IND vs WI T20: ಟಿ20ಯಲ್ಲೂ ಭಾರತ ಶುಭಾರಂಭ: ರೋಹಿತ್ ನಾಯಕತ್ವದ ಗೆಲುವಿನ ಓಟ ಮುಂದುವರಿಕೆ

| Updated By: Vinay Bhat

Updated on: Feb 17, 2022 | 7:34 AM

India vs West Indies: ವೆಸ್ಟ್ ಇಂಡೀಸ್ ನೀಡಿದ್ದ 158 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಭಾರತಕ್ಕೆ ನಾಯಕ ರೋಹಿತ್ ಶರ್ಮಾ ಮತ್ತು ವಿಕೆಟ್ ಕೀಪರ್ ಇಶಾನ್ ಕಿಶನ್ ಉತ್ತಮ ಆರಂಭ ಒದಗಿಸಿದರು. ಇಬ್ಬರೂ 64 ರನ್‌ಗಳ ಜೊತೆಯಾಟ ಆಡಿದರು.

IND vs WI T20: ಟಿ20ಯಲ್ಲೂ ಭಾರತ ಶುಭಾರಂಭ: ರೋಹಿತ್ ನಾಯಕತ್ವದ ಗೆಲುವಿನ ಓಟ ಮುಂದುವರಿಕೆ
IND vs WI T20
Follow us on

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು ಕ್ಲೀನ್​ಸ್ವೀಪ್ ಮಾಡಿ ಸಾಧನೆ ಗೈದಿದ್ದ ಭಾರತ (India vs West Indies) ಇದೀಗ ಟಿ20 ಸರಣಿಯಲ್ಲೂ ಭರ್ಜರಿ ಶುಭಾರಂಭ ಮಾಡಿದೆ. ಬುಧವಾರ ಕೋಲ್ಕತ್ತಾದ ಈಡನ್ ಗಾರ್ಡನ್ಸ್​​ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ (Team India) 6 ವಿಕೆಟ್​​ಗಳ ಅಮೋಘ ಗೆಲುವು ಕಂಡಿತು. ಪದಾರ್ಪಣೆ ಪಂದ್ಯದಲ್ಲೇ ರವಿ ಬಿಷ್ಟೋಯ್ ಮಿಂಚಿನ ಬೌಲಿಂಗ್ ಪ್ರದರ್ಶನ ನೀಡಿದರೆ, ನಾಯಕ ರೋಹಿತ್ ಶರ್ಮಾ (Rohit Sharma) ಮತ್ತು ಇಶಾನ್ ಕಿಶನ್ ಅವರ ಬೊಂಬಾಟ್ ಬ್ಯಾಟಿಂಗ್ ನೆರವಿನಿಂದ ಸರಣಿಯಲ್ಲಿ 1-0 ಮುನ್ನಡೆ ಪಡೆದುಕೊಂಡಿದೆ. ಈ ಮೂಲಕ ಪರಿಪೂರ್ಣ ನಾಯಕನಾಗಿ ರೋಹಿತ್ ಶರ್ಮಾ ತಮ್ಮ ಗೆಲುವಿನ ಓಟವನ್ನು ಮುಂದುವರೆಸಿದ್ದಾರೆ. ಪ್ರವಾಸಿ ವೆಸ್ಟ್ ಇಂಡೀಸ್ ತಂಡ ಸತತವಾಗಿ ಸೋಲುಣ್ಣುತ್ತಿದ್ದು ಭಾರೀ ಮುಖಭಂಗಕ್ಕೆ ಒಳಗಾಗಿದೆ.

ವೆಸ್ಟ್ ಇಂಡೀಸ್ ನೀಡಿದ್ದ 158 ರನ್‌ಗಳ ಸಾಧಾರಣ ಗುರಿ ಬೆನ್ನತ್ತಿದ ಭಾರತಕ್ಕೆ ನಾಯಕ ರೋಹಿತ್ ಶರ್ಮಾ ಮತ್ತು ವಿಕೆಟ್ ಕೀಪರ್ ಇಶಾನ್ ಕಿಶನ್ ಉತ್ತಮ ಆರಂಭ ಒದಗಿಸಿದರು. ಇಬ್ಬರೂ 64 ರನ್‌ಗಳ ಜೊತೆಯಾಟ ಆಡಿದರು. ರೋಹಿತ್ ಕೇವಲ 19 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್​ನೊಂದಿಗೆ 40 ರನ್ ಚಚ್ಚಿದರು. ಇಶಾನ್ ಕಿಶನ್ 42 ಎಸೆತಗಳಲ್ಲಿ 4 ಬೌಂಡರಿಯೊಂದಿಗೆ 35 ರನ್ ಗಳಿಸಿದರು. ಮಾಜಿ ನಾಯಕ ವಿರಾಟ್ ಕೊಹ್ಲಿ(17), ರಿಷಭ್ ಪಂತ್(8) ನಿರಾಶೆಗೊಳಿಸಿದರು. ರೋಹಿತ್ ಔಟಾದ ನಂತರ ಇಶಾನ್ ಮತ್ತು ವಿರಾಟ್ ಕೊಹ್ಲಿ ಕೂಡ ಉತ್ತಮ ಆಟ ಆಡಿದರು.

