
ಭಾರತ ಕ್ರಿಕೆಟ್ ತಂಡಕ್ಕೆ ಹೊಸ ಫೀಲ್ಡಿಂಗ್ ಕೋಚ್ ಆಗಿ ಸುಭದೀಪ್ ಘೋಷ್ ಅವರನ್ನು ನೇಮಕ ಮಾಡಲಾಗಿದೆ. ಈ ಹಿಂದೆ ಫೀಲ್ಡಿಂಗ್ ಕೋಚ್ ಆಗಿದ್ದ ಟಿ. ದಿಲೀಪ್ ಅವರ ಒಪ್ಪಂದವನ್ನು ನವೀಕರಿಸದಿರಲು ಬಿಸಿಸಿಐ ನಿರ್ಧರಿಸಿದ ಬೆನ್ನಲ್ಲೇ, ಅವರ ಸ್ಥಾನಕ್ಕೆ ಸುಭದೀಪ್ ಅವರನ್ನು ಕ್ಷೇತ್ರರಕ್ಷಣಾ ತರಬೇತುದಾರರನ್ನಾಗಿ ನೇಮಿಸಿದೆ.
ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಮಾರ್ಗದರ್ಶನದಡಿ ಹೊಸ ಕೋಚಿಂಗ್ ಸಿಬ್ಬಂದಿ ಭಾರತ ತಂಡವನ್ನು ಮುನ್ನಡೆಸಲಿದ್ದು, ಮುಂಬರುವ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯು ಸುಭದೀಪ್ ಘೋಷ್ ಅವರ ಪಾಲಿಗೆ ಮೊದಲ ಪ್ರಮುಖ ಸವಾಲಾಗಲಿದೆ.
ಕ್ರಿಕೆಟ್ ವಲಯದಲ್ಲಿ ‘ಜಾಯ್’ ಎಂದೇ ಜನಪ್ರಿಯರಾಗಿರುವ ಸುಭದೀಪ್ ಘೋಷ್ ಅವರು ನವೆಂಬರ್ 13, 1968 ರಂದು ಅಸ್ಸಾಂನ ದಿಗ್ಬೋಯ್‌ನಲ್ಲಿ ಜನಿಸಿದರು.
ದೇಶಿ ಕ್ರಿಕೆಟ್‌ನಲ್ಲಿ ಅಸ್ಸಾಂ ಮತ್ತು ರೈಲ್ವೇಸ್ ತಂಡಗಳನ್ನು ಪ್ರತಿನಿಧಿಸಿದ್ದ ಸುಭದೀಪ್ ಘೋಷ್ , ಬಲಗೈ ಮಧ್ಯಮ ಕ್ರಮಾಂಕದ ಬ್ಯಾಟರ್ ಹಾಗೂ ಆಫ್ ಸ್ಪಿನ್ನರ್ ಆಗಿ ಕಣಕ್ಕಿಳಿದಿದ್ದರು. 1994-95 ರ ಅವಧಿಯಲ್ಲಿ ಪದಾರ್ಪಣೆ ಮಾಡಿ 2004 ರವರೆಗೆ ದೇಶೀಯ ಕ್ರಿಕೆಟ್‌ನಲ್ಲಿ ಸಕ್ರಿಯರಾಗಿದ್ದರು. ಇದೇ ವೇಳೆ ಅವರು ತಮ್ಮ ಚುರುಕಿನ ಫೀಲ್ಡಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದರು.
ತಮ್ಮ ವೃತ್ತಿಜೀವನದಲ್ಲಿ 17 ಪ್ರಥಮ ದರ್ಜೆ ಪಂದ್ಯಗಳು (316 ರನ್) ಮತ್ತು 17 ಲಿಸ್ಟ್-ಎ ಪಂದ್ಯಗಳನ್ನು (307 ರನ್) ಆಡಿದ್ದಾರೆ. ರನ್ ಗಳಿಕೆಗಿಂತ ಹೆಚ್ಚಾಗಿ ಮೈದಾನದಲ್ಲಿ ಅತ್ಯಂತ ಚುರುಕಾದ ಹಾಗೂ ಅದ್ಭುತ ಫೀಲ್ಡರ್ ಆಗಿ ಅವರು ದೇಶಿ ಕ್ರಿಕೆಟ್‌ನಲ್ಲಿ ಹೆಸರು ಮಾಡಿದ್ದರು.
ದೇಶೀಯ ನಿವೃತ್ತರಾದ ಬಳಿಕ ಸುಭದೀಪ್ ಅವರು ಬಿಸಿಸಿಐನ ತರಬೇತಿ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದಾರೆ. ಅವರ ಕೋಚಿಂಗ್ ಹಾದಿಯ ಪ್ರಮುಖ ಮೈಲಿಗಲ್ಲುಗಳು ಇಲ್ಲಿವೆ.
