WTC Final, IND vs AUS: ರೋಚಕ ಘಟ್ಟದತ್ತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್: ಭಾರತೀಯ ಬೌಲರ್ಗಳು ಮಾಡಬೇಕು ಮ್ಯಾಜಿಕ್
India vs Australia Final: ಆಸ್ಟ್ರೇಲಿಯಾವನ್ನು ಮೊದಲ ಇನ್ನಿಂಗ್ಸ್ನಲ್ಲಿ 469 ಆಲೌಟ್ ಮಾಡಿ ತನ್ನ ಪ್ರಥಮ ಇನ್ನಿಂಗ್ಸ್ ಆಡಿದ ಭಾರತ 296 ರನ್ ಗಳಿಸಿತು. 173 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಶುರು ಮಾಡಿರುವ ಕಾಂಗರೂ ಪಡೆ ಮೂರನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 123 ರನ್ ಗಳಿಸಿದೆ.
ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ನಡುವಣ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (WTC Final) ಪಂದ್ಯ ರೋಚಕ ಘಟ್ಟದತ್ತ ತಲುಪುತ್ತಿದೆ. ಆಸ್ಟ್ರೇಲಿಯಾವನ್ನು ಮೊದಲ ಇನ್ನಿಂಗ್ಸ್ನಲ್ಲಿ 469 ಆಲೌಟ್ ಮಾಡಿ ತನ್ನ ಪ್ರಥಮ ಇನ್ನಿಂಗ್ಸ್ ಆಡಿದ ಭಾರತ ಅಜಿಂಕ್ಯ ರಹಾನೆ (Ajinkya Rahane) ಹಾಗೂ ಶಾರ್ದೂಲ್ ಠಾಕೂರ್ ಆಟದ ನೆರವಿನಿಂದ 296 ರನ್ ಗಳಿಸಿತು. 173 ರನ್ಗಳ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಶುರು ಮಾಡಿರುವ ಕಾಂಗರೂ ಪಡೆ ಮೂರನೇ ದಿನದಾಟದ ಅಂತ್ಯಕ್ಕೆ 4 ವಿಕೆಟ್ ಕಳೆದುಕೊಂಡು 123 ರನ್ ಗಳಿಸಿದೆ. 296 ರನ್ಗಳ ಮುನ್ನಡೆಯಲ್ಲಿದೆ. ನಾಲ್ಕನೇ ದಿನದಾಟ ಸಾಕಷ್ಟು ಕುತೂಹಲ ಕೆರಳಿಸಿದ್ದು ಭಾರತ ಆದಷ್ಟು ಬೇಗ ಆಸೀಸ್ ವಿಕೆಟ್ ಕೀಳಬೇಕಿದೆ.
ಮೊದಲ ದಿನದಾಟ ಹೇಗಿತ್ತು?:
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಕಾಂಗರೂ ಪಡೆ ಪರ ಮಾರ್ನಸ್ ಲಾಬುಶೇನ್ (26) ಹಾಗೂ ಡೇವಿಡ್ ವಾರ್ನರ್ (43) 69 ರನ್ಗಳ ಜೊತೆಯಾಟ ಆಡಿದರಷ್ಟೆ. ನಂತರ ಶುರುವಾಗಿದ್ದು ಸ್ಟೀವ್ ಸ್ಮಿತ್ ಹಾಗೂ ಟ್ರಾವಿಸ್ ಹೆಡ್ ಆಟ. ಹೆಡ್ ಅವರು ಈ ಪ್ರತಿಷ್ಠಿತ ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡರು. ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 3 ವಿಕೆಟ್ ಕಳೆದುಕೊಂಡು 327 ರನ್ ಕಲೆಹಾಕಿ ದೊಡ್ಡ ಮೊತ್ತದ ಮುನ್ಸೂಚನೆ ನೀಡಿತ್ತು.
