ಯೋ ಯೋ ಟೆಸ್ಟ್​ನಲ್ಲಿ ವಿರಾಟ್ ಕೊಹ್ಲಿಯನ್ನೇ ಹಿಂದಿಕ್ಕಿದ ಶುಭ್​ಮನ್ ಗಿಲ್

| Updated By: ಝಾಹಿರ್ ಯೂಸುಫ್

Updated on: Aug 26, 2023 | 3:59 PM

Shubman Gill: ಏಷ್ಯಾಕಪ್​ಗೂ ಮುನ್ನ ಆಟಗಾರರ ಫಿಟ್​ನೆಸ್ ಸಾಮರ್ಥ್ಯವನ್ನು ಪರೀಕ್ಷಿಸಲು ಬಿಸಿಸಿಐ ಮುಂದಾಗಿದೆ. ಆದರೆ ಈ ಟೆಸ್ಟ್​ ನಡೆಸಿರುವುದು ಏಷ್ಯಾಕಪ್​ಗಾಗಿ​ ಅಲ್ಲ. ಬದಲಾಗಿ ಮುಂಬರುವ ಏಕದಿನ ವಿಶ್ವಕಪ್​ಗಾಗಿ ಎಂಬುದು ವಿಶೇಷ. ಅಂದರೆ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ಗಾಗಿ ಟೀಮ್ ಇಂಡಿಯಾ ಆಟಗಾರರ ಫಿಟ್​​ನೆಸ್ ಸಾಮರ್ಥ್ಯ ಹೇಗಿದೆ, ಯಾವ ವಿಭಾಗದಲ್ಲಿ ಬಲಿಷ್ಠರಾಗಬೇಕು ಎಂಬುದನ್ನು ತಿಳಿಯಲು ಇದೀಗ ಯೋ ಯೋ ಟೆಸ್ಟ್ ನಡೆಸಲಾಗಿದೆ

ಯೋ ಯೋ ಟೆಸ್ಟ್​ನಲ್ಲಿ ವಿರಾಟ್ ಕೊಹ್ಲಿಯನ್ನೇ ಹಿಂದಿಕ್ಕಿದ ಶುಭ್​ಮನ್ ಗಿಲ್
Shubman Gill - Virat Kohli
Follow us on

ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಟೀಮ್ ಇಂಡಿಯಾ ಆಟಗಾರರ ಯೋ ಯೋ​ ಟೆಸ್ಟ್​ನಲ್ಲಿ ಶುಭ್​ಮನ್ ಗಿಲ್ (Shubman Gill)  ಅತ್ಯಧಿಕ ಅಂಕಗಳಿಸಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಹಲವು ವಿಭಾಗಗಳಲ್ಲಿ ನಡೆಸಲಾದ ಈ ಟೆಸ್ಟ್​ನಲ್ಲಿ ಗಿಲ್ ಒಟ್ಟು 18.7 ಅಂಕಗಳೊಂದಿಗೆ ಮೊದಲ ಸ್ಥಾನ ಅಲಂಕರಿಸಿದರೆ, ನಂತರದ ಸ್ಥಾನದಲ್ಲಿ ವಿರಾಟ್ ಕೊಹ್ಲಿ (Virat Kohli) ಕಾಣಿಸಿಕೊಂಡಿದ್ದಾರೆ.

ಕಿಂಗ್ ಕೊಹ್ಲಿಯನ್ನೇ ಹಿಂದಿಕ್ಕಿದ ಪ್ರಿನ್ಸ್​ ಶುಭ್​ಮನ್:

ಯೋ ಯೋ ಟೆಸ್ಟ್​ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಫಿಟ್​ನೆಸ್ ವಿಷಯದಲ್ಲಿ ಇದುವರೆಗೆ ಕೊಹ್ಲಿಯೇ ಕಿಂಗ್ ಎನ್ನಲಾಗಿತ್ತು. ಅದರಂತೆ ಈ ಬಾರಿ ಕೂಡ 17.2 ಅಂಕಗಳಿಸುವಲ್ಲಿ ವಿರಾಟ್ ಕೊಹ್ಲಿ ಯಶಸ್ವಿಯಾಗಿದ್ದರು.
ಆದರೆ ಶುಭ್​ಮನ್ ಗಿಲ್ ಸರದಿ ಬಂದಾಗ ಕಿಂಗ್ ಕೊಹ್ಲಿಯನ್ನೇ ಹಿಂದಿಕ್ಕಿದರು. ಎಲ್ಲಾ ವಿಭಾಗಗಳಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ ಗಿಲ್ ಒಟ್ಟು 18.7 ಅಂಕಗಳಿಸಿ ಟೀಮ್ ಇಂಡಿಯಾದ ಫಿಟ್​​ನೆಸ್​ ಫ್ರೀಕ್ ಎನಿಸಿಕೊಂಡರು.

