ಸ್ಪಿನ್ನರ್ ಪ್ರಭಾತ್ ಜಯಸೂರ್ಯ (Prabhat Jayasuriya) ಸ್ಪಿನ್ ಮತ್ತು ದಿನೇಶ್ ಚಾಂಡಿಮಾಲ್ (Dinesh Chandimal) ಅವರ ಅದ್ಭುತ ದ್ವಿಶತಕದಿಂದಾಗಿ ಶ್ರೀಲಂಕಾ ಗಾಲೆ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾವನ್ನು ಸೋಲಿಸಿದೆ. ಗಾಲೆ ಟೆಸ್ಟ್‌ನಲ್ಲಿ ಶ್ರೀಲಂಕಾ ಇನ್ನಿಂಗ್ಸ್ ಮತ್ತು 39 ರನ್‌ಗಳ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಟೆಸ್ಟ್ ಸರಣಿಯನ್ನು 1-1ರಲ್ಲಿ ಸಮಬಲಗೊಳಿಸಿದೆ. ಶ್ರೀಲಂಕಾ ಮೊದಲ ಇನ್ನಿಂಗ್ಸ್‌ನಲ್ಲಿ 190 ರನ್‌ಗಳ ಬೃಹತ್ ಮುನ್ನಡೆಯನ್ನು ಹೊಂದಿತ್ತು, ನಂತರ ಆಸ್ಟ್ರೇಲಿಯಾ ತಂಡವು ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 151 ರನ್‌ಗಳಿಗೆ ಆಲೌಟ್ ಆಗಿತ್ತು. ಲಂಕಾದ ಪ್ರಭಾತ್ ಜಯಸೂರ್ಯ, ಆಸ್ಟ್ರೇಲಿಯಾ ವಿರುದ್ಧ ಎರಡನೇ ಇನ್ನಿಂಗ್ಸ್‌ನಲ್ಲಿ ಪ್ರಮುಖ 6 ವಿಕೆಟ್ ಪಡೆದರು. ಅಲ್ಲದೆ ಈ ಎಡಗೈ ಸ್ಪಿನ್ನರ್ ಮೊದಲ ಇನ್ನಿಂಗ್ಸ್‌ನಲ್ಲೂ ಕಾಂಗರೂ ಪಾಳಯದ 6 ವಿಕೆಟ್‌ಗಳನ್ನು ಪಡೆದಿದ್ದರು. ಈ ಮೂಲಕ ಪ್ರಭಾತ್ ಜಯಸೂರ್ಯ ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲೇ 12 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಪ್ರಭಾತ್ ಜಯಸೂರ್ಯ ಅದ್ಭುತ ಬೌಲಿಂಗ್
ಪ್ರಭಾತ್ ಜಯಸೂರ್ಯ ಅವರು ಎರಡೂ ಇನ್ನಿಂಗ್ಸ್‌ಗಳಲ್ಲಿ ತಲಾ 6 ವಿಕೆಟ್ ಪಡೆಯುವ ಮೂಲಕ ದೊಡ್ಡ ಸಾಧನೆ ಮಾಡಿದ್ದಾರೆ. 34 ವರ್ಷಗಳ ನಂತರ, ಚೊಚ್ಚಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಇಬ್ಬ ಬೌಲರ್ ತಲಾ 6 ವಿಕೆಟ್ ಪಡೆದಿದ್ದಾರೆ. ಇದಕ್ಕೂ ಮುನ್ನ 1988ರಲ್ಲಿ ಭಾರತದ ನರೇಂದ್ರ ಹಿರ್ವಾನಿ ಚೊಚ್ಚಲ ಟೆಸ್ಟ್‌ನಲ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ ತಲಾ 8 ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಅಲ್ಲದೆ ಶ್ರೀಲಂಕಾ ಪರ ಚೊಚ್ಚಲ ಟೆಸ್ಟ್‌ನಲ್ಲಿ ಪ್ರಭಾತ್ ಜಯಸೂರ್ಯ ಅತ್ಯುತ್ತಮ ಪ್ರದರ್ಶನ ನೀಡಿದ ಬೌಲರ್ ಎನಿಸಿಕೊಂಡಿದ್ದಾರೆ. ಇವರಲ್ಲದೆ ನರೇಂದ್ರ ಹಿರ್ವಾನಿ ಮತ್ತು ಬಾಬ್ ಮಾಸ್ಸೆ ಚೊಚ್ಚಲ ಟೆಸ್ಟ್‌ನಲ್ಲಿ 16 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