ಎನ್‌ಸಿಎ ಮತ್ತು ಯುವ ತಂಡಗಳ ತರಬೇತಿ: ರಾಹುಲ್ ದ್ರಾವಿಡ್ ಅವರ ಮಾರ್ಗದರ್ಶನದ ಅವಧಿಯಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA – ಪ್ರಸ್ತುತ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್) ಸೇರಿದ ಘೋಷ್, ಕಳೆದ 6-7 ವರ್ಷಗಳಿಂದ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. 2024 ರ ಅಂಡರ್-19 ವಿಶ್ವಕಪ್‌ನಲ್ಲಿ ರನ್ನರ್ ಅಪ್ ಆದ ಭಾರತ ತಂಡದ ಫೀಲ್ಡಿಂಗ್ ಕೋಚ್ ಆಗಿ ಇವರೇ ಜವಾಬ್ದಾರಿ ನಿಭಾಯಿಸಿದ್ದರು. ಜೊತೆಗೆ ಇಂಡಿಯಾ-ಎ ತಂಡಗಳೊಂದಿಗೂ ಕೆಲಸ ಮಾಡಿದ್ದಾರೆ.
ಮಹಿಳಾ ತಂಡ ಮತ್ತು ಏಷ್ಯನ್ ಗೇಮ್ಸ್: 2021 ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ಭಾರತೀಯ ಹಿರಿಯ ಮಹಿಳಾ ಕ್ರಿಕೆಟ್ ತಂಡದ ಫೀಲ್ಡಿಂಗ್ ವಿಭಾಗವನ್ನು ಮುನ್ನಡೆಸಿದ್ದರು. ಅಷ್ಟೇ ಅಲ್ಲದೆ, 2023 ರ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತೀಯ ಪುರುಷರ ತಂಡದ ಕೋಚಿಂಗ್ ಸಿಬ್ಬಂದಿಯಾಗಿಯೂ ಕಾಣಿಸಿಕೊಂಡಿದ್ದರು. ಇತ್ತೀಚೆಗಷ್ಟೇ ಝಿಂಬಾಬ್ವೆ ಪ್ರವಾಸ ಕೈಗೊಂಡಿದ್ದ ಭಾರತೀಯ ಯುವ ತಂಡಕ್ಕೂ ಇವರೇ ಫೀಲ್ಡಿಂಗ್ ತರಬೇತುದಾರರಾಗಿದ್ದರು.
ಐಪಿಎಲ್ ಅನುಭವ: ಐಪಿಎಲ್‌ನಲ್ಲೂ ಕೆಲಸ ಮಾಡಿರುವ ಅನುಭವ ಹೊಂದಿರುವ ಸುಭದೀಪ್, 2014 ರಲ್ಲಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡ ಚಾಂಪಿಯನ್ ಆದಾಗ ಆ ತಂಡದ ಕೋಚಿಂಗ್ ಸಿಬ್ಬಂದಿಯಲ್ಲಿದ್ದರು. ಬಳಿಕ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೂ ಫೀಲ್ಡಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ವೈಭವ್ನ ಅವಮಾನಿಸುವ ಉದ್ದೇಶವಿರಲಿಲ್ಲ: ಅಶ್ವಿನ್ ಸ್ಪಷ್ಟನೆ
ಒಟ್ಟಾರೆಯಾಗಿ ಹೇಳುವುದಾದರೆ, ಟೀಮ್ ಇಂಡಿಯಾದ ಫೀಲ್ಡಿಂಗ್ ಮಟ್ಟವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ಮಹತ್ತರ ಜವಾಬ್ದಾರಿ ಈಗ ಸುಭದೀಪ್ ಘೋಷ್ ಹೆಗಲಿಗೇರಿದೆ. ಮುಖ್ಯ ಕೋಚ್ ಗೌತಮ್ ಗಂಭೀರ್ ಅವರೊಂದಿಗಿನ ಹಳೆಯ ಒಡನಾಟ ಮತ್ತು ದೇಶಿ ಕ್ರಿಕೆಟ್‌ನಲ್ಲಿನ ಅವರ ಅಪಾರ ಕೋಚಿಂಗ್ ಅನುಭವವು ಭಾರತ ತಂಡಕ್ಕೆ ಹೊಸ ಚೈತನ್ಯ ನೀಡಲಿದೆಯೇ ಎಂಬುದನ್ನು ಮುಂಬರುವ ಶ್ರೀಲಂಕಾ ಸರಣಿಯಲ್ಲಿ ಕಾದು ನೋಡಬೇಕಿದೆ.