Champions Trophy 2025: ದಕ್ಷಿಣ ಆಫ್ರಿಕಾಗೆ ಸುಲಭ ತುತ್ತಾದ ಅಫ್ಘಾನಿಸ್ತಾನ

Champions Trophy 2025: ದಕ್ಷಿಣ ಆಫ್ರಿಕಾ ತಂಡವು ಚಾಂಪಿಯನ್ಸ್ ಟ್ರೋಫಿಯಲ್ಲಿ ಅಫ್ಘಾನಿಸ್ತಾನವನ್ನು 107 ರನ್‌ಗಳಿಂದ ಸೋಲಿಸಿ ಭರ್ಜರಿ ಗೆಲುವು ಸಾಧಿಸಿದೆ. ರಯಾನ್ ರಿಕಲ್ಟನ್ ಅವರ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ 315 ರನ್‌ಗಳ ಬೃಹತ್ ಮೊತ್ತ ಸೇರಿಸಿತು. ಕಗಿಸೊ ರಬಾಡ ಮತ್ತು ಲುಂಗಿ ಎನ್‌ಗಿಡಿ ಅವರ ಅದ್ಭುತ ಬೌಲಿಂಗ್‌ನಿಂದ ಅಫ್ಘಾನಿಸ್ತಾನ 208 ರನ್‌ಗಳಿಗೆ ಆಲೌಟ್ ಆಯಿತು. ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಟೂರ್ನಮೆಂಟ್‌ನಲ್ಲಿ ಉತ್ತಮ ಆರಂಭ ಪಡೆದುಕೊಂಡಿದೆ.

Champions Trophy 2025: ದಕ್ಷಿಣ ಆಫ್ರಿಕಾಗೆ ಸುಲಭ ತುತ್ತಾದ ಅಫ್ಘಾನಿಸ್ತಾನ
ದಕ್ಷಿಣ ಆಫ್ರಿಕಾ ತಂಡ

Updated on: Feb 21, 2025 | 10:27 PM

ದಕ್ಷಿಣ ಆಫ್ರಿಕಾ ಕೂಡ ಚಾಂಪಿಯನ್ಸ್ ಟ್ರೋಫಿಯಲ್ಲಿ ತನ್ನ ಪ್ರಯಾಣವನ್ನು ಬೃಹತ್ ಗೆಲುವಿನೊಂದಿಗೆ ಪ್ರಾರಂಭಿಸಿದೆ. ಕರಾಚಿಯಲ್ಲಿ ನಡೆದ ಪಂದ್ಯಾವಳಿಯ ಮೂರನೇ ಪಂದ್ಯದಲ್ಲಿ, ಟೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನವನ್ನು ಏಕಪಕ್ಷೀಯವಾಗಿ ಸೋಲಿಸಿ 107 ರನ್‌ಗಳಿಂದ ಬೃಹತ್ ಗೆಲುವು ಸಾಧಿಸಿದೆ. ರಯಾನ್ ರಿಕಲ್ಟನ್ ಅವರ ಸ್ಮರಣೀಯ ಚೊಚ್ಚಲ ಶತಕದ ನೆರವಿನಿಂದ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 315 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಈ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನವನ್ನು ಆರಂಭದಿಂದಲೂ ಕಾಡಿದ ಕಗಿಸೊ ರಬಾಡ ಮತ್ತು ಲುಂಗಿ ಎನ್‌ಗಿಡಿ 208 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

ಮೊದಲ ಬಾರಿಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾಗವಹಿಸುತ್ತಿದ್ದ ಅಫ್ಘಾನಿಸ್ತಾನ, ಈ ಪಂದ್ಯಾವಳಿಯ ಇತಿಹಾಸದಲ್ಲಿ ತನ್ನ ಚೊಚ್ಚಲ ಪಂದ್ಯವನ್ನು ಸಹ ಆಡಿತು. ಎರಡೂ ತಂಡಗಳ ಇತ್ತೀಚಿನ ಇತಿಹಾಸವನ್ನು ಗಮನಿಸಿದರೆ, ಈ ಪಂದ್ಯವು ತುಂಬಾ ರೋಮಾಂಚಕಾರಿ ಮತ್ತು ಕಠಿಣವಾಗಿರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಏಕೆಂದರೆ ಕೆಲವು ತಿಂಗಳ ಹಿಂದೆಯಷ್ಟೇ ಅಫ್ಘಾನಿಸ್ತಾನ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯನ್ನು ಗೆದ್ದುಕೊಂಡಿತ್ತು. ಅದಕ್ಕೂ ಮೊದಲು, ಟಿ20 ವಿಶ್ವಕಪ್‌ನಲ್ಲೂ ಇಬ್ಬರ ನಡುವೆ ಬಹಳ ನಿಕಟ ಪಂದ್ಯ ನಡೆದಿತ್ತು, ಆ ಪಂದ್ಯವನ್ನು ದಕ್ಷಿಣ ಆಫ್ರಿಕಾ ಗೆದ್ದುಕೊಂಡಿತು.

