ನೀವು ರಜೆಯನ್ನು ಆನಂದಿಸಲು ಇಲ್ಲಿಗೆ ಬಂದಿಲ್ಲ: ಬುಮ್ರಾ ವಿರುದ್ಧ ಸುನಿಲ್ ಗವಾಸ್ಕರ್ ಗರಂ

ಭಾರತ ಮತ್ತು ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಪಂದ್ಯವು ಜುಲೈ 23 ರಿಂದ ಶುರುವಾಗಲಿದೆ. ಮ್ಯಾಂಚೆಸ್ಟರ್​ನ ಓಲ್ಡ್ ಟ್ರಾಫೋರ್ಡ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯವು ಟೀಮ್ ಇಂಡಿಯಾ ಪಾಲಿಗೆ ನಿರ್ಣಾಯಕ. ಏಕೆಂದರೆ 5 ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 2-1 ಅಂತರದಿಂದ ಮುನ್ನಡೆ ಹೊಂದಿದ್ದು, ಹೀಗಾಗಿ ಮ್ಯಾಚೆಂಸ್ಟರ್​ನಲ್ಲಿ ಭಾರತ ತಂಡ ಗೆಲ್ಲುವುದು ಅಥವಾ ಡ್ರಾ ಸಾಧಿಸುವುದು ಅನಿವಾರ್ಯ.

ನೀವು ರಜೆಯನ್ನು ಆನಂದಿಸಲು ಇಲ್ಲಿಗೆ ಬಂದಿಲ್ಲ: ಬುಮ್ರಾ ವಿರುದ್ಧ ಸುನಿಲ್ ಗವಾಸ್ಕರ್ ಗರಂ
Sunil Gavaskar - Jasprit Bumrah

Updated on: Jul 17, 2025 | 1:54 PM

ಭಾರತ ಮತ್ತು ಇಂಗ್ಲೆಂಡ್ ನಡುವಣ 4ನೇ ಟೆಸ್ಟ್ ಪಂದ್ಯದಲ್ಲಿ ಜಸ್​ಪ್ರೀತ್ ಬುಮ್ರಾ ಕಣಕ್ಕಿಳಿಯಲಿದ್ದಾರಾ? ಈ ಪ್ರಶ್ನೆಗೆ ಇನ್ನೂ ಸಹ ಸ್ಪಷ್ಟ ಉತ್ತರವಿಲ್ಲ. ಏಕೆಂದರೆ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಬುಮ್ರಾ ಕೇವಲ 3 ಪಂದ್ಯಗಳಲ್ಲಿ ಮಾತ್ರ ಕಣಕ್ಕಿಳಿಯಲಿದ್ದಾರೆ ಎಂದು ಈಗಾಗಲೇ ಬಿಸಿಸಿಐ ಸ್ಪಷ್ಟಪಡಿಸಿದೆ. ಇದೇ ಕಾರಣದಿಂದಾಗಿ ಎಡ್ಜ್​ಬಾಸ್ಟನ್​ ಟೆಸ್ಟ್ ಪಂದ್ಯದಿಂದ ಬುಮ್ರಾ ಹೊರಗುಳಿದಿದ್ದರು. ಇದೀಗ ಮ್ಯಾಚೆಂಸ್ಟರ್ ವಿರುದ್ಧದ ಪಂದ್ಯದ ವೇಳೆಯೂ ಟೀಮ್ ಇಂಡಿಯಾ ವೇಗಿ ವಿಶ್ರಾಂತಿ ತೆಗೆದುಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇಂತಹದೊಂದು ಸುದ್ದಿ ಹುಟ್ಟಿಕೊಳ್ಳುತ್ತಿದ್ದಂತೆ ಟೀಮ್ ಇಂಡಿಯಾದ ಮಾಜಿ ಆಟಗಾರ ಸುನಿಲ್ ಗವಾಸ್ಕರ್, ಜಸ್​ಪ್ರೀತ್ ಬುಮ್ರಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸುನಿಲ್ ಗವಾಸ್ಕರ್ ಗರಂ:

ಸೋನಿ ಸ್ಪೋರ್ಟ್ಸ್ ಚಾನೆಲ್​ನಲ್ಲಿ ಮಾತನಾಡಿದ ಸುನಿಲ್ ಗವಾಸ್ಕರ್, ಭಾರತ ತಂಡದಲ್ಲಿರುವ ಯಾವುದೇ ಸೂಪರ್‌ಸ್ಟಾರ್ ವಿರಾಮ ತೆಗೆದುಕೊಳ್ಳಬಾರದು. ಏಕೆಂದರೆ ಅವರು ಇಲ್ಲಿಗೆ ರಜಾ ದಿನಗಳನ್ನು ಕಳೆಯಲು ಬಂದಿಲ್ಲ. ಪ್ರಮುಖ ಆಟಗಾರರು ಎಲ್ಲಾ ಪಂದ್ಯಗಳನ್ನು ಆಡಲೇಬೇಕು. ಹೀಗಾಗಿ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಯಾರಿಗೂ ವಿಶ್ರಾಂತಿ ನೀಡಬಾರದು ಎಂದು ಸುನಿಲ್ ಗವಾಸ್ಕರ್ ಆಗ್ರಹಿಸಿದ್ದಾರೆ.

