ಏಕದಿನ ವಿಶ್ವಕಪ್‌ನಲ್ಲಿ (ICC ODI World Cup 2023) ಇಂದು ಅಂದರೆ ಅಕ್ಟೋಬರ್ 30 ರಂದು ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ (Afghanistan vs Sri Lanka) ನಡುವೆ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಸೆಮಿಫೈನಲ್ ಹಾದಿ ಜೀವಂತವಾಗಿರಲಿದೆ. ಇಲ್ಲಿಯವರೆಗೆ ಉಭಯ ತಂಡಗಳು ತಲಾ 2 ಪಂದ್ಯಗಳನ್ನು ಗೆದ್ದಿದ್ದು, ತಲಾ ನಾಲ್ಕು ಅಂಕಗಳನ್ನು ಹೊಂದಿವೆ. ಆದರೆ ಉತ್ತಮ ನೆಟ್ ರನ್ ರೇಟ್‌ನಿಂದಾಗಿ ಶ್ರೀಲಂಕಾ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದರೆ, ಅಫ್ಘಾನಿಸ್ತಾನ ತಂಡ ಏಳನೇ ಸ್ಥಾನದಲ್ಲಿದೆ. ಉಭಯ ತಂಡಗಳ ನಡುವಿನ ಆರನೇ ಪಂದ್ಯ ಇದಾಗಿದ್ದು, ವಿಜೇತ ತಂಡವು ಒಟ್ಟು 6 ಅಂಕಗಳೊಂದಿಗೆ ಸೆಮಿಫೈನಲ್ಗೆ ಇನ್ನಷ್ಟು ಹತ್ತಿರವಾಗಲಿದೆ. ಹಾಗೆಯೇ ಸೋತ ತಂಡಕ್ಕೆ ಸೆಮಿಸ್ ಹಾದಿ ಮತ್ತಷ್ಟು ಕಠಿಣವಾಗಲಿದೆ. ಅಫ್ಘಾನಿಸ್ತಾನವು ಇಂಗ್ಲೆಂಡ್ ಮತ್ತು ಪಾಕಿಸ್ತಾನದಂತಹ ದಿಗ್ಗಜ ತಂಡಗಳನ್ನು ಸೋಲಿಸಿದೆ. ಹಾಗಾಗಿ ಅಫ್ಘಾನಿಸ್ತಾನ ತಂಡವನ್ನು ಶ್ರೀಲಂಕಾ ತಂಡ ಹಗುರವಾಗಿ ಪರಿಗಣಿಸುವಂತಿಲ್ಲ.
ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ನಡುವೆ ಇದುವರೆಗೆ 11 ಏಕದಿನ ಪಂದ್ಯಗಳು ನಡೆದಿದ್ದು, ಅದರಲ್ಲಿ ಶ್ರೀಲಂಕಾ 7 ಪಂದ್ಯಗಳನ್ನು ಗೆದ್ದಿದ್ದರೆ, ಅಫ್ಘಾನಿಸ್ತಾನ 3 ಪಂದ್ಯಗಳನ್ನು ಗೆದ್ದಿದೆ, 1 ಪಂದ್ಯ ಫಲಿತಾಂಶವಿಲ್ಲದೆ ಅಂತ್ಯಗೊಂಡಿದೆ. ಹಾಗೆಯೇ ಉಭಯರ ನಡುವೆ ತಟಸ್ಥ ಸ್ಥಳಗಳಲ್ಲಿ ನಡೆದ 5 ಏಕದಿನ ಪಂದ್ಯಗಳಲ್ಲಿ, ಶ್ರೀಲಂಕಾ 4 ಪಂದ್ಯಗಳನ್ನು ಗೆದ್ದಿದ್ದರೆ, ಅಫ್ಘಾನಿಸ್ತಾನ 1 ಪಂದ್ಯವನ್ನು ಗೆದ್ದಿದೆ. ಹೀಗಾಗಿ ಎರಡೂ ತಂಡಗಳ ಕಾಳಗದಲ್ಲಿ ಶ್ರೀಲಂಕಾ ಮೇಲುಗೈ ಸಾಧಿಸಿರುವುದು ಸ್ಪಷ್ಟವಾಗಿದೆ. ಆದರೆ ಪ್ರಸ್ತುತ ಆಟಗಾರರ ಇಂಜುರಿಯಿಂದ ಬಳಲುತ್ತಿರುವ ಶ್ರೀಲಂಕಾ ತಂಡಕ್ಕೆ ಅಫ್ಘಾನಿಸ್ತಾನ ತಂಡ ಸುಲಭ ತುತ್ತಾಗುವ ಮಾತು ಸತ್ಯಕ್ಕೆ ದೂರವಾಗಿದೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯ ನಡೆಯಲಿದೆ. ಈ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಪೂರಕವಾಗಿದೆ. ಹೀಗಾಗಿ ಈ ಪಂದ್ಯದಲ್ಲಿ ದೊಡ್ಡ ಮೊತ್ತ ಗಳಿಸುವ ಸಾಧ್ಯತೆ ಇದೆ. ಮೈದಾನವು ಬ್ಯಾಟಿಂಗ್‌ಗೆ ಪೂರಕವಾಗಿರುವುದರಿಂದ ಟಾಸ್ ಗೆದ್ದ ನಾಯಕ ಬೌಲಿಂಗ್ ಮಾಡಲು ಹೆಚ್ಚು ಆದ್ಯತೆ ನೀಡುತ್ತಾರೆ.
ಶ್ರೀಲಂಕಾ: ಪಾತುಮ್ ನಿಸಂಕ, ಕುಸಾಲ್ ಪೆರೇರಾ, ಕುಸಲ್ ಮೆಂಡಿಸ್ (ನಾಯಕ/ವಿಕೆಟ್ ಕೀಪರ್) ಸದಿರ ಸಮರವಿಕ್ರಮ, ಚರಿತ್ ಅಸಲಂಕಾ, ಧನಂಜಯ್ ಡಿ ಸಿಲ್ವಾ, ಏಂಜೆಲೊ ಮ್ಯಾಥ್ಯೂಸ್, ಮಹೇಶ್ ತಿಕ್ಷಣ, ಕಸುನ್ ರಜಿತಾ, ದುಷ್ಮಂತ ಚಮೀರಾ, ದಿಲ್ಶನ್ ಮಧುಶಂಕ.
ಅಫ್ಘಾನಿಸ್ತಾನ: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್, ರಹಮತ್ ಷಾ, ಹಶಮತುಲ್ಲಾ ಶಾಹಿದಿ (ನಾಯಕ), ಅಜ್ಮತುಲ್ಲಾ ಉಮರ್ಜಾಯ್, ಇಕ್ರಮ್ ಅಲಿಖಿಲ್ (ವಿಕೆಟ್ ಕೀಪರ್), ಮೊಹಮ್ಮದ್ ನಬಿ, ರಶೀದ್ ಖಾನ್, ಮುಜೀಬ್ ಉರ್ ರೆಹಮಾನ್, ನವೀನ್-ಉಲ್-ಹಕ್, ನೂರ್ ಅಹ್ಮದ್.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