Shreyas Iyer: ಶ್ರೇಯಸ್ ಅಯ್ಯರ್ ಬ್ಯಾಟಿಂಗ್​ನ್ನು ಟೆನಿಸ್ ತಾರೆಗಳ ಹೊಡೆತಕ್ಕೆ ಹೋಲಿಸಿದ ಗವಾಸ್ಕರ್

| Updated By: ಝಾಹಿರ್ ಯೂಸುಫ್

Updated on: Feb 27, 2022 | 4:25 PM

Sunil Gavaskar: ಈ ವೇಳೆ ಅವರು ಕ್ಯಾಚ್ ಆಗುವ ಸಾಧ್ಯತೆ ತುಂಬಾ ಕಡಿಮೆಯಿತ್ತು. ಅಂದರೆ ಅವರ ಪ್ರತಿಯೊಂದು ಶಾಟ್​ಗಳು ಅತ್ಯುತ್ತಮವಾಗಿದ್ದವು ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

Shreyas Iyer: ಶ್ರೇಯಸ್ ಅಯ್ಯರ್ ಬ್ಯಾಟಿಂಗ್​ನ್ನು ಟೆನಿಸ್ ತಾರೆಗಳ ಹೊಡೆತಕ್ಕೆ ಹೋಲಿಸಿದ ಗವಾಸ್ಕರ್
Shreyas Iyer
Follow us on

ಶ್ರೀಲಂಕಾ (India vs Sri Lanka) ವಿರುದ್ಧದ ಸರಣಿಯ ಎರಡನೇ T20 ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಶ್ರೇಯಸ್ ಅಯ್ಯರ್ ಅಬ್ಬರಿಸಿದ್ದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅಯ್ಯರ್ ಅಜೇಯ ಅರ್ಧಶತಕ ಬಾರಿಸಿದ್ದರು. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ 3 ಪಂದ್ಯಗಳ ಟಿ20 ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಧರ್ಮಶಾಲಾದಲ್ಲಿ ನಡೆದ ಈ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ 44 ಎಸೆತಗಳಲ್ಲಿ ಔಟಾಗದೆ 74 ರನ್ ಗಳಿಸಿದ್ದರು. ಅಯ್ಯರ್ ಅವರ ಭರ್ಜರಿ ಬ್ಯಾಟಿಂಗ್ ಅನ್ನು ಭಾರತದ ದಂತಕಥೆ ಸುನಿಲ್ ಗವಾಸ್ಕರ್ ಹಾಡಿಹೊಗಳಿದ್ದಾರೆ.

‘ಶ್ರೇಯಸ್ ಅಯ್ಯರ್ ಅವರ ಇನ್ನಿಂಗ್ಸ್ , ಅವರ ಬ್ಯಾಟಿಂಗ್‌ನ ಬುದ್ಧಿವಂತಿಕೆಯನ್ನು ತೋರಿಸುತ್ತದೆ. ಅವರು ಶಾಟ್ ಆಡುವ ರೀತಿಯಲ್ಲಿ ಅವರ ಆತ್ಮವಿಶ್ವಾಸ ಸ್ಪಷ್ಟವಾಗಿ ಗೋಚರಿಸುತ್ತದೆ. ಅವರು ತಮ್ಮ ಕೌಶಲ್ಯಗಳಲ್ಲಿ ವಿಶ್ವಾಸ ಹೊಂದಿದ್ದಾರೆ. ಮೊದಲಿಗೆ ಸ್ಟ್ರೈಟ್ ಡ್ರೈವ್ ಮೂಲಕ ಫೋರ್ ಬಾರಿಸಿದ್ದರು. ಇದಾದ ನಂತರ ಅವರು ದೊಡ್ಡ ಹೊಡೆತಗಳಿಗೆ ಮುಂದಾಗಿದ್ದರು. ಈ ವೇಳೆ ಅವರು ಕ್ಯಾಚ್ ಆಗುವ ಸಾಧ್ಯತೆ ತುಂಬಾ ಕಡಿಮೆಯಿತ್ತು. ಅಂದರೆ ಅವರ ಪ್ರತಿಯೊಂದು ಶಾಟ್​ಗಳು ಅತ್ಯುತ್ತಮವಾಗಿದ್ದವು ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