ದ್ವಿತೀಯ ದಿನದಾಟ ಹೇಗಿತ್ತು?:
ಬೃಹತ್ ಮೊತ್ತ ಗಳಿಸುವ ಗುರಿಯೊಂದಿಗೆ 2ನೇ ದಿನದಾಟ ಆರಂಭಿಸಿದ್ದ ಆಸ್ಟ್ರೇಲಿಯ ಮೊದಲ ದಿನದ ಮೊತ್ತಕ್ಕೆ 142 ರನ್ ಸೇರಿಸುವಷ್ಟರಲ್ಲಿ ಉಳಿದ 7 ವಿಕೆಟ್‌ಗಳನ್ನು ಕಳೆದುಕೊಂಡಿತು. ಹೆಡ್ 163 ರನ್ ಗಳಿಸಿ ಸಿರಾಜ್‌ಗೆ ವಿಕೆಟ್ ಒಪ್ಪಿಸಿದರು. ಸ್ಮಿತ್ ಆಟ 121 ರನ್ಗೆ ಅಂತ್ಯವಾಯಿತು. ಈ ಇಬ್ಬರು ಔಟಾದ ನಂತರ ಅಲೆಕ್ಸ್ ಕ್ಯಾರಿ 48 ರನ್ ಹಾಗೂ ನಾಯಕ ಪ್ಯಾಟ್ ಕಮಿನ್ಸ್ 9 ರನ್ ಗಳಿಸಿದರು. ಆಸೀಸ್ ಮೊದಲ ಇನಿಂಗ್ಸ್‌ನಲ್ಲಿ 469 ರನ್ಸ್ಗೆ ಆಲೌಟ್ ಆಯಿತು. ಭಾರತದ ಪರ ಸಿರಾಜ್ 4 ವಿಕೆಟ್ ಕಿತ್ತರೆ ಶಾರ್ದೂಲ್ ಠಾಕೂರ್ ಹಾಗೂ ಶಮಿ ತಲಾ 2ವಿಕೆಟ್‌ಗಳನ್ನು ಪಡೆದರು.
WTC Final 2023: 5000 ರನ್, 100 ಕ್ಯಾಚ್! ಫೈನಲ್ನಲ್ಲಿ ರಹಾನೆ ಬರೆದ ದಾಖಲೆಗಳಿವು
ಭಾರತ ಪರ ಓಪನರ್ಗಳಾದ ನಾಯಕ ರೋಹಿತ್ ಶರ್ಮಾ (15) ಹಾಗೂ ಶುಭ್ಮನ್ ಗಿಲ್ (13) ವೈಫಲ್ಯ ಅನುಭವಿಸಿದರು. ಚೇತೇಶ್ವರ ಪೂಜಾರ (14) ಹಾಗೂ ವಿರಾಟ್ ಕೊಹ್ಲಿ (14) ಕೂಡ ನಿರಾಸೆ ಮೂಡಿಸಿದರು. ಇದರ ನಡುವೆ ಐದನೇ ವಿಕೆಟ್ಗೆ ಅಜಿಂಕ್ಯ ರಹಾನೆ ಹಾಗೂ ರವೀಂದ್ರ ಜಡೇಜಾ ಉತ್ತಮ ಇನ್ನಿಂಗ್ ಕಟ್ಟಿ ತಂಡಕ್ಕೆ ನೆರವಾದರು. 71 ರನ್ಗಳ ಜೊತೆಯಾಟ ಆಡಿದರು. ಜಡೇಜಾ 51 ಬಾಲ್ಗಳಲ್ಲಿ 7 ಬೌಂಡರಿ ಮತ್ತು ಸಿಕ್ಸರ್ ಸಮೇತ 48 ರನ್ಗೆ ನಿರ್ಗಮಿಸಿದರು. ಎರಡನೇ ದಿನದ ಅಂತ್ಯಕ್ಕೆ ಭಾರತ 5 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿದ್ದು 318 ರನ್ಗಳ ಹಿನ್ನಡೆಯಲ್ಲಿತ್ತು.
