India vs New Zealand 1st Test: ಟೀಮ್ ಇಂಡಿಯಾ ಡಿಕ್ಲೇರ್ ಮಾಡಿದ ಹಿಂದಿನ ರೋಚಕ ಸತ್ಯ ಬಿಚ್ಚಿಟ್ಟ ಶ್ರೇಯಸ್ ಅಯ್ಯರ್
Shreyas Iyer: 4ನೇ ದಿನದಾಟದಲ್ಲಿ ಬೇಗನೆ ಡಿಕ್ಲೇರ್ ಮಾಡಿಕೊಂಡು ನ್ಯೂಜಿಲೆಂಡ್ ತಂಡದ ಹೆಚ್ಚಿನ ವಿಕೆಟ್ ಕಬಳಿಸಿ ಒತ್ತಡಕ್ಕೆ ಸಿಲುಕಿಸುವ ಅವಕಾಶವಿದ್ದರೂ ಭಾರತ ವಿಳಂಬ ಮಾಡಿತು ಎಂಬ ಅಭಿಪ್ರಾಯ ಕೇಳಿಬಂದಿತ್ತು. ಈ ಪ್ರಶ್ನೆಗೆ ಶ್ರೇಯಸ್ ಅಯ್ಯರ್ ಖಡಕ್ ಆಗಿ ಉತ್ತರ ನೀಡಿದ್ದಾರೆ.
ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಣ ಮೊದಲ ಟೆಸ್ಟ್ ಪಂದ್ಯದ ಸ್ಪಷ್ಟ ಫಲಿತಾಂಶ ಇಂದು ಹೊರಬೀಳಲಿದೆ. ರೋಚಕ ಘಟ್ಟದಲ್ಲಿರುವ ಕಾನ್ಪುರ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ (Team India) ನ್ಯೂಜಿಲೆಂಡ್ ಗೆಲುವಿಗೆ 284 ರನ್‌ಗಳ ಗುರಿ ನೀಡಿದೆ. ನಾಲ್ಕನೇ ದಿನದ ಆಟದ ಅಂತ್ಯಕ್ಕೆ ಕೇನ್ ಪಡೆ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ 1 ವಿಕೆಟ್ ಕಳೆದುಕೊಂಡು 4 ರನ್ ಗಳಿಸಿದೆ. ಹೀಗಾಗಿ ಕಿವೀಸ್ ಗೆಲುವಿಗೆ ಇನ್ನು 280 ರನ್‌ಗಳ ಅವಶ್ಯಕತೆಯಿದ್ದರೆ, ರಹಾನೆ (Ajinkya Rahane) ಪಡೆಗೆ ನ್ಯೂಜಿಲೆಂಡ್ನ 9 ವಿಕೆಟ್ಗಳು ಬೇಕಿವೆ. ಎರಡನೇ ಇನ್ನಿಂಗ್ಸ್‌ನಲ್ಲಿ ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ಭಾರತಕ್ಕೆ ಮತ್ತೆ ಆಸರೆಯಾಗಿದ್ದು ಶ್ರೇಯಸ್ ಅಯ್ಯರ್ (Shreyas Iyer). ಚೊಚ್ಚಲ ಟೆಸ್ಟ್ನಲ್ಲೇ ವಿಶೇಷ ಸಾಧನೆ ಮಾಡಿ ಮೆರೆದಿರುವ ಅಯ್ಯರ್ ಸದ್ಯ ಭಾರತ ಡಿಕ್ಲೇರ್ (India Declar) ಮಾಡಿಕೊಳ್ಳಲು ವಿಳಂಬ ಮಾಡಿದ್ದೇಕೆ ಎಂಬ ಕಾರಣವನ್ನು ಬಹಿರಂಗ ಪಡಿಸಿದ್ದಾರೆ.
4ನೇ ದಿನದಾಟದಲ್ಲಿ ಬೇಗನೆ ಡಿಕ್ಲೇರ್ ಮಾಡಿಕೊಂಡು ನ್ಯೂಜಿಲೆಂಡ್ ತಂಡದ ಹೆಚ್ಚಿನ ವಿಕೆಟ್ ಕಬಳಿಸಿ ಒತ್ತಡಕ್ಕೆ ಸಿಲುಕಿಸುವ ಅವಕಾಶವಿದ್ದರೂ ಭಾರತ ವಿಳಂಬ ಮಾಡಿತು ಎಂಬ ಅಭಿಪ್ರಾಯ ಕೇಳಿಬಂದಿತ್ತು. ಈ ಬಗ್ಗೆ ಮಾತನಾಡಿದ ಅಯ್ಯರ್, “ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಆರಂಭಗೊಂಡು 4 ದಿನಗ ಕಳೆದರೂ ಗ್ರೀನ್ ಪಾರ್ಕ್ ಕ್ರೀಡಾಂಗಣದ ಪಿಚ್ ಇನ್ನೂ ಬೌಲರ್‌ಗಳಿಗೆ ಹೆಚ್ಚು ನೆರವಾಗುತ್ತಿಲ್ಲ. ವಿಕೆಟ್ ಕಬಳಿಸುವುದು ಈಗಲೂ ಕಠಿಣವಾಗಿದೆ. ಹೀಗಾಗಿ ಭಾರತ ತಂಡದ ಟೀಮ್ ಮ್ಯಾನೇಜ್‌ಮೆಂಟ್ ನಿರ್ಧಾರದಂತೆ ಡಿಕ್ಲೇರ್ ವಿಳಂಬಗೊಳಿಸಲಾಯಿತು” ಎಂಬ ಸತ್ಯವನ್ನು ಬಹಿರಂಗ ಪಡಿಸಿದ್ದಾರೆ.
