IND vs ENG: ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಭಾರತಕ್ಕೆ ಆಘಾತ; ಕೊಹ್ಲಿಗೆ ಇಂಜುರಿ! ಆಡುವುದು ಅನುಮಾನ?
IND vs ENG: ತಂಡದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಗಾಯಗೊಂಡಿದ್ದು, ಮೊದಲ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.
ಮಂಗಳವಾರದಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ಟೀಂ ಇಂಡಿಯಾ ದೊಡ್ಡ ಸಂಕಷ್ಟ ಎದುರಿಸಿದೆ. ತಂಡದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ (Virat Kohli) ಗಾಯಗೊಂಡಿದ್ದು, ಮೊದಲ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ. ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ, ಭಾರತ ಮತ್ತು ಇಂಗ್ಲೆಂಡ್ (India and England) ನಡುವಿನ ಮೂರನೇ ಟಿ20 ಪಂದ್ಯದ ವೇಳೆ ವಿರಾಟ್ ಕೊಹ್ಲಿಗೆ ತೊಡೆಸಂದು ಸೆಳೆತ ಉಂಟಾಗಿದೆ, ಇದರಿಂದಾಗಿ ಅವರು ಮೊದಲ ಏಕದಿನದಲ್ಲಿ ಆಡುವುದು ಕಷ್ಟಕರವಾಗಿದೆ. ಮೂರನೇ ಟಿ20 ಪಂದ್ಯ ಜುಲೈ 10 ಭಾನುವಾರ ನಾಟಿಂಗ್‌ಹ್ಯಾಮ್‌ನಲ್ಲಿ ನಡೆದಿದ್ದು, ಜುಲೈ 12 ಮಂಗಳವಾರದಿಂದ ಲಂಡನ್‌ನ ಓವಲ್‌ನಲ್ಲಿ ODI ಸರಣಿ ಆರಂಭವಾಗಲಿದೆ.
ಗಾಯದಿಂದ ಚೇತರಿಸಿಕೊಳ್ಳಲು ವಿಶ್ರಾಂತಿ ನೀಡುವ ಸಾಧ್ಯತೆಯಿದೆ
ಆದರೆ ಕೊಹ್ಲಿ ಗಾಯದ ಬಗ್ಗೆ ಹೆಚ್ಚಿನ ವಿವರಗಳು ಖಚಿತವಾಗಿಲ್ಲ. ಗಾಯ ಎಷ್ಟು ಗಂಭೀರವಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಇದರ ಹೊರತಾಗಿಯೂ, ಭಾರತ ತಂಡದ ಆಡಳಿತ ಮಂಡಳಿ ಮೊದಲ ಪಂದ್ಯದಲ್ಲಿ ಅವರಿಗೆ ವಿರಾಮ ನೀಡಬಹುದು ಎಂಬ ವದಂತಿ ಕೇಳಿಬರುತ್ತಿದೆ. ಆದ್ದರಿಂದ ಕೊಹ್ಲಿ ಮುಂದಿನ ಎರಡು ಪಂದ್ಯಗಳಿಗೆ ಲಭ್ಯವಿರುತ್ತಾರೆ. ಸರಣಿಯ ಎರಡನೇ ಪಂದ್ಯ ಜುಲೈ 14 ರಂದು ಲಾರ್ಡ್ಸ್‌ನಲ್ಲಿ ನಡೆಯಲಿದ್ದು, ಮೂರನೇ ಪಂದ್ಯ ಜುಲೈ 17 ರಂದು ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ.
ಯಾವ ಸಮಯದಲ್ಲಿ ಕೊಹ್ಲಿಗೆ ಈ ಗಾಯವಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ವರದಿಯ ಪ್ರಕಾರ, ಕಳೆದ ಪಂದ್ಯದ ವೇಳೆ ವಿರಾಟ್ ತೊಡೆಸಂದು ಗಾಯಕ್ಕೆ ಒಳಗಾಗಿದ್ದರು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇದು ಬ್ಯಾಟಿಂಗ್ ವೇಳೆ ನಡೆದಿದೆಯೇ ಅಥವಾ ಫೀಲ್ಡಿಂಗ್ ವೇಳೆ ನಡೆದಿದೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ. ಬಹುಶಃ ಅವರು ನಾಳೆಯ ಪಂದ್ಯವನ್ನು ಆಡುವುದಿಲ್ಲ ಎಂದು ವರದಿಯಾಗಿದೆ.
