ENG vs SA: ಆಂಗ್ಲರ ಸೊಕ್ಕು ಮುರಿದ ಆಫ್ರಿಕಾ; ಲಾರ್ಡ್ಸ್‌ನಲ್ಲಿ ಇನ್ನಿಂಗ್ಸ್ ಸೋಲುಂಡ ಬೆನ್ ಸ್ಟೋಕ್ಸ್ ಪಡೆ
ENG vs SA: ಬೆನ್ ಸ್ಟೋಕ್ಸ್ ಮತ್ತು ಬ್ರೆಂಡನ್ ಮೆಕಲಮ್ ಜೋಡಿ ಆಂಗ್ಲ ತಂಡದ ಜವಬ್ದಾರಿವಹಿಸಿಕೊಂಡ ಮೇಲೆ ಮೊದಲ ಬಾರಿಗೆ ಇಂಗ್ಲೆಂಡ್ ತಂಡ ಹೀನಾಯ ಪ್ರದರ್ಶನ ತೋರಿದೆ.
ಇಂಗ್ಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್ (Lord’s Test) ಪಂದ್ಯ ಆರಂಭಕ್ಕೂ ಮೊದಲು ದಕ್ಷಿಣ ಆಫ್ರಿಕಾದ ನಾಯಕ ಡೀನ್ ಎಲ್ಗರ್ (Dean Elgar) ಏನು ಹೇಳಿದ್ದರೋ, ಅವರ ತಂಡ ಅದೇ ಕೆಲಸವನ್ನು ಮಾಡಿದೆ. ಬೆನ್ ಸ್ಟೋಕ್ಸ್ ಮತ್ತು ಬ್ರೆಂಡನ್ ಮೆಕಲಮ್ ಜೋಡಿ ಆಂಗ್ಲ ತಂಡದ ಜವಬ್ದಾರಿವಹಿಸಿಕೊಂಡ ಮೇಲೆ ಮೊದಲ ಬಾರಿಗೆ ಇಂಗ್ಲೆಂಡ್ ತಂಡ ಹೀನಾಯ ಪ್ರದರ್ಶನ ತೋರಿದೆ. ನ್ಯೂಜಿಲೆಂಡ್ ಮತ್ತು ಭಾರತ ವಿರುದ್ಧ ಆಕ್ರಮಣಕಾರಿ ಆಟವಾಡುವ ಮೂಲಕ ಸತತ ನಾಲ್ಕು ಟೆಸ್ಟ್‌ಗಳನ್ನು ಗೆದ್ದು, ಉಪ್ಪರಿಗೆ ಮೇಲೆ ಕುಳಿತಿರುವ ಆಂಗ್ಲರ ತಂಡವನ್ನು ದಕ್ಷಿಣ ಆಫ್ರಿಕಾ ತಂಡ ಹೀನಾಯವಾಗಿ ಸೋಲಿಸಿದೆ. ಲಾರ್ಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಪ್ರವಾಸಿ ತಂಡ ಆತಿಥೇಯ ಇಂಗ್ಲೆಂಡ್ ತಂಡವನ್ನು ಕೇವಲ ಎರಡೂವರೆ ದಿನಗಳಲ್ಲಿ ಇನ್ನಿಂಗ್ಸ್ ಮತ್ತು 12 ರನ್‌ಗಳಿಂದ ಸೋಲಿಸಿತು.
ದಕ್ಷಿಣ ಆಫ್ರಿಕಾ ಹೇಳಿದ್ದನ್ನೇ ಮಾಡಿದೆ
ಸತತ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಇಂಗ್ಲೆಂಡ್ ಜಯಗಳಿಸಿದ ನಂತರ, ಬ್ರೆಂಡನ್ ಮೆಕಲಮ್ ಅವರ ಆಕ್ರಮಣಕಾರಿ ಬ್ರಾಂಡ್ ಕ್ರಿಕೆಟ್ ಅನ್ನು ‘ಬ್ಯಾಡ್ಜ್‌ಬಾಲ್’ ಎಂದು ಕರೆಯಲಾಗುತ್ತಿತ್ತು. ಈ ಬಗ್ಗೆ ಇಂಗ್ಲಿಷ್ ಕ್ರಿಕೆಟ್ ಸೇರಿದಂತೆ ವಿಶ್ವ ಕ್ರಿಕೆಟ್‌ನಲ್ಲಿ ವಿಭಿನ್ನ ಉತ್ಸಾಹವಿತ್ತು. ಇಂತಹ ಪರಿಸ್ಥಿತಿಯಲ್ಲಿ ಎಲ್ಲರ ಕಣ್ಣು ದಕ್ಷಿಣ ಆಫ್ರಿಕಾ ಸರಣಿಯತ್ತ ನೆಟ್ಟಿತ್ತು, ಏಕೆಂದರೆ ಈ ತಂಡವು ಮಾರಕ ಬೌಲಿಂಗ್ ದಾಳಿಯನ್ನು ಹೊಂದಿದೆ. ದಕ್ಷಿಣ ಆಫ್ರಿಕಾದ ನಾಯಕ ಡೀನ್ ಎಲ್ಗರ್ ಈ ಸರಣಿಯ ಆರಂಭಕ್ಕೂ ಮೊದಲು ‘ಬ್ಯಾಡ್ಜ್‌ಬಾಲ್’ ಥಿಯರಿಯನ್ನು ಬದಿಗೊತ್ತಿದ್ದರು.
