ಭಾರತ-ಆಸ್ಟ್ರೇಲಿಯಾ (India vs Australia) ನಡುವಣ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (WTC Final) ಕದನ ಕೊನೆಯ ದಿನಕ್ಕೆ ಕಾಲಿಟ್ಟಿದೆ. ಟೀಮ್ ಇಂಡಿಯಾಕ್ಕೆ ಗೆಲ್ಲಲು 280 ರನ್ಗಳು ಬೇಕಾಗಿದ್ದು, ನಾಲ್ಕನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿದೆ. ಕ್ರೀಸ್ನಲ್ಲಿ ವಿರಾಟ್ ಕೊಹ್ಲಿ (Virat Kohli) ಹಾಗೂ ಅಜಿಂಕ್ಯ ರಹಾನೆ ಇದ್ದಾರೆ. ರೋಚಕತೆ ಸೃಷ್ಟಿಸಿರುವ ಅಂತಿಮ ದಿನಕ್ಕೆ ಮಳೆಯ ಕಾಟ ಕೂಡ ಇದೆ ಎಂದು ಹೇಳಲಾಗಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ 2023 ಅನೇಕ ಘಟನೆಗಳಿಗೆ ಸಾಕ್ಷಿಯಾಗಿದೆ. ಕೆಲವು ದಾಖಲೆ ಕೂಡ ನಿರ್ಮಾಣವಾಗಿದೆ. ಇದರ ನಡುವೆ ವಿವಾದಗಳು ಕೂಡ ನಡೆದಿವೆ. ಆಸ್ಟ್ರೇಲಿಯಾನ್ನರು ಕಳ್ಳಾಟ ನಡೆಸಿದ ಪ್ರಸಂಗ ಕೂಡ ಜರುಗಿತು.
ಮೊದಲ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ಮಾಡುವ ವೇಳೆ ಆಸ್ಟ್ರೇಲಿಯಾನ್ನರು ಬಾಲ್ ಟ್ಯಾಂಪರಿಂಗ್ ಮಾಡಿದ್ದಾರೆ ಎನ್ನಲಾಗುತ್ತಿದೆ. 13 ಓವರ್ಗಳ ಬಳಿಕ ಚೆಂಡು ಹೆಚ್ಚು ಸ್ವಿಂಗ್ ಹಾಗೂ ಬೌನ್ಸ್ ಪಡೆಯಲಾರಂಭಿಸಿತು. ಇತ್ತ ಇದೇ ವೇಳೆ ಚೇತೇಶ್ವರ ಪೂಜಾರ (14) ಹಾಗೂ ವಿರಾಟ್ ಕೊಹ್ಲಿ (14) ಔಟಾಗಿದ್ದರು. ಇಲ್ಲಿ ಪೂಜಾರ ಕ್ಯಾಮರೋನ್ ಗ್ರೀನ್ ಎಸೆದ ಇನ್ಸ್ವಿಂಗ್ಗೆ ಔಟಾದರೆ, ವಿರಾಟ್ ಕೊಹ್ಲಿ ಸ್ಟಾರ್ಕ್ ಅವರ ಅನಿರೀಕ್ಷಿತ ಬೌನ್ಸರ್ಗೆ ಕ್ಯಾಚಿತ್ತರು. ಅಚ್ಚರಿ ಎಂದರೆ ಈ ಓವರ್ಗಳ ನಡುವೆ ಮಾರ್ನಸ್ ಲಾಬುಶೇನ್ ಕ್ರೆಪ್ ಬ್ಯಾಂಡೇಜ್ ಧರಿಸಿ ಸಿಲ್ಲಿ ಪಾಯಿಂಟ್ನಲ್ಲಿ ಫೀಲ್ಡಿಂಗ್ನಲ್ಲಿದ್ದರು. ಅಲ್ಲದೆ ಈ ವೇಳೆ ಒರಾಟದ ಬ್ಯಾಂಡೇಜ್ ಬಟ್ಟೆಯಿಂದ ಚೆಂಡಿನ ಮೇಲ್ಮೈಯನ್ನು ಸವರುತ್ತಿರುವುದು ಕಂಡು ಬಂದಿದೆ.
