IND W vs AUS W: ಸ್ಮೃತಿ ದಾಖಲೆಯ ಶತಕದ ನಡುವೆಯೂ ಸೋತ ಭಾರತ; ಏಕದಿನ ಸರಣಿ ಗೆದ್ದ ಆಸ್ಟ್ರೇಲಿಯಾ
IND W vs AUS W: ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡವು ದೆಹಲಿಯಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿತು. ಸ್ಮೃತಿ ಮಂಧಾನ ಅವರ ಅದ್ಭುತ ಶತಕದ ಹೊರತಾಗಿಯೂ ಭಾರತ ಸೋತಿತು. ಆಸ್ಟ್ರೇಲಿಯಾ 412 ರನ್ ಗಳಿಸಿದರೆ, ಭಾರತ 369 ರನ್ ಗಳಿಗೆ ಆಲೌಟ್ ಆಯಿತು. ದೀಪ್ತಿ ಮತ್ತು ಹರ್ಮನ್ ಪ್ರೀತ್ ಅವರು ಅರ್ಧಶತಕ ಬಾರಿಸಿದರು. ಭಾರತ ತಂಡದ ಹೋರಾಟ ಗಮನಾರ್ಹವಾಗಿತ್ತು.

ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ (India vs Australia) ವನಿತಾ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯ ಮೂರನೇ ಏಕದಿನ ಪಂದ್ಯವನ್ನು ಆಸ್ಟ್ರೇಲಿಯಾ ತಂಡ 43 ರನ್‌ಗಳಿಂದ ಗೆದ್ದುಕೊಂಡಿತು. ಇದರೊಂದಿಗೆ ಏಕದಿನ ಸರಣಿಯನ್ನು ಸಹ 2-1 ಅಂತರದಿಂದ ವಶಪಡಿಸಿಕೊಂಡಿತು. ಈ ಸರಣಿ ಸೋಲಿನ ಹೊರತಾಗಿಯೂ ಭಾರತೀಯ ಮಹಿಳಾ ತಂಡ ತೋರಿದ ದಿಟ್ಟ ಹೋರಾಟ ಎಲ್ಲರ ಗಮನ ಸೆಳೆಯಿತು. ಅದರಲ್ಲೂ ಸರಣಿಯ ಕೊನೆಯ ಪಂದ್ಯದಲ್ಲಿ ಆಸೀಸ್ ನೀಡಿದ 412 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡ ನಿಜಕ್ಕೂ ಗೆಲುವಿಗಾಗಿ ಶತಪ್ರಯತ್ನ ಮಾಡಿತು. ಆದರೆ ಬೆಟ್ಟದಂತಹ ಗುರಿಯ ಮುಂದೆ ಒತ್ತಡಕ್ಕೊಳಗಾಗದ ಭಾರತ ತಂಡ 369 ರನ್‌ಗಳಿಗೆ ಆಲೌಟ್ ಆಯಿತು.
ಅನುಭವಿ ಬೌಲರ್ಗಳನ್ನೇ ತಂಡದಲ್ಲಿ ಹೊಂದಿರುವ ಆಸೀಸ್ ಬೌಲಿಂಗ್ ವಿಭಾಗವನ್ನು ಹೈರಾಣಾಗಿಸಿದ ಟೀಂ ಇಂಡಿಯಾ ಉಪನಾಯಕಿ ಸ್ಮೃತಿ ಮಂಧಾನ ದಾಖಲೆಯ ಶತಕ ಸಿಡಿಸಿದರು. ಕೇವಲ 50 ಎಸೆತಗಳಲ್ಲಿ ಶತಕ ಬಾರಿಸುವ ಮೂಲಕ ಅತಿ ವೇಗದ ಏಕದಿನ ಶತಕ ಗಳಿಸಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದಾಗ್ಯೂ, ಅವರು ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ವಿಫಲರಾದರು. ಸ್ಮೃತಿ ಹೊರತಾಗಿ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ದೀಪ್ತಿ ಶರ್ಮಾ ಕೂಡ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಆದರೆ ಉಳಿದವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬರಲಿಲ್ಲ.
ಸ್ಮೃತಿ ಮಂಧಾನ ಇನ್ನಿಂಗ್ಸ್ ವ್ಯರ್ಥ
ಆಸ್ಟ್ರೇಲಿಯಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 413 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತೀಯ ಮಹಿಳಾ ತಂಡದ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನಾ ಅಬ್ಬರದ ಇನ್ನಿಂಗ್ಸ್ ಆಡಿದರು. ಕೇವಲ 50 ಎಸೆತಗಳಲ್ಲಿ ಶತಕ ಸಿಡಿಸಿ, ವಿರಾಟ್ ಕೊಹ್ಲಿ ಅವರ 12 ವರ್ಷಗಳ ಹಳೆಯ ದಾಖಲೆಯನ್ನು ಮುರಿದರು. ಇದರೊಂದಿಗೆ, ಅವರು ಏಕದಿನ ಪಂದ್ಯಗಳಲ್ಲಿ ಅತಿ ವೇಗದ ಶತಕ ಬಾರಿಸಿದ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಹಾಗೆಯೇ ಮಹಿಳಾ ಏಕದಿನ ಪಂದ್ಯದಲ್ಲಿ ಅತಿವೇಗದ ಶತಕ ಬಾರಿಸಿದ ವಿಶ್ವದ ಎರಡನೇ ಮಹಿಳಾ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು. ಇದರ ಹೊರತಾಗಿಯೂ, ಅವರು ತಮ್ಮ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವಲ್ಲಿ ವಿಫಲರಾದರು. ಸ್ಮೃತಿ ಕೇವಲ 63 ಎಸೆತಗಳಲ್ಲಿ 17 ಬೌಂಡರಿ ಮತ್ತು ಐದು ಸಿಕ್ಸರ್‌ಗಳೊಂದಿಗೆ 125 ರನ್ ಗಳಿಸಿದರು. ಇದರ ಹೊರತಾಗಿಯೂ, ಭಾರತ ತಂಡವು 47 ಓವರ್‌ಗಳಲ್ಲಿ 369 ರನ್‌ಗಳಿಗೆ ಆಲೌಟ್ ಆಯಿತು.