ಟೀಮ್ ಬಸ್‌ನಲ್ಲಿ ಬಂದಿಲ್ಲ
ಇಷ್ಟೇ ಅಲ್ಲ, ಮಾಹಿತಿ ಪ್ರಕಾರ ಕೊಹ್ಲಿ ನಾಟಿಂಗ್‌ಹ್ಯಾಮ್‌ನಿಂದ ಲಂಡನ್‌ಗೆ ಟೀಮ್ ಬಸ್‌ನಲ್ಲಿ ಬಂದಿಲ್ಲ. ವೈದ್ಯಕೀಯ ತಪಾಸಣೆಯು ಇದರ ಹಿಂದಿನ ಒಂದು ಕಾರಣವಾಗಿರಬಹುದು. ಸೋಮವಾರ ಏಕದಿನ ತಂಡಕ್ಕೆ ಮಾತ್ರ ಆಯ್ಕೆಯಾಗಿದ್ದ ಶಿಖರ್ ಧವನ್, ಶಾರ್ದೂಲ್ ಠಾಕೂರ್ ಮತ್ತು ಪ್ರಮುಖ್ ಕೃಷ್ಣ ಅವರು ಐಚ್ಛಿಕ ಅಭ್ಯಾಸದಲ್ಲಿ ಭಾಗವಹಿಸಿದ್ದರು. ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಐದು ಪಂದ್ಯಗಳ ಟಿ20 ಸರಣಿಗೆ ತಂಡವನ್ನು ಮಂಗಳವಾರ ಆಯ್ಕೆ ಮಾಡಲಾಗುವುದು.
ಈಗಾಗಲೇ ಕಳಪೆ ಫಾರ್ಮ್‌ನಲ್ಲಿರುವ ಕೊಹ್ಲಿಗೆ ಇದು ಒಳ್ಳೆಯ ಸುದ್ದಿಯಲ್ಲ. ಟೀಂ ಇಂಡಿಯಾ ಮತ್ತು ಕೊಹ್ಲಿ ಸ್ವತಃ ಫಾರ್ಮ್‌ಗೆ ಮರಳುವುದು ಮುಖ್ಯವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಪ್ರತಿ ಪಂದ್ಯವೂ ಅವರಿಗೆ ಬಹಳ ಮುಖ್ಯವಾಗಿದೆ. ಇದರಲ್ಲಿ ಅವರು ರನ್ ಗಳಿಸುವ ಮೂಲಕ ಕಳೆದುಕೊಂಡ ಆವೇಗವನ್ನು ಮರಳಿ ಪಡೆಯುವುದು ಮಾತ್ರವಲ್ಲದೆ ತಂಡದಲ್ಲಿ ಮತ್ತೆ ಸ್ಥಾನ ಖಚಿತಪಡಿಸಿಕೊಳ್ಳಬಹುದು.
ವೆಸ್ಟ್ ಇಂಡೀಸ್ ಸರಣಿಗೆ ತಂಡದ ಆಯ್ಕೆಯನ್ನು ಮುಂದೂಡಲಾಗಿದೆ
ಏತನ್ಮಧ್ಯೆ, ಕೊಹ್ಲಿ ಗಾಯಗೊಂಡಿರುವ ಕಾರಣ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಐದು ಪಂದ್ಯಗಳ ಟಿ20 ಸರಣಿಗೆ ತಂಡದ ಆಯ್ಕೆಯನ್ನು ಒಂದು ದಿನ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ. ಇದೀಗ ಮಂಗಳವಾರ ಆಯ್ಕೆಗಾರರು ಈ ಸರಣಿಗೆ ತಂಡವನ್ನು ಆಯ್ಕೆ ಮಾಡಲಿದ್ದಾರೆ. ಈ ಪ್ರವಾಸದಲ್ಲಿ ಏಕದಿನ ಸರಣಿಯೂ ನಡೆಯಲಿದ್ದು, ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಕೆಲವು ಆಟಗಾರರಿಗೆ ಈಗಾಗಲೇ ವಿಶ್ರಾಂತಿ ನೀಡಲಾಗಿದೆ. ಏತನ್ಮಧ್ಯೆ, ಕೊರೊನಾ ಸೋಂಕಿನ ಭೀತಿಯಿಂದಾಗಿ ವೆಸ್ಟ್ ಇಂಡೀಸ್ಗೆ ತಂಡವನ್ನು ಮ್ಯಾಂಚೆಸ್ಟರ್‌ನಿಂದ ಚಾರ್ಟರ್ಡ್ ವಿಮಾನದ ಮೂಲಕ ಕಳುಹಿಸಲು ಬಿಸಿಸಿಐ ನಿರ್ಧರಿಸಿದೆ.
Published On - 8:57 pm, Mon, 11 July 22