ಚೆಂಡಿನ ಒಳ ಮೇಲ್ಮೈಯ ಹೊಳಪನ್ನು ಹೋಗಲಾಡಿಸಿದರೆ ಬಾಲ್ ಉತ್ತಮವಾಗಿ ರಿವರ್ಸ್ ಸ್ವಿಂಗ್ ಆಗುತ್ತದೆ. ಹಾಗೆಯೇ ಚೆಂಡು ಬೌನ್ಸ್ ಆಗಲು ಕೂಡ ನೆರವಾಗುತ್ತದೆ. ಇತ್ತ ಮಾರ್ನಸ್ ಲಾಬುಶೇನ್ ಬ್ಯಾಂಡೇಜ್ನಿಂದ ಚೆಂಡನ್ನು ವಿರೂಪಗೊಳಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಐಸಿಸಿ ನಿಯಮದ ಪ್ರಕಾರ, ಅನುಮತಿಸಲಾದ ಟವೆಲ್ನ್ನು ಹೊರತುಪಡಿಸಿ ಇತರೆ ಯಾವುದೇ ಬಟ್ಟೆಯಿಂದ ಚೆಂಡನ್ನು ಒರೆಸುವಂತಿಲ್ಲ. ಹಾಗೆಯೇ ಎಂಜಲನ್ನು ಕೂಡ ಬಳಸಿ ಚೆಂಡಿನ ಮೇಲ್ಮೈನ ಹೊಳಪನ್ನು ಹೋಗಲಾಡಿಸುವುದನ್ನು ಕೂಡ ನಿಷೇಧಿಸಲಾಗಿದೆ. ಇದಾಗ್ಯೂ ಫೀಲ್ಡ್ ಅಂಪೈರ್ ಹಾಗೂ ಥರ್ಡ್ ಅಂಪೈರ್ ಈ ಬಗ್ಗೆ ನೀರವ ಮೌನವಹಿಸಿರುವುದು ಇದೀಗ ಹಲವು ಅನುಮಾನಗಳಿಗೆ ಕಾರಣವಾಗಿದೆ.
WTC Final 2023: ‘ಪ್ಲೀಸ್ ನಿವೃತ್ತಿ ಘೋಷಿಸಿ’; ಕಳಪೆ ಆಟದಿಂದಾಗಿ ಫ್ಯಾನ್ಸ್ ಕೆಂಗಣ್ಣಿಗೆ ಗುರಿಯಾದ ಪೂಜಾರ
ಭಾರತ ಬ್ಯಾಟಿಂಗ್ನ ಎರಡನೇ ಇನ್ನಿಂಗ್ಸ್ನಲ್ಲಿ ಶುಭ್ಮನ್ ಗಿಲ್ಗೆ ಮೂರನೇ ಅಂಪೈರ್ ನೀಡಿದ ತೀರ್ಪು ವಿವಾದಕ್ಕೀಡಾಯಿತು. ಸ್ಕಾಟ್ ಬೋಲ್ಯಾಂಡ್ ಎಸೆತದಲ್ಲಿ ಗಿಲ್ ಬ್ಯಾಟ್ ಸವರಿ ಚೆಂಡು ಸ್ಲಿಪ್ನತ್ತ ಸಾಗಿತು. ತಕ್ಷಣವೇ ಅತ್ಯುತ್ತಮ ಡೈವಿಂಗ್ ಮೂಲಕ ಕ್ಯಾಮರೋನ್ ಗ್ರೀನ್ ಎಡಗೈಯಲ್ಲಿ ಕ್ಯಾಚ್ ಹಿಡಿದರು. ಇದಾಗ್ಯೂ ಫೀಲ್ಡ್ ಅಂಪೈರ್ ಕ್ಯಾಚ್ ಅನ್ನು ಪರಿಶೀಲಿಸುವಂತೆ ಮೂರನೇ ಅಂಪೈರ್ಗೆ ಮನವಿ ಮಾಡಿದರು. ಹಲವು ಬಾರಿ ರೀಪ್ಲೆ ಮಾಡಿದ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಆದರೆ ರೀಪ್ಲೆ ವೇಳೆಯಲ್ಲೇ ಚೆಂಡು ಮೈದಾನಕ್ಕೆ ತಾಗಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಇದಾಗ್ಯೂ ಮೂರನೇ ಅಂಪೈರ್ ಔಟ್ ಎಂದಿರುವುದು ಅಚ್ಚರಿಗೆ ಕಾರಣವಾಯಿತು.
ಥರ್ಡ್ ಅಂಪೈರ್ ಔಟ್ ಎಂದು ತೀರ್ಪು ನೀಡುತ್ತಿದ್ದಂತೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೈದಾನದಲ್ಲೇ ಆಕ್ರೋಶ ಹೊರಹಾಕಿದ್ದರು. ಅಂಪೈರ್ ತೀರ್ಪಿಗೆ ತಲೆಬಾಗಿ ಶುಭ್ಮನ್ ಗಿಲ್ (18) ನಿರಾಸೆಯೊಂದಿಗೆ ಮೈದಾನವನ್ನು ತೊರೆದರು. ಟಿವಿಯಲ್ಲಿ ಪುನಃ ಪರಿಶೀಲಿಸಿದ ಬಳಿಕ ಮೂರನೇ ಅಂಪೈರ್ ಔಟ್ ಎಂದು ತೀರ್ಪು ನೀಡಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಅದರಲ್ಲೂ ಪ್ರತಿಯೊಬ್ಬರಿಗೂ ಬೆರಳುಗಳ ಎಡೆಯಲ್ಲಿ ಚೆಂಡು ನೆಲಕ್ಕೆ ತಾಗಿರುವುದು ಕಂಡು ಬಂದರೂ ಮೂರನೇ ಅಂಪೈರ್ಗೆ ಕಾಣಲಿಲ್ಲವೇ ಎಂದು ಅನೇಕರು ಪ್ರಶ್ನಿಸಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