ಮದುವೆ ಮುರಿದು ಬಿದ್ದ ಬಳಿಕ ಮೊದಲ ಬಾರಿಗೆ ಕಾಣಿಸಿಕೊಂಡ ಸ್ಮೃತಿ ಮಂಧಾನ

Smriti Mandhana Returns to Nets: ಸ್ಮೃತಿ ಮಂಧಾನ ತಮ್ಮ ವೈಯಕ್ತಿಕ ಜೀವನದ ಬಿರುಗಾಳಿಯ ನಂತರ ವೃತ್ತಿಜೀವನದತ್ತ ಗಮನ ಹರಿಸಿದ್ದಾರೆ. ಪಲಾಶ್ ಮುಚ್ಚಲ್ ಅವರೊಂದಿಗಿನ ವಿವಾಹ ಮುರಿದುಬಿದ್ದ ವಿಚಾರವನ್ನು ಸಾರ್ವಜನಿಕಗೊಳಿಸಿ, ಇದೀಗ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದಾರೆ. ಡಿಸೆಂಬರ್ 21 ರಿಂದ ಶ್ರೀಲಂಕಾ ವಿರುದ್ಧ ನಡೆಯಲಿರುವ ಟಿ20 ಸರಣಿಗಾಗಿ ಸಿದ್ಧತೆ ನಡೆಸಿದ್ದು, ಭಾರತ ಮಹಿಳಾ ತಂಡದ ಪರ ಮತ್ತೆ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

ಮದುವೆ ಮುರಿದು ಬಿದ್ದ ಬಳಿಕ ಮೊದಲ ಬಾರಿಗೆ ಕಾಣಿಸಿಕೊಂಡ ಸ್ಮೃತಿ ಮಂಧಾನ
Smriti Mandhana

Updated on: Dec 08, 2025 | 4:59 PM

ತಮ್ಮ ವೈಯಕ್ತಿಕ ಜೀವನದಲ್ಲಿ ಎದ್ದ ಬಿರುಗಾಳಿಯನ್ನು ಒಂದು ಇನ್​ಸ್ಟಾಗ್ರಾಮ್ ಪೋಸ್ಟ್​ ಮೂಲಕ ತಣ್ಣಗಾಗಿಸಿದ್ದ ಸ್ಮೃತಿ ಮಂಧಾನ (Smriti Mandhana) ಇದೀಗ ತಮ್ಮ ವೃತ್ತಿಜೀವನದತ್ತ ಗಮನಹರಿಸಲು ಶುರು ಮಾಡಿದ್ದಾರೆ. ಪಲಾಶ್ ಮುಚ್ಚಲ್ (Palash Muchhal) ಅವರೊಂದಿಗಿನ ವಿವಾಹ ಮುರಿದುಬಿದ್ದ ವಿಚಾರವನ್ನು ನಿನ್ನೆಯಷ್ಟೆ ಸಾರ್ವಜನಿಕಗೊಳಿಸಿದ್ದ ಸ್ಮೃತಿ ಮಂಧಾನ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ವಾಸ್ತವವಾಗಿ ಭಾರತ ಮಹಿಳಾ ತಂಡ, ವಿಶ್ವಕಪ್ ಗೆದ್ದ ಬಳಿಕ ಮದುವೆ ಕೆಲಸದಲ್ಲಿ ಬ್ಯುಸಿಯಾಗಿದ್ದ ಸ್ಮೃತಿ ಮಂಧಾನ ಇದೀಗ ತಮ್ಮ ವೃತ್ತಿಜೀವನದತ್ತ ಗಮನಹರಿಸಲು ಆರಂಭಿಸಿದ್ದು, ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಭಾರತ ಮಹಿಳಾ ತಂಡ ಇದೇ ಡಿಸೆಂಬರ್ 21 ರಿಂದ ಶ್ರೀಲಂಕಾ ತಂಡದ ವಿರುದ್ಧ ಟಿ20 ಸರಣಿಯನ್ನು ಆಡಲಿದೆ. ಇದೀಗ ಈ ಸರಣಿಗಾಗಿ ಸ್ಮೃತಿ ಮಂಧಾನ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಶ್ರೀಲಂಕಾ ತಂಡವು ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲು ಭಾರತಕ್ಕೆ ಭೇಟಿ ನೀಡುತ್ತಿದ್ದು, ಇದರಲ್ಲಿ ಸ್ಮೃತಿ ಮಂಧಾನ ಕೂಡ ಆಡುವುದನ್ನು ಕಾಣಬಹುದು.