ಕಟ್ ಆಫ್ ಲೆವೆಲ್​:

ಯೋ ಯೋ ಟೆಸ್ಟ್​ನಲ್ಲಿ ಉತೀರ್ಣರಾಗಲು ಆಟಗಾರರು ಕನಿಷ್ಠ 16.5 ಅಂಕಗಳನ್ನು ಗಳಿಸಲೇಬೇಕು. ಮೊದಲ ಸುತ್ತಿನಲ್ಲಿ ವಿಫಲರಾದರೆ ಮತ್ತೆ ಅವಕಾಶಗಳನ್ನು ನೀಡಲಾಗುತ್ತದೆ. ಈ ಮೂಲಕ 16.5 ಅಂಕಗಳನ್ನು ಗಳಿಸಿದರೆ ಮಾತ್ರ ಯೋ ಯೋ ಟೆಸ್ಟ್​ನಲ್ಲಿ ಪಾಸ್ ಎಂದು ನಿರ್ಧರಿಸಲಾಗುತ್ತದೆ.

ಬಹುತೇಕ ಆಟಗಾರರು ಪಾಸ್:

ಈ ಬಾರಿಯ ಯೋ ಯೋ ಟೆಸ್ಟ್​ನಲ್ಲಿ ಭಾಗವಹಿಸಿದ್ದ ಟೀಮ್ ಇಂಡಿಯಾದ ಬಹುತೇಕ ಆಟಗಾರರು ಪಾಸ್ ಆಗಿದ್ದಾರೆ. ಈ ಪಟ್ಟಿಯಲ್ಲಿ ಅತ್ಯಧಿಕ ಅಂಕಗಳಿಸಿರುವುದು ಶುಭ್​ಮನ್ ಗಿಲ್. ಹಾಗೆಯೇ ಬಹುತೇಕ ಆಟಗಾರರು 16.5 ಹಾಗೂ 17 ರ ನಡುವೆ ಅಂಕಗಳಿಸಿ ತಮ್ಮ ಟಾಸ್ಕ್ ಪೂರೈಸಿದ್ದಾರೆ.​​

ಕೆಎಲ್ ರಾಹುಲ್​​ಗೆ ನೋ ಟೆಸ್ಟ್​:

ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್ (ಏಷ್ಯಾ ಕಪ್‌ ಮೀಸಲು ಆಟಗಾರ) ಮತ್ತು ಕೆಎಲ್ ರಾಹುಲ್ ಅವರು ಯೋ ಯೋ ಟೆಸ್ಟ್​ನಲ್ಲಿ ಭಾಗವಹಿಸಿಲ್ಲ. ಇಲ್ಲಿ ಕೆಲ ಆಟಗಾರರು ಐರ್ಲೆಂಡ್ ಸರಣಿಯಿಂದ ಹಿಂತಿರುಗಿರುವ ಕಾರಣ ಅವರಿಗೆ ವಿನಾಯಿತಿ ನೀಡಲಾಗಿದೆ. ಇತ್ತ ಕೆಎಲ್ ರಾಹುಲ್ ಸಂಪೂರ್ಣ ಫಿಟ್​ ಆಗಿರದ ಕಾರಣ ಅವರು ಯೋ ಯೋ ಟೆಸ್ಟ್​​ನಲ್ಲಿ ಭಾಗವಹಿಸಿಲ್ಲ ಎಂದು ತಿಳಿದು ಬಂದಿದೆ.

ಏನಿದು ಯೋ ಯೋ ಟೆಸ್ಟ್?