ಇಲ್ಲಿ ಸುನಿಲ್ ಗವಾಸ್ಕರ್ ಸೂಪರ್ ಸ್ಟಾರ್ ಎಂದಿರುವುದು ಜಸ್​ಪ್ರೀತ್ ಬುಮ್ರಾ ಅವರನ್ನು. ಭಾರತ ತಂಡದ ಪ್ರಮುಖ ವೇಗಿಯಾಗಿರುವ ಬುಮ್ರಾ ಅವರಿಗೆ ಪದೇ ಪದೇ ವಿಶ್ರಾಂತಿ ನೀಡುತ್ತಿರುವುದಕ್ಕೆ ಗವಾಸ್ಕರ್ ಅಸಮಾಧಾನ ಹೊರಹಾಕಿದ್ದಾರೆ. ಪ್ರಮುಖ ಸರಣಿಗಳ ಪಂದ್ಯಗಳ ವೇಳೆ ವಿಶ್ರಾಂತಿ ನೀಡುತ್ತಿರುವುದರಿಂದ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ.

ಅದರಲ್ಲೂ ವಾರಗಳ ಕಾಲ ವಿಶ್ರಾಂತಿ ಸಿಕ್ಕ ಮೇಲೂ ಜಸ್​ಪ್ರೀತ್ ಬುಮ್ರಾ ಅವರನ್ನು ಪಂದ್ಯದ ವೇಳೆ ವಿಶ್ರಾಂತಿಯ ಕಾರಣ ಹೊರಗಿಡುತ್ತಿರುವುದನ್ನು ಟೀಮ್ ಇಂಡಿಯಾ ಕೋಚ್ ರವಿ ಶಾಸ್ತ್ರಿ ಕೂಡ ಪ್ರಶ್ನಿಸಿದ್ದಾರೆ. ಇದೀಗ ಸುನಿಲ್ ಗವಾಸ್ಕರ್ ಕೂಡ ಸೂಪರ್ ಸ್ಟಾರ್​ಗಳಿಗೆ ವಿಶ್ರಾಂತಿ ನೀಡಲೇಬಾರದು ಎಂದು ಪುನರುಚ್ಚರಿಸಿದ್ದಾರೆ.

ಜಸ್​ಪ್ರೀತ್ ಬುಮ್ರಾಗೆ ವಿಶ್ರಾಂತಿ ಏಕೆ?

ಜಸ್​ಪ್ರೀತ್ ಬುಮ್ರಾ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಪಂದ್ಯದ ವೇಳೆ ಬೆನ್ನು ನೋವಿನ ಸಮಸ್ಯೆಗೆ ಒಳಗಾಗಿದ್ದರು. ಈ ಸಮಸ್ಯೆಯ ಕಾರಣ ಅವರು ಚಾಂಪಿಯನ್ಸ್​ ಟ್ರೋಫಿಯಲ್ಲಿ ಕಣಕ್ಕಿಳಿದಿರಲಿಲ್ಲ. ಇತ್ತ ಬುಮ್ರಾ ಅವರ ಅನುಪಸ್ಥಿತಿಯ ನಡುವೆಯೂ ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಇದಾದ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಸಂಪೂರ್ಣ ಫಿಟ್​ನೆಸ್​ನೊಂದಿಗೆ ಕಾಣಿಸಿಕೊಂಡಿದ್ದ ಬುಮ್ರಾ ಅವರನ್ನು ಇಂಗ್ಲೆಂಡ್ ಸರಣಿಗೆ ಆಯ್ಕೆ ಮಾಡಲಾಗಿದೆ. ಆದರೆ ಅವರ ಮೇಲಿರುವ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ಇಂಗ್ಲೆಂಡ್​ ವಿರುದ್ಧದ ಸರಣಿ ನಡುವೆ ಬುಮ್ರಾಗೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ.

ಇದನ್ನೂ ಓದಿ: ಬರೋಬ್ಬರಿ 1202 ದಿನಗಳು… ಟಿ20 ಕ್ರಿಕೆಟ್​ನಲ್ಲಿ ವಿರಾಟ್ ಕೊಹ್ಲಿ ವಿಶ್ವ ದಾಖಲೆ

ಒಂದು ವೇಳೆ ಬುಮ್ರಾ ಅವರನ್ನು ಎಲ್ಲಾ ಪಂದ್ಯಗಳಲ್ಲಿ ಕಣಕ್ಕಿಳಿಸಿದರೆ ಅವರು ಮತ್ತೆ ನೋವಿನ ಸಮಸ್ಯೆಗೆ ಸಿಲುಕಬಹುದು. ಅದು ಅವರ ಟೆಸ್ಟ್ ವೃತ್ತಿಜೀವನದ ಗಂಭೀರ ಪರಿಣಾಮ ಬೀರಬಹುದು. ಇದನ್ನು ತಪ್ಪಿಸಲು ಇಂಗ್ಲೆಂಡ್ ವಿರುದ್ಧದ ಸರಣಿಯ ನಡುವೆ ಜಸ್​ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗುತ್ತಿದೆ. ಅದರಂತೆ ಮುಂದಿನ 2 ಪಂದ್ಯಗಳಲ್ಲಿ ಬುಮ್ರಾ ಕೇವಲ ಒಂದು ಮ್ಯಾಚ್ ಮಾತ್ರ ಆಡುವ ಸಾಧ್ಯತೆಯಿದೆ.