ನೆಟ್ಸ್​ನಲ್ಲಿ ಸ್ಮೃತಿ ಬ್ಯಾಟಿಂಗ್ ಅಭ್ಯಾಸ

ಪಲಾಶ್ ಅವರೊಂದಿಗಿನ ವಿವಾಹ ಮುರಿದುಬಿದ್ದ ನಂತರ ಸ್ಮೃತಿ ಮಂಧಾನಾ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಮೊದಲ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹಿಳಾ ಏಕದಿನ ವಿಶ್ವಕಪ್ ಗೆದ್ದ ನಂತರ ಸ್ಮೃತಿ ಮಂಧಾನಾ ನೆಟ್ಸ್‌ನಲ್ಲಿ ಬ್ಯಾಟ್ ಹಿಡಿದುಕೊಂಡು ಕಾಣಿಸಿಕೊಳ್ಳುತ್ತಿರುವುದು ಇದೇ ಮೊದಲು.

ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಸಿದ್ಧತೆ

ಶ್ರೀಲಂಕಾ ಮಹಿಳಾ ಕ್ರಿಕೆಟ್ ತಂಡ ಐದು ಪಂದ್ಯಗಳ ಟಿ20ಐ ಸರಣಿಯನ್ನು ಆಡಲು ಭಾರತಕ್ಕೆ ಬರುತ್ತಿದೆ. ಭಾರತ ಮತ್ತು ಶ್ರೀಲಂಕಾ ನಡುವಿನ ಈ ಸರಣಿ ಡಿಸೆಂಬರ್ 21 ರಂದು ಪ್ರಾರಂಭವಾಗಿ ಡಿಸೆಂಬರ್ 30 ರವರೆಗೆ ನಡೆಯಲಿದೆ. ಟಿ20 ಸರಣಿಯ ಮೊದಲ ಎರಡು ಪಂದ್ಯಗಳು ವೈಜಾಗ್‌ನಲ್ಲಿ ನಡೆಯಲಿದ್ದು, ಉಳಿದ ಮೂರು ಪಂದ್ಯಗಳು ತಿರುವನಂತಪುರಂನಲ್ಲಿ ನಡೆಯಲಿವೆ. ಭಾರತ-ಶ್ರೀಲಂಕಾ ಟಿ20 ಸರಣಿಯ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 7:00 ಗಂಟೆಗೆ ಪ್ರಾರಂಭವಾಗಲಿವೆ.

ಮದುವೆ ರದ್ದಾದ ಬಗ್ಗೆ ಸ್ಮೃತಿ ಹೇಳಿದ್ದೇನು?

ತಮ್ಮ ಮದುವೆ ರದ್ದಾದ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಒಂದು ಪೋಸ್ಟ್ ಹಂಚಿಕೊಂಡಿರುವ ಸ್ಮೃತಿ, ‘ಕಳೆದ ಕೆಲವು ವಾರಗಳಿಂದ ನನ್ನ ಜೀವನದ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ಹೀಗಾಗಿ ಈ ಸಮಯದಲ್ಲಿ ನಾನು ಮಾತನಾಡುವುದು ಮುಖ್ಯ ಎಂದು ಭಾವಿಸುತ್ತೇನೆ. ನಾನು ತುಂಬಾ ಖಾಸಗಿ ವ್ಯಕ್ತಿ, ಮತ್ತು ನಾನು ಅದನ್ನು ಹಾಗೆಯೇ ಇಡಲು ಬಯಸುತ್ತೇನೆ, ಆದರೆ ಮದುವೆಯನ್ನು ರದ್ದುಗೊಳಿಸಲಾಗಿದೆ ಎಂದು ನಾನು ಸ್ಪಷ್ಟಪಡಿಸಬೇಕಾಗಿದೆ. ಈ ವಿಷಯವನ್ನು ಇಲ್ಲಿಗೆ ನಿಲ್ಲಿಸಲು ನಾನು ಬಯಸುತ್ತೇನೆ ಮತ್ತು ನಿಮ್ಮೆಲ್ಲರೂ ಅದೇ ರೀತಿ ಮಾಡಬೇಕೆಂದು ಒತ್ತಾಯಿಸುತ್ತೇನೆ. ದಯವಿಟ್ಟು ಈ ಸಮಯದಲ್ಲಿ ಎರಡೂ ಕುಟುಂಬಗಳ ಗೌಪ್ಯತೆಯನ್ನು ಗೌರವಿಸಿ ಮತ್ತು ನಮಗೆ ಮುಂದುವರಿಯಲು ಅವಕಾಶ ನೀಡಬೇಕೆಂದು ನಾನು ವಿನಂತಿಸುತ್ತೇನೆ’ ಎಂದು ಬರೆದುಕೊಂಡಿದ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