ಒಂದೇ ವರ್ಷ 3 ದ್ವಿಶತಕ ಸಿಡಿಸಿದ ಕನ್ನಡಿಗ
Smaran Ravichandran: ಹುಬ್ಬಳ್ಳಿಯ ಕೆಎಸ್ಸಿಎ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟೂರ್ನಿ ಪಂದ್ಯದಲ್ಲಿ ಕರ್ನಾಟಕ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದೆ. ಚಂಡೀಗಢ್ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಪರ ಸ್ಮರಣ್ ರವಿಚಂದ್ರನ್ ಭರ್ಜರಿ ದ್ವಿಶತಕ ಸಿಡಿಸಿದ್ದಾರೆ. ಈ ಡಬಲ್ ಸೆಂಚುರಿಯೊಂದಿಗೆ ಕರ್ನಾಟಕ ತಂಡ ಮೊದಲ ಇನಿಂಗ್ಸ್ನಲ್ಲಿ 547 ರನ್ಗಳಿಸಿ ಡಿಕ್ಲೇರ್ ಘೋಷಿಸಿದೆ.

ರಣಜಿ ಟೂರ್ನಿಯಲ್ಲಿ ಕರ್ನಾಟಕದ ಯುವ ಎಡಗೈ ದಾಂಡಿಗ ಸ್ಮರಣ್ ರವಿಚಂದ್ರನ್ ಅವರ ಅಬ್ಬರ ಮುಂದುವರೆದಿದೆ. ಜನವರಿಯಲ್ಲಿ ಪಂಜಾಬ್ ವಿರುದ್ಧ 203 ರನ್ಗಳ ಭರ್ಜರಿ ಇನಿಂಗ್ಸ್ ಆಡಿದ್ದ ಸ್ಮರಣ್ ಇದೀಗ ಬ್ಯಾಕ್ ಟು ಬ್ಯಾಕ್ ದ್ವಿಶತಕ ಸಿಡಿಸಿ ಮಿಂಚಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ರಣಜಿ ಟೂರ್ನಿಯ ಗ್ರೂಪ್-ಬಿ ಪಂದ್ಯದಲ್ಲಿ ಕರ್ನಾಟಕ ಹಾಗೂ ಚಂಡೀಗಢ್ ತಂಡಗಳು ಮುಖಾಮುಖಿಯಾಗಿವೆ, ಹುಬ್ಬಳಿಯ ಕೆಎಸ್ಸಿಎ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ಪರ ಐದನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ಮರಣ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
ಅಲ್ಲದೆ ಈ ಪಂದ್ಯದಲ್ಲಿ 362 ಎಸೆತಗಳನ್ನು ಎದುರಿಸಿದ ಸ್ಮರಣ್ ರವಿಚಂದ್ರನ್ 16 ಫೋರ್ ಹಾಗೂ 2 ಸಿಕ್ಸ್ಗಳೊಂದಿಗೆ ಅಜೇಯ 227 ರನ್ ಬಾರಿಸಿದರು. ಈ ಭರ್ಜರಿ ದ್ವಿಶತಕದ ನೆರವಿನೊಂದಿಗೆ ಕರ್ನಾಟಕ ತಂಡ ಮೊದಲ ಇನಿಂಗ್ಸ್ನಲ್ಲಿ 8 ವಿಕೆಟ್ ಕಳೆದುಕೊಂಡು 547 ರನ್ಗಳಿಸಿ ಡಿಕ್ಲೇರ್ ಘೋಷಿಸಿದೆ.
ಅಂದಹಾಗೆ ಇದು ಸ್ಮರಣ್ ರವಿಚಂದ್ರನ್ ಅವರ ಈ ವರ್ಷದ ಮೂರನೇ ಡಬಲ್ ಸೆಂಚುರಿ. ಇದಕ್ಕೂ ಮುನ್ನ ಕೇರಳ ವಿರುದ್ಧದ ಪಂದ್ಯದಲ್ಲೂ ಅಜೇಯ 220 ರನ್ ಬಾರಿಸಿ ಮಿಂಚಿದ್ದರು. ಅಲ್ಲದೆ ಜನವರಿಯಲ್ಲಿ ನಡೆದ ಕಳೆದ ಸೀಸನ್ನ ರಣಜಿ ಟೂರ್ನಿ ಪಂದ್ಯದಲ್ಲಿ ಪಂಜಾಬ್ ವಿರುದ್ಧ 203 ರನ್ ಗಳಿಸಿದ್ದರು. ಇದೀಗ ಮೂರನೇ ದ್ವಿಶತಕದೊಂದಿಗೆ ಸ್ಮರಣ್ ರವಿಚಂದ್ರನ್ ಫಸ್ಟ್ ಕ್ಲಾಸ್ ಕ್ರಿಕೆಟ್ನಲ್ಲಿ 1000 ರನ್ ಪೂರೈಸಿದ್ದಾರೆ.
ಸ್ಮರಣ್ ಸ್ಮರಣೀಯ ಆರಂಭ:
ಕರ್ನಾಟಕ ಪರ ಈವರೆಗೆ 12 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ 22 ವರ್ಷದ ಸ್ಮರಣ್ ರವಿಚಂದ್ರನ್ 3 ದ್ವಿಶತಕ, 1 ಶತಕ ಹಾಗು 3 ಅರ್ಧಶತಕಗಳೊಂದಿಗೆ ಸಾವಿರ ರನ್ ಪೂರೈಸಿದ್ದಾರೆ. ಈ ಮೂಲಕ ತನ್ನ ಪ್ರಥಮ ದರ್ಜೆ ಕೆರಿಯರ್ನಲ್ಲಿ ಅದ್ಭುತ ಆರಂಭ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಟೆಸ್ಟ್ ಇತಿಹಾಸದಲ್ಲೇ ಯಾರಿಂದಲೂ ಸಾಧ್ಯವಾಗದ ವಿಶ್ವ ದಾಖಲೆ ಬರೆದ ಟೆಂಬಾ ಬವುಮಾ
ಇತ್ತ ಟಿ20 ಕ್ರಿಕೆಟ್ನಲ್ಲೂ ಸ್ಮರಣ್ ಕಡೆಯಿಂದ ಅದ್ಭುತ ಪ್ರದರ್ಶನವೇ ಮೂಡಿ ಬರುತ್ತಿದೆ. ಈವರೆಗೆ 6 ಟಿ20 ಪಂದ್ಯಗಳನ್ನಾಡಿರುವ ಯುವ ಎಡಗೈ ದಾಂಡಿಗ ಒಂದು ಅರ್ಧಶತಕದೊಂದಿಗೆ 170 ರನ್ ಕಲೆಹಾಕಿದ್ದಾರೆ. ಇದೇ ಕಾರಣದಿಂದಾಗಿ ಸನ್ರೈಸರ್ಸ್ ಹೈದರಾಬಾದ್ ಫ್ರಾಂಚೈಸಿಯು ಸ್ಮರಣ್ ರವಿಚಂದ್ರನ್ ಅವರನ್ನು ಮುಂದಿನ ಸೀಸನ್ಗಾಗಿ ರಿಟೈನ್ ಮಾಡಿಕೊಂಡಿದೆ. ಅದರಂತೆ ಐಪಿಎಲ್ 2026 ರಲ್ಲಿ ಕರ್ನಾಟಕದ ಯುವ ಎಡಗೈ ದಾಂಡಿಗ ಸನ್ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿಯುವುದನ್ನು ಎದುರು ನೋಡಬಹುದು.
Published On - 9:28 am, Tue, 18 November 25
