
ದಕ್ಷಿಣ ಆಫ್ರಿಕಾ…. ಪ್ರತಿಯೊಂದು ಐಸಿಸಿ (ICC) ಈವೆಂಟ್ನಲ್ಲೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಪಂದ್ಯಾವಳಿಗೆ ಕಾಲಿಡುತ್ತಿದ್ದ ಆಫ್ರಿಕಾ ತಂಡ ಕೊನೆ ಹಂತದಲ್ಲಿ ಎಡವುತ್ತಿತ್ತು. ಇದು ಕಳೆದ ಹಲವು ವರ್ಷಗಳಿಂದ ನಡೆದುಬಂದ ವಾಡಿಕೆಯಾಗಿತ್ತು. ಹೀಗಾಗಿಯೇ ತಂಡಕ್ಕೆ ಚೋಕರ್ಸ್ ಎಂಬ ಹಣೆಪಟ್ಟಿಯನ್ನು ಕಟ್ಟಲಾಗಿತ್ತು. ಆಫ್ರಿಕಾ ತಂಡಕ್ಕೆ ಸುಖಾಸುಮ್ಮನೆ ಈ ಹಣೆಪಟ್ಟಿ ಸಿಕ್ಕಿದಲ್ಲ. ಎಷ್ಟೋ ಪ್ರಶಸ್ತಿ ಸುತ್ತಿನ ಪಂದ್ಯಗಳಲ್ಲಿ ಪಂದ್ಯದ ಕೊನೆಯವರೆಗೂ ಗೆಲುವಿನ ಫೇವರೇಟ್ ಆಗಿರುತ್ತಿದ್ದ ಆಫ್ರಿಕಾ, ಕೊನೆ ಗಳಿಗೆಯಲ್ಲಿ ಮಾಡಿಕೊಳ್ಳುತ್ತಿದ್ದ ಎಡವಟ್ಟಿನಿಂದ ಪ್ರಶಸ್ತಿಯಿಂದ ವಂಚಿತವಾಗುತ್ತಿತ್ತು. ಕಳೆದ ವರ್ಷ ನಡೆದ ಟಿ20 ವಿಶ್ವಕಪ್ ಫೈನಲ್ (T20 World Cup Final) ಇದಕ್ಕೆ ತಾಜಾ ಉದಾಹರಣೆ ಎನ್ನಬಹುದು.
ಬಹು ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರಾದಾಯದ ಪ್ರಕಾರ ಈ ಬಾರಿಯೂ ಐಸಿಸಿ ಟ್ರೋಫಿ ಆಫ್ರಿಕಾ ಕೈಜಾರಲಿದೆ ಎಂಬುದು ಪ್ರತಿಯೊಬ್ಬರ ಮಾತಾಗಿತ್ತು. ಆದರೆ ಈ ಬಾರಿ ಆ ಮಾತನ್ನು ಸುಳ್ಳು ಮಾಡುವಲ್ಲಿ ನಾಯಕ ಬವುಮಾ ಹಾಗೂ ಆಟಗಾರರು ಯಶಸ್ವಿಯಾಗಿದ್ದಾರೆ. ತಂಡದ ಈ ಯಶಸ್ಸಿಗೆ ಪ್ರಮುಖ ಕಾರಣ, ಪಂದ್ಯ ಕೈಜಾರುವ ಸ್ಥಿತಿಯಲ್ಲೂ ಬಿಟ್ಟುಕೊಡದ ಹೋರಾಟದ ಮನೋಬಾವ ಈ ಬಾರಿ ಆಫ್ರಿಕಾ ಆಟಗಾರರಲ್ಲಿ ಕಂಡುಬಂತು. ಈ ಫೈನಲ್ ಪಂದ್ಯದಲ್ಲಿ ತಂಡವು ಯಾವುದೇ ಒತ್ತಡದಲ್ಲಿ ಕಾಣಲಿಲ್ಲ. ಆದರೆ ಇದೇ ಆಫ್ರಿಕಾ ತಂಡ ಒಂದು ವರ್ಷದ ಹಿಂದೆ ನಡೆದಿದ್ದ ಟಿ20 ವಿಶ್ವಕಪ್ ಫೈನಲ್ನಲ್ಲಿ ಒತ್ತಡಕ್ಕೊಳಗಾಗಿದ್ದು ಮಾತ್ರವಲ್ಲದೆ, ತನ್ನ ಕೈಯಾರೆ ಪಂದ್ಯವನ್ನು ಕೈಚೆಲ್ಲಿತು.
