ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly) ಕೈಯಿಂದ ಬಿಸಿಸಿಐ (BCCI) ಅಧ್ಯಕ್ಷ ಹುದ್ದೆ ಕೈಜಾರಿರುವುದು ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಚಾರವೆ. ಈ ಬಗ್ಗೆ ಬಿಸಿಸಿಐನಿಂದ ಅಧಿಕೃತ ಮುದ್ರೆ ಬೀಳುವುದೊಂದೆ ಬಾಕಿ ಇದೆ. ಈ ಮೊದಲು ಗಂಗೂಲಿ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದು ವಿಶ್ವ ಕ್ರಿಕೆಟ್ ಆಳುವ ಸಲುವಾಗಿ ಐಸಿಸಿಯ ಅಧ್ಯಕ್ಷರಾಗಲಿದ್ದಾರೆ ಎಂದು ವರದಿಯಾಗಿತ್ತು. ಆದರೀಗ ಬಿಸಿಸಿಐ ಮಾತ್ರವಲ್ಲ, ಐಸಿಸಿ (ICC) ಅಧ್ಯಕ್ಷರಾಗುವ ಗಂಗೂಲಿ ಕನಸಿಗೆ ಬ್ರೇಕ್ ಬಿದ್ದಿದೆ. ಮಾಧ್ಯಮ ವರದಿಗಳ ಪ್ರಕಾರ, ಮಾಜಿ ಆಟಗಾರ ರೋಜರ್ ಬಿನ್ನಿ ಬಿಸಿಸಿಐನ ನೂತನ ಅಧ್ಯಕ್ಷರಾಗಲಿದ್ದು, ಸೌರವ್ ಗಂಗೂಲಿ ಈ ಸ್ಥಾನದಿಂದ ಕೆಳಗಿಳಿಯಲ್ಲಿದ್ದಾರೆ. ಅಲ್ಲದೆ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಬೇಕೆಂದಿರುವ ಗಂಗೂಲಿಗೆ, ಬಿಸಿಸಿಐ ಯಾವುದೇ ರೀತಿಯ ಸಹಕಾರ ನೀಡಲು ಹಿಂದೇಟು ಹಾಕಿದೆ ಎಂದು ವರದಿಯಾಗಿದೆ.
ಗಂಗೂಲಿಗೆ ಬಿಸಿಸಿಐ ಬೆಂಬಲವಿಲ್ಲ
ಸುದ್ದಿ ಪ್ರಕಾರ ಗಂಗೂಲಿಗೆ ಐಪಿಎಲ್ ಚೇರ್ಮನ್ ಹುದ್ದೆ ನೀಡಲು ಬಿಸಿಸಿಐ ನಿರ್ದರಿಸಿದೆ ಆದರೆ ಈ ಹುದ್ದೆಯನ್ನು ನಿರಾಕರಿಸಿರುವ ಗಂಗೂಲಿ ಐಸಿಸಿ ಅಧ್ಯಕ್ಷಗಿರಿ ಅಥವಾ ಬಿಸಿಸಿಐ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರೆಯುವುದಾಗಿ ಕೇಳಿಕೊಂಡಿದ್ದಾರೆ. ಆದರೆ, ಗಂಗೂಲಿಯ ಈ ಎರಡೂ ಬೇಡಿಗೆಗಳನ್ನು ಬಿಸಿಸಿಐ ಸರಾಸಗಟಾಗಿ ತಳ್ಳಿಹಾಕಿದೆ. ಜೊತೆಗೆ ಐಸಿಸಿ ಅಧ್ಯಕ್ಷರಾಗುವ ರೇಸ್‌ನಲ್ಲಿರುವ ಗಂಗೂಲಿ ಅವರನ್ನು ಬೆಂಬಲಿಸುವುದಿಲ್ಲ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ. ಹೀಗಾಗಿ ಇದೀಗ ಐಪಿಎಲ್ ಚೇರ್ಮನ್ ಹುದ್ದೆಯೂ ಗಂಗೂಲಿ ಕೈಯಿಂದ ಜಾರಿದೆ.
ಎಲ್ಲ ಹುದ್ದೆಗಳಿಗೂ ನಾಮಪತ್ರ ಸಲ್ಲಿಕೆಯಾಗಿದೆ
ಇದೀಗ ಸೌರವ್ ಗಂಗೂಲಿ ಬದಲಿಗೆ ರೋಜರ್ ಬಿನ್ನಿ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದು, ಕಾರ್ಯದರ್ಶಿ ಹುದ್ದೆಯು ಜಯ್ ಶಾ ಅವರ ಬಳಿಯೇ ಉಳಿಯಲಿದೆ. ಆಶಿಶ್ ಸೇಹ್ಕರ್ ಖಜಾಂಚಿಯಾಗಿ ಮತ್ತು ದೇವಜಿತ್ ಸೈಕಿಯಾ ಸಹ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ಎಲ್ಲಾ ಹುದ್ದೆಗಳಿಗೆ ಇವರೇ ನಾಮಪತ್ರ ಸಲ್ಲಿಸಿದ್ದು, ಇನ್ನು ಔಪಚಾರಿಕತೆ ಮಾತ್ರ ಬಾಕಿ ಉಳಿದಿದೆ. ಪ್ರಸ್ತುತ ಖಜಾಂಚಿ ಅರುಣ್ ಧುಮಾಲ್ ಐಪಿಎಲ್ ಅಧ್ಯಕ್ಷರ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
ಗಂಗೂಲಿ ಬದಲಿಗೆ ರೋಜರ್ ಬಿನ್ನಿಗೆ ಅಧ್ಯಕ್ಷ ಪಟ್ಟ
ಬಿಸಿಸಿಐ ಅಧ್ಯಕ್ಷರ ಹೆಸರಿಗೆ ರೋಜರ್ ಬಿನ್ನಿ ಅವರ ಹೆಸರು ಫೈನಲ್ ಆಗಿರುವುದರಿಂದ ಪ್ರಸ್ತುತ ಕೆಎಸ್‌ಸಿಎ ಅಧ್ಯಕ್ಷರಾಗಿರುವ ಬಿನ್ನಿ ರಾಜ್ಯ ಸಂಸ್ಥೆಯ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಯಬೇಕಾಗುತ್ತದೆ. ಮಧ್ಯಮ ವೇಗದ ಬೌಲರ್ ಆಗಿದ್ದ ಬಿನ್ನಿ 1983ರ ವಿಶ್ವಕಪ್‌ನಲ್ಲಿ ಭಾರತವನ್ನು ಚಾಂಪಿಯನ್ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಟೂರ್ನಿಯಲ್ಲಿ ಎಂಟು ಪಂದ್ಯಗಳನ್ನಾಡಿದ್ದ ಬಿನ್ನಿ, 18 ವಿಕೆಟ್‌ಗಳನ್ನು ಕಬಳಿಸಿದ್ದು ಆ ಟೂರ್ನಿಯ ದಾಖಲೆಯಾಗಿತ್ತು. ಬಿನ್ನಿ ಈ ಹಿಂದೆ ಸಂದೀಪ್ ಪಾಟೀಲ್ ನೇತೃತ್ವದ ಹಿರಿಯ ಆಯ್ಕೆ ಸಮಿತಿಯ ಸದಸ್ಯರಾಗಿದ್ದರು.