ಪಾಕಿಸ್ತಾನದ ಮಾಜಿ ನಾಯಕ ಮತ್ತು ಅನುಭವಿ ಆಲ್‌ರೌಂಡರ್ ಶೋಯೆಬ್ ಮಲಿಕ್ (Shoaib Malik) ಕೆಲವು ದಿನಗಳಿಂದ ಸಖತ್ ಸುದ್ದಿಯಲ್ಲಿದ್ದಾರೆ. ಕಳೆದ ವಾರವಷ್ಟೇ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ (Sania Mirza) ಅವರಿಂದ ವಿಚ್ಛೇದನ ಪಡೆದು ಮೂರನೇ ಮದುವೆಯಾಗುವ ಮೂಲಕ ಶೋಯೆಬ್ ಮಲಿಕ್ ಎಲ್ಲೆಡೆ ಸುದ್ದಿಯಾಗಿದ್ದರು. ಮೂರನೇ ಮದುವೆಯ ಬಳಿಕ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ನಲ್ಲಿ (Bangladesh Premier League) ಶೋಯೆಬ್ ಕಾಣಿಸಿಕೊಳ್ಳುತ್ತಿದ್ದರು. ಆದರೆ ಲೀಗ್ನಲ್ಲಿ ಫಾರ್ಚೂನ್ ಬಾರಿಶಾಲ್ (Fortune Barishal) ತಂಡದ ಪರ ಕಣಕ್ಕಿಳಿಯುತ್ತಿರುವ ಶೋಯೆಬ್ ಮಲಿಕ್ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿದ್ದು, ಅವರನ್ನು ತಂಡದಿಂದ ಹೊರಹಾಕಲಾಗಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಬಾಂಗ್ಲಾದೇಶದ ಮಾಧ್ಯಮ ವರದಿಗಳ ಪ್ರಕಾರ, ಬಾಂಗ್ಲಾದೇಶ ಪ್ರೀಮಿಯರ್ ಲೀಗ್ನ ಫ್ರಾಂಚೈಸ್ ಫಾರ್ಚೂನ್ ಬಾರಿಶಾಲ್, ಫಿಕ್ಸಿಂಗ್ ಆರೋಪ ಕೇಳಿಬಂದ ನಂತರ ಶೋಯೆಬ್ ಮಲಿಕ್ ಅವರ ಒಪ್ಪಂದವನ್ನು ಸೀಸನ್ನ ಮಧ್ಯದಲ್ಲಿ ಕೊನೆಗೊಳಿಸಿದೆ. ಹಾಗೆಯೇ ಮಲಿಕ್ರನ್ನು ತಂಡದಿಂದ ಹೊರಹಾಕಲಾಗಿದ್ದು ಅವರು ಇದ್ದಕ್ಕಿದ್ದಂತೆ ಪಂದ್ಯಾವಳಿಯನ್ನು ಮಧ್ಯದಲ್ಲಿ ತೊರೆದು ದುಬೈಗೆ ತೆರಳಿದ್ದಾರೆ ಎಂದು ವರದಿಯಾಗಿದೆ.
ಮೂರನೇ ಮದುವೆಯಾದ ಪಾಕ್ ಕ್ರಿಕೆಟಿಗ ಶೋಯೆಬ್ ಮಲಿಕ್; ಮೊದಲ ಪತ್ನಿ ಯಾರು ಗೊತ್ತಾ?