12 wickets for Prabath Jayasuriya as ?? won by an innings and 39 runs in the final Test in Galle ? #SLvAUS Test series finishes 1-1 ? pic.twitter.com/55P9S96WqZ
— Sri Lanka Cricket ?? (@OfficialSLC) July 11, 2022
ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ದಿನೇಶ್ ಚಾಂಡಿಮಾಲ್
ಪ್ರಭಾತ್ ಜಯಸೂರ್ಯ ತಮ್ಮ ಅತ್ಯುತ್ತಮ ಬೌಲಿಂಗ್‌ಗಾಗಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರೆ, ದಿನೇಶ್ ಚಾಂಡಿಮಾಲ್ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು. ಚಂಡಿಮಾಲ್ ಗಾಲೆ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಅಜೇಯ ದ್ವಿಶತಕ ಗಳಿಸಿ ಶ್ರೀಲಂಕಾ ಆಸ್ಟ್ರೇಲಿಯಾ ವಿರುದ್ಧ 190 ರನ್ ಮುನ್ನಡೆ ಸಾಧಿಸಲು ನೆರವಾದರು. ಜೊತೆಗೆ ಆಸ್ಟ್ರೇಲಿಯಾ ವಿರುದ್ಧ ದ್ವಿಶತಕ ಸಿಡಿಸಿದ ಶ್ರೀಲಂಕಾದ ಮೊದಲ ಕ್ರಿಕೆಟಿಗ ಚಾಂಡಿಮಾಲ್.
WTC 2021-23 ಪಾಯಿಂಟ್ ಪಟ್ಟಿ ಹೀಗಿದೆ
ಆಸ್ಟ್ರೇಲಿಯಕ್ಕೆ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಡ್ರಾ ಆಗಿರುವುದು ದೊಡ್ಡ ಹಿನ್ನಡೆಯಾದಂತಾಗಿದೆ. ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯನ್ನು ಗೆದ್ದು ಶ್ರೀಲಂಕಾದಲ್ಲೂ ಗೆಲ್ಲುತ್ತಾರೆ ಎಂದು ನಿರೀಕ್ಷಿಸಲಾಗಿತ್ತು ಆದರೆ ಅದು ಆಗಲಿಲ್ಲ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಕುರಿತು ಮಾತನಾಡುವುದಾದರೆ, ಆಸ್ಟ್ರೇಲಿಯನ್ ತಂಡವು ಪಾಯಿಂಟ್ ಪಟ್ಟಿಯಲ್ಲಿ ಇನ್ನೂ ಮೊದಲ ಸ್ಥಾನದಲ್ಲಿದೆ. 10 ಪಂದ್ಯಗಳಲ್ಲಿ 6ರಲ್ಲಿ ಗೆದ್ದು 3 ಪಂದ್ಯ ಡ್ರಾ ಮಾಡಿಕೊಂಡಿದ್ದಾರೆ. ಆಸ್ಟ್ರೇಲಿಯಾದ PCT 77.78 ಆಗಿದೆ. ಟೀಮ್ ಇಂಡಿಯಾ 52.08 PCT ಯೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾ ಎರಡನೇ ಮತ್ತು ಪಾಕಿಸ್ತಾನ ಮೂರನೇ ಸ್ಥಾನದಲ್ಲಿದೆ.
Published On - 6:43 pm, Mon, 11 July 22