ಮೂರನೇ ದಿನಕ್ಕೆ ಆಟ ಅಂತ್ಯ
ಲಾರ್ಡ್ಸ್ ಟೆಸ್ಟ್‌ನಲ್ಲಿ ಕೇವಲ ಎರಡೂವರೆ ದಿನದೊಳಗೆ ನಡೆದ ಚಮತ್ಕಾರವನ್ನು ನೋಡಿದರೆ, ಎಲ್ಗರ್ ತನ್ನ ತಂಡದ ಬೌಲರ್‌ಗಳ ಮೇಲೆ ಎಷ್ಟು ನಂಬಿಕೆ ಇಟ್ಟಿದ್ದರು ಎಂಬುದನ್ನು ಸಾಭಿತುಪಡಿಸಿದೆ. ಈ ವರ್ಷದ ಆರಂಭದಲ್ಲಿ, ಭಾರತದ ವಿರುದ್ ಸರಣಿಯನ್ನು ಗೆದ್ದ ಆಫ್ರಿಕನ್ ತಂಡ ಇಂಗ್ಲೆಂಡ್‌ಗೆ ತವರಿನಲ್ಲಿ ಋತುವಿನ ಮೊದಲ ಸೋಲನ್ನು ನೀಡಿತು. ಪಂದ್ಯದ ಮೂರನೇ ದಿನದಂದು ದಕ್ಷಿಣ ಆಫ್ರಿಕಾದ ಮೊದಲ ಇನಿಂಗ್ಸ್ 326 ರನ್‌ಗಳಿಗೆ ಕೊನೆಗೊಂಡಿತು.
ಕಗಿಸೊ ರಬಾಡ ಮತ್ತು ಎನ್ರಿಕ್ ನೋರ್ಖಿಯಾ ಅವರ ಮಾರಕ ವೇಗದ ಬೌಲಿಂಗ್‌ನ ಮುಂದೆ ಮೊದಲ ಇನಿಂಗ್ಸ್‌ನಲ್ಲಿ ಕೇವಲ 165 ರನ್‌ಗಳಿಗೆ ಸೋತಿದ್ದ ಆಂಗ್ಲರ ಬ್ಯಾಟಿಂಗ್ ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ನಿರೀಕ್ಷೆಯಿತ್ತು. ಆದರೆ ಈ ಬಾರಿ ಪರಿಸ್ಥಿತಿ ಇನ್ನಷ್ಟು ಹದಗೆಟ್ಟು ಇಡೀ ತಂಡ ಎರಡನೇ ಇನಿಂಗ್ಸ್‌ನಲ್ಲಿ 149 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಆರಂಭಿಕ ಮುನ್ನಡೆ ಸಾಧಿಸಿದೆ.