ರಿಕಲ್ಟನ್ ಶತಕ

ಆದಾಗ್ಯೂ, ದಕ್ಷಿಣ ಆಫ್ರಿಕಾದ ಆರಂಭಿಕ ಆಟಗಾರ ಟೋನಿ ಡಿ ಜಾರ್ಜಿಯೊ ಅವರನ್ನು ಬೇಗನೆ ಔಟ್ ಮಾಡುವ ಮೂಲಕ ಅಫ್ಘಾನಿಸ್ತಾನ ಉತ್ತಮ ಆರಂಭವನ್ನು ಪಡೆಯಿತು. ಆದರೆ ನಾಯಕ ಬವುಮಾ ಅವರೊಂದಿಗೆ ರಿಕಲ್ಟನ್ ಎರಡನೇ ವಿಕೆಟ್‌ಗೆ ಇವರಿಬ್ಬರ ನಡುವೆ 127 ರನ್‌ಗಳ ಜೊತೆಯಾಟ ನಡೆಸಿದರು. ಇದರಲ್ಲಿ ಮೊದಲು ರಿಕಲ್ಟನ್ ಮತ್ತು ನಂತರ ಬವುಮಾ ಕ್ರಮವಾಗಿ ಅರ್ಧಶತಕಗಳನ್ನು ಪೂರೈಸಿದರು. ಶೀಘ್ರದಲ್ಲೇ ರಿಕಲ್ಟನ್ ತಮ್ಮ ಏಕದಿನ ವೃತ್ತಿಜೀವನದ ಮೊದಲ ಶತಕವನ್ನು ಪೂರ್ಣಗೊಳಿಸಿದರು. ಅಂತಿಮವಾಗಿ ಅವರು 103 ರನ್ ಗಳಿಸಿ ಔಟಾದರು. ಆದರೆ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳು ತಮ್ಮ ಆಕ್ರಮಣಕಾರಿ ಆಟವನ್ನು ಮುಂದುವರೆಸಿದರು. ರಾಸ್ಸಿ ವ್ಯಾನ್ ಡೆರ್ ಡುಸೆನ್ ಮತ್ತು ಐಡೆನ್ ಮಾರ್ಕ್ರಾಮ್ ಸ್ಫೋಟಕ ಅರ್ಧಶತಕ ಬಾರಿಸಿ ತಂಡವನ್ನು 315 ರನ್‌ಗಳ ಬೃಹತ್ ಮೊತ್ತಕ್ಕೆ ಕೊಂಡೊಯ್ದರು.

ಅಫ್ಘಾನ್​ಗೆ ಆರಂಭಿಕ ಆಘಾತ

315 ರನ್‌ಗಳ ಬೃಹತ್ ಮೊತ್ತ ಬೆನ್ನಟ್ಟಿದ ಅಫ್ಘಾನಿಸ್ತಾನವನ್ನು ದಕ್ಷಿಣ ಆಫ್ರಿಕಾದ ವೇಗದ ಬೌಲರ್‌ಗಳು ಆರಂಭದಿಂದಲೇ ಕಾಡಲಾರಂಭಿಸಿದರು. ನಾಲ್ಕನೇ ಓವರ್‌ನಲ್ಲಿ ಲುಂಗಿ ಎನ್‌ಗಿಡಿ ರಹಮಾನಲ್ಲಾ ಗುರ್ಬಾಜ್ ಅವರನ್ನು ಬಲಿ ಪಡೆದರು. 10 ನೇ ಓವರ್‌ನಲ್ಲಿ ರಬಾಡ, ಇಬ್ರಾಹಿಂ ಜದ್ರಾನ್ ಅವರನ್ನು ಪೆವಿಲಿಯನ್​ಗೆ ಕಳುಹಿಸಿದರು. ಮುಂದಿನ 5 ಓವರ್‌ಗಳಲ್ಲಿ, ಅಫ್ಘಾನಿಸ್ತಾನ ತಂಡವು ನಾಯಕ ಹಶ್ಮತುಲ್ಲಾ ಶಾಹಿದಿ ಮತ್ತು ಸೆಡಿಕುಲ್ಲಾ ಅಟಲ್ ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ವೇಳೆಗೆ ತಂಡದ ಸ್ಕೋರ್ ಕೇವಲ 50 ರನ್‌ಗಳಾಗಿತ್ತು.

ಇದಾದ ನಂತರವೂ ಅಫ್ಘಾನಿಸ್ತಾನದ ವಿಕೆಟ್‌ಗಳು ನಿಗದಿತ ಅಂತರದಲ್ಲಿ ಬೀಳುತ್ತಲೇ ಇದ್ದವು. ಆದರೆ ರೆಹಮತ್ ಶಾ ಇನ್ನೊಂದು ತುದಿಯಿಂದ ದಕ್ಷಿಣ ಆಫ್ರಿಕಾವನ್ನು ಏಕಾಂಗಿಯಾಗಿ ಎದುರಿಸುವುದನ್ನು ಮುಂದುವರೆಸಿದರು. ಅವರು ಏಕಾಂಗಿಯಾಗಿ 90 ರನ್ ಗಳಿಸಿದರೆ ಇಡೀ ತಂಡವು 208 ರನ್‌ಗಳಿಗೆ ಆಲೌಟ್ ಆಯಿತು. ದಕ್ಷಿಣ ಆಫ್ರಿಕಾ ಪರ ಕಗಿಸೊ ರಬಾಡ ಗರಿಷ್ಠ 3 ವಿಕೆಟ್ ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