IND vs ENG: ಎಲ್ಲವೂ ಬದಲಾಗಿದೆ, ಟೀಮ್ ಇಂಡಿಯಾ ಗೆಲುವು ಅಂದುಕೊಂಡಷ್ಟು ಸುಲಭವಲ್ಲ

India vs England 5th Test: ಉಭಯ ತಂಡಗಳ ಕಾರ್ಯತಂತ್ರಗಳು ಸಂಪೂರ್ಣ ಬದಲಾಗಲಿದೆ. ಅದರಲ್ಲೂ ಕಳೆದ 3 ತಿಂಗಳಿಂದ ಟೆಸ್ಟ್​ ಕ್ರಿಕೆಟ್ ಆಡದಿರುವ ಟೀಮ್ ಇಂಡಿಯಾಗೆ ಇದು ಅಗ್ನಿಪರೀಕ್ಷೆ ಎಂದರೆ ತಪ್ಪಾಗಲಾರದು.

IND vs ENG: ಎಲ್ಲವೂ ಬದಲಾಗಿದೆ, ಟೀಮ್ ಇಂಡಿಯಾ ಗೆಲುವು ಅಂದುಕೊಂಡಷ್ಟು ಸುಲಭವಲ್ಲ
India vs England 5th Test
TV9kannada Web Team

| Edited By: Zahir PY

Jun 30, 2022 | 3:14 PM

ಭಾರತ-ಇಂಗ್ಲೆಂಡ್ (India vs England) ನಡುವಣ 5ನೇ ಟೆಸ್ಟ್ ಪಂದ್ಯವು ನಾಳೆಯಿಂದ (ಜುಲೈ 1) ಶುರುವಾಗಲಿದೆ. ಈ ಪಂದ್ಯವು ಕಳೆದ ವರ್ಷ ನಡೆದ 5 ಪಂದ್ಯಗಳ ಟೆಸ್ಟ್​ ಸರಣಿಯ ಕೊನೆಯ ಪಂದ್ಯ ಎಂಬುದು ವಿಶೇಷ. ಅಂದರೆ 2021 ರಲ್ಲಿ ನಡೆದ ಟೆಸ್ಟ್​ ಸರಣಿಯ ಕೊನೆಯ ಪಂದ್ಯವನ್ನು ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು. ಇದೀಗ ಆ ಪಂದ್ಯವನ್ನು ಆಡಲಾಗುತ್ತಿದೆ. ಈ ಸರಣಿಯಲ್ಲಿ ಭಾರತ ತಂಡವು  2-1 ಅಂತರದಿಂದ ಮುನ್ನಡೆ ಹೊಂದಿದ್ದು, ಹೀಗಾಗಿ ಸರಣಿ ಗೆಲ್ಲುವ ಅವಕಾಶ ಟೀಮ್ ಇಂಡಿಯಾಗಿದೆ. ಆದರೆ ಕಳೆದ ಒಂದು ವರ್ಷದಲ್ಲಾದ ಬದಲಾವಣೆಗಳಿಂದಾಗಿ ಈ ಪಂದ್ಯವನ್ನು ಗೆಲ್ಲುವುದು ಟೀಮ್ ಇಂಡಿಯಾಗೆ (Team India) ಅಂದುಕೊಂಡಷ್ಟು ಸುಲಭವಲ್ಲ. ಏಕೆಂದರೆ ತಂಡದ ನಾಯಕನಿಂದ ಹಿಡಿದು ಎದುರಾಳಿ ತಂಡದ ಆಟಗಾರರವರೆಗೂ ಎಲ್ಲವೂ ಬದಲಾಗಿದೆ.