ಟೀಮ್ ಇಂಡಿಯಾ ಆಟಗಾರರ ಫಿಟ್​ನೆಸ್​ ಟೆಸ್ಟ್​ ಹಲವು ದೈಹಿಕ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಇದರಲ್ಲಿ ಮುಖ್ಯವಾಗಿ ಯೋ ಯೋ ಟೆಸ್ಟ್ ಪಾಸಾಗಲೇಬೇಕು. ಇಲ್ಲಿ ಕ್ರಮಬದ್ಧ ಹಾಗೂ ವೇಗವಾಗಿ ಓಡುವ ಮೂಲಕ ತಮ್ಮ ದೈಹಿಕ ಸಾಮರ್ಥ್ಯವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ಈ ಫಿಟ್‍ನೆಸ್ ಟೆಸ್ಟ್​ನಲ್ಲಿ 20 ಮೀಟರ್​ ಅಳತೆಯಲ್ಲಿ ಎರಡು ಕೋನಗಳನ್ನು ನೇರವಾಗಿ ಇರಿಸಲಾಗಿರುತ್ತದೆ. ಇಲ್ಲಿ ಆಟಗಾರನು ಓಟವನ್ನು ಆರಂಭಿಸಿ, ಎರಡು ಲೈನ್​​ಗಳಲ್ಲಿಟ್ಟಿರುವ ಕೋನಗಳ ಬೀಪ್ ಧ್ವನಿಯನ್ನು ಅನುಸರಿಸಿ ತನ್ನ ದೂರವನ್ನು ಕ್ರಮಿಸಬೇಕಾಗುತ್ತದೆ.

ಹಾಗೆಯೇ ಈ ಟೆಸ್ಟ್​ನಲ್ಲಿ 8.15 ನಿಮಿಷದೊಳಗೆ 2 ಕಿ. ಮೀಟರ್ ಓಡಬೇಕಾಗುತ್ತದೆ. ಒಂದು ವೇಳೆ ಇದು ಸಾಧ್ಯವಾಗದಿದ್ದರೆ ಫೇಲ್ ಎಂದು ಪರಿಗಣಿಸಲಾಗುತ್ತದೆ. ಇಲ್ಲಿ ಅಂಕಗಳು ತಂತ್ರಾಂಶ ಆಧಾರಿತವಾಗಿದ್ದು, ಹೀಗಾಗಿ ಯಾವುದೇ ಸುತ್ತಿನಲ್ಲಿ ಎಡವಿದರೂ ಮತ್ತೊಮ್ಮೆ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ. ಹೀಗಾಗಿಯೇ ಯೋ ಯೋ ಟೆಸ್ಟ್​ ಪಾಸಾಗುವುದು ಟೀಮ್ ಇಂಡಿಯಾ ಆಟಗಾರರ ಪಾಲಿಗೆ ಅಗ್ನಿ ಪರೀಕ್ಷೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: IPL 2024: ಮುಂಬೈ ಇಂಡಿಯನ್ಸ್ ಬಳಗಕ್ಕೆ ಮರಳಿದ ಲಸಿತ್ ಮಾಲಿಂಗ

ಈಗ ಯೋ ಯೋ ಟೆಸ್ಟ್ ಯಾಕೆ?

ಏಷ್ಯಾಕಪ್​ಗೂ ಮುನ್ನ ಆಟಗಾರರ ಫಿಟ್​ನೆಸ್ ಸಾಮರ್ಥ್ಯವನ್ನು ಪರೀಕ್ಷಿಸಲು ಬಿಸಿಸಿಐ ಮುಂದಾಗಿದೆ. ಆದರೆ ಈ ಟೆಸ್ಟ್​ ನಡೆಸಿರುವುದು ಏಷ್ಯಾಕಪ್​ಗಾಗಿ​ ಅಲ್ಲ. ಬದಲಾಗಿ ಮುಂಬರುವ ಏಕದಿನ ವಿಶ್ವಕಪ್​ಗಾಗಿ ಎಂಬುದು ವಿಶೇಷ. ಅಂದರೆ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ಗಾಗಿ ಟೀಮ್ ಇಂಡಿಯಾ ಆಟಗಾರರ ಫಿಟ್​​ನೆಸ್ ಸಾಮರ್ಥ್ಯ ಹೇಗಿದೆ, ಯಾವ ವಿಭಾಗದಲ್ಲಿ ಬಲಿಷ್ಠರಾಗಬೇಕು ಎಂಬುದನ್ನು ತಿಳಿಯಲು ಇದೀಗ ಯೋ ಯೋ ಟೆಸ್ಟ್ ನಡೆಸಲಾಗಿದೆ ಎಂದು ತಿಳಿದು ಬಂದಿದೆ.