ರಾವಲ್ಪಿಂಡಿ ಎಕ್ಸ್‌ಪ್ರೆಸ್ ಖ್ಯಾತಿಯ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ (Shoaib Akhtar )ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಮೊಣಕಾಲಿನ ಸಮಸ್ಯೆಗೆ ಒಳಗಾಗಿರುವ ಆಸ್ಪತ್ರೆಯಲ್ಲಿರುವ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಶೀಘ್ರದಲ್ಲೇ ಗುಣಮುಖರಾಗಲು ಪ್ರಾರ್ಥನೆ ಮಾಡುವಂತೆ ಮನವಿ ಮಾಡಿದ್ದಾರೆ.
ಆಸ್ಟ್ರೇಲಿಯಾದ ಮೆಲ್ಬೋರ್ನ್ನ ಆಸ್ಪತ್ರೆಗೆ ದಾಖಲಾಗಿರುವ 46 ವರ್ಷದ ಅಖ್ತರ್ ಮೊಣಕಾಲುಗಳಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಎರಡೂ ಮೊಣಕಾಲಿಗೆ ಐದರಿಂದ ಆರು ಗಂಟೆಗಳ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ನೀವೆಲ್ಲರೂ ಪ್ರಾರ್ಥಿಸಬೇಕು ಎಂದು ಕೇಳಿಕೊಂಡಿದ್ದಾರೆ.
ನಿವೃತ್ತಿಯಾಗಿ 11 ವರ್ಷ ಕಳೆದರೂ ಈಗಲೂ ಸಂಕಷ್ಟದಲ್ಲಿದ್ದೇನೆ. ನಾನು ಇನ್ನೂ ನಾಲ್ಕೈದು ವರ್ಷ ಆಡಬಹುದಿತ್ತು. ಆದರೆ ಹಾಗೆ ಮಾಡಿದರೆ ವೀಲ್ ಚೇರ್ ಮೇಲೆ ಇರಬೇಕಾಗುತ್ತದೆ ಎಂದು ನನಗೆ ತಿಳಿದಿತ್ತು ಎಂದು ಶೊಯೇಬ್ ಅಖ್ತರ್ ತಿಳಿಸಿದ್ದಾರೆ. ಇದೀಗ ತಮ್ಮ ಗಾಯದ ಸಮಸ್ಯೆಗೆ ಶಾಶ್ವತ ಪರಿಹಾರ ಕಾಣಲು ಶಸ್ತ್ರಚಿಕಿತ್ಸೆಯ ಮೊರೆ ಹೋಗಿದ್ದಾರೆ.
ಶೋಯೆಬ್ ಅಖ್ತರ್ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಕಾಲಕಾಲಕ್ಕೆ ತನ್ನ ಫೋಟೋ, ವಿಡಿಯೋ ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ನಂತರ ಶೋಯೆಬ್ ಕಾಮೆಂಟರಿಯಲ್ಲಿ ಸಕ್ರಿಯರಾಗಿದ್ದಾರೆ. ಅವರು ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಅನ್ನು ಸಹ ಹೊಂದಿದ್ದಾರೆ. ಇದೀಗ ಆಸ್ಪತ್ರೆಯಲ್ಲಿರುವ ಕಾರಣ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಿಲ್ಲ ಎಂದು ಅಖ್ತರ್ ತಿಳಿಸಿದ್ದಾರೆ.
ಪಾಕಿಸ್ತಾನ್ ಪರ 46 ಟೆಸ್ಟ್, 163 ಏಕದಿನ ಮತ್ತು 15 T20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಅಖ್ತರ್, ಟೆಸ್ಟ್‌ನಲ್ಲಿ 178, ಏಕದಿನದಲ್ಲಿ 247 ಮತ್ತು ಟಿ20ಯಲ್ಲಿ 19 ವಿಕೆಟ್‌ಗಳನ್ನು ಪಡೆದಿದ್ದಾರೆ.