Suresh Raina: 4,4,4,4,4,4.. ಅಮೆರಿಕ ನೆಲದಲ್ಲಿ ಅಬ್ಬರಿಸಿದ ಸುರೇಶ್ ರೈನಾ! ವಿಡಿಯೋ ನೋಡಿ

|

Updated on: Oct 06, 2024 | 4:34 PM

Suresh Raina: ರೈನಾ, ಶಕೀಬ್ ಅಲ್ ಹಸನ್ ಅವರ ಒಂದೇ ಓವರ್‌ನಲ್ಲಿ 18 ರನ್ ಕಲೆಹಾಕಿದರು. ಈ ಓವರ್‌ನಲ್ಲಿ ಎರಡು ಗಗನಚುಂಬಿ ಸಿಕ್ಸರ್‌ಗಳನ್ನು ಬಾರಿಸಿದ ರೈನಾ ಬೌಂಡರಿ ಗಳಿಸುವಲ್ಲಿಯೂ ಯಶಸ್ವಿಯಾದರು. ರೈನಾ ದಾಳಿಗೆ ನಲುಗಿದ ಶಕೀಬ್ ಈ ಪಂದ್ಯದಲ್ಲಿ ಮತ್ತೆ ಬೌಲಿಂಗ್ ಮಾಡಲು ಬರಲಿಲ್ಲ.

Suresh Raina: 4,4,4,4,4,4.. ಅಮೆರಿಕ ನೆಲದಲ್ಲಿ ಅಬ್ಬರಿಸಿದ ಸುರೇಶ್ ರೈನಾ! ವಿಡಿಯೋ ನೋಡಿ
ಸುರೇಶ್ ರೈನಾ
Follow us on

ಅಮೆರಿಕ ನೆಲದಲ್ಲಿ ನಡೆಯುತ್ತಿರುವ ನ್ಯಾಷನಲ್ ಕ್ರಿಕೆಟ್ ಲೀಗ್ ಟಿ10 ಟೂರ್ನಿಯಲ್ಲಿ ಟೀಂ ಇಂಡಿಯಾದ ಮಾಜಿ ಆಟಗಾರ ಸುರೇಶ್ ರೈನಾ ಸ್ಫೋಟಕ ಇನ್ನಿಂಗ್ಸ್ ಆಡಿದ್ದಾರೆ. ಕೇವಲ 28 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 53 ರನ್ ದಾಖಲಿಸಿದ ರೈನಾ ತಮ್ಮ ತಂಡಕ್ಕೆ ಸುಲಭ ಜಯ ತಂದುಕೊಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅದರಲ್ಲೂ ಇತ್ತೀಚೆಗಷ್ಟೇ ಟಿ20 ಮಾದರಿಗೆ ವಿದಾಯ ಹೇಳಿದ್ದ ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್ ಅವರ ಒಂದೇ ಓವರ್‌ನಲ್ಲಿ ರೈನಾ ಎರಡು ಸಿಕ್ಸರ್ ಮತ್ತು ಬೌಂಡರಿ ಬಾರಿಸಿದ್ದು, ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.