ಅಂದರೆ ಈ ಸರಣಿಯ ಮೊದಲ ನಾಲ್ಕು ಪಂದ್ಯಗಳಲ್ಲಿ ಟೀಮ್ ಇಂಡಿಯಾ ನಾಯಕನಾಗಿ ವಿರಾಟ್ ಕೊಹ್ಲಿ ಕಾಣಿಸಿಕೊಂಡಿದ್ದರು. ಕೊಹ್ಲಿಯ ಆಕ್ರಮಣಕಾರಿ ನಾಯಕತ್ವದಿಂದಾಗಿ ಇಂಗ್ಲೆಂಡ್ ತಂಡವನ್ನು ಭಾರತ 2 ಪಂದ್ಯಗಳಲ್ಲಿ ಸೋಲಿಸಿತ್ತು ಎಂದರೆ ತಪ್ಪಾಗಲಾರದು. ಇದೀಗ ಕಿಂಗ್ ಕೊಹ್ಲಿ ನಾಯಕತ್ವಕ್ಕೆ ರಾಜೀನಾಮೆ ನೀಡಿ ಕೇವಲ ಆಟಗಾರನಾಗಿ ತಂಡದಲ್ಲಿದ್ದಾರೆ. ಇನ್ನು ಅಂದು ಕೋಚ್ ಆಗಿದ್ದದ್ದು ರವಿಶಾಸ್ತ್ರಿ. ಆದರೆ ಇದೀಗ ತಂಡದ ತರಬೇತುದಾರರಾಗಿ ರಾಹುಲ್ ದ್ರಾವಿಡ್ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಇಂಗ್ಲೆಂಡ್ ವಿರುದ್ದದ 4ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 157 ರನ್​ಗಳಿಂದ ಜಯ ಸಾಧಿಸಿತ್ತು. ಆದರೆ ಆ ಪಂದ್ಯದಲ್ಲಿ ಕಣಕ್ಕಿಳಿದ ಮೂವರು ಆಟಗಾರರು ಈಗ ಟೀಮ್ ಇಂಡಿಯಾದಲ್ಲಿ ಇಲ್ಲ ಎಂಬುದು ವಿಶೇಷ. ಅಂದರೆ ಕೆಎಲ್ ರಾಹುಲ್ ಗಾಯಗೊಂಡು ಈ ಪಂದ್ಯದಿಂದ ಹೊರಗುಳಿದಿದ್ದಾರೆ. ಹಾಗೆಯೇ ಕಳಪೆ ಫಾರ್ಮ್​ ಕಾರಣ ಅಜಿಂಕ್ಯ ರಹಾನೆ ತಂಡದಿಂದ ಹೊರಬಿದ್ದಿದ್ದಾರೆ. ಇನ್ನು ಕೊರೋನಾ ಸೋಂಕಿಗೆ ಒಳಗಾಗಿರುವ ರೋಹಿತ್ ಶರ್ಮಾ ಕೂಡ 5ನೇ ಟೆಸ್ಟ್​ನಲ್ಲಿ ಕಣಕ್ಕಿಳಿಯುವುದು ಅನುಮಾನ ಎನ್ನಲಾಗಿದೆ. ಅಂದರೆ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲೇ ಮೂರು ಪ್ರಮುಖ ಬದಲಾವಣೆ ಕಂಡು ಬರಲಿದೆ.

ಇಷ್ಟೇ ಅಲ್ಲದೆ ಅತ್ತ ಇಂಗ್ಲೆಂಡ್ ತಂಡದಲ್ಲೂ ಮಹತ್ವದ ಬದಲಾವಣೆಗಳಾಗಿವೆ. ಅಂದು ನಾಯಕರಾಗಿದ್ದ ಜೋ ರೂಟ್ ಈಗ ಕೇವಲ ಆಟಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೆಯೇ ತಂಡದಿಂದ ಮೊಯೀನ್ ಅಲಿ, ಓಲಿ ರಾಬಿನ್ಸನ್, ಹಸೀಬ್ ಹಮೀದ್, ಸ್ಯಾಮ್ ಕರನ್ ಹೊರಬಿದ್ದಿದ್ದಾರೆ. ಅಲ್ಲದೆ ತಂಡಕ್ಕೆ ಜೇಮಿ ಓವರ್ಟನ್, ಸ್ಯಾಮ್ ಬಿಲ್ಲಿಂಗ್ಸ್​, ಬೆನ್ ಫೋಕ್ಸ್ ಎಂಟ್ರಿಯಾಗಿದೆ. ವಿಶೇಷ ಎಂದರೆ ಕಳೆದ ಬಾರಿ ತಂಡದಿಂದ ಹೊರಗುಳಿದಿದ್ದ ಬೆನ್​ ಸ್ಟೋಕ್ಸ್ ಇದೀಗ ಇಂಗ್ಲೆಂಡ್ ತಂಡದ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸ್ಟೋಕ್ಸ್​ ನಾಯಕತ್ವದಲ್ಲಿ ಇಂಗ್ಲೆಂಡ್ ತಂಡವು ಈಗಾಗಲೇ ಹಾಲಿ ವಿಶ್ವ ಟೆಸ್ಟ್ ಚಾಂಪಿಯನ್ ನ್ಯೂಜಿಲೆಂಡ್ ತಂಡವನ್ನು ಬಗ್ಗು ಬಡಿದಿದೆ.

