ಶ್ರೀಲಂಕಾ ತಂಡ ಪ್ರವಾಸಿ ಆಸ್ಟ್ರೇಲಿಯಾ (Sri Lanka vs Australia) ವಿರುದ್ಧದ ಟಿ20 ಸರಣಿಯನ್ನು ಸೋತಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಆಸ್ಟ್ರೇಲಿಯಾ 2-1 ಮುನ್ನಡೆ ಪಡೆದುಕೊಂಡು ಸರಣಿ ವಶಪಡಿಸಿಕೊಂಡಿತು. ಆದರೆ, ಸಿಂಹಳೀಯರು ಕ್ಲೀನ್ಸ್ವೀಪ್ ಮುಖಭಂಗದಿಂದ ಪಾರಾದರು. ಮೊದಲ ಎರಡೂ ಪಂದ್ಯದಲ್ಲಿ ಸೋಲುಂಡಿದ್ದ ಶ್ರೀಲಂಕಾ ಕೊನೆಯ ಪಂದ್ಯದಲ್ಲೂ ಸೋಲುವುದು ಖಚಿತವಾಗಿತ್ತು. ಆದರೆ, ಪಂದ್ಯದ ಗತಿಯನ್ನೇ ಬದಲಾಯಿಸಿದ್ದು ಲಂಕಾ ನಾಯಕ ಡಸನ್ ಶನಕ (Dasun Shanaka). ಕೇವಲ 25 ಎಸೆತಗಳಲ್ಲಿ 5 ಫೋರ್, 4 ಸಿಕ್ಸರ್ ಸಿಡಿಸಿ ಅಜೇಯ 54 ರನ್ ಚಚ್ಚಿದ ಶನಕ ತಂಡಕ್ಕೆ ರೋಚಕ ಜಯ ತಂದಿಟ್ಟರು. ಕೊನೆಯ ಮೂರು ಓವರ್ಗಳಲ್ಲಿ ಲಂಕಾಕ್ಕೆ ಗೆಲ್ಲಲು ಬರೋಬ್ಬರಿ 59 ರನ್ಗಳು ಬೇಕಾಗಿದ್ದಾಗ ಇವರು ಆಡಿದ ಸ್ಫೋಟಕ ಆಟ ಎಲ್ಲರ ಹುಬ್ಬೇರುವಂತೆ ಮಾಡಿತು. ಇದು ಇಂದು ನೂತನ ದಾಖಲೆಯೇ ಆಗಿದೆ.
ಹೌದು, ಆಸ್ಟ್ರೇಲಿಯಾ ನೀಡಿದ್ದ 177 ರನ್‌ಗಳ ಸವಾಲಿನ ಟಾರ್ಗೆಟ್ ಬೆನ್ನಟ್ಟಿದ ಶ್ರೀಲಂಕಾ 100 ರನ್ಗೂ ಮೊದಲೇ ತನ್ನ 5 ಪ್ರಮುಖ ವಿಕೆಟ್ ಕಳೆದುಕೊಂಡಿತು. ಗುಣತಿಲಕ 15 ಗಳಿಸಿ ಔಟಾದರೆ, ಪಥುಮ್ ನಿಸಾಂಕ 27 ಹಾಗೂ ಚರಿತಾ ಅಸಲಂಕ 26 ರನ್‌ಗಳ ಕಾಣಿಕೆ ನೀಡಿದರು. ಭನುಕ ರಾಜಪಕ್ಷ 17 ಹಾಗೂ ಕುಸಲ್ ಮೆಂಡಿಸ್ 6 ರನ್ಗೆ ಔಟಾದರು. ಈ ಸಂದರ್ಭ ಕ್ರೀಸ್ಗೆ ಇಳಿದ ನಾಯಕ ಡಸನ್ ಶನಕ ಯಾರೂ ಊಹಿಸದ ರೀತಿಯಲ್ಲಿ ಬ್ಯಾಟಿಂಗ್ ಪ್ರದರ್ಶಿಸಿದರು.