ಸ್ಪಿನ್ನರ್‌ಗಳನ್ನು ಎದುರಿಸುವಲ್ಲಿ ವಿಫಲ
ದಕ್ಷಿಣ ಆಫ್ರಿಕಾದ ವೇಗದ ಮತ್ತು ಸ್ಪಿನ್ ದಾಳಿಯ ಎದುರು ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಯಾರೂ ಆತ್ಮವಿಶ್ವಾಸದಿಂದ ಆಡಲಿಲ್ಲ. ಆರಂಭಿಕ ಅಲೆಕ್ಸ್ ಲೀಸ್ ಮತ್ತು ಎಂಟನೇ ಕ್ರಮಾಂಕದ ಬ್ಯಾಟ್ಸ್‌ಮನ್ ಸ್ಟುವರ್ಟ್ ಬ್ರಾಡ್ ಇಂಗ್ಲೆಂಡ್ ಪರ ಗರಿಷ್ಠ 35 ರನ್ ಗಳಿಸಿದರು. ಎಡಗೈ ಸ್ಪಿನ್ನರ್ ಕೇಶವ್ ಮಹಾರಾಜ್ ದಕ್ಷಿಣ ಆಫ್ರಿಕಾಕ್ಕೆ ಶಾಕ್ ನೀಡಲಾರಂಭಿಸಿದರು. ಎಂಟನೇ ಓವರ್ ನಲ್ಲಿಯೇ ಬೌಲಿಂಗ್ ಮಾಡಲು ಬಂದ ಮಹಾರಾಜ್ ತಮ್ಮ ಮೂರನೇ ಎಸೆತದಲ್ಲಿ ಆರಂಭಿಕ ಜಾಕ್ ಕ್ರಾಲಿ (13)ಯನ್ನು ಪೆವಿಲಿಯನ್ ಮರಳಿಸಿದರೆ, ಭೋಜನ ವಿರಾಮಕ್ಕೂ ಮುನ್ನ ಮೊದಲ ಇನಿಂಗ್ಸ್‌ನಲ್ಲಿ ಗರಿಷ್ಠ ರನ್ ಗಳಿಸಿದ್ದ ಒಲಿ ಪೋಪ್ (5) ಪೆವಿಲಿಯನ್ಗೆ ಮರಳಿದರು.
ವೇಗಿಗಳನ್ನು ಅರಿಯಲು ಸಾಧ್ಯವಾಗಲಿಲ್ಲ
ಎರಡನೇ ಸೆಷನ್ನಲ್ಲೂ ಇಂಗ್ಲೆಂಡ್‌ನ ಸ್ಥಿತಿ ಹದಗೆಟ್ಟಿತು. ಶೀಘ್ರದಲ್ಲೇ ವೇಗಿ ಲುಂಗಿ ಎನ್‌ಗಿಡಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ಮಾಜಿ ನಾಯಕ ಜೋ ರೂಟ್ (6) ಅವರ ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್‌ಗೆ ಹೊಡೆತ ನೀಡಿದರು. ಇದರ ನಂತರ, ಎನ್ರಿಕ್ ನಾರ್ಕಿಯಾ ಅವರು ತಮ್ಮ ಸತತ ಎರಡು ಓವರ್‌ಗಳಲ್ಲಿ ಜಾನಿ ಬೈರ್‌ಸ್ಟೋವ್ ಸೇರಿದಂತೆ 3 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಇಂಗ್ಲೆಂಡ್‌ನ ಸೋಲನ್ನು ನಿರ್ಧರಿಸಿದರು. ನಾಯಕ ಬೆನ್ ಸ್ಟೋಕ್ಸ್ (20) ಮತ್ತು ಬ್ರಾಡ್ ಇಂಗ್ಲೆಂಡ್‌ಗೆ ಇನ್ನಿಂಗ್ಸ್ ಸೋಲನ್ನು ತಪ್ಪಿಸಲು ತಮ್ಮ ಅತ್ಯುತ್ತಮ ಪ್ರಯತ್ನ ಮಾಡಿದರು. ಜೊತೆಗೆ ಇಬ್ಬರ ನಡುವೆ 55 ರನ್‌ಗಳ ಜೊತೆಯಾಟವೂ ಇತ್ತು. ಬ್ರಾಡ್ ಔಟಾದ ತಕ್ಷಣ ಉಳಿದ 3 ವಿಕೆಟ್‌ಗಳು ಕೂಡ 8 ರನ್‌ಗಳ ಅಂತರದಲ್ಲಿ ಉದುರಿದವು. ದಕ್ಷಿಣ ಆಫ್ರಿಕಾ ಪರ ಎರಡನೇ ಇನ್ನಿಂಗ್ಸ್‌ನಲ್ಲಿ ನಾರ್ಕಿಯಾ ಮೂರು ವಿಕೆಟ್ ಪಡೆದರೆ, ಮಾರ್ಕೊ ಯಾನ್ಸನ್, ಕೇಶವ್ ಮಹಾರಾಜ್ ಮತ್ತು ಕಗಿಸೊ ರಬಾಡ ತಲಾ ಎರಡು ವಿಕೆಟ್ ಪಡೆದರು.
Published On - 10:40 pm, Fri, 19 August 22