ಹಾಗೆಯೇ ಈ ಬಾರಿ ಇಂಗ್ಲೆಂಡ್ ತಂಡದ ಕೋಚ್ ಆಗಿ ಬ್ರೆಂಡನ್ ಮೆಕಲಂ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷ ಎಂದರೆ ಮೆಕಲಂ ಎಂಟ್ರಿಯೊಂದಿಗೆ ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್​ನಲ್ಲೂ ಆಕ್ರಮಣಕಾರಿ ಆಟ ಪ್ರದರ್ಶಿಸಲಾರಂಭಿಸಿದೆ. ಅದರಲ್ಲೂ ನ್ಯೂಜಿಲೆಂಡ್ ನೀಡಿದ ಸವಾಲನ್ನು ಅದ್ಭುತವಾಗಿ ಚೇಸ್ ಮಾಡುವ ಮೂಲಕ ಮೂರು ಪಂದ್ಯಗಳನ್ನು ಲೀಲಾಜಾಲವಾಗಿ ಗೆದ್ದುಕೊಂಡಿದೆ. ಅಂದರೆ ಕಳೆದ ವರ್ಷದ ಪ್ಲ್ಯಾನ್​​ಗಳಿಗೆ ಹೋಲಿಸಿದರೆ ಇಲ್ಲಿ ಇಂಗ್ಲೆಂಡ್ ತಂಡದ ಆಟಗಾರರ ಮನಸ್ಥಿತಿಯೇ ಬದಲಾಗಿದೆ. ಕೆಲವರು ರಕ್ಷಣಾತ್ಮಕವಾಗಿ ಆಡುತ್ತಿದ್ದರೆ, ಇತ್ತ ಜಾನಿ ಬೈರ್​ಸ್ಟೋವ್, ಬೆನ್​ ಸ್ಟೋಕ್ಸ್​ಗೆ ಆಕ್ರಮಣಕಾರಿಯಾಗಿ ಬ್ಯಾಟ್ ಬೀಸಲು ಕೋಚ್ ಫುಲ್ ಫ್ರೀಡಂ ನೀಡಿದ್ದಾರೆ. ಪರಿಣಾಮ ಡ್ರಾ ಆಗಲಿದೆ ಎಂದುಕೊಂಡಿದ್ದ ನ್ಯೂಜಿಲೆಂಡ್ ವಿರುದ್ದದ 2ನೇ ಪಂದ್ಯವನ್ನು ಇಂಗ್ಲೆಂಡ್ ತಂಡವು ಚೇಸ್ ಮಾಡಿ ಗೆದ್ದುಕೊಂಡಿದೆ.

ಅಂದರೆ ಇಲ್ಲಿ ಉಭಯ ತಂಡಗಳ ಕಾರ್ಯತಂತ್ರಗಳು ಸಂಪೂರ್ಣ ಬದಲಾಗಲಿದೆ. ಅದರಲ್ಲೂ ಕಳೆದ 3 ತಿಂಗಳಿಂದ ಟೆಸ್ಟ್​ ಕ್ರಿಕೆಟ್ ಆಡದಿರುವ ಟೀಮ್ ಇಂಡಿಯಾ ಏಕೈಕ ಟೆಸ್ಟ್ ಪಂದ್ಯಕ್ಕೆ ಹೇಗೆ ಸಜ್ಜಾಗಿದೆ ಎಂಬುದೇ ಪ್ರಶ್ನೆ. ಅತ್ತ ಇಂಗ್ಲೆಂಡ್ ತಂಡವು ನ್ಯೂಜಿಲೆಂಡ್​ಗೆ ಸೋಲುಣಿಸಿ ಆತ್ಮಿವಿಶ್ವಾಸದಿಂದ ಪುಟಿದೇಳುತ್ತಿದೆ. ಹೀಗಾಗಿಯೇ ಈ ಬಾರಿ ಇಂಗ್ಲೆಂಡ್ ವಿರುದ್ದ ಗೆಲ್ಲುವುದು ಟೀಮ್ ಇಂಡಿಯಾಗೆ ಅಂದುಕೊಂಡಷ್ಟು ಸುಲಭವಲ್ಲ ಎಂದೇ ಹೇಳಬಹುದು.

ಭಾರತ ತಂಡ ಹೀಗಿದೆ: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ ಪೂಜಾರ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ.

ಇದನ್ನೂ ಓದಿ

ಇಂಗ್ಲೆಂಡ್ ತಂಡ ಹೀಗಿದೆ: ಬೆನ್‌ ಸ್ಟೋಕ್ಸ್‌ (ನಾಯಕ), ಜೋ ರೂಟ್‌, ಜೇಮ್ಸ್‌ ಆಂಡರ್ಸನ್‌, ಜಾನಿ ಬೈರ್‌ಸ್ಟೋವ್‌, ಸ್ಯಾಮ್‌ ಬಿಲ್ಲಿಂಗ್ಸ್‌, ಸ್ಟುವರ್ಟ್‌ ಬ್ರಾಡ್‌, ಹ್ಯಾರಿ ಬ್ರೂಕ್ಸ್‌, ಜಾಕ್‌ ಕ್ರಾವ್ಲೀ, ಬೆನ್‌ ಫೋಕ್ಸ್, ಜಾಕ್‌ ಲೀಚ್‌, ಅಲೆಕ್ಸ್‌ ಲೀಸ್‌, ಕ್ರೇಗ್‌ ಓವರ್ಟರ್ನ್, ಜೇಮಿ ಓವರ್ಟರ್ನ್, ಮ್ಯಾಥ್ಯೂ ಪಾಟ್ಸ್‌ ಮತ್ತು ಓಲ್ಲೀ ಪೋಪ್.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada