Team India: ಟೀಮ್ ಇಂಡಿಯಾಗೆ 3 ವೇಗಿಗಳ ಆಯ್ಕೆ: ಬುಮ್ರಾ ಸ್ಥಾನ ಯಾರಿಗೆ?
Jasprit Bumrah’s replacement: ಐಸಿಸಿ ನಿಯಮದ ಪ್ರಕಾರ ಅಕ್ಟೋಬರ್ 15 ರೊಳಗೆ ಅಂತಿಮ 15 ಸದಸ್ಯರ ತಂಡವನ್ನು ಪ್ರಕಟಿಸಬೇಕಾಗುತ್ತದೆ. ಹೀಗಾಗಿ ಟೀಮ್ ಇಂಡಿಯಾದ ಮೂವರಲ್ಲಿ ಯಾರಿಗೆ ಅದೃಷ್ಟ ಖುಲಾಯಿಸಲಿದೆ ಕಾದು ನೋಡಬೇಕಿದೆ.
T20 World Cup 2022: ಟಿ20 ವಿಶ್ವಕಪ್ 2022 ಆರಂಭವಾಗಲು ಇನ್ನು ವಾರಗಳು ಮಾತ್ರ ಉಳಿದಿವೆ. ಈಗಾಗಲೇ 14 ಸದಸ್ಯರ ಟೀಮ್ ಇಂಡಿಯಾ (Team India) ಆಸ್ಟ್ರೇಲಿಯಾದಲ್ಲಿ ಅಭ್ಯಾಸವನ್ನು ಆರಂಭಿಸಿದೆ. ಇದಾಗ್ಯೂ ಬೆನ್ನು ನೋವಿನ ಕಾರಣ ತಂಡದಿಂದ ಹೊರಗುಳಿದಿರುವ ಜಸ್ಪ್ರೀತ್ ಬುಮ್ರಾ (Jasprit Bumrah) ಅವರ ಬದಲಿ ಆಟಗಾರನನ್ನು ಇನ್ನೂ ಕೂಡ ಆಯ್ಕೆ ಮಾಡಿಲ್ಲ ಎಂಬುದು ವಿಶೇಷ. ಮತ್ತೊಂದೆಡೆ ಮೀಸಲು ಆಟಗಾರರ ಪಟ್ಟಿಯಲ್ಲಿದ್ದ ದೀಪಕ್ ಚಹರ್ ಕೂಡ ಇದೀಗ ಟಿ20 ವಿಶ್ವಕಪ್ ತಂಡದಿಂದ ಹೊರಬಿದ್ದಿದ್ದಾರೆ. ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿ ವೇಳೆ ಗಾಯಗೊಂಡಿದ್ದ ಚಹರ್ ಅವರನ್ನು ಟಿ20 ವಿಶ್ವಕಪ್ ಬಳಗದಿಂದ ಕೈ ಬಿಡಲಾಗಿದೆ. ಅವರ ಬದಲಿಗೆ ಆಲ್ರೌಂಡರ್ ಶಾರ್ದೂಲ್ ಠಾಕೂರ್ಗೆ ಮಣೆಹಾಕಲಾಗಿದೆ ಎಂದು ವರದಿಯಾಗಿದೆ.
ಇನ್ನೊಂದೆಡೆ ಮೀಸಲು ಆಟಗಾರರ ಪಟ್ಟಿಯಲ್ಲಿರುವ ಮೊಹಮ್ಮದ್ ಶಮಿ ನ್ಯಾಷನಲ್ ಕ್ರಿಕೆಟ್ ಅಕಾಡೆಮಿಯಲ್ಲಿ ಫಿಟ್ನೆಸ್ ಟೆಸ್ಟ್ ಪಾಸಾಗಿದ್ದಾರೆ. ಅಷ್ಟೇ ಅಲ್ಲದೆ ಶೀಘ್ರದಲ್ಲೇ ಆಸ್ಟ್ರೇಲಿಯಾದತ್ತ ಮುಖ ಮಾಡಲಿದ್ದಾರೆ. ಇದರ ನಡುವೆ ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದ ಮೊಹಮ್ಮದ್ ಸಿರಾಜ್ ಕೂಡ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ವರದಿಯಾಗಿದೆ. ಅಂದರೆ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಇದೀಗ ಮೂವರು ವೇಗಿಗಳನ್ನು ಆಸ್ಟ್ರೇಲಿಯಾಗೆ ಕರೆಸಿಕೊಳ್ಳುತ್ತಿದೆ. ಇವರಲ್ಲಿ ಒಬ್ಬರು ಜಸ್ಪ್ರೀತ್ ಬುಮ್ರಾ ಸ್ಥಾನಕ್ಕೆ ಆಯ್ಕೆಯಾಗುವುದು ಖಚಿತ.