Dinesh Karthik: 4,4,6,6,1: ಫಿನಿಶರ್ ದಿನೇಶ್ ಕಾರ್ತಿಕ್ ಸ್ಫೋಟಕ ಆಟ ಕಂಡು ಅಭಿಮಾನಿಗಳು ಏನಂದ್ರು ನೋಡಿ
ಶ್ರೀಲಂಕಾಕ್ಕೆ ಗೆಲ್ಲಲು ಕೊನೆಯ 18 ಎಸೆತಗಳಲ್ಲಿ 59 ರನ್ಗಳು ಬೇಕಾಗಿದ್ದವು. ಆಗ ಶನಕ 12 ಎಸೆತಗಳಲ್ಲಿ 6 ರನ್ ಗಳಿಸಿ ಕ್ರೀಸ್ನಲ್ಲಿದ್ದರು. 18ನೇ ಓವರ್ ಜೋಶ್ ಹ್ಯಾಜ್ಲೆವುಡ್ ಬೌಲಿಂಗ್ ಮಾಡಲು ಬಂದರು. ಇಲ್ಲಿಂದಲೇ ಶುರುವಾಗಿದ್ದು ಶನಕ ಸ್ಫೋಟಕ ಆಟ. ಈ ಓವರ್ನಲ್ಲಿ 2 ಫೋರ್, 2 ಸಿಕ್ಸರ್ ಸಿಡಿಸಿ ಒಟ್ಟು 22 ರನ್ ಮೂಡಿಬಂದವು. ಮುಂದಿನ ಓವರ್ನಲ್ಲಿ 19 ರನ್ ಚಚ್ಚಿದರು. ಪರಿಣಾಮ ಕೊನೆಯ ಓವರ್ನಲ್ಲಿ ಗೆಲ್ಲಲು 19 ರನ್ ಬೇಕಾಗಿದ್ದವು. ಇಲ್ಲೂ ಶನಕ ಬೊಂಬಾಟ್ ಬ್ಯಾಟಿಂಗ್ ನಡೆಸಿ ತಂಡಕ್ಕೆ ಗೆಲುವು ತಂದಿಟ್ಟರು.
Chasing down 59 in the final three overs is the most scored by any team to win a game in the last three overs. ?#SLvAUS #CheerForLions pic.twitter.com/CKTVfnrcLz
— Sri Lanka Cricket ?? (@OfficialSLC) June 11, 2022
ವೈಟ್ವಾಷ್ ಮುಖಭಂಗದಿಂದ ತಂಡವನ್ನು ಪಾರು ಮಾಡಿದ ಶನಕ ಅಜೇಯ ಅರ್ಧಶತಕ ಸಿಡಿಸಿ ಲಂಕಾದ ಮಾನ ಉಳಿಸಿದರು. ಶನಕ ಆಟವನ್ನು ಆಸ್ಟ್ರೇಲಿಯಾ ಆಟಗಾರರು ಕೂಡ ಮೆಚ್ಚಿದರು. ವಿಶೇಷ ಎಂದರೆ ಇದುವರೆಗೆ ಯಾವುದೇ ತಂಡ ಕೊನೆಯ 3 ಓವರ್ನಲ್ಲಿ 59 ರನ್ಗಳನ್ನು ಚೇಸ್ ಮಾಡಿದ ಇತಿಹಾಸವಿಲ್ಲ. ಈ ಮೂಲಕ ಶ್ರೀಲಂಕಾ ನೂತನ ದಾಖಲೆ ಬರೆಯಿತು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಆಸ್ಟ್ರೇಲಿಯಕ್ಕೆ ನಾಯಕ ಆ್ಯರೋ ಫಿಂಚ್ ಮತ್ತು ಡೇವಿಡ್ ವಾರ್ನರ್ ಉತ್ತಮ ಆರಂಭ ನೀಡಿದರು. ಇವರಿಬ್ಬರ ಮೊದಲ ವಿಕೆಟ್‌ಗೆ 43 ರನ್‌ಗಳ ಜೊತೆಯಾಟ ಆಡಿದರು. ವಾರ್ನರ್ 39 ಮತ್ತು ಫಿಂಚ್ 29 ರನ್ ಗಳಿಸಿ ಔಟಾದರು. ಅಂತಿಮ ಪಂದ್ಯದಲ್ಲಿ ಮಾರ್ಕಸ್ ಸ್ಟೊಯಿನಿಸ್ 23 ಎಸೆತಗಳಲ್ಲಿ 38 ರನ್ ಗಳಿಸಿದರು. ಸ್ಟೀವ್ ಸ್ಮಿತ್ 27 ಎಸೆತಗಳಲ್ಲಿ 37 ರನ್ ಗಳಿಸಿದರು. ಆಸ್ಟ್ರೇಲಿಯಾ 20 ಓವರ್ಗೆ 5 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿತು. ಲಂಕಾ ಪರ ಮಹಿಸ್ ತಿಕ್ಷಣ 2 ವಿಕೆಟ್ ಕಿತ್ತರು.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.