ಮೂರನೇ ಹಾಗೂ ಅಂತಿಮ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು 7 ವಿಕೆಟ್‌ಗಳ ಅಂತರದಿಂದ ಮಣಿಸಿದ ಆತಿಥೇಯ ದಕ್ಷಿಣ ಆಫ್ರಿಕಾ (India vs South Africa) ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಐತಿಹಾಸಿಕ ಗೆಲುವಿನ ಕನಸಿನಲ್ಲಿದ್ದ ಟೀಮ್ ಇಂಡಿಯಾಕ್ಕೆ ದೊಡ್ಡ ಆಘಾತ ಉಂಟಾಗಿದೆ. ಕೇಪ್ ಟೌನ್ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ವಿರಾಟ್ ಕೊಹ್ಲಿ (Virat Kohli) ಪಡೆ 223 ರನ್ ಗಳಿಗೆ ಆಲೌಟ್ ಆಗಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ್ದ ಆಫ್ರಿಕಾ 210 ರನ್ ಗಳಿಗೆ ಆಲೌಟ್ ಆಗಿತ್ತು. 13 ರನ್ ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದ ಟೀಮ್ ಇಂಡಿಯಾ (Team India) 198 ರನ್ ಅಲ್ಪ ಮೊತ್ತಕ್ಕೆ ಆಲೌಟ್ ಆಯಿತು. 212 ರನ್ ಗಳ ಗುರಿ ಬೆನ್ನಟ್ಟಿದ ಆಫ್ರಿಕಾ 3 ವಿಕೆಟ್ ನಷ್ಟಕ್ಕೆ 212 ರನ್ ಬಾರಿಸಿ ಗೆಲುವಿನ ನಗೆ ಬೀರಿತು.
ದಕ್ಷಿಣ ಆಪ್ರಿಕಾದ ಈ ಗೆಲುವಿನಲ್ಲಿ ನಿರ್ಣಾಯಕ ಎರಡನೇ ಇನ್ನಿಂಗ್ಸ್‌ನಲ್ಲಿ ಪ್ರಧಾನ ಕೊಡುಗೆ ನೀಡಿದ್ದು ಯುವ ಆಟಗಾರ ಕೀಗನ್ ಪೀಟರ್ಸನ್. ಪೀಟರ್ಸನ್ ಭರ್ಜರಿ 82 ರನ್‌ಗಳಿಸಿ ಭಾರತೀಯ ತಂಡಕ್ಕೆ ಸವಾಲಾದರು. ಈ ಮೂಲಕ ದಕ್ಷಿಣ ಆಫ್ರಿಕಾ ಸುಲಭವಾಗಿ ಗೆಲ್ಲಲು ಕಾರಣವಾದರು. ಅಲ್ಲದೆ ಸರಣಿಯುದ್ದಕ್ಕೂ ಅಮೋಘ ಪ್ರದರ್ಶನ ನೀಡಿದಕ್ಕೆ ಸರಣಿಶ್ರೇಷ್ಠ ಮತ್ತು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಬಾಜಿಕೊಂಡರು. ಸದ್ಯ ಕೀಗನ್ ಪೀಟರ್ಸನ್ ಅವರ ಈ ಅದ್ಭುತ ಪ್ರದರ್ಶನದ ಬಗ್ಗೆ ಅನೇಕ ಕ್ರೀಡಾ ಪಂಡಿತರು ಮೆಚ್ಚುಗೆಯ ಮಾತುಗಳನ್ನು ಆಡುತ್ತಿದ್ದಾರೆ.
ಟೀಮ್ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಅವರು ಕೀಗನ್ ಪೀಟರ್ಸನ್ ಆಟವನ್ನು ಹಾಡಿಹೊಗಳಿದ್ದು, ಪೀಟರ್ಸನ್ ಆಟ ತನ್ನ ಬಾಲ್ಯದ ಹೀರೋ ಬೆಂಗಳೂರಿನ ಗುಂಡಪ್ಪ ವಿಶ್ವನಾಥ್ ಅವರನ್ನು ನೋಡಿದಂತಾಯಿತು ಎಂದು ಟ್ವೀಟ್ ಮಾಡಿದ್ದಾರೆ. “ಕೀಗನ್ ಪೀಟರ್ಸನ್. ಒಬ್ಬ ವಿಶ್ವ ಶ್ರೇಷ್ಠ ಆಟಗಾರ. ಇವರನ್ನು ನೋಡಿದಾಗ ನನ್ನ ಬಾಲ್ಯದ ಹೀರೋ ಗುಂಡಪ್ಪ ವಿಶ್ವನಾಥ್ ನೆನಪಿಗೆ ಬರುತ್ತಾರೆ,” ಎಂದು ಬರೆದುಕೊಂಡಿದ್ದಾರೆ.
Keegan Peterson (KP). Excellent initials (@KP24). A great world player in the making. My childhood hero Gundappa Vishwanath comes to mind #SAvIND pic.twitter.com/6T9SuzN6St
— Ravi Shastri (@RaviShastriOfc) January 14, 2022
ಇನ್ನು ಪೀಟರ್ಸನ್ ಬಗ್ಗೆ ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ ಕೂಡ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. 28ರ ಹರೆಯದ ಈ ಆಟಗಾರ ಭವಿಷ್ಯದ ತಾರೆ ಎಂದು ಗಂಭೀರ್ ಬಣ್ಣಿಸಿದ್ದಾರೆ.
“ಆತನ ಪ್ರದರ್ಶನವನ್ನು ನೋಡಿದರೆ ಆತ ಖಂಡಿತವಾಗಿಯೂ ದಕ್ಷಿಣ ಆಫ್ರಿಕಾದ ಭವಿಷ್ಯದ ತಾರೆ ಎನಿಸುತ್ತಾರೆ. ಹರಣಿಗಳ ತಂಡ ಡಿಕಾಕ್ ಅವರ ಸೇವೆಯಿಂದ ವಂಚಿತವಾಯಿತು. ಆದರೆ ಪಿಟರ್ಸನ್ ಅವರ ಅದ್ಭುತ ಫಾರ್ಮ್ ದಕ್ಷಿಣ ಆಪ್ರಿಕಾ ತಂಡ ಈ ಸರಣಿ ಗೆಲ್ಲಲು ಪ್ರಮುಖ ಪಾತ್ರವಹಿಸಿತು. ನನ್ನ ಪ್ರಕಾರ ಆತಿಥೇಯ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ಈತನೆ. ಆಟಗಾರನ ಖ್ಯಾತಿಗಿಂತಲೂ ಫಾರ್ಮ್ ಬಹಳ ಮುಖ್ಯವಾಗುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಫಾರ್ಮ್ ಪ್ರಮುಖ ಪಾತ್ರವಹಿಸುತ್ತದೆ. ನಿಮ್ಮ ಫಾರ್ಮ್ ಉತ್ತಮವಾಗಿದ್ದರೆ ಯಾವುದೇ ತಂಡವನ್ನಾದರೂ ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ,” ಎಂದು ಗಂಭೀರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ICC Under 19 World Cup: ಭಾರತದ ಕಿರಿಯರಿಗಿಂದು ದಕ್ಷಿಣ ಆಫ್ರಿಕಾ ಸವಾಲು: ಹೈವೋಲ್ಟೇಜ್ ಮ್ಯಾಚ್ ನಿರೀಕ್ಷೆ
Published On - 9:55 am, Sat, 15 January 22