ದೀಪ್ತಿ, ಹರ್ಮನ್‌ಪ್ರೀತ್ ಅರ್ಧಶತಕ
ಸ್ಮೃತಿ ಮಂಧಾನಾ ಹೊರತುಪಡಿಸಿ, ದೀಪ್ತಿ ಶರ್ಮಾ 58 ಎಸೆತಗಳಲ್ಲಿ 5 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಹಾಯದಿಂದ 72 ರನ್ ಗಳಿಸಿದರು. ನಾಯಕಿ ಹರ್ಮನ್‌ಪ್ರೀತ್ ಕೌರ್ 35 ಎಸೆತಗಳಲ್ಲಿ 8 ಬೌಂಡರಿಗಳ ಸಹಾಯದಿಂದ 52 ರನ್ ಬಾರಿಸಿದರು. ಸ್ನೇಹ್ ರಾಣಾ 35 ರನ್‌ಗಳ ಇನ್ನಿಂಗ್ಸ್ ಆಡಿದರು. ಆಸ್ಟ್ರೇಲಿಯಾ ಪರ ಕಿಮ್ ಗ್ರಾತ್ ಗರಿಷ್ಠ 3 ವಿಕೆಟ್ ಪಡೆದರೆ, ಮೇಗನ್ ಶುಟ್ ಎರಡು ವಿಕೆಟ್ ಪಡೆದರು.
ಆಸೀಸ್ ವಿರುದ್ಧ ವೇಗದ ಶತಕ ಸಿಡಿಸಿ ಕೊಹ್ಲಿ, ಸೆಹ್ವಾಗ್ ದಾಖಲೆ ಮುರಿದ ಸ್ಮೃತಿ ಮಂಧಾನ
ಬೆತ್ ಮೂನಿ ಅಬ್ಬರದ ಶತಕ
ಇದಕ್ಕೂ ಮೊದಲು ನಾಯಕಿ ಬೆತ್ ಮೂನಿ ಅವರ ಅಬ್ಬರದ ಶತಕದ ನೆರವಿನಿಂದಾಗಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು 47.5 ಓವರ್‌ಗಳಲ್ಲಿ 412 ರನ್‌ಗಳಿಗೆ ಆಲೌಟ್ ಆಯಿತು. ಬೆತ್ ಮೂನಿ 75 ಎಸೆತಗಳಲ್ಲಿ 23 ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 138 ರನ್‌ಗಳ ಅಬ್ಬರದ ಇನ್ನಿಂಗ್ಸ್ ಆಡಿದರೆ, ಆರಂಭಿಕ ಆಟಗಾರ್ತಿ ಜಾರ್ಜಿಯಾ ವಾಲ್ ಕೂಡ 68 ಎಸೆತಗಳಲ್ಲಿ 14 ಬೌಂಡರಿ ಸೇರಿದಂತೆ 81 ರನ್ ಗಳಿಸಿದರು.
ಎಲಿಸ್ ಪೆರ್ರಿ ಕೂಡ 68 ರನ್‌ಗಳ ಇನ್ನಿಂಗ್ಸ್ ಆಡಿದರು. ಭಾರತದ ಪರ ಅರುಂಧತಿ ರೆಡ್ಡಿ ಮೂರು ವಿಕೆಟ್‌ಗಳನ್ನು ಪಡೆದರೆ, ದೀಪ್ತಿ ಶರ್ಮಾ ಮತ್ತು ರೇಣುಕಾ ಸಿಂಗ್ ತಲಾ ಎರಡು ವಿಕೆಟ್‌ಗಳನ್ನು ಪಡೆದರು. ಈ ಸರಣಿಯ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ಎಂಟು ವಿಕೆಟ್‌ಗಳಿಂದ ಗೆದ್ದುಕೊಂಡಿತು. ಎರಡನೇ ಪಂದ್ಯದಲ್ಲಿ, ಭಾರತೀಯ ಮಹಿಳಾ ತಂಡವು 102 ರನ್‌ಗಳಿಂದ ದೊಡ್ಡ ಗೆಲುವು ಸಾಧಿಸಿತು, ಆದರೆ ಮೂರನೇ ಪಂದ್ಯದಲ್ಲಿ ಸೋತಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
