WTC Final, IND vs AUS: ಭಾರತದ ಗೆಲುವಿಗೆ ಬೇಕು 540 ಎಸೆತಗಳಲ್ಲಿ 280 ರನ್ಸ್: ಕೊಹ್ಲಿ-ರಹಾನೆ ಮೇಲೆ ಎಲ್ಲರ ಕಣ್ಣು
India vs Australia Final: ಟೀಮ್ ಇಂಡಿಯಾ ನಾಲ್ಕನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿದೆ. ಭಾರತದ ಗೆಲುವಿಗೆ ಇನ್ನೂ 280 ರನ್ಗಳ ಅವಶ್ಯಕತೆಯಿದ್ದು, 90 ಓವರ್ಗಳು ನೀಡಲಾಗಿದೆ. ವಿರಾಟ್ ಕೊಹ್ಲಿ-ಅಜಿಂಕ್ಯ ರಹಾನೆ ಕ್ರೀಸ್ನಲ್ಲಿದ್ದಾರೆ.
ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (WTC Final) ಪಂದ್ಯ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಇಂದು ಕೊನೆಯ ದಿನದಾಟ ನಡೆಯಲಿದ್ದು ರೋಚಕತೆ ಸೃಷ್ಟಿಸಿದೆ. ದ್ವಿತೀಯ ಇನ್ನಿಂಗ್ಸ್ನಲ್ಲಿ ಆಸೀಸ್ 270 ರನ್ಗೆ ಡಿಕ್ಲೇರ್ ಘೋಷಿಸಿ 444 ರನ್ಗಳ ಟಾರ್ಗೆಟ್ ನೀಡಿತು. ಸದ್ಯ ಗುರಿ ಬೆನ್ನಟ್ಟಿರುವ ಟೀಮ್ ಇಂಡಿಯಾ ನಾಲ್ಕನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿದೆ. ಭಾರತದ ಗೆಲುವಿಗೆ ಇನ್ನೂ 280 ರನ್ಗಳ ಅವಶ್ಯಕತೆಯಿದ್ದು, 90 ಓವರ್ಗಳು ನೀಡಲಾಗಿದೆ. ವಿರಾಟ್ ಕೊಹ್ಲಿ (Virat Kohli)-ಅಜಿಂಕ್ಯ ರಹಾನೆ ಕ್ರೀಸ್ನಲ್ಲಿದ್ದಾರೆ.
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್:
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಕಾಂಗರೂ ಪಡೆ ಪರ ಮಾರ್ನಸ್ ಲಾಬುಶೇನ್ (26) ಹಾಗೂ ಡೇವಿಡ್ ವಾರ್ನರ್ (43) 69 ರನ್ಗಳ ಜೊತೆಯಾಟ ಆಡಿದರಷ್ಟೆ. ನಂತರ ಶುರುವಾಗಿದ್ದು ಸ್ಟೀವ್ ಸ್ಮಿತ್ ಹಾಗೂ ಟ್ರಾವಿಸ್ ಹೆಡ್ ಆಟ. ಹೆಡ್ ಅವರು ಈ ಪ್ರತಿಷ್ಠಿತ ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡರು. ಮೊದಲ ದಿನ 3 ವಿಕೆಟ್ ಕಳೆದುಕೊಂಡು 327 ರನ್ ಕಲೆಹಾಕಿ ದೊಡ್ಡ ಮೊತ್ತದ ಮುನ್ಸೂಚನೆ ನೀಡಿದ್ದ ಆಸೀಸ್ 2ನೇ ದಿನ ಮೊದಲ ದಿನದ ಮೊತ್ತಕ್ಕೆ 142 ರನ್ ಸೇರಿಸುವಷ್ಟರಲ್ಲಿ ಉಳಿದ 7 ವಿಕೆಟ್‌ಗಳನ್ನು ಕಳೆದುಕೊಂಡಿತು. ಹೆಡ್ 163 ರನ್ ಗಳಿಸಿ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು. ಸ್ಮಿತ್ ಆಟ 121 ರನ್ಗೆ ಅಂತ್ಯವಾಯಿತು. ಆಸೀಸ್ ಮೊದಲ ಇನಿಂಗ್ಸ್‌ನಲ್ಲಿ 469 ರನ್ಸ್ಗೆ ಆಲೌಟ್ ಆಯಿತು. ಭಾರತದ ಪರ ಸಿರಾಜ್ 4 ವಿಕೆಟ್ ಕಿತ್ತರೆ ಶಾರ್ದೂಲ್ ಠಾಕೂರ್ ಹಾಗೂ ಶಮಿ ತಲಾ 2ವಿಕೆಟ್‌ಗಳನ್ನು ಪಡೆದರು.