ಮೂರನೇ ದಿನದಾಟ:
ಮೂರನೇ ದಿನ ಪಂದ್ಯ ಆರಂಭವಾಗುತ್ತಿದ್ದಂತೆ ಭರತ್ ವಿಕೆಟ್ ಕಳೆದುಕೊಂಡಿತು. ನಂತರ ಬಂದ ಬೌಲಿಂಗ್ ಆಲ್ರೌಂಡರ್ ಶಾರ್ದೂಲ್ ಠಾಕೂರ್ ರಹಾನೆಗೆ ಸಾಥ್ ನೀಡಿ ತಾಳ್ಮೆಯ ಬ್ಯಾಟಿಂಗ್ ಮಾಡಿದರು. ರಹಾನೆ ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಿದ್ದು ಸೊಗಸಾದ ಅರ್ಧಶತಕ ಗಳಿಸಿದರು. ಈ ಮೂಲಕ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಅರ್ಧಶತಕ ಗಳಿಸಿದ ಭಾರತದ ಮೊದಲ ಬ್ಯಾಟರ್ ಎಂಬ ದಾಖಲೆಯನ್ನೂ ಅವರು ರಚಿಸಿದರು.
ಊಟಕ್ಕೆ ತೆರಳುವ ಮುನ್ನ 122 ಬಾಲ್ಗೆ 89 ರನ್ ಗಳಿಸಿದ್ದ ರಹಾನೆ, ನಂತರ 7 ಬಾಲ್ ಎದುರಿಸಿ ವಿಕೆಟ್ ಕೊಟ್ಟರು. ನಂತರ ಶಾರ್ದೂಲ್ ಠಾಕೂರ್ ತಮ್ಮ ಇನ್ನಿಂಗ್ಸ್ ಅನ್ನು ಬೌಲರ್ಗಳ ಜೊತೆ ಸೇರಿ ಮುಂದುವರೆಸಿದರು. 109 ಬಾಲ್ನಲ್ಲಿ 6 ಬೌಂಡರಿಯ ಸಹಾಯದಿಂದ 51 ರನ್ ಗಳಿಸಿ ಶಾರ್ದೂಲ್ ವಿಕೆಟ್ ಕೊಟ್ಟರು. ಅಂತಿಮವಾಗಿ ಭಾರತ ಆಸಿಸ್ ವಿರುದ್ಧ ಮೊದಲ ಇನ್ನಿಂಗ್ಸ್ನಲ್ಲಿ 296 ರನ್ ಗಳಿಸಿತು.
ತನ್ನ ಎರಡನೇ ಇನ್ನಿಂಗ್ಸ್ ಆರಂಭಿಸಿದ ಆಸೀಸ್ ಬ್ಯಾಟರ್ಗಳನ್ನು ಭಾರತೀಯ ಬೌಲರ್ಗಳು ಕಟ್ಟಿ ಹಾಕುವಲ್ಲಿ ಸಫಲರಾದರು. ಡೇವಿಡ್ ವಾರ್ನರ್ (1), ಉಸ್ಮಾನ್ ಖ್ವಾಜಾ (13) ಬೇಗನೆ ನಿರ್ಗಮಿಸಿದರೆ, ಮೂರನೇ ವಿಕೆಟ್ಗೆ ಮಾರ್ನಸ್ ಲಾಬುಶೇನ್ ಹಾಗೂ ಸ್ಟೀವನ್ ಸ್ಮಿತ್ 62 ರನ್ಗಳ ಜೊತೆಯಾಟ ಆಡಿದರು. 34 ರನ್ಗಳಿಸಿ ಆಡುತ್ತಿದ್ದ ಸ್ಟೀವನ್ ಸ್ಮಿತ್ ಅವರನ್ನು ಜಡೇಜಾ ಔಟ್ ಮಾಡಿದರು. ಟ್ರಾವಿಸ್ ಹೆಡ್ 18 ರನ್ಗಳಿಗೆ ಪೆವಿಲಿಯನ್ ಸೇರಿದರು. ಸದ್ಯ 41 ರನ್ ಗಳಿಸಿರುವ ಮಾರ್ನಸ್ ಹಾಗೂ ಕ್ಯಾಮರೂನ್ ಗ್ರೀನ್ (7) ನಾಲ್ಕನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಭಾರತ ಪರ ಜಡೇಜಾ 2 ವಿಕೆಟ್, ಮೊಹಮ್ಮದ್ ಸಿರಾಜ್ ಹಾಗೂ ಉಮೇಶ್ ಯಾದವ್ ತಲಾ 1 ವಿಕೆಟ್ ಕಿತ್ತಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