ಗಾಲೆಯಲ್ಲಿ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯುತ್ತಿದೆ. ಹವಾಮಾನ ವೈಪರೀತ್ಯದಿಂದ ನಿಗದಿತ ಸಮಯಕ್ಕೆ ಪಂದ್ಯ ಆರಂಭವಾಗಿಲ್ಲ. ಗಾಲೆಯಲ್ಲಿ ಬಿರುಗಾಳಿ ಸಹಿತ ಪ್ರಬಲ ಮಳೆಯಾಗುತ್ತಿದ್ದು, ಕ್ರೀಡಾಂಗಣದ ಒಂದು ಸ್ಟ್ಯಾಂಡ್ ಮುರಿದು ಬಿದ್ದಿದೆ. ಅದೃಷ್ಟವಶಾತ್ ಘಟನೆ ನಡೆದಾಗ ಸ್ಟ್ಯಾಂಡ್‌ನಲ್ಲಿ ಯಾರೂ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ಟೆಸ್ಟ್ ಪಂದ್ಯದ ಎರಡನೇ ದಿನದಂದು, ಗಾಲೆಯಲ್ಲಿ ಆಟ ಪ್ರಾರಂಭವಾಗುವ ಸುಮಾರು 90 ನಿಮಿಷಗಳ ಮೊದಲು, ಬಲವಾದ ಗುಡುಗು ಸಹಿತ ಮಳೆ ಪ್ರಾರಂಭವಾಯಿತು.
ಎರಡನೇ ದಿನದ ಆಟ ಸ್ಥಳೀಯ ಕಾಲಮಾನ ಬೆಳಗ್ಗೆ 10 ಗಂಟೆಗೆ ಆರಂಭವಾಗಬೇಕಿತ್ತು. ಮಳೆ ಹಾಗೂ ಜೋರಾದ ಗಾಳಿಯಿಂದಾಗಿ ಮೈದಾನದ ಸಿಬ್ಬಂದಿ ಹೊರಾಂಗಣವನ್ನು ಮುಚ್ಚಲು ಸಾಕಷ್ಟು ಹರಸಾಹಸ ಪಡಬೇಕಾಯಿತು. ಈ ಪಂದ್ಯದ ಮೊದಲ ದಿನವೇ ಒಟ್ಟು 13 ವಿಕೆಟ್‌ಗಳು ಪತನವಾಗಿದ್ದು, ಇದೀಗ ಮಳೆಯ ಕಾರಣ ಪಂದ್ಯವು ಡ್ರಾ ಆಗುವ ಸಾಧ್ಯತೆಯಿದೆ.
Situation now at Galle #SLvsAUS pic.twitter.com/4NBbulUEQn
— Anjana Kaluarachchi (@Anjana_CT) June 30, 2022
ಬುಧವಾರ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಿದ್ದು, ಆಸ್ಟ್ರೇಲಿಯದ ಬೌಲರ್‌ಗಳ ಎದುರು ಲಂಕಾ ಬ್ಯಾಟ್ಸ್‌ಮನ್‌ಗಳು ಪರದಾಡಿದ್ದರು. ಅಲ್ಲದೆ ಶ್ರೀಲಂಕಾ ತಂಡವು ಮೊದಲ ಇನಿಂಗ್ಸ್ನಲ್ಲಿ ಕೇವಲ 212 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಪ್ರಮುಖ ಸ್ಪಿನ್ನರ್ ನಾಥನ್ ಲಿಯಾನ್ 25 ಓವರ್‌ಗಳಲ್ಲಿ 90 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದ್ದರು. ಹಾಗೆಯೇ ಯುವ ಲೆಗ್ ಸ್ಪಿನ್ನರ್ ಮಿಚೆಲ್ ಸ್ವೆಪ್ಸನ್ ಕೂಡ ಲಂಕಾದ 3 ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಿ ಗಮನ ಸೆಳೆದರು.
ಇದಾದ ಬಳಿಕ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ಕೂಡ ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕ ಆಟಗಾರ ಡೇವಿಡ್ ವಾರ್ನರ್ 25 ರನ್ ಗಳಿಸಿ ಔಟಾದರೆ, 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಮಾರ್ನಸ್ ಲ್ಯಾಬುಶೇನ್ ಕೂಡ 13 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು 6 ರನ್‌ಗಳ ವೈಯಕ್ತಿಕ ಸ್ಕೋರ್‌ನಲ್ಲಿ ಸ್ಟೀವ್ ಸ್ಮಿತ್ ರನೌಟ್ ಆಗಿ ಮರಳಿದರು. ಮೊದಲ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ ತಂಡವು 3 ವಿಕೆಟ್ ನಷ್ಟಕ್ಕೆ 98 ರನ್ ಗಳಿಸಿದೆ.