17 ಎಸೆತಗಳಲ್ಲಿ 59 ರನ್: ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದ ಶ್ರೀಲಂಕಾ
SL vs AUS 3rd T20I: ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ದಸುನ್ ಶನಕ 25 ಎಸೆತಗಳಲ್ಲಿ 54 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ವೇಳೆ ಅವರು 5 ಬೌಂಡರಿ ಹಾಗೂ 4 ಸಿಕ್ಸರ್‌ಗಳನ್ನು ಬಾರಿಸಿದ್ದರು. ಇನ್ನು ಉತ್ತಮ ಸಾಥ್ ನೀಡಿದ ಕರುಣಾರತ್ನೆ 10 ಎಸೆತಗಳಲ್ಲಿ 14 ರನ್ ಗಳಿಸಿದರು.
ಶನಿವಾರ ನಡೆದ ಆಸ್ಟ್ರೇಲಿಯಾ ವಿರುದ್ದದ ಅಂತಿಮ ಟಿ20 ಪಂದ್ಯದಲ್ಲಿ (SL vs AUS 3rd T20I) ಭರ್ಜರಿಯಾಗಿ ಗೆಲ್ಲುವ ಮೂಲಕ ಶ್ರೀಲಂಕಾ ತಂಡವು ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ತಂಡವು 5 ವಿಕೆಟ್ ಕಳೆದುಕೊಂಡು 176 ರನ್ ಗಳಿಸಿತು. ಈ ಟಾರ್ಗೆಟ್ ಅನ್ನು ಬೆನ್ನತ್ತಿದ ಶ್ರೀಲಂಕಾ ತಂಡವು 108 ರನ್‌ಗಳಿಸುಷ್ಟರಲ್ಲಿ ಪ್ರಮುಖ 6 ವಿಕೆಟ್ ಕಳೆದುಕೊಂಡಿತು. ಆದರೆ ಏಕಾಂಗಿ ಹೋರಾಟ ಮುಂದುವರೆಸಿದ ಲಂಕಾ ನಾಯಕ ದಸುನ್ ಶನಕ (Dasun Shanaka) ಕೊನೆಯ ಮೂರು ಓವರ್‌ಗಳಲ್ಲಿ ಇಡೀ ಪಂದ್ಯದ ಚಿತ್ರಣವನ್ನೇ ಬದಲಿಸಿಬಿಟ್ಟರು.
17 ಓವರ್ ಮುಕ್ತಾಯದ ವೇಳೆ ಶ್ರೀಲಂಕಾ ಸ್ಕೋರ್ 6 ವಿಕೆಟ್‌ಗೆ 118 ರನ್ ಆಗಿತ್ತು. ಕೊನೆಯ 18 ಎಸೆತಗಳಲ್ಲಿ 59 ರನ್ ಗಳಿಸಬೇಕಿತ್ತು. ಅಂದರೆ ಪ್ರತಿ ಓವರ್ಗೆ 19.66 ರನ್‌ಗಳ ಅವಶ್ಯಕತೆಯಿತ್ತು. 18ನೇ ಓವರ್ ಅನ್ನು ವೇಗಿ ಜೋಸ್ ಹ್ಯಾಝಲ್ವುಡ್ ಎಸೆದರು. ಚಮಿಕಾ ಕರುಣರತ್ನೆ ಮೊದಲ ಎಸೆತದಲ್ಲಿ ಒಂದು ರನ್ ಗಳಿಸಿದರು. ಎರಡನೇ ಎಸೆತದಲ್ಲಿ ಶನಕ ಲಾಂಗ್ ಆನ್ನತ್ತ ಸಿಕ್ಸರ್ ಬಾರಿಸಿದರು. ಮೂರನೇ ಎಸೆತದಲ್ಲಿ ಮತ್ತೆ ಸಿಕ್ಸರ್ ಸಿಡಿಸಿದರು. 4ನೇ ಎಸೆತದಲ್ಲಿ ಕವರ್‌ನಲ್ಲಿ ಮತ್ತು 5ನೇ ಎಸೆತದಲ್ಲಿ ಲಾಂಗ್ ಆನ್‌ನಲ್ಲಿ ಬೌಂಡರಿ ಬಾರಿಸಿದರು. ಕೊನೆಯ ಎಸೆತದಲ್ಲಿ 1 ರನ್ ಗಳಿಸಿದರು. ಈ ಮೂಲಕ 18ನೇ ಓವರ್‌ನಲ್ಲಿ ಒಟ್ಟು 22 ರನ್‌ಗಳು ಕಲೆಹಾಕಿದರು. ಪರಿಣಾಮ ಕೊನೆಯ 12 ಎಸೆತಗಳಲ್ಲಿ 37 ರನ್‌ಗಳ ಅಗತ್ಯವಿತ್ತು.
ಈ ಬಾರಿ ಶನಕ ಸ್ಟ್ರೈಕ್ನಲ್ಲಿದ್ದರು. ವೇಗದ ಬೌಲರ್ ಜ್ಯೆ ರಿಚರ್ಡ್‌ಸನ್ ಎಸೆದ 19ನೇ ಓವರ್‌ನ ಮೊದಲ ಎಸೆತದಲ್ಲಿ ಡೀಪ್ ಮಿಡ್‌ವಿಕೆಟ್‌ನತ್ತ ಸಿಕ್ಸ್ ಬಾರಿಸಿದರು. ಎರಡನೇ ಎಸೆತದಲ್ಲಿ 1 ರನ್ ಗಳಿಸಿದರು. ಮೂರನೇ ಎಸೆತದಲ್ಲಿ ಕರುಣಾರತ್ನೆ ಕವರ್‌ನಲ್ಲಿ ಬೌಂಡರಿ ಬಾರಿಸಿದರು. ನಾಲ್ಕನೇ ಎಸೆತದಲ್ಲಿ 1 ರನ್ ಗಳಿಸಿದರು. ಶನಕ 5ನೇ ಎಸೆತದಲ್ಲಿ ಡೀಪ್ ಮಿಡ್‌ವಿಕೆಟ್‌ನತ್ತ ಬೌಂಡರಿ ಬಾರಿಸಿದರು. ಮುಂದಿನ ಬಾಲ್ ವೈಡ್. ಕೊನೆಯ ಎಸೆತದಲ್ಲಿ 1 ರನ್ ಗಳಿಸಿದರು. ಈ ಮೂಲಕ 19ನೇ ಓವರ್‌ನಲ್ಲಿ 18 ರನ್‌ಗಳು ಕಲೆಹಾಕಿದರು. ಇದಾಗ್ಯೂ ಕೊನೆಯ 6 ಎಸೆತಗಳಲ್ಲಿ 19 ರನ್‌ಗಳ ಅವಶ್ಯಕತೆಯಿತ್ತು.
ಆಸ್ಟ್ರೇಲಿಯಾ ನಾಯಕ ಆರೋನ್ ಫಿಂಚ್ ವೇಗದ ಬೌಲರ್ ಕೇನ್ ರಿಚರ್ಡ್ಸನ್ ಅವರಿಗೆ ಚೆಂಡು ನೀಡಿದರು. ಕೇನ್ ರಿಚರ್ಡ್ಸನ್ ಮೊದಲ 2 ಎಸೆತಗಳನ್ನು ವೈಡ್ ಬೌಲ್ ಮಾಡಿದರು. ಆ ಬಳಿಕ ಮೊದಲ ಎಸೆತದಲ್ಲಿ ಶನಕ ಒಂದು ರನ್ ಗಳಿಸಿದರು. ಎರಡನೇ ಎಸೆತದಲ್ಲಿ ಕರುಣರತ್ನೆ ಲೆಗ್ ಬೈ ರೂಪದಲ್ಲಿ 1 ರನ್ ಓಡಿದರು. ಮೂರನೇ ಎಸೆತದಲ್ಲಿ ಶನಕ ಬ್ಯಾಕ್‌ವರ್ಡ್ ಪಾಯಿಂಟ್‌ನಲ್ಲಿ ಬೌಂಡರಿ ಬಾರಿಸಿದರು. ನಾಲ್ಕನೇ ಎಸೆತದಲ್ಲಿ ಲಾಂಗ್ ಆಫ್ ನಲ್ಲಿ ಮತ್ತೊಮ್ಮೆ ಬೌಂಡರಿ ಬಾರಿಸಿದರು. 5ನೇ ಎಸೆತದಲ್ಲಿ ಭರ್ಜರಿ ಸಿಕ್ಸರ್ ಬಾರಿಸಿದ ಶನಕ ತಂಡದ ಸ್ಕೋರ್ ಅನ್ನು ಸಮಬಲಗೊಳಿಸಿದರು. ಕೊನೆಯ ಎಸೆತದಲ್ಲಿ 1 ರನ್ ಬೇಕಿತ್ತು. ಈ ವೇಳೆ ರಿಚರ್ಡ್ಸನ್ ವೈಡ್ ಬೌಲ್ ಎಸೆದರು. ಇದರೊಂದಿಗೆ 19.5 ಓವರ್‌ಗಳಲ್ಲಿ 177 ರನ್‌ಗಳನ್ನು ಚೇಸ್ ಮಾಡುವ ಶ್ರೀಲಂಕಾ ತಂಡವು ಭರ್ಜರಿ ಜಯ ಸಾಧಿಸಿತು.
ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ ದಸುನ್ ಶನಕ 25 ಎಸೆತಗಳಲ್ಲಿ 54 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ವೇಳೆ ಅವರು 5 ಬೌಂಡರಿ ಹಾಗೂ 4 ಸಿಕ್ಸರ್‌ಗಳನ್ನು ಬಾರಿಸಿದ್ದರು. ಇನ್ನು ಉತ್ತಮ ಸಾಥ್ ನೀಡಿದ ಕರುಣಾರತ್ನೆ 10 ಎಸೆತಗಳಲ್ಲಿ 14 ರನ್ ಗಳಿಸಿದರು. ಅಷ್ಟೇ ಅಲ್ಲದೆ ಈ ಜೋಡಿ ಕೊನೆಯ 4.1 ಓವರ್‌ಗಳಲ್ಲಿ 69 ರನ್‌ಗಳನ್ನು ಕಲೆಹಾಕಿದ್ದು ವಿಶೇಷ.
ಈ ಗೆಲುವಿನೊಂದಿಗೆ ಶ್ರೀಲಂಕಾ ತಂಡವು ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ಬರೆಯಿತು. ಕೊನೆಯ 17 ಭಎಸೆತಗಳಲ್ಲಿ ತಂಡ 59 ರನ್ ಗಳಿಸುವ ಮೂಲಕ ಕೊನೆಯ 3 ಓವರ್ ಓವರ್‌ಗಳಲ್ಲಿ ಅತ್ಯಧಿಕ ಮೊತ್ತ ಚೇಸ್ ಮಾಡಿದ ತಂಡ ಎನಿಸಿಕೊಂಡಿತು. ಅಂತಾರಾಷ್ಟ್ರೀಯ ಟಿ20ಯಲ್ಲಿ ಇದೊಂದು ಹೊಸ ದಾಖಲೆಯಾಗಿದೆ. ಈ ಹಿಂದೆ ಯಾವುದೇ ತಂಡ ಕೊನೆಯ 3 ಓವರ್‌ಗಳಲ್ಲಿ ಇಷ್ಟೊಂದು ದೊಡ್ಡ ಮೊತ್ತವನ್ನು ಚೇಸ್ ಮಾಡಿರಲಿಲ್ಲ. ಇದೀಗ ದಸುನ್ ಶನಕ ಅವರ ಆರ್ಭಟದೊಂದಿಗೆ ಶ್ರೀಲಂಕಾ ತಂಡವು ಹೊಸ ಇತಿಹಾಸ ಬರೆದಿದೆ. ಇದಾಗ್ಯೂ ಈ ಸರಣಿಯನ್ನು ಆಸ್ಟ್ರೇಲಿಯಾ ತಂಡವು 2-1 ಅಂತರದಿಂದ ವಶಪಡಿಸಿಕೊಂಡಿದೆ.
ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.