IND vs AFG: ನಾಯಕನಾಗಿ ಮೊದಲ ಏಕದಿನ ಶತಕ ಸಿಡಿಸಿದ ಶುಭ್​ಮನ್ ಗಿಲ್

Shubman Gill's Captaincy Century: ಟೀಂ ಇಂಡಿಯಾ ನಾಯಕ ಶುಭ್​ಮನ್ ಗಿಲ್ ಅಫ್ಘಾನಿಸ್ತಾನ ವಿರುದ್ಧ ಲಕ್ನೋದಲ್ಲಿ ತಮ್ಮ 9ನೇ ಏಕದಿನ ಶತಕ ಸಿಡಿಸಿ ಮಿಂಚಿದ್ದಾರೆ. ನಾಯಕನಾದ ಬಳಿಕ ಇದು ಅವರ ಮೊದಲ ಶತಕ. ಗಿಲ್ ಕೇವಲ 38 ಎಸೆತಗಳಲ್ಲಿ ಅರ್ಧಶತಕ ಪೂರೈಸಿ, ಅಫ್ಘನ್ ಬೌಲರ್‌ಗಳ ಬೆವರಿಳಿಸಿದರು. ಈ ಅಮೋಘ ಪ್ರದರ್ಶನವು ಅವರ ನಾಯಕತ್ವದ ಯಶಸ್ಸು ಮತ್ತು ಬ್ಯಾಟಿಂಗ್ ಕೌಶಲ್ಯವನ್ನು ಎತ್ತಿ ತೋರಿಸುತ್ತದೆ.

IND vs AFG: ನಾಯಕನಾಗಿ ಮೊದಲ ಏಕದಿನ ಶತಕ ಸಿಡಿಸಿದ ಶುಭ್​ಮನ್ ಗಿಲ್
Shubman Gill

Updated on: Jun 17, 2026 | 4:21 PM

ಟೀಂ ಇಂಡಿಯಾದ ನಾಯಕತ್ವದ ಜವಾಬ್ದಾರಿ ಹೊತ್ತ ಬಳಿಕ ರನ್​ಗಳ ಶಿಖರ ಕಟ್ಟುತ್ತಿರುವ ಶುಭ್​ಮನ್ ಗಿಲ್ (Shubman Gill) ಪ್ರಸ್ತುತ ನಡೆಯುತ್ತಿರುವ ಅಫ್ಘಾನಿಸ್ತಾನ ವಿರುದ್ಧದ (India vs Afghanistan) ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿ ಮಿಂಚಿದ್ದಾರೆ. ಲಕ್ನೋದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಗಿಲ್, ಅಫ್ಘನ್ ಬೌಲರ್​ಗಳ ಬೆವರಿಳಿಸಿ ಕೇವಲ 38 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಅರ್ಧಶತಕದ ಬಳಿಕವೂ ಒಂದೇ ಗೇರ್​ನಲ್ಲಿ ಬ್ಯಾಟಿಂಗ್‌ ಮುಂದುವರೆಸಿದ ಗಿಲ್ 77 ಎಸೆತಗಳಲ್ಲಿ ತಮ್ಮ ಏಕದಿನ ವೃತ್ತಜೀವನದ 9ನೇ ಶತಕವನ್ನು ಪೂರ್ಣಗೊಳಿಸಿದರು. ಮಾತ್ರವಲ್ಲದೆ ಇದು ನಾಯಕನಾದ ಬಳಿಕ ಗಿಲ್ ಅವರ ಮೊದಲ ಏಕದಿನ ಶತಕವೂ ಆಗಿದೆ.

ಅಮೋಘ ಫಾರ್ಮ್​ನಲ್ಲಿರುವ ಗಿಲ್

ಇದೇ ಅಫ್ಘಾನಿಸ್ತಾನದ ವಿರುದ್ಧ ಏಕದಿನ ಸರಣಿಗೂ ಮುನ್ನ ನಡೆದಿದ್ದ ಏಕೈಕ ಟೆಸ್ಟ್ ಪಂದ್ಯದಲ್ಲಿ ಶತಕದ ಇನ್ನಿಂಗ್ಸ್ ಆಡಿದ್ದ ಶುಭ್​ಮನ್ ಗಿಲ್, ಏಕದಿನ ಸರಣಿಯ ಮೊದಲ ಪಂದ್ಯದಲ್ಲೂ ಅಜೇಯ 84 ರನ್ ಬಾರಿಸಿದ್ದರು. ಈ ಇನ್ನಿಂಗ್ಸ್ ಮೂಲಕ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು. ಇದೀಗ ಸರಣಿಯ ಎರಡನೇ ಪಂದ್ಯದಲ್ಲೂ ತಮ್ಮ ಅಮೋಘ ಫಾರ್ಮ್​ ಮುಂದುವರೆಸಿರುವ ಗಿಲ್ ಶತಕದ ಇನ್ನಿಂಗ್ಸ್ ಆಡಿದ್ದಾರೆ. ಶತಕ ಬಾರಿಸುವುದರ ಜೊತೆಗೆ ಗಿಲ್, ರೋಹಿತ್ ಶರ್ಮಾ ಅವರೊಂದಿಗೆ ಎರಡನೇ ವಿಕೆಟ್​ಗೆ 87 ರನ್​ಗಳ ಜೊತೆಯಾಟವನ್ನಾಡಿದರು. ಹಾಗೆಯೇ ಇಶಾನ್ ಕಿಶನ್ ಅವರೊಂದಿಗೆ ಶತಕದ ಜೊತೆಯಾಟವನ್ನು ಆಡಿದರು.