ಇಲ್ಲಿ ಮೊಹಮ್ಮದ್ ಶಮಿ ಅವರನ್ನು ಆಯ್ಕೆ ಮಾಡಿದರೆ, ಸಿರಾಜ್ ಹಾಗೂ ಶಾರ್ದೂಲ್ ಠಾಕೂರ್ ಮೀಸಲು ಆಟಗಾರರಾಗಿ ತಂಡದ ಜೊತೆಯಿರಲಿದ್ದಾರೆ. ಆದರೆ ಬಿಸಿಸಿಐ ಈ ಮೂವರಲ್ಲಿ ಯಾರಿಗೆ ಮಣೆಹಾಕಲಿದೆ ಎಂಬುದೇ ದೊಡ್ಡ ಪ್ರಶ್ನೆ. ಏಕೆಂದರೆ ಮೊಹಮ್ಮದ್ ಶಮಿ ಅತ್ಯುತ್ತಮ ವೇಗಿಯಾಗಿದ್ದರೂ, ಟೀಮ್ ಇಂಡಿಯಾ ಪರ ಟಿ20 ಪಂದ್ಯವಾಡಿದ ಒಂದು ವರ್ಷ ಕಳೆದಿದೆ.
ಮೊಹಮ್ಮದ್ ಶಮಿ ಕೊನೆಯ ಬಾರಿ ಶಮಿ ಟೀಮ್ ಇಂಡಿಯಾ ಪರ ಟಿ20 ಪಂದ್ಯವಾಡಿದ್ದು 2021 ರ ಟಿ20 ವಿಶ್ವಕಪ್ನಲ್ಲಿ. ಇದಾದ ಬಳಿಕ ಐಪಿಎಲ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಶಮಿ 16 ಪಂದ್ಯಗಳಲ್ಲಿ 20 ವಿಕೆಟ್ ಕಬಳಿಸಿ ಗುಜರಾತ್ ಟೈಟಾನ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಆದರೆ ಟೀಮ್ ಇಂಡಿಯಾ ಪರ ಇದುವರೆಗೆ ಆಡಿದ 17 ಟಿ20 ಪಂದ್ಯಗಳಲ್ಲಿ ಶಮಿ ಪ್ರತಿ ಓವರ್ನಲ್ಲಿ 9.55 ಸರಾಸರಿಯಲ್ಲಿ ರನ್ ಬಿಟ್ಟು ಕೊಟ್ಟಿದ್ದಾರೆ. ಈ ವೇಳೆ ಪಡೆದಿರುವುದು ಕೇವಲ 18 ವಿಕೆಟ್ ಮಾತ್ರ. ಇದೇ ಕಾರಣದಿಂದಾಗಿ ಶಮಿ ಅವರನ್ನು ಈ ಹಿಂದೆ ಮೀಸಲು ಆಟಗಾರರನ್ನಾಗಿ ಆಯ್ಕೆ ಮಾಡಲಾಗಿತ್ತು. ಇದೀಗ ಮುಖ್ಯ ತಂಡಕ್ಕೆ ಆಯ್ಕೆಯಾಗಲಿದ್ದಾರಾ ಎಂಬುದೇ ಕುತೂಹಲಕಾರಿ.
ಮೊಹಮ್ಮದ್ ಸಿರಾಜ್ ಟೀಮ್ ಇಂಡಿಯಾ ಪರ ಆಡಿರುವುದು ಕೇವಲ 6 ಟಿ20 ಪಂದ್ಯಗಳನ್ನು ಮಾತ್ರ. ಈ ವೇಳೆ ಪ್ರತಿ ಓವರ್ಗೆ 10.54 ಸರಾಸರಿಯಲ್ಲಿ ರನ್ ನೀಡಿದ್ದಾರೆ. ಹಾಗೆಯೇ ಪಡೆದಿರುವುದು ಕೇವಲ 5 ವಿಕೆಟ್ಗಳನ್ನು. ಇದಾಗ್ಯೂ ಸೌತ್ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶಿಸಿದ್ದಾರೆ. 3 ಪಂದ್ಯಗಳಲ್ಲಿ 23 ಓವರ್ಗಳನ್ನು ಎಸೆದಿರುವ ಸಿರಾಜ್ ನೀಡಿರುವುದು ಕೇವಲ 104 ರನ್ಗಳು ಮಾತ್ರ. ಅಂದರೆ ಕೇವಲ 4.52 ಎಕನಾಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದಾರೆ. ಇನ್ನು 5 ವಿಕೆಟ್ಗಳನ್ನು ಕೂಡ ಕಬಳಿಸಿದ್ದಾರೆ. ಹೀಗಾಗಿಯೇ ಮೊಹಮ್ಮದ್ ಸಿರಾಜ್ ಅವರನ್ನು ಆಸ್ಟ್ರೇಲಿಯಾಗೆ ಕರೆಸಿಕೊಳ್ಳಲಾಗುತ್ತಿದೆ.
ಶಾರ್ದೂಲ್ ಠಾಕೂರ್ ಅವರ ಟಿ20 ಕೆರಿಯರ್ ಕೂಡ ಭಿನ್ನವಾಗಿಲ್ಲ. ಟೀಮ್ ಇಂಡಿಯಾ ಪರ 25 ಟಿ20 ಪಂದ್ಯಗಳನ್ನಾಡಿರುವ ಶಾರ್ದೂಲ್ ಪ್ರತಿ ಓವರ್ಗೆ 9.15 ಸರಾಸರಿಯುಲ್ಲಿ ರನ್ ನೀಡಿದ್ದಾರೆ. ಇನ್ನು ಪಡೆದಿರುವುದು ಕೇವಲ 24 ವಿಕೆಟ್ಗಳನ್ನು ಮಾತ್ರ. ಆದರೆ ಆಲ್ರೌಂಡರ್ ಆಗಿರುವ ಕಾರಣ ಶಾರ್ದೂಲ್ ಕೆಳ ಕ್ರಮಾಂಕದಲ್ಲಿ ಬಿರುಸಿನ ಬ್ಯಾಟಿಂಗ್ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಪ್ರಸ್ತುತ ಟೀಮ್ ಇಂಡಿಯಾಗೆ ವೇಗದ ಬೌಲರ್ನ ಅವಶ್ಯಕತೆಯಿರುವ ಕಾರಣ ಬೌಲಿಂಗ್ ಸಾಮರ್ಥ್ಯವೇ ಮುಖ್ಯವಾಗುತ್ತದೆ.
ಅಂದರೆ ಜಸ್ಪ್ರೀತ್ ಬುಮ್ರಾ ಬದಲಿ ಆಟಗಾರರ ಪಟ್ಟಿಯಲ್ಲಿರುವ ಮೂವರು ವೇಗಿಗಳು ಸಮಬಲ ಹೊಂದಿದ್ದಾರೆ ಎಂದೇ ಹೇಳಬಹುದು. ಇದಾಗ್ಯೂ ಅನುಭವಕ್ಕೆ ಮಣೆಹಾಕುವುದಾದರೆ ಮೊಹಮ್ಮದ್ ಶಮಿ ತಂಡದಲ್ಲಿ ಅವಕಾಶ ಪಡೆಯಬಹುದು. ಒಂದು ವೇಳೆ ಪ್ರಸ್ತುತ ಫಾರ್ಮ್ ಅನ್ನು ಪರಿಗಣಿಸಿದರೆ ಮೊಹಮ್ಮದ್ ಸಿರಾಜ್ ತಂಡಕ್ಕೆ ಆಯ್ಕೆಯಾಗಬಹುದು. ಹಾಗೆಯೇ ಆಲ್ರೌಂಡರ್ನ ಆಯ್ಕೆಯ ಮೊರೆ ಹೋದರೆ ಶಾರ್ದೂಲ್ ಠಾಕೂರ್ಗೆ ಅದೃಷ್ಟ ಖುಲಾಯಿಸಬಹುದು.
ಒಟ್ಟಿನಲ್ಲಿ ಇದೀಗ ಮೂವರು ವೇಗಿಗಳನ್ನು ಕರೆಸಿಕೊಳ್ಳಲು ಮುಂದಾಗಿರುವ ಟೀಮ್ ಇಂಡಿಯಾ ಅಂತಿಮವಾಗಿ 15 ಸದಸ್ಯರ ಬಳಗದಲ್ಲಿ ಯಾರಿಗೆ ಸ್ಥಾನ ನೀಡಲಿದೆ ಎಂಬುದು ಶೀಘ್ರದಲ್ಲೇ ಗೊತ್ತಾಗಲಿದೆ. ಏಕೆಂದರೆ ಐಸಿಸಿ ನಿಯಮದ ಪ್ರಕಾರ ಅಕ್ಟೋಬರ್ 15 ರೊಳಗೆ ಅಂತಿಮ 15 ಸದಸ್ಯರ ತಂಡವನ್ನು ಪ್ರಕಟಿಸಬೇಕಾಗುತ್ತದೆ. ಹೀಗಾಗಿ ಸಿರಾಜ್, ಶಮಿ, ಶಾರ್ದೂಲ್…ಈ ಮೂವರಲ್ಲಿ ಯಾರಿಗೆ ಅದೃಷ್ಟ ಖುಲಾಯಿಸಲಿದೆ ಕಾದು ನೋಡಬೇಕಿದೆ.
Published On - 2:34 pm, Wed, 12 October 22