ಆದರೆ 21 ರನ್‌ಗಳ ಅಂತದಲ್ಲಿ ಇಶಾನ್‌, ಕೊಹ್ಲಿ ಮತ್ತು ರಿಷಭ್ ಪಂತ್ ಔಟಾದಾಗ ಆತಂಕ ಮೂಡಿತು. ಈ ಸಂದರ್ಭದಲ್ಲಿ ಮೇಲುಗೈ ಸಾಧಿಲು ವೆಸ್ಟ್ ಇಂಡೀಸ್ ಪ್ರಯತ್ನಿಸಿತು. ಆದರೆ 48 ರನ್‌ಗಳ ಜೊತೆಯಾಟವಾಡಿ ಸೂರ್ಯಕುಮಾರ್ ಮತ್ತು ವೆಂಕಟೇಶ್‌ ಅಯ್ಯರ್ ತಂಡವನ್ನು ಗೆಲುವಿನ ದಡ ಸೇರಿಸಿದರು. ಸೂರ್ಯಕುಮಾರ್ 18 ಎಸೆಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಬಾರಿಸಿ ಅಜೇಯ 34 ರನ್ ಗಳಿಸಿದರೆ, ಅಯ್ಯರ್ 13 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸಿಡಿಸಿ 24 ರನ್ ಗಳಿಸಿ ಅಜೇಯರಾಗಿ ಉಳಿದರು. ಇನ್ನೂ ಏಳು ಎಸೆತಗಳು ಬಾಕಿ ಇರುವಾಗ ಭಾರತ ಆರು ವಿಕೆಟ್‌ಗಳ ಗೆಲುವು ದಾಖಲಿಸಿತು.

ಇದಕ್ಕೂ ಮೊದಲು ಟಾಸ್ ಜಯಿಸಿದ ಭಾರತದ ನಾಯಕ ರೋಹಿತ್ ಶರ್ಮಾ ಮೊದಲು ಫೀಲ್ಡಿಂಗ್ ಆಯ್ದುಕೊಂಡರು. ಅಗ್ರ ಕ್ರಮಾಂಕದ ಬ್ಯಾಟರ್ ನಿಕೊಲಸ್ ಪೂರನ್ (61 ರನ್, 43 ಎಸೆತ, 4 ಬೌಂಡರಿ, 5 ಸಿಕ್ಸರ್) ಏಕಾಂಗಿ ಹೋರಾಟ ನೀಡಿದ ಹೊರತಾಗಿಯೂ ಭಾರತವು ವೆಸ್ಟ್‌ಇಂಡೀಸ್ ತಂಡವನ್ನು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 157 ರನ್‌ಗೆ ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು.

ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ಯುವ ಲೆಗ್-ಸ್ಪಿನ್ನರ್ ರವಿ ಬಿಷ್ಣೋಯ್ ಅವರು ವೆಸ್ಟ್ ಇಂಡೀಸ್ ವಿರುದ್ಧದ ಟಿ-20 ಪಂದ್ಯ ತನ್ಮೂಲಕ ಅಂತರರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ಪಂದ್ಯದಲ್ಲಿ ಎರಡು ವಿಕೆಟ್ ಪಡೆದುಕೊಳ್ಳುವ ಮೂಲಕ ಬಿಷ್ಣೋಯ್ ಪದರ್ಪಣೆ ಮಾಡಿದ ಪಂದ್ಯದಲ್ಲೇ ಮಿಂಚಿದರು. ಅಲ್ಲದೆ ಪಂದ್ಯಶ್ರೇಷ್ಠ ಪ್ರಶಸ್ತಿ ಕೂಡ ತಮ್ಮದಾಗಿಸಿದರು.

IND vs WI: ಚೊಚ್ಚಲ ಪಂದ್ಯದಲ್ಲೇ ರವಿ ಬಿಷ್ಣೋಯ್ ಎಡವಟ್ಟು! ನಂತರ ಒಂದೇ ಓವರ್​ನಲ್ಲಿ 2 ವಿಕೆಟ್