IND vs ENG: ಇಂಗ್ಲೆಂಡ್ ನೆಲದಲ್ಲಿ ಐತಿಹಾಸಿಕ ದಾಖಲೆ ಸೃಷ್ಟಿಸಿದ ಶುಭ್ಮನ್ ಗಿಲ್
Shubman Gill Breaks Sunil Gavaskar's Record: ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ಶುಭ್ಮನ್ ಗಿಲ್ ತಮ್ಮ ಚೊಚ್ಚಲ ದ್ವಿಶತಕ (222 ರನ್) ದಾಖಲಿಸಿ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರ ಎಂಬ ಹೊಸ ದಾಖಲೆ ನಿರ್ಮಿಸಿದ್ದಾರೆ. ಇದರಿಂದಾಗಿ ಅವರು ಸುನಿಲ್ ಗವಾಸ್ಕರ್ ಅವರ ಹಳೆಯ ದಾಖಲೆಯನ್ನು ಮುರಿದಿದ್ದಾರೆ.

ಇಂಗ್ಲೆಂಡ್ನ ಎಡ್ಜ್‌ಬಾಸ್ಟನ್‌ನಲ್ಲಿ (Edgbaston Test) ನಡೆಯುತ್ತಿರುವ ಆತಿಥೇಯ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ದ್ವಿಶತಕ ಬಾರಿಸಿದ ಟೀಂ ಇಂಡಿಯಾ ನಾಯಕ ಶುಭ್ಮನ್ ಗಿಲ್ (Shubman Gill) ಇದೀಗ ಈ ದ್ವಿಶತಕದ ಜೊತೆಗೆ ಇಂಗ್ಲೆಂಡ್ ನೆಲದಲ್ಲಿ ಅದರಲ್ಲೂ ಟೆಸ್ಟ್ಟ್ ಪಂದ್ಯದ ಇನ್ನಿಂಗ್ಸ್ವೊಂದರಲ್ಲಿ ಅತ್ಯಧಿಕ ರನ್ ಕಲೆಹಾಕಿದ ಭಾರತದ ಆಟಗಾರನೆಂಬ ದಾಖಲೆ ಕೂಡ ನಿರ್ಮಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 222 ರನ್ ಬಾರಿಸಿದ ಕೂಡಲೇ ಗಿಲ್, ಟೀಂ ಇಂಡಿಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್ (Sunil Gavaskar) ಅವರ ದಾಖಲೆಯನ್ನು ಮುರಿದಿದ್ದಾರೆ. ಈ ಮೊದಲು ಗವಾಸ್ಕರ್ ಇನ್ನಿಂಗ್ಸ್ವೊಂದರಲ್ಲಿ 221 ರನ್ ಬಾರಿಸುವ ಮೂಲಕ ಈ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದರು. ಇದೀಗ ಆ ದಾಖಲೆ ಶುಭ್ಮನ್ ಗಿಲ್ ಪಾಲಾಗಿದೆ.
ಮೊದಲ ಭಾರತೀಯ ಶುಭ್ಮನ್ ಗಿಲ್
1979 ರಲ್ಲಿ ದಿ ಓವಲ್ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಸುನಿಲ್ ಗವಾಸ್ಕರ್ 221 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಅದು ಈವರೆಗಿನ ದಾಖಲೆಯಾಗಿತ್ತು. ಇದೀಗ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 222 ರನ್‌ಗಳ ಗಡಿ ದಾಟಿರುವ ಗಿಲ್, ಗವಾಸ್ಕರ್ ಅವರ 46 ವರ್ಷಗಳ ಹಿಂದಿನ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪಟ್ಟಿಯಲ್ಲಿ ಇವರಿಬ್ಬರನ್ನು ಬಿಟ್ಟರೆ, ಮೂರನೇ ಸ್ಥಾನದಲ್ಲಿರುವ ಕನ್ನಡಿಗ ರಾಹುಲ್ ದ್ರಾವಿಡ್, 2002 ರಲ್ಲಿ ದಿ ಓವಲ್ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ 217 ರನ್ ಬಾರಿಸಿದ್ದರು. ಹಾಗೆಯೇ ಅದೇ ವರ್ಷ ಸಚಿನ್ ತೆಂಡೂಲ್ಕರ್ ಲೀಡ್ಸ್ ಟೆಸ್ಟ್ ಪಂದ್ಯದಲ್ಲಿ 193 ರನ್ ಬಾರಿಸಿದ್ದರು.
