‘ಸೋಲು ಖಚಿತ ಅಂದುಕೊಂಡಿದ್ದೆವು’; ತಿಲಕ್-ನಿತೀಶ್ ಆಟದ ಬಗ್ಗೆ ಶ್ರೇಯಸ್ ಹೇಳಿದ್ದೇನು?
ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ ರೋಚಕ ಗೆಲುವು ಸಾಧಿಸಿದೆ. 70ಕ್ಕೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡವನ್ನು ತಿಲಕ್ ವರ್ಮಾ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರ 69 ರನ್ಗಳ ಮಹತ್ವದ ಜೊತೆಯಾಟ ಗೆಲುವಿನ ದಡ ಸೇರಿಸಿತು. ನಾಯಕ ಶ್ರೇಯಸ್ ಅಯ್ಯರ್ ಈ ಹೋರಾಟವನ್ನು ಶ್ಲಾಘಿಸಿದ್ದು, ಪಂದ್ಯ ಕೈತಪ್ಪುತ್ತಿದೆ ಎಂದು ಅನಿಸಿತ್ತು ಎಂದಿದ್ದಾರೆ. ನಮನ್ ಧೀರ್ ಆಟವನ್ನೂ ಮೆಚ್ಚಿದ್ದಾರೆ.

ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ರೋಚಕ ಗೆಲುವು ದಾಖಲಿಸಿದೆ. ಒಂದು ಹಂತದಲ್ಲಿ ಭಾರತ ತಂಡದ ಕೈಯಿಂದ ಪಂದ್ಯ ಸಂಪೂರ್ಣವಾಗಿ ಜಾರಿಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ತಿಲಕ್ ವರ್ಮಾ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರ ಅದ್ಭುತ ಜೊತೆಯಾಟ ತಂಡವನ್ನು ಗೆಲುವಿನ ದಡ ಸೇರಿಸಿತು. 181 ರನ್ಗಳ ಗುರಿ ಬೆನ್ನಟ್ಟಿದ ಭಾರತ ತಂಡ ಕೇವಲ 70 ರನ್ಗಳಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ತಿಲಕ್ ವರ್ಮಾ ಮತ್ತು ನಿತೀಶ್ ಕುಮಾರ್ ರೆಡ್ಡಿ ಏಳನೇ ವಿಕೆಟ್ಗೆ 69 ರನ್ಗಳ ಮಹತ್ವದ ಜೊತೆಯಾಟವಾಡಿ ತಂಡಕ್ಕೆ ಗೆಲುವು ತಂದುಕೊಟ್ಟರು.
ಪಂದ್ಯ ಕೈತಪ್ಪುತ್ತಿದೆ ಅಂತ ಅನಿಸಿತ್ತು: ಅಯ್ಯರ್
ಪಂದ್ಯದ ಬಳಿಕ ಮಾತನಾಡಿದ ನಾಯಕ ಶ್ರೇಯಸ್ ಅಯ್ಯರ್, ತಿಲಕ್ ವರ್ಮಾ, ನಿತೀಶ್ ರೆಡ್ಡಿ ಹಾಗೂ ನಮನ್ ಧೀರ್ ಅವರ ಆಟವನ್ನು ಮುಕ್ತಕಂಠದಿಂದ ಹೊಗಳಿದರು. ಅಲ್ಲದೆ, ಒಂದು ಹಂತದಲ್ಲಿ ಪಂದ್ಯ ಕೈತಪ್ಪುತ್ತಿದೆ ಎಂದು ಅನಿಸಿತ್ತು ಎಂಬುದನ್ನೂ ಒಪ್ಪಿಕೊಂಡರು. ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಗೆಲುವು ಸಾಧಿಸಿದ ಬಳಿಕ ಮಾತನಾಡಿದ ಶ್ರೇಯಸ್ ಅಯ್ಯರ್, ತಂಡದ ಪ್ರತಿಯೊಬ್ಬ ಆಟಗಾರನಿಗೂ ಪಂದ್ಯ ಗೆಲ್ಲಿಸಿಕೊಡುವ ಸಾಮರ್ಥ್ಯವಿದೆ ಎಂದು ಹೇಳಿದರು.
‘ನಮ್ಮ ತಂಡದ ಪ್ರತಿಯೊಬ್ಬ ಆಟಗಾರನೂ ಪಂದ್ಯಗಳನ್ನು ಗೆಲ್ಲಿಸಿಕೊಡಬಲ್ಲರು ಅನ್ನೋ ನಂಬಿಕೆ ನನಗಿದೆ. ಅದಕ್ಕೆ ಇಂದಿನ ಪಂದ್ಯವೇ ಸಾಕ್ಷಿ. ನಿಜ ಹೇಳಬೇಕೆಂದರೆ, ನಾವು ಒಂದರ ಹಿಂದೆ ಒಂದರಂತೆ ವಿಕೆಟ್ ಕಳೆದುಕೊಳ್ಳುತ್ತಿದ್ದಾಗ ಪಂದ್ಯ ನಮ್ಮ ಕೈಯಿಂದ ಜಾರಿಹೋಗುತ್ತಿದೆ ಅಂತ ಅನಿಸಿತ್ತು. ಆದರೆ ತಿಲಕ್ ಮತ್ತು ರೆಡ್ಡಿ ಅದ್ಭುತ ಹೋರಾಟ ತೋರಿಸಿದರು’.