“ಭಾರತ 250 ರನ್‌ಗಳ ಒಟ್ಟಾರೆ ಮುನ್ನಡೆ ಪಡೆಯುವುದು ಗುರಿಯಾಗಿತ್ತು. ಪಿಚ್ ಬೇರೆ ರೀತಿಯಲ್ಲಿ ವರ್ತಿಸುತ್ತಿತ್ತು. ಚೆಂಡು ಹೆಚ್ಚು ಪುಟಿಯುತ್ತಿರಲಿಲ್ಲ. ಒಳ್ಳೆಯ ಮೊತ್ತ ಕಲೆಹಾಕುವುದು ನಮ್ಮ ಉದ್ದೇಶವಾಗಿತ್ತು. ಈಗ ನಾವು ಗಳಿಸಿರುವ ಮುನ್ನಡೆ ನಿಜಕ್ಕೂ ದೊಡ್ಡದೆ. ನಮ್ಮ ಸ್ಪಿನ್ ಶಕ್ತಿಯಿಂದ ಪಂದ್ಯವನ್ನ ಗೆಲ್ಲಬಲ್ಲೆವು” ಎಂದು ಶ್ರೇಯಸ್ ಅಯ್ಯರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶ್ರೇಯಸ್ ವಿಶೇಷ ಸಾಧನೆ:
ಶ್ರೇಯಸ್ ಅಯ್ಯರ್ ತಮ್ಮ ಪದಾರ್ಪಣೆಯ ಟೆಸ್ಟ್ ಪಂದ್ಯವನ್ನು ಮತ್ತಷ್ಟು ವಿಶೇಷವನ್ನಾಗಿಸಿಕೊಂಡಿದ್ದಾರೆ. ಎರಡನೇ ಇನಿಂಗ್ಸ್‌ನಲ್ಲಿ 51ಕ್ಕೆ 5 ವಿಕೆಟ್‌ಗಳನ್ನು ಕಳೆದುಕೊಂಡು ಅಪಾಯಕ್ಕೆ ಸಿಲುಕಿದ್ದ ತಂಡವನ್ನು ಮತ್ತೆ ಮೇಲೆತ್ತಿದ ಶ್ರೇಯಸ್ 125 ಓವರ್‌ಗಳಲ್ಲಿ 65 ರನ್‌ಗಳ ಭರ್ಜರಿ ಇನಿಂಗ್ಸ್ ಆಡಿದರು. ಅವರ ಈ ಜವಾಬ್ದಾರಿಯುತ ಇನಿಂಗ್ಸ್‌ನಲ್ಲಿ 8 ಫೋರ್ ಮತ್ತೊಂದು ಸಿಕ್ಸರ್ ಮೂಡಿಬಂದವು. ಭಾರತ ತಂಡದ ಪರ ಪದಾರ್ಪಣೆಯ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಶತಕ ಮತ್ತು ಎರಡನೇ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ ಮೊದಲ ಆಟಗಾರ ಎಂಬ ವಿಶೇಷ ದಾಖಲೆ ಶ್ರೇಯಸ್ ಅಯ್ಯರ್ ಪಾಲಾಗಿದೆ. ಅಷ್ಟೇ ಅಲ್ಲದೆ ಪದಾರ್ಪಣೆಯ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಪೈಕಿ ಶ್ರೇಯಸ್ 3ನೇ ಸ್ಥಾನ ಪಡೆದುಕೊಂಡಿದ್ದಾರೆ.
ಶ್ರೇಯಸ್ ಒಟ್ಟು 170 ರನ್‌ಗಳನ್ನು ಗಳಿಸಿದರೆ, 2013ರಲ್ಲಿ ಶಿಖರ್ ಧವನ್ (187) ಮತ್ತು ರೋಹಿತ್ ಶರ್ಮಾ (177) ತಮ್ಮ ಪದಾರ್ಪಣೆಯ ಟೆಸ್ಟ್ ಪಂದ್ಯಗಳಲ್ಲಿ ಭರ್ಜರಿ ಪ್ರದರ್ಶನ ನೀಡಿ ಈ ಪಟ್ಟಿಯ ಮೊದಲ ಎರಡು ಸ್ಥಾನಗಳನ್ನು ಅಲಂಕರಿಸಿದ್ದಾರೆ.
(Shreyas Iyer reveals the reason behind on Team India late declaration vs New Zealand 1st Test)