ಟೆಸ್ಟ್ ಪಂದ್ಯವನ್ನು ನೋಡಲು ಹಾವು, ಕೋತಿಯೊಂದಿಗೆ ಕ್ರೀಡಾಂಗಣಕ್ಕೆ ಎಂಟ್ರಿಕೊಟ್ಟ ಹಾವಾಡಿಗ
Snake Charmer at Galle Test: ಭಾರತ-ಇಂಗ್ಲೆಂಡ್ ಹಾಗೂ ಶ್ರೀಲಂಕಾ-ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಗಳೊಂದಿಗೆ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆರಂಭವಾಗಿದೆ. ಗಾಲೆಯಲ್ಲಿ ನಡೆದ ಶ್ರೀಲಂಕಾ-ಬಾಂಗ್ಲಾದೇಶ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು. ಆದರೆ, ಪಂದ್ಯಕ್ಕಿಂತ ಹಾವು ಹಿಡಿದು ಕೋತಿಯೊಂದಿಗೆ ಕ್ರೀಡಾಂಗಣಕ್ಕೆ ಬಂದ ಅಭಿಮಾನಿಯೇ ಹೆಚ್ಚು ಸುದ್ದಿಯಾಗಿದ್ದಾನೆ. ಇದು ಕ್ರೀಡಾಪ್ರಿಯರಲ್ಲಿ ಆಶ್ಚರ್ಯ ಹುಟ್ಟಿಸಿದೆ.

ಒಂದೆಡೆ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವೆ ಐದು ಪಂದ್ಯಗಳ ಟೆಸ್ಟ್ ಸರಣಿ ಇಂಗ್ಲೆಂಡ್ನಲ್ಲಿ ಆರಂಭವಾಗಿದ್ದರೆ, ಮತ್ತೊಂದೆಡೆ ಶ್ರೀಲಂಕಾದಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ (Sri Lanka vs Bangladesh) ನಡುವೆ 2 ಪಂದ್ಯಗಳ ಟೆಸ್ಟ್ ಸರಣಿ ಶುರುವಾಗಿದೆ. ಈ ಸರಣಿಗಳೊಂದಿಗೆ 4 ತಂಡಗಳ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಭಿಯಾನ ಕೂಡ ಆರಂಭವಾಗಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯ ಎರಡನೇ ದಿನದಾಟದಲ್ಲಿದ್ದರೆ, ಇತ್ತ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ನಡುವಿನ ಮೊದಲ ಟೆಸ್ಟ್ ಪಂದ್ಯ ಡ್ರಾದೊಂದಿಗೆ ಅಂತ್ಯವಾಗಿದೆ. ಇದೀಗ ಈ ಪಂದ್ಯ ತನ್ನ ಫಲಿತಾಂಶದಿಂದ ಹೆಚ್ಚು ಚರ್ಚೆಯಾಗುವ ಬದಲು ಕ್ರೀಡಾಂಗಣಕ್ಕೆ ಪಂದ್ಯ ವೀಕ್ಷಿಸಲು ಬಂದಿದ್ದ ಅದೊಬ್ಬ ಅಭಿಮಾನಿಯಿಂದ ಸಾಕಷ್ಟು ಸುದ್ದಿಯಾಗಿದೆ.
ವಾಸ್ತವವಾಗಿ ಬಾಂಗ್ಲಾದೇಶ ಕ್ರಿಕೆಟ್ ತಂಡವು ಪ್ರಸ್ತುತ ಶ್ರೀಲಂಕಾ ಪ್ರವಾಸದಲ್ಲಿದ್ದು, ಎರಡೂ ತಂಡಗಳ ನಡುವೆ 2 ಟೆಸ್ಟ್ ಪಂದ್ಯಗಳ ಸರಣಿ ನಡೆಯುತ್ತಿದೆ. ಶ್ರೀಲಂಕಾ ಮತ್ತು ಬಾಂಗ್ಲಾದೇಶ ನಡುವಿನ ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಫಲಿತಾಂಶ ಡ್ರಾದೊಂದಿಗೆ ಅಂತ್ಯಗೊಂಡರೆ, ಇದೇ ಪಂದ್ಯವನ್ನು ವೀಕ್ಷಿಸಲು ಹಾವಾಡಿಗನೊಬ್ಬ ತನ್ನ ಹಾವು ಮತ್ತು ಕೋತಿಯೊಂದಿಗೆ ಕ್ರೀಡಾಂಗಣಕ್ಕೆ ಬಂದಿದ್ದು ಒಂದು ಕ್ಷಣ ಕ್ರೀಡಾಂಗಣದಲ್ಲಿ ನೆರೆದಿದ್ದವರನ್ನು ಅಚ್ಚರಿಗೆ ತಳ್ಳಿದ್ದಲ್ಲದೆ, ಭಯ ಭೀತರನ್ನಾಗಿಸಿದೆ.
ಹಾವಿನೊಂದಿಗೆ ಕ್ರೀಡಾಂಗಣಕ್ಕೆ ಬಂದ ಹಾವಾಡಿಗ
ಗಾಲೆ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಈ ಪಂದ್ಯದ ವೇಳೆ ಹಾವಾಡಿಗನೊಬ್ಬ ಬುಟ್ಟಿಯಲ್ಲಿ 2 ಹಾವುಗಳನ್ನು ಮತ್ತು ಇನ್ನೊಂದು ಬುಟ್ಟಿಯಲ್ಲಿ ಕೋತಿಯನ್ನು ಹಾಕಿಕೊಂಡು ಕ್ರೀಡಾಂಗಣಕ್ಕೆ ಬಂದಿದ್ದಾನೆ. ಅಲ್ಲದೆ, ಎರಡು ನಾಗರಹಾವುಗಳನ್ನು ಕೈಯಲ್ಲಿ ಹಿಡಿದು ಕ್ಯಾಮರಾಕ್ಕೆ ಪೋಸ್ ಕೂಡ ನೀಡಿದ್ದಾನೆ. ಇದರ ಜೊತೆಗೆ ಕೊಳಲು ನುಡಿಸುವ ಮೂಲಕ ಹಾವುಗಳನ್ನು ನಿಯಂತ್ರಿಸುತ್ತಾ ಶ್ರೀಲಂಕಾ ಮತ್ತು ಬಾಂಗ್ಲಾದೇಶದ ನಡುವಿನ ಪಂದ್ಯವನ್ನು ವೀಕ್ಷಿಸಿದ್ದಾನೆ.
A Snake Charmer in Galle watching Sri Lanka Vs Bangladesh with Snakes and Monkey. pic.twitter.com/bcXmA6caUh
— Mufaddal Vohra (@mufaddal_vohra) June 21, 2025
ಗಾಲೆ ಟೆಸ್ಟ್ ಡ್ರಾದಲ್ಲಿ ಅಂತ್ಯ
2025 ರ ಜೂನ್ 17 ರಿಂದ 21 ರವರೆಗೆ ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಬ್ಯಾಟ್ಸ್‌ಮನ್‌ಗಳು ಪ್ರಾಬಲ್ಯ ಸಾಧಿಸಿದರು. ಮೊದಲ ದಿನದಂದು ಕಳಪೆ ಆರಂಭ ಪಡೆದುಕೊಂಡ ಬಾಂಗ್ಲಾದೇಶ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಕೇವಲ 45 ರನ್ ಕಲೆಹಾಕಿತು. ಆದರೆ ನಜ್ಮುಲ್ ಹುಸೇನ್ ಶಾಂಟೋ (148 ರನ್) ಮತ್ತು ಮುಷ್ಫಿಕರ್ ರಹೀಮ್ (163 ರನ್) ನಡುವಿನ ಅದ್ಭುತ ಶತಕದ ಪಾಲುದಾರಿಕೆ ತಂಡವನ್ನು ಸಂಕಷ್ಟದಿಂದ ಪಾರು ಮಾಡಿತು. ಇವರ ನಂತರ, ಲಿಟನ್ ದಾಸ್ ಕೂಡ 90 ರನ್‌ಗಳ ಇನ್ನಿಂಗ್ಸ್ ಆಡುವ ಮೂಲಕ ಬಾಂಗ್ಲಾದೇಶವನ್ನು 495 ರನ್‌ಗಳ ಗಡಿ ದಾಟಿಸಿದರು.
ಮತ್ತೊಂದೆಡೆ, ಶ್ರೀಲಂಕಾದ ಮೊದಲ ಇನ್ನಿಂಗ್ಸ್‌ನಲ್ಲಿ ಪಾಥುಮ್ ನಿಸ್ಸಂಕ (187 ರನ್‌ಗಳು) ಮತ್ತು ಕಾಮಿಂಡು ಮೆಂಡಿಸ್ (87) ಅವರ ಅದ್ಭುತ ಇನ್ನಿಂಗ್ಸ್ನ ಸಹಾಯದಿಂದ 485 ರನ್ ಕಲೆಹಾಕಿತ್ತಾದರೂ, 10 ರನ್‌ಗಳ ಇನ್ನಿಂಗ್ಸ್ ಹಿನ್ನಡೆ ಅನುಭವಿಸಿತ್ತು. ನಂತರ ಮೂರನೇ ದಿನ, ಬಾಂಗ್ಲಾದೇಶ ಎರಡನೇ ಇನ್ನಿಂಗ್ಸ್‌ನಲ್ಲಿ 177/3 ಸ್ಕೋರ್‌ನೊಂದಿಗೆ 187 ರನ್‌ಗಳ ಮುನ್ನಡೆ ಸಾಧಿಸಿತು. ಆದರೆ ನಾಲ್ಕನೇ ದಿನ, ಮಳೆ ಆಟಕ್ಕೆ ಅಡ್ಡಿಪಡಿಸಿತು. ಅಂತಿಮವಾಗಿ ಬಾಂಗ್ಲಾದೇಶ ತನ್ನ ಮುನ್ನಡೆಯನ್ನು 285/6 ಕ್ಕೆ ಹೆಚ್ಚಿಸಿತು. ಕೊನೆಯ ದಿನದಂದು 296 ರನ್‌ಗಳ ಗುರಿಯನ್ನು ಪಡೆದ ಶ್ರೀಲಂಕಾ 4 ವಿಕೆಟ್‌ಗಳ ನಷ್ಟಕ್ಕೆ 72 ರನ್ ಕಲೆಹಾಕುವ ಮೂಲಕ ಪಂದ್ಯವನ್ನು ಡ್ರಾದಲ್ಲಿ ಕೊನೆಗೊಳಿಸಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:59 pm, Sat, 21 June 25