WTC Final 2023: ನಿರೀಕ್ಷೆ ಹುಸಿಗೊಳಿಸಿದ ಐಪಿಎಲ್ ಹೀರೋ ಶುಭ್ಮನ್ ಗಿಲ್
ಭಾರತ ಮೊದಲ ಇನ್ನಿಂಗ್ಸ್:
ಭಾರತ ಪರ ಓಪನರ್ಗಳಾದ ನಾಯಕ ರೋಹಿತ್ ಶರ್ಮಾ (15) ಹಾಗೂ ಶುಭ್ಮನ್ ಗಿಲ್ (13) ವೈಫಲ್ಯ ಅನುಭವಿಸಿದರು. ಚೇತೇಶ್ವರ ಪೂಜಾರ (14) ಹಾಗೂ ವಿರಾಟ್ ಕೊಹ್ಲಿ (14) ಕೂಡ ನಿರಾಸೆ ಮೂಡಿಸಿದರು. ಇದರ ನಡುವೆ ಐದನೇ ವಿಕೆಟ್ಗೆ ಅಜಿಂಕ್ಯ ರಹಾನೆ (89) ಹಾಗೂ ರವೀಂದ್ರ ಜಡೇಜಾ (48) ಉತ್ತಮ ಇನ್ನಿಂಗ್ ಕಟ್ಟಿ ತಂಡಕ್ಕೆ ನೆರವಾದರು. 71 ರನ್ಗಳ ಜೊತೆಯಾಟ ಆಡಿದರು. ಆಲ್ರೌಂಡರ್ ಶಾರ್ದೂಲ್ ಠಾಕೂರ್ (51) ತಾಳ್ಮೆಯ ಬ್ಯಾಟಿಂಗ್ ಮಾಡಿದರು. ಅಂತಿಮವಾಗಿ ಭಾರತ ಆಸಿಸ್ ವಿರುದ್ಧ ಮೊದಲ ಇನ್ನಿಂಗ್ಸ್ನಲ್ಲಿ 296 ರನ್ ಗಳಿಸಿತು.
ಆಸ್ಟ್ರೇಲಿಯಾ ದ್ವಿತೀಯ ಇನ್ನಿಂಗ್ಸ್:
ಎರಡನೇ ಇನ್ನಿಂಗ್ಸ್ನಲ್ಲಿ ಡೇವಿಡ್ ವಾರ್ನರ್ (1), ಉಸ್ಮಾನ್ ಖ್ವಾಜಾ (13) ಬೇಗನೆ ನಿರ್ಗಮಿಸಿದರೆ, ಮೂರನೇ ವಿಕೆಟ್ಗೆ ಮಾರ್ನಸ್ ಲಾಬುಶೇನ್ (41) ಹಾಗೂ ಸ್ಟೀವನ್ ಸ್ಮಿತ್ (34) 62 ರನ್ಗಳ ಜೊತೆಯಾಟ ಆಡಿದರು. ಕ್ಯಾಮ್ರೋನ್ ಗ್ರೀನ್ 25 ರನ್ ಗಳಿಸಿದರೆ, ಅಲೆಕ್ಸ್ ಕ್ಯಾರಿ ಅಜೇಯ 66 ರನ್ ಸಿಡಿಸಿದರು. ಆಸ್ಟ್ರೇಲಿಯಾ 8 ವಿಕೆಟ್ ನಷ್ಟಕ್ಕೆ 270 ರನ್ ಗಳಿಸಿದಾಗ ಡಿಕ್ಲೇರ್ ಘೋಷಿಸಿ ಭಾರತಕ್ಕೆ 444 ರನ್ಗಳ ಟಾರ್ಗೆಟ್ ನೀಡಿತು. ಭಾರತ ಪರ ಜಡೇಜಾ 3 ವಿಕೆಟ್ ಪಡೆದರೆ, ಉಮೇಶ್ ಯಾದವ್ ಹಾಗೂ ಶಮಿ ತಲಾ 2 ವಿಕೆಟ್ ಕಿತ್ತರು.
ಟಾರ್ಗೆಟ್ ಬೆನ್ನಟ್ಟುತ್ತಿರುವ ಭಾರತ:
ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ ದ್ವಿತೀಯ ಇನ್ನಿಂಗ್ಸ್ನಲ್ಲಿ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ಐಪಿಎಲ್ ಹೀರೋ ಶುಭ್ಮನ್ ಗಿಲ್ 18 ರನ್ಗೆ ಸುಸ್ತಾದರು. ನಾಯಕ ರೋಹಿತ್ ಶರ್ಮಾ 60 ಎಸೆತಗಳಲ್ಲಿ 43 ರನ್ಗೆ ಔಟಾದರೆ, ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ 27 ರನ್ಗೆ ನಿರ್ಗಮಿಸಿದರು. ನಂತರ ಜೊತೆಯಾದ ವಿರಾಟ್ ಕೊಹ್ಲಿ (ಅಜೇಯ 44) ಹಾಗೂ ಅಜಿಂಕ್ಯ ರಹಾನೆ (ಅಜೇಯ 20) ಎಚ್ಚರಿಕೆಯ ಬ್ಯಾಟಿಂಗ್ ನಡೆಸಿ ಅಂತಿಮ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ನಾಲ್ಕನೇ ದಿನದಾಟದ ಅಂತ್ಯಕ್ಕೆ ಟೀಮ್ ಇಂಡಿಯಾ 3 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