WPL ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಎಲ್ಲಿಸ್ ಪೆರ್ರಿ
WPL 2025 RCB vs MI: ವುಮೆನ್ಸ್ ಪ್ರೀಮಿಯರ್ ಲೀಗ್‌ನ 7ನೇ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಮುಂಬೈ ಇಂಡಿಯನ್ಸ್ ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ RCB 167 ರನ್ ಕಲೆಹಾಕಿದರೆ, ಮುಂಬೈ ಇಂಡಿಯನ್ಸ್ 19.5 ಓವರುಗಳಲ್ಲಿ 170 ರನ್ ಬಾರಿಸಿ 4 ವಿಕೆಟ್‌ಗಳ ಗೆಲುವು ದಾಖಲಿಸಿತು. ಈ ಸೋಲಿನ ಹೊರತಾಗಿಯೂ ಈ ಪಂದ್ಯದ ಮೂಲಕ ಎಲ್ಲಿಸ್ ಪೆರ್ರಿ ವಿಶೇಷ ದಾಖಲೆ ಬರೆದಿದ್ದಾರೆ.
Updated on: Feb 22, 2025 | 7:34 AM

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಆಟಗಾರ್ತಿ ಎಲ್ಲಿಸ್ ಪೆರ್ರಿ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ (WPL) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪೆರ್ರಿ ಆಕರ್ಷಕ ಅರ್ಧಶತಕ ಬಾರಿಸಿ ಮಿಂಚಿದ್ದರು.

ಈ ಪಂದ್ಯದಲ್ಲಿ 43 ಎಸೆತಗಳನ್ನು ಎದುರಿಸಿದ ಎಲ್ಲಿಸ್ ಪೆರ್ರಿ 2 ಸಿಕ್ಸ್ ಹಾಗೂ 11 ಫೋರ್ ಗಳೊಂದಿಗೆ 81 ರನ್ ಚಚ್ಚಿದರು. ಈ 81 ರನ್ ಗಳೊಂದಿಗೆ ಪೆರ್ರಿ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ 700+ ರನ್ ಪೂರೈಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಆರ್ಸಿಬಿ ತಂಡದ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಅಷ್ಟೇ ಅಲ್ಲದೆ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ 700+ ರನ್ಸ್ ಹಾಗೂ 10+ ವಿಕೆಟ್ ಪಡೆದ ಏಕೈಕ ಆಟಗಾರ್ತಿ ಎನಿಸಿಕೊಂಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಈವರೆಗೆ 20 ಪಂದ್ಯಗಳನ್ನಾಡಿರುವ ಎಲ್ಲಿಸ್ ಪೆರ್ರಿ 6 ಅರ್ಧಶತಕಗಳೊಂದಿಗೆ ಒಟ್ಟು 745 ರನ್ ಬಾರಿಸಿದ್ದಾರೆ.

ಹಾಗೆಯೇ 15 ಪಂದ್ಯಗಳಲ್ಲಿ ಬೌಲಿಂಗ್ ಮಾಡಿರುವ ಪೆರ್ರಿ ಒಟ್ಟು 11 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ WPL ಇತಿಹಾಸದಲ್ಲೇ 700+ ರನ್ಸ್ ಹಾಗೂ 10+ ವಿಕೆಟ್ ಪಡೆದ ಏಕೈಕ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ಎಲ್ಲಿಸ್ ಪೆರ್ರಿ ತಮ್ಮದಾಗಿಸಿಕೊಂಡಿದ್ದಾರೆ.

ಇನ್ನು ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತೀ ಹೆಚ್ಚು ರನ್ ಕಲೆಹಾಕಿದ ದಾಖಲೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಹೆಸರಿನಲ್ಲಿದೆ. ಡೆಲ್ಲಿ ಪರ 21 ಇನಿಂಗ್ಸ್ ಆಡಿರುವ ಲ್ಯಾನಿಂಗ್ 7 ಅರ್ಧಶತಕಗಳೊಂದಿಗೆ ಈವರೆಗೆ 777 ರನ್ ಕಲೆಹಾಕಿದ್ದಾರೆ. ಇದೀಗ 745 ರನ್ ಗಳೊಂದಿಗೆ ಎಲ್ಲಿಸ್ ಪೆರ್ರಿ ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಅಲಂಕರಿಸಿದ್ದಾರೆ.



