ಇದೇ ವೇಳೆ ನಮನ್ ಧೀರ್ ಅವರ ಬ್ಯಾಟಿಂಗ್ ಪ್ರದರ್ಶನವನ್ನೂ ಮೆಚ್ಚಿಕೊಂಡ ಅಯ್ಯರ್, ನಮನ್ ಆಡಿದ ಸಣ್ಣ ಇನ್ನಿಂಗ್ಸ್ ತಂಡಕ್ಕೆ ಬಹಳ ಮುಖ್ಯವಾಗಿತ್ತು ಎಂದರು. ‘ವೆಸ್ಟ್ ಇಂಡೀಸ್ ವಿರುದ್ಧದ ತವರಿನ ಪಂದ್ಯಗಳಲ್ಲೂ ನಮನ್ ಆಡುವುದನ್ನು ನೋಡಿದ್ದೇವೆ. ಅವರು ಉತ್ತಮ ಬೌಲರ್ ಕೂಡ ಹೌದು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡನ್ನೂ ಮಾಡಬಲ್ಲ ಆಟಗಾರ ತಂಡದಲ್ಲಿದ್ದರೆ ಅದು ತಂಡಕ್ಕೆ ಹೆಚ್ಚಿನ ಬಲ ನೀಡುತ್ತದೆ. ಮೈದಾನದಲ್ಲಿ ಅವರ ಆಟದ ಚುರುಕು ನೋಡಿದರೆ ಅವರು ಸಂಪೂರ್ಣ ಆಟಗಾರ ಅನ್ನೋದು ಗೊತ್ತಾಗುತ್ತದೆ’ ಎಂದರು.
1,434 ದಿನಗಳ ಬಳಿಕ ವಿಕೆಟ್ ಬೇಟೆ! ಆದ್ರೆ ತುಂಬಾ ದುಬಾರಿಯಾದ ಭುವನೇಶ್ವರ್
ಡಾಟ್ ಬಾಲ್ಗಳಿಂದ ಒತ್ತಡ ಹೆಚ್ಚಾಯ್ತು
ಭಾರತದ ಗುರಿ ಬೆನ್ನಟ್ಟುವಿಕೆಯ ಬಗ್ಗೆ ಮಾತನಾಡಿದ ಅಯ್ಯರ್, ಆರಂಭದಲ್ಲಿ ಹೆಚ್ಚು ಡಾಟ್ ಬಾಲ್ಗಳನ್ನು ಆಡಿದ್ದರಿಂದ ರನ್ ಗಳಿಸುವ ಒತ್ತಡ ಹೆಚ್ಚಾಯಿತು ಎಂದು ಅಭಿಪ್ರಾಯಪಟ್ಟರು. ‘ಆರಂಭದಲ್ಲಿ ನಾವು ಸಾಕಷ್ಟು ಡಾಟ್ ಬಾಲ್ಗಳನ್ನು ಆಡಿದೆವು. ಇದರಿಂದ ರನ್ರೇಟ್ ಮೇಲೆ ಒತ್ತಡ ಹೆಚ್ಚಾಯಿತು. ನಾವು ಸುಲಭವಾಗಿ ಗುರಿ ತಲುಪಬೇಕು ಅಂತ ಬಯಸಿದ್ದೆವು. ಆದರೆ ಮೈಕೆಲ್ ಬ್ರೇಸ್ವೆಲ್ ಮತ್ತು ಮಿಚೆಲ್ ಸ್ಯಾಂಟ್ನರ್ ಅದ್ಭುತ ಬೌಲಿಂಗ್ ಮಾಡಿದರು. ಮಧ್ಯಮ ಓವರ್ಗಳಲ್ಲಿ ಅವರು ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದರು’ .
‘ಆ ಸಮಯದಲ್ಲಿ ದೊಡ್ಡ ಹೊಡೆತಗಳನ್ನು ಹೊಡೆಯುವುದು ಸುಲಭವಾಗಿರಲಿಲ್ಲ. ಆದರೂ ನಾವು ಗ್ಯಾಪ್ಗಳನ್ನು ಹುಡುಕಿ ಬೌಂಡರಿಗಳನ್ನು ಗಳಿಸುವ ಪ್ರಯತ್ನ ಮಾಡಬೇಕಿತ್ತು. ಹಾಗೆ ಮಾಡಿದ್ದರೆ ಗುರಿ ತಲುಪುವುದು ಇನ್ನೂ ಸುಲಭವಾಗುತ್ತಿತ್ತು. ಇಂತಹ ದಿನಗಳು ಬರುತ್ತವೆ. ಇದು ನಮ್ಮ ಪಾಲಿಗೆ ಕೆಟ್ಟ ದಿನವಾಗಿತ್ತು. ಆದರೆ ನಾವು ಮತ್ತೆ ಬಲವಾಗಿ ಕಮ್ಬ್ಯಾಕ್ ಮಾಡುತ್ತೇವೆ ಅನ್ನೋ ವಿಶ್ವಾಸ ನನಗಿದೆ’ ಎಂದರು.




