಾಯಕ), ಉಸ್ಮಾನ್ ಖಾನ್, ಅಬ್ರಾರ್ ಅಹ್ಮದ್, ಹ್ಯಾರಿಸ್ ರೌಫ್, ಮೊಹಮ್ಮದ್ ಹಸ್ನೈನ್, ನಸೀಮ್ ಶಾ, ಶಾಹೀನ್ ಶಾ ಅಫ್ರಿದಿ.