ಕೊಹ್ಲಿ ದಾಖಲೆ ಮುರಿದ ಗಿಲ್
ಇದು ಮಾತ್ರವಲ್ಲದೆ ತಮ್ಮ ಇನ್ನಿಂಗ್ಸ್‌ನಲ್ಲಿ 150 ರನ್ ಪೂರ್ಣಗೊಳಿಸಿದ ಕೂಡಲೇ ಬರ್ಮಿಂಗ್ಹ್ಯಾಮ್ ಮೈದಾನದಲ್ಲಿ ಅತಿದೊಡ್ಡ ಟೆಸ್ಟ್ ಇನ್ನಿಂಗ್ಸ್ ಆಡಿದ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೂಲಕ ವಿರಾಟ್ ಕೊಹ್ಲಿ ದಾಖಲೆಯನ್ನು ಸಹ ಮುರಿದಿದ್ದಾರೆ. ಗಿಲ್ಗೂ ಮೊದಲು, ವಿರಾಟ್ ಕೊಹ್ಲಿ 2018 ರಲ್ಲಿ ಬರ್ಮಿಂಗ್ಹ್ಯಾಮ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ 149 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಹಾಗೆಯೇ 150 ರನ್‌ಗಳ ಗಡಿ ದಾಟುವುದರೊಂದಿಗೆ ಬರ್ಮಿಂಗ್ಹ್ಯಾಮ್ ಮೈದಾನದಲ್ಲಿ 150 ರನ್‌ಗಳ ಟೆಸ್ಟ್ ಇನ್ನಿಂಗ್ಸ್ ಆಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಗಿಲ್ ಪಾತ್ರರಾಗಿದ್ದಾರೆ. ಗಿಲ್ಗೂ ಮೊದಲು ಯಾವುದೇ ಭಾರತೀಯ ಆಟಗಾರ ಈ ಸಾಧನೆ ಮಾಡಿರಲಿಲ್ಲ.
IND vs ENG: ಚೊಚ್ಚಲ ಟೆಸ್ಟ್ ದ್ವಿಶತಕ ಬಾರಿಸಿದ ನಾಯಕ ಶುಭ್ಮನ್ ಗಿಲ್
ಈ ಸಾಧನೆ ಮಾಡಿದ ಮೊದಲ ಟೆಸ್ಟ್ ನಾಯಕ
ಇದಲ್ಲದೆ ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತೀಯ ಟೆಸ್ಟ್ ನಾಯಕನೊಬ್ಬ ಇಂಗ್ಲೆಂಡ್ ನೆಲದಲ್ಲಿ ದ್ವಿಶತಕ ಬಾರಿಸಿದ ದಾಖಲೆ ಕೂಡ ಗಿಲ್ ಪಾಲಾಗಿದೆ. ಗಿಲ್ಗಿಂತ ಮೊದಲು, ಯಾವುದೇ ಭಾರತೀಯ ಟೆಸ್ಟ್ ನಾಯಕ ಇಂಗ್ಲೆಂಡ್‌ನಲ್ಲಿ ದ್ವಿಶತಕ ಬಾರಿಸಿರಲಿಲ್ಲ. 1990 ರಲ್ಲಿ ಮೊಹಮ್ಮದ್ ಅಜರುದ್ದೀನ್ ಇಂಗ್ಲೆಂಡ್‌ನಲ್ಲಿ 179 ರನ್‌ಗಳ ಇನ್ನಿಂಗ್ಸ್ ಆಡಿದ್ದು, ಇದುವರೆಗಿನ ದಾಖಲೆಯಾಗಿತ್ತು. ಆದರೀಗ ಗಿಲ್ ಹಳೆಯ ದಾಖಲೆಯನ್ನು ಮುರಿದು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:16 pm, Thu, 3 July 25
