
ಶುಭ್ಮನ್ ಗಿಲ್ (Shubman Gill) ನೇತೃತ್ವದ ಟೀಂ ಇಂಡಿಯಾ, ತವರಿನಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಏಕಪಕ್ಷೀಯವಾಗಿ ಸೋಲಿಸಿ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿತು. ಇದೀಗ ಟೀಂ ಇಂಡಿಯಾ ಏಕದಿನ ಮತ್ತು ಟಿ20 ಸರಣಿಗಾಗಿ ಆಸ್ಟ್ರೇಲಿಯಾಕ್ಕೆ ತೆರಳಿದೆ. ಎರಡೂ ಸರಣಿಗಳಲ್ಲಿ ಟೀಂ ಇಂಡಿಯಾ ಒಟ್ಟು 6 ಪಂದ್ಯಗಳನ್ನು ಆಡಲಿದೆ. ಅದಾದ ನಂತರ, ಟೀಂ ಇಂಡಿಯಾ ತವರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದೆ. ಆದರೆ ಅದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಎ ಹಾಗೂ ಭಾರತ ಎ ತಂಡಗಳ ನಡುವೆ ಅನಧಿಕೃತ ಟೆಸ್ಟ್ ಮತ್ತು ಏಕದಿನ ಸರಣಿಗಳು ನಡೆಯಲಿವೆ. ಇದೀಗ ಆ ಸರಣಿಗಳಿಗಾಗಿ ದಕ್ಷಿಣ ಆಪ್ರಿಕಾ ತಂಡವನ್ನು ಪ್ರಕಟಿಸಲಾಗಿದೆ.
ಭಾರತ ಪ್ರವಾಸದಲ್ಲಿ ದಕ್ಷಿಣ ಆಫ್ರಿಕಾ 2 ಟೆಸ್ಟ್, 3 ಏಕದಿನ ಮತ್ತು 5 ಟಿ20ಪಂದ್ಯಗಳನ್ನು ಆಡಲಿದೆ. ಆದರೆ ಅದಕ್ಕೂ ಮೊದಲು, ದಕ್ಷಿಣ ಆಫ್ರಿಕಾ ಎ ತಂಡ ಭಾರತ ಪ್ರವಾಸ ಮಾಡಲಿದೆ. ದಕ್ಷಿಣ ಆಫ್ರಿಕಾ ಎ ತಂಡವು ಭಾರತ ಎ ತಂಡದ ವಿರುದ್ಧ 4 ದಿನಗಳ 2 ಅನಧಿಕೃತ ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಅದರ ನಂತರ, 3 ಅನಧಿಕೃತ ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ದಕ್ಷಿಣ ಆಫ್ರಿಕಾ ಆಯ್ಕೆ ಸಮಿತಿಯು ಈ ಎರಡೂ ಸರಣಿಗಳಿಗೆ ಎ ತಂಡವನ್ನು ಘೋಷಿಸಿದೆ. ಇದರ ಬಗ್ಗೆ ಮಾಹಿತಿಯನ್ನು ದಕ್ಷಿಣ ಆಫ್ರಿಕಾದ ಅಧಿಕೃತ ಎಕ್ಸ್ ಹ್ಯಾಂಡಲ್‌ನಿಂದ ನೀಡಲಾಗಿದೆ.
ಆಯ್ಕೆ ಸಮಿತಿಯು ಎರಡು 4 ದಿನಗಳ ಪಂದ್ಯಗಳಿಗೆ 16 ಸದಸ್ಯರ ತಂಡವನ್ನು ಪ್ರಕಟಿಸಿದೆ. ದಕ್ಷಿಣ ಆಫ್ರಿಕಾದ ಹಿರಿಯ ತಂಡದ ನಾಯಕ ಟೆಂಬಾ ಬವುಮಾ ಅವರನ್ನು ಸಹ ಈ ತಂಡದಲ್ಲಿ ಸೇರಿಸಲಾಗಿದೆ. ಆದಾಗ್ಯೂ, ಟೆಂಬಾ ಎರಡನೇ ಪಂದ್ಯದಲ್ಲಿ ಆಡಲಿದ್ದಾರೆ. ಅದೇ ರೀತಿ, ಮೂರು ಅನಧಿಕೃತ ಏಕದಿನ ಪಂದ್ಯಗಳಿಗೆ 15 ಆಟಗಾರರ ತಂಡವನ್ನು ಆಯ್ಕೆ ಮಾಡಲಾಗಿದೆ. ಈ ಎರಡೂ ಸರಣಿಗಳಲ್ಲಿ ಮಾರ್ಕ್ಸ್ ಅಕರ್‌ಮನ್ ದಕ್ಷಿಣ ಆಫ್ರಿಕಾ ಎ ತಂಡವನ್ನು ಮುನ್ನಡೆಸಲಿದ್ದಾರೆ.
ಎರಡೂ ತಂಡಗಳ ಎರಡೂ ಟೆಸ್ಟ್ ಪಂದ್ಯಗಳು ಬೆಂಗಳೂರಿನ ಸೆಂಟರ್ ಆಫ್ ಎಕ್ಸಲೆನ್ಸ್ (COE) ನಲ್ಲಿ ನಡೆಯಲಿದ್ದು, ಏಕದಿನ ಸರಣಿಯ ಎಲ್ಲಾ ಮೂರು ಪಂದ್ಯಗಳು ರಾಜ್‌ಕೋಟ್‌ನ ಖಂಡೇರಿಯಲ್ಲಿರುವ ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆಯಲಿವೆ.
2 ಅನಧಿಕೃತ ಟೆಸ್ಟ್ ಪಂದ್ಯಗಳಿಗಾಗಿ ದಕ್ಷಿಣ ಆಫ್ರಿಕಾ ಎ ತಂಡ: ಮಾರ್ಕ್ಸ್ ಅಕರ್‌ಮನ್ (ನಾಯಕ), ಟೆಂಬಾ ಬವುಮಾ (ಎರಡನೇ ಪಂದ್ಯಕ್ಕೆ ಮಾತ್ರ), ಒಕುಹ್ಲೆ ಸೆಲೆ, ಜುಬರ್ ಹಮ್ಜಾ, ಜೋರ್ಡಾನ್ ಹರ್ಮನ್, ರೂಬಿನ್ ಹರ್ಮನ್, ರಿವಾಲ್ಡೊ ಮೂನ್‌ಸಾಮಿ, ತ್ಶೆಪೊ ಮೊರೆಕಿ, ಮಿಹ್ಲಾಲಿ ಎಂಪೊಂಗ್ವಾನಾ, ಲೆಸೆಗೊ ಸೆನೊಕ್ವಾನೆ, ಪ್ರೆನೆಲನ್ ಸುಬ್ರಾಯೆನ್, ಕೈಲ್ ಜಾನ್‌ವಾಂಡ್ವಾ, ತ್ಸೆಪೊ ಸಿಮಂದ್ವಾಂಡ್ ವುರೆನ್ ಮತ್ತು ಕೋಡಿ ಯೂಸುಫ್
ಅನಧಿಕೃತ ಏಕದಿನ ಸರಣಿಗೆ ದಕ್ಷಿಣ ಆಫ್ರಿಕಾ ಎ ತಂಡ: ಮಾರ್ಕ್ವೆಸ್ ಅಕರ್‌ಮನ್ (ನಾಯಕ), ಒಟ್ನೀಲ್ ಬಾರ್ಟ್‌ಮನ್, ಜಾರ್ನ್ ಫೋರ್ಚುಯಿನ್, ಜೋರ್ಡಾನ್ ಹರ್ಮನ್, ರೂಬಿನ್ ಹರ್ಮನ್, ಕ್ವೆನಾ ಮಫಕಾ, ರಿವಾಲ್ಡೊ ಮೂನ್‌ಸಾಮಿ, ತ್ಶೆಪೊ ಮೊರೆಕಿ, ಮಿಹ್ಲಾಲಿ ಎಂಪೊಂಗ್ವಾನಾ, ನ್ಕಾಬಾ ಪೀಟರ್, ಡೆಲಾನೊ ಪೊಟ್‌ಗೀಟರ್, ಲುವಾನ್-ಡ್ರೆ; ಪ್ರಿಟೋರಿಯಸ್, ಸಿನೆತೆಂಬಾ ಕ್ವೆಶಿಲೆ, ಜೇಸನ್ ಸ್ಮಿತ್ ಮತ್ತು ಕೋಡಿ ಯೂಸುಫ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