ಕಳೆದ ವರ್ಷ ನಡೆದ ಟಿ20 ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಅದ್ಭುತ ಪ್ರದರ್ಶನ ನೀಡಿ ತನ್ನ ಮೊದಲ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಪ್ರಶಸ್ತಿ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಕಠಿಣ ಹೋರಾಟ ನೀಡಿತ್ತಾದರೂ ರೋಹಿತ್ ಪಡೆ ಆ ಪಂದ್ಯವನ್ನು 6 ರನ್‌ಗಳಿಂದ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಈ ಫೈನಲ್ ಸೋಲಿನ ಬಳಿಕ ಆಫ್ರಿಕಾ ತಂಡವನ್ನು ಪ್ರಪಂಚದಾದ್ಯಂತ ಬಹಳಷ್ಟು ಟೀಕಿಸಲಾಯಿತು. ಏಕೆಂದರೆ, 30 ಎಸೆತಗಳಲ್ಲಿ 30 ರನ್ ಬೇಕಾಗಿದ್ದಾಗ, ತಂಡದ ಪ್ರಮುಖ ಆಟಗಾರರು ಕ್ರೀಸ್ನಲ್ಲಿದ್ದಾಗ ಆಫ್ರಿಕಾ ತಂಡಕ್ಕೆ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
ಟಿ20 ವಿಶ್ವಕಪ್ ಫೈನಲ್ ಸೋಲಿನ ಬಳಿಕ ಆಫ್ರಿಕಾ ತಂಡ ಇದೇ ಟೆಂಬಾ ಬವುಮಾ ಅವರ ನಾಯಕತ್ವದಲ್ಲಿ 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಉತ್ತಮ ಆಟವಾಡಿ ಸೆಮಿಫೈನಲ್‌ಗೆ ತಲುಪಿತು. ಆದರೆ ಮತ್ತೊಮ್ಮೆ ಸೋಲನ್ನು ಎದುರಿಸಬೇಕಾಯಿತು. ಸೆಮಿಫೈನಲ್ ಪಂದ್ಯದಲ್ಲಿ, ನ್ಯೂಜಿಲೆಂಡ್ ತಂಡದ ವಿರುದ್ಧ 50 ರನ್‌ಗಳಿಂದ ಸೋತಿದ್ದ ಆಫ್ರಿಕಾ ಟೂರ್ನಿಯಿಂದ ಹೊರಬಿದ್ದಿತ್ತು. ಆ ಬಳಿಕ ದಕ್ಷಿಣ ಆಫ್ರಿಕಾ ತಂಡಕ್ಕೆ ಅಂಟಿರುವ ಚೋಕರ್ಸ್ ಕಳಂಕ ಎಂದಿಗೂ ದೂರವಾಗುವುದಿಲ್ಲ ಎಂದು ಖಚಿತವಾಗಿತ್ತು. ಆದರೀಗ ಆ ಕಳಂಕವನ್ನು ಅಳಿಸಿ ಹಾಕುವಲ್ಲಿ ಅಫ್ರಿಕಾ ಯಶಸ್ವಿಯಾಗಿದೆ.
ನಾಯಕ ಟೆಂಬಾ ಬವುಮಾ ಅವರ ನಾಯಕತ್ವದಲ್ಲಿ, ತಂಡವು ಸತತ ಏಳು ಟೆಸ್ಟ್ ಪಂದ್ಯಗಳನ್ನು ಗೆದ್ದು 2025 ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ತಲುಪಿತು, ಆದರೆ ಈ ಬಾರಿಯೂ ದಕ್ಷಿಣ ಆಫ್ರಿಕಾ ದೊಡ್ಡ ಪಂದ್ಯದಲ್ಲಿ ಎಡವುತ್ತದೆ ಎಂದು ಎಲ್ಲರೂ ಹೇಳುತ್ತಿದ್ದರು. ಮುಂದಿರುವ ಆಸ್ಟ್ರೇಲಿಯಾ ತಂಡವನ್ನು ನೋಡಿದಾಗ, ಎಲ್ಲರಿಗೂ ಹಾಗೆ ಅನಿಸುತ್ತಿತ್ತು. ಏಕೆಂದರೆ ಐಸಿಸಿ ಪಂದ್ಯಾವಳಿಗಳಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸುವುದು ತುಂಬಾ ಕಷ್ಟ, ಆದರೆ ಪ್ರಶಸ್ತಿ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತನ್ನ ಆಟವನ್ನು ಆಡಿದ ರೀತಿ ಎಲ್ಲರನ್ನೂ ಬೆರಗುಗೊಳಿಸಿತು. ದಕ್ಷಿಣ ಆಫ್ರಿಕಾ ಚೋಕರ್ಸ್ ಕಳಂಕವನ್ನು ತೊಳೆದು ಈ ದೀರ್ಘ ಸ್ವರೂಪದ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:39 pm, Sat, 14 June 25