ವಾಸ್ತವವಾಗಿ ಜನವರಿ 22 ರಂದು ಬಾರಿಶಾಲ್ ಮತ್ತು ಖುಲ್ನಾ ಟೈಗರ್ಸ್ ತಂಡಗಳ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಬಾರಿಶಾಲ್ ಪರ ಬೌಲಿಂಗ್ ದಾಳಿಗಿಳಿದ್ದ ಮಲಿಕ್ ಕೇವಲ ಒಂದು ಓವರ್ ಬೌಲ್ ಮಾಡಿ 18 ರನ್ ನೀಡಿದ್ದರು. ಆದರೆ ಈ ಓವರ್ನಲ್ಲೇ ಮಲಿಕ್ ಬರೋಬ್ಬರಿ 3 ನೋ ಬಾಲ್‌ಗಳನ್ನು ಎಸೆದು ಎಲ್ಲರನ್ನು ಅಚ್ಚರಿಗೊಳಿಸಿದ್ದರು. ವೇಗದ ಬೌಲರ್ಗಳೇ ಒಂದು ಓವರ್‌ನಲ್ಲಿ ಮೂರು ನೋ ಬಾಲ್ ಎಸೆಯುವುದು ಅಪರೂಪವಾಗಿರುವಾಗ ಸ್ಪಿನ್ ಬೌಲರ್ ಆಗಿರುವ ಮಲಿಕ್ ಒಂದೇ ಓವರ್‌ನಲ್ಲಿ ಮೂರು ನೋ-ಬಾಲ್‌ಗಳನ್ನು ಮಾಡಿದ್ದರು. ಹೀಗಾಗಿ ಮಲಿಕ್ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
3 no-balls and 18 runs in one over. Not the best outing this week for Shoaib Malik.
.
.#BPL2024 #BPLonFanCode #ShoaibMalik pic.twitter.com/PNmHeOqgJq— FanCode (@FanCode) January 23, 2024
2010 ರಲ್ಲಿ ನಡೆದಿದ್ದ ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದಲ್ಲಿ ಪಾಕ್ ಬೌಲರ್ಗಳಾದ ಮೊಹಮ್ಮದ್ ಅಮೀರ್ ಮತ್ತು ಮೊಹಮ್ಮದ್ ಆಸಿಫ್ ಇದೇ ರೀತಿಯ ನೋ-ಬಾಲ್‌ಗಳನ್ನು ಎಸೆದಿದ್ದರು. ಆ ಬಳಿಕ ಈ ಇಬ್ಬರ ವಿರುದ್ಧ ಸ್ಪಾಟ್ ಫಿಕ್ಸಿಂಗ್ ಆರೋಪ ಹೊರಿಸಲಾಗಿತ್ತು. ತನಿಖೆಯಲ್ಲಿ ಈ ಇಬ್ಬರು ತಪ್ಪಿತಸ್ಥರೆಂದು ಸಾಬೀತಾಗಿತ್ತು. ಹೀಗಿರುವಾಗ, ಶೋಯೆಬ್ ಮಲಿಕ್ ಬಗ್ಗೆಯೂ ಈಗ ಅದೇ ಸಂದೇಹ ಮೂಡುತ್ತಿದೆ. ಅವರು ಕೂಡ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆಯೇ ಎಂಬುದು ತನಿಖೆಯ ನಂತರ ತಿಳಿದು ಬರಲಿದೆ.
ಇತ್ತೀಚೆಗಷ್ಟೇ ಶೋಯೆಬ್ ಮಲಿಕ್ ಮೂರನೇ ಮದುವೆಯ ಮೂಲಕ ಸುದ್ದಿಯಾಗಿದ್ದರು. ನೋ ಬಾಲ್ ವಿವಾದಕ್ಕೆ ಎರಡು ದಿನಗಳ ಮೊದಲು, ಶೋಯೆಬ್ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಈ ಮದುವೆಯೊಂದಿಗೆ ಶೋಯೆಬ್ ಮತ್ತು ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ನಡುವಿನ 13 ವರ್ಷಗಳ ಸುದೀರ್ಘ ಸಂಬಂಧವೂ ಕೊನೆಗೊಂಡಿತ್ತು. ಶೋಯೆಬ್ ಮಲಿಕ್ ಕೂಡ ಸಾನಿಯಾಗೆ ಮೋಸ ಮಾಡಿದ ಆರೋಪವನ್ನು ಎದುರಿಸುತ್ತಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:43 pm, Fri, 26 January 24