ರೈನಾ ಸ್ಫೋಟಕ ಇನ್ನಿಂಗ್ಸ್

ಆರಂಭದಿಂದಲೂ ಲಯದಲ್ಲಿ ಕಾಣಿಸಿಕೊಂಡ ಸುರೇಶ್ ರೈನಾ ಕ್ರೀಸ್​ಗೆ ಬಂದ ತಕ್ಷಣ ಬೌಂಡರಿ, ಸಿಕ್ಸರ್​ಗಳ ಮಳೆಗರೆದರು. ಮೇಲೆ ಹೇಳಿದಂತೆ 28 ಎಸೆತಗಳಲ್ಲಿ 53 ರನ್ ಬಾರಿಸಿದ ರೈನಾ ಅವರ ಇನ್ನಿಂಗ್ಸ್​ನಲ್ಲಿ ಮೂರು ಸಿಕ್ಸರ್ ಮತ್ತು ಆರು ಬೌಂಡರಿಗಳು ಸೇರಿದ್ದವು. ಅಂದರೆ ರೈನಾ 9 ಎಸೆತಗಳಲ್ಲಿ ಕೇವಲ ಬೌಂಡರಿ ಹಾಗೂ ಸಿಕ್ಸರ್‌ಗಳಿಂದಲೇ 42 ರನ್ ಕಲೆಹಾಕಿದರು. ಇನ್ನೊಂದು ತುದಿಯಿಂದ ರೈನಾಗೆ ಉತ್ತಮ ಸಾಥ್ ನೀಡಿದ ಉಪುಲ್ ತರಂಗ ಕೇವಲ 23 ಎಸೆತಗಳಲ್ಲಿ 40 ರನ್‌ಗಳ ತ್ವರಿತ ಇನ್ನಿಂಗ್ಸ್ ಆಡಿದರು. ಈ ಇಬ್ಬರ ಸ್ಫೋಟಕ ಇನ್ನಿಂಗ್ಸ್​ನ ಆಧಾರದ ಮೇಲೆ ನ್ಯೂಯಾರ್ಕ್ ಲಯನ್ಸ್ ತಂಡವು ನಿಗದಿತ 10 ಓವರ್‌ಗಳಲ್ಲಿ 126 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.

ಶಕೀಬ್ ಓವರ್​ನಲ್ಲಿ 18 ರನ್

ರೈನಾ, ಶಕೀಬ್ ಅಲ್ ಹಸನ್ ಅವರ ಒಂದೇ ಓವರ್‌ನಲ್ಲಿ 18 ರನ್ ಕಲೆಹಾಕಿದರು. ಈ ಓವರ್‌ನಲ್ಲಿ ಎರಡು ಗಗನಚುಂಬಿ ಸಿಕ್ಸರ್‌ಗಳನ್ನು ಬಾರಿಸಿದ ರೈನಾ ಬೌಂಡರಿ ಗಳಿಸುವಲ್ಲಿಯೂ ಯಶಸ್ವಿಯಾದರು. ರೈನಾ ದಾಳಿಗೆ ನಲುಗಿದ ಶಕೀಬ್ ಈ ಪಂದ್ಯದಲ್ಲಿ ಮತ್ತೆ ಬೌಲಿಂಗ್ ಮಾಡಲು ಬರಲಿಲ್ಲ.

ತಂಡಕ್ಕೆ ಭರ್ಜರಿ ಜಯ

ರೈನಾ ಅವರ ಅದ್ಭುತ ಇನ್ನಿಂಗ್ಸ್‌ನ ಆಧಾರದ ಮೇಲೆ ನ್ಯೂಯಾರ್ಕ್ ಲಯನ್ಸ್ ಸಿಸಿ ತಂಡವು ಲಾಸ್ ಏಂಜಲೀಸ್ ವೇವ್ಸ್ ಸಿಸಿ ವಿರುದ್ಧ ಸುಲಭ ಜಯ ದಾಖಲಿಸುವಲ್ಲಿ ಯಶಸ್ವಿಯಾಯಿತು. ನ್ಯೂಯಾರ್ಕ್ ಲಯನ್ಸ್ ನೀಡಿದ 127ರನ್​ಗಳ ಗುರಿಗೆ ಉತ್ತರವಾಗಿ ಲಾಸ್ ಏಂಜಲೀಸ್ ವೇವ್ಸ್ ತಂಡ 7 ವಿಕೆಟ್ ಕಳೆದುಕೊಂಡು 107 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಆಡಮ್ ರೋಸಿಂಗ್ಟನ್ ಗರಿಷ್ಠ 31 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದರು. ಬೌಲಿಂಗ್‌ನಲ್ಲಿ ದುಬಾರಿಯಾಗಿದ್ದ ಶಕೀಬ್, ಬ್ಯಾಟಿಂಗ್​ನಲ್ಲಿ 16 ಎಸೆತಗಳಲ್ಲಿ ಕೇವಲ 13 ರನ್ ಗಳಿಸಲಷ್ಟೇ ಶಕ್ತರಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