ತಮ್ಮ ಶತಕದ ಇನ್ನಿಂಗ್ಸ್​ನಲ್ಲಿ 12 ಬೌಂಡರಿಗಳು ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದ ಗಿಲ್, ಈ ಶತಕದೊಂದಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ 21 ಶತಕಗಳನ್ನು ಪೂರೈಸಿದ್ದಾರೆ. ಈ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಭಾರತೀಯರ ಪಟ್ಟಿಯಲ್ಲಿ ಹಾಲಿ ಕೋಚ್ ಗೌತಮ್ ಗಂಭೀರ್ ಅವರನ್ನು ಹಿಂದಿಕ್ಕಿದ್ದಾರೆ. ಗಂಭೀರ್ ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 20 ಶತಕಗಳನ್ನು ಬಾರಿಸಿದ್ದರು.

ನಾಯಕನಾಗಿ ವೇಗದ ಶತಕ

ಕೇವಲ 77 ಎಸೆತಗಳಲ್ಲಿ ಶತಕ ಪೂರೈಸಿದ ಶುಭಮನ್ ಗಿಲ್​ಗೆ ನಾಯಕನಾಗಿ ಇದು ಅತಿ ವೇಗದ ಏಕದಿನ ಶತಕವೂ ಆಗಿದೆ. ರೋಹಿತ್ ಶರ್ಮಾ ಭಾರತದ ನಾಯಕನಾಗಿ ಅತಿ ವೇಗದ ಏಕದಿನ ಶತಕ ಬಾರಿಸಿದ ದಾಖಲೆಯನ್ನು ಹೊಂದಿದ್ದಾರೆ. ರೋಹಿತ್ 63 ಎಸೆತಗಳಲ್ಲಿ ಈ ಮೈಲಿಗಲ್ಲು ದಾಟಿದ್ದರು. ಹಾಗೆಯೇ ವೀರೇಂದ್ರ ಸೆಹ್ವಾಗ್ 69 ಎಸೆತಗಳಲ್ಲಿ ಈ ಮೈಲಿಗಲ್ಲು ತಲುಪುವ ಮೂಲಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಇದೀಗ ಗಿಲ್ 77 ಎಸೆತಗಳಲ್ಲಿ ಶತಕ ತಲುಪುವ ಮೂಲಕ ಈ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

IND vs AFG: ಏಕದಿನದಲ್ಲಿ ವಿಶೇಷ ಮೈಲಿಗಲ್ಲು ದಾಟಲಿದ್ದಾರೆ ಶುಭ್​ಮನ್ ಗಿಲ್, ಶ್ರೇಯಸ್ ಅಯ್ಯರ್

ಕೊಹ್ಲಿ ದಾಖಲೆ ಮುರಿದ ಗಿಲ್

ಶುಭ್​ಮನ್ ಗಿಲ್ ಈ ಶತಕದ ಇನ್ನಿಂಗ್ಸ್ ಮೂಲಕ ಭಾರತದಲ್ಲಿ ಅತಿ ಕಡಿಮೆ ಇನ್ನಿಂಗ್ಸ್​ಗಳಲ್ಲಿ 1,000 ಏಕದಿನ ರನ್ ಪೂರೈಸಿದ ದಾಖಲೆಯನ್ನು ತಮ್ಮ ಖಾತೆಗೆ ಹಾಕಿಕೊಂಡಿದ್ದಾರೆ. ಈ ಮೊದಲು ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಭಾರತದಲ್ಲಿ ತಲಾ 24 ಇನ್ನಿಂಗ್ಸ್‌ಗಳಲ್ಲಿ 1,000 ಏಕದಿನ ರನ್ ಗಳಿಸಿದ್ದರು. ಇದೀಗ ಶುಭ್​ಮನ್ ಗಿಲ್ ಕೇವಲ 19 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:49 pm, Wed, 17 June 26

Follow Us