‘ಶ್ರೇಯಸ್ ಅಯ್ಯರ್ ಅವರು ಸಾಧ್ಯವಾದಷ್ಟು ನೇರ ಶಾಟ್​ಗಳ ಮೂಲಕ ಆಡುತ್ತಿದ್ದರು. ಇದು ಟೆನಿಸ್ ತಾರೆಗಳಾದ ಜೊಕೊವಿಕ್ ಅಥವಾ ರೋಜರ್ ಫೆಡರರ್ ಅವರ ಫೋರ್‌ಹ್ಯಾಂಡ್‌ ಶಾಟ್​ನಂತೆ ಭಾಸವಾಗುತ್ತಿತ್ತು ಎಂದು ಗವಾಸ್ಕರ್ ಹೊಗಳಿದ್ದಾರೆ. ಇದೇ ವೇಳೆ ಸಂಜು ಸ್ಯಾಮ್ಸನ್ ಅವರ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಗವಾಸ್ಕರ್, ಸ್ಯಾಮ್ಸನ್ ಆಡುವುದನ್ನು ನೋಡುವುದು ಅದ್ಭುತವಾಗಿದೆ ಎಂದು ಹೇಳಿದ್ದಾರೆ.

ಈ ಪಂದ್ಯದಲ್ಲಿ​ ಟಾಸ್ ಗೆದ್ದ ಟೀಮ್ ಇಂಡಿಯಾ ಬೌಲಿಂಗ್ ಆಯ್ದುಕೊಂಡಿತು. ಆದರೆ ಶ್ರೀಲಂಕಾ ಬ್ಯಾಟ್ಸ್​ಮನ್​ಗಳು ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭಿಕ ಆಟಗಾರ ಪಾತುಮ್ ನಿಸಂಕ 75 ರನ್ ಬಾರಿಸಿದರೆ, ನಾಯಕ ದುಸನ್ ಶನಕಾ 19 ಎಸೆತಗಳಲ್ಲಿ 47 ರನ್​ ಸಿಡಿಸಿದರು. ಪರಿಣಾಮ 20 ಓವರ್​ಗಳಲ್ಲಿ ಶ್ರೀಲಂಕಾ ತಂಡವು 5 ವಿಕೆಟ್ ನಷ್ಟಕ್ಕೆ 183 ರನ್​ ಕಲೆಹಾಕಿತು.

184 ರನ್​ಗಳ ಟಾರ್ಗೆಟ್ ಪಡೆದ ಟೀಮ್ ಇಂಡಿಯಾದ ಆರಂಭ ಉತ್ತಮವಾಗಿರಲಿಲ್ಲ. ರೋಹಿತ್ ಶರ್ಮಾ 1 ರನ್​ಗಳಿಸಿ ಔಟಾದರೆ, ಇಶಾನ್ ಕಿಶನ್ 16 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಆದರೆ ಆ ಬಳಿಕ ಬಂದ ಶ್ರೇಯಸ್ ಅಯ್ಯರ್ ಸ್ಪೋಟಕ ಅರ್ಧಶತಕ ಬಾರಿಸಿ ಮಿಂಚಿದರು. ಅಯ್ಯರ್ ಉತ್ತಮ ಸಾಥ್ ನೀಡಿದ ಸಂಜು ಸ್ಯಾಮ್ಸನ್ ಕೂಡ ಅಬ್ಬರಿಸಿದ್ದರು.

ಅಂತಿಮವಾಗಿ ಶ್ರೇಯಸ್ ಅಯ್ಯರ್ 44 ಎಸೆತಗಳಲ್ಲಿ 74 ರನ್​ಗಳಿಸಿದರೆ, ರವೀಂದ್ರ ಜಡೇಜಾ 18 ಎಸೆತಗಳಲ್ಲಿ 44 ರನ್ ಬಾರಿಸಿದರು. ಅದರಂತೆ 17.1 ಓವರ್​ನಲ್ಲಿ ಟೀಮ್ ಇಂಡಿಯಾ ಗುರಿಮುಟ್ಟಿತು. ಈ ಮೂಲಕ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಟೀಮ್ ಇಂಡಿಯಾ 2-0 ಮುನ್ನಡೆ ಸಾಧಿಸಿ ಸರಣಿ ವಶಪಡಿಸಿಕೊಂಡಿದೆ.

ಇದನ್ನೂ ಓದಿ: IPL 2022 format explained: 2 ಗುಂಪು, 70 ಪಂದ್ಯಗಳು: ಹೇಗಿರಲಿದೆ IPL 2022 ಟೂರ್ನಿ

ಇದನ್ನೂ ಓದಿ: ಐಪಿಎಲ್ ಆರಂಭಿಕ ಪಂದ್ಯಗಳಿಗೆ ಈ ಆಟಗಾರರು ಅಲಭ್ಯ

ಇದನ್ನೂ ಓದಿ: IPL 2022: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶೇನ್ ವಾಟ್ಸನ್ ಎಂಟ್ರಿ..!

(Sunil Gavaskar Lauds Shreyas Iyer’s Batting)