- Kannada News Photo gallery Cricket photos IND vs WI 2nd test kuldeep yadav concedes 100 for 1st time in test
IND vs WI: ಟೆಸ್ಟ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಬೇಡದ ಶತಕ ಬಾರಿಸಿದ ಕುಲ್ದೀಪ್
Kuldeep Yadav: ವೆಸ್ಟ್ ಇಂಡೀಸ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಭಾರತ ಗೆಲುವಿನ ಹೊಸ್ತಿಲಲ್ಲಿದೆ, ಕೇವಲ 54 ರನ್ ಅಗತ್ಯವಿದೆ. ಆದಾಗ್ಯೂ, ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ಬೌಲರ್‌ಗಳು ದುಬಾರಿಯಾಗಿದ್ದರು. ಕುಲ್ದೀಪ್ ಯಾದವ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ 100ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟರೆ, ರವೀಂದ್ರ ಜಡೇಜಾ ಕೂಡ ಹೆಚ್ಚು ರನ್ ನೀಡಿದರು. ಇದು ವಿಂಡೀಸ್ ತಂಡ 350ಕ್ಕೂ ಹೆಚ್ಚು ರನ್ ಗಳಿಸಲು ನೆರವಾಯಿತು.
Updated on: Oct 13, 2025 | 10:13 PM

ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಮತ್ತು ಅಂತಿಮ ಟೆಸ್ಟ್ ಪಂದ್ಯವನ್ನು ಗೆಲ್ಲಲು ಟೀಂ ಇಂಡಿಯಾ ಕೇವಲ 54 ರನ್‌ಗಳ ದೂರದಲ್ಲಿದೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಉಭಯ ತಂಡಗಳ ನಡುವಿನ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್, ಭಾರತಕ್ಕೆ 121 ರನ್‌ಗಳ ಗುರಿಯನ್ನು ನೀಡಿತು. ಆದಾಗ್ಯೂ ಎರಡನೇ ಇನ್ನಿಂಗ್ಸ್‌ನಲ್ಲಿ ವಿಂಡೀಸ್ ತಂಡಕ್ಕೆ ಭಾರತದ ಬೌಲರ್‌ಗಳು ಸರಾಗವಾಗಿ ರನ್ ಬಿಟ್ಟುಕೊಟ್ಟರು. ಈ ಮೂಲಕ ಅನೇಕ ಅನಗತ್ಯ ದಾಖಲೆಗಳನ್ನು ಬರೆದರು.

ಮೊದಲ ಇನ್ನಿಂಗ್ಸ್‌ನಲ್ಲಿ ವಿಂಡೀಸ್ ತಂಡವನ್ನು 248 ರನ್‌ಗಳಿಗೆ ಆಲೌಟ್ ಮಾಡಿದ್ದ ಟೀಂ ಇಂಡಿಯಾ ವೇಗಿಗಳು ಎರಡನೇ ಇನ್ನಿಂಗ್ಸ್‌ನಲ್ಲಿ 390 ರನ್ ಬಿಟ್ಟುಕೊಟ್ಟರು. ಈ ಮೂಲಕ ವಿಂಡೀಸ್ ತಂಡ, 2013 ರ ನಂತರ ವಿದೇಶಿ ತಂಡವೊಂದು ಭಾರತದಲ್ಲಿ ಅದರಲ್ಲೂ ಎರಡನೇ ಇನ್ನಿಂಗ್ಸ್‌ನಲ್ಲಿ 350 ಕ್ಕೂ ಹೆಚ್ಚು ರನ್ ಗಳಿಸಿದ ದಾಖಲೆ ಬರೆಯಿತು.

ಇನ್ನು ಭಾರತದ ಪರ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದು ಮಿಂಚಿದ್ದ ಕುಲ್ದೀಪ್ ಯಾದವ್, ಎರಡನೇ ಇನ್ನಿಂಗ್ಸ್‌ನಲ್ಲಿ 3 ವಿಕೆಟ್ ಕಬಳಿಸಿದರು. ಆದಾಗ್ಯೂ ಬೇಡದ ದಾಖಲೆಯೊಂದನ್ನು ತಮ್ಮ ಖಾತೆಗೆ ಹಾಕಿಕೊಂಡರು. ಮೊದಲ ಇನ್ನಿಂಗ್ಸ್‌ನಲ್ಲಿ 82 ರನ್‌ಗಳಿಗೆ 5 ವಿಕೆಟ್‌ಗಳನ್ನು ಉರುಳಿಸಿದ್ದ ಕುಲ್ದೀಪ್ ಎರಡನೇ ಇನ್ನಿಂಗ್ಸ್‌ನಲ್ಲಿ 104 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದರು.

ಎರಡನೇ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 104 ರನ್‌ಗಳನ್ನು ಬಿಟ್ಟುಕೊಡುವ ಮೂಲಕ ಕುಲ್ದೀಪ್ ಯಾದವ್ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ 100 ರನ್‌ಗಳನ್ನು ಬಿಟ್ಟುಕೊಟ್ಟ ಬೇಡದ ದಾಖಲೆಗೆ ಕೊರಳೊಡ್ಡಿದರು. 2ನೇ ಇನ್ನಿಂಗ್ಸ್‌ನಲ್ಲಿ ಕುಲ್ದೀಪ್, ವಿಂಡೀಸ್ ನಾಯಕ ರೋಸ್ಟನ್ ಚೇಸ್, ಟೆವಿನ್ ಇಮ್ಲಾಚ್, ಖಾರಿ ಪಿಯರೆ ಅವರ ವಿಕೆಟ್ ಉರುಳಿಸಿದರು.

ಎರಡನೇ ಇನ್ನಿಂಗ್ಸ್‌ನಲ್ಲಿ ಕುಲ್ದೀಪ್ ಯಾದವ್ ಮಾತ್ರವಲ್ಲದೆ ರವೀಂದ್ರ ಜಡೇಜಾ ಕೂಡ ದುಬಾರಿಯಾದರು. ಈ ಇನ್ನಿಂಗ್ಸ್‌ನಲ್ಲಿ 33 ಓವರ್ಗಳನ್ನು ಬೌಲ್ ಮಾಡಿದ ಜಡೇಜಾ 104 ರನ್‌ಗಳನ್ನು ಬಿಟ್ಟುಕೊಟ್ಟು ಕೇವಲ 1 ವಿಕೆಟ್ ಪಡೆಯುವಲ್ಲಿ ಮಾತ್ರ ಯಶಸ್ವಿಯಾದರು.
