Updated on:Feb 16, 2022 | 9:40 PM
ವೆಸ್ಟ್ ಇಂಡೀಸ್ ವಿರುದ್ದ ಮೊದಲ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ಪರ ಯುವ ಸ್ಪಿನ್ನರ್ ರವಿ ಬಿಷ್ಣೋಯ್ ಪದಾರ್ಪಣೆ ಮಾಡಿದ್ದರು. ಚೊಚ್ಚಲ ಬಾರಿ ಪ್ಲೇಯಿಂಗ್ 11 ನಲ್ಲಿ ಅವಕಾಶ ಪಡೆದ ಬಿಷ್ಣೋಯ್ ಸಿಕ್ಕ ಚಾನ್ಸ್ ಅನ್ನು ಸಂಪೂರ್ಣವಾಗಿ ಬಳಸಿಕೊಂಡರು.
21 ವರ್ಷದ ಯುವ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಅವರಿಗೆ ನಾಯಕ ರೋಹಿತ್ ಶರ್ಮಾ 8ನೇ ಓವರ್ ಬೌಲಿಂಗ್ ಮಾಡಲು ಚೆಂಡು ನೀಡಿದರು. ಮೊದಲ ಅಂತಾರಾಷ್ಟ್ರೀಯ ಪಂದ್ಯದ ಓವರ್ನಲ್ಲಿ ಅತ್ಯುತ್ತಮ ಲೆಗ್ ಬ್ರೇಕ್ ಮತ್ತು ಗೂಗ್ಲಿಗಳ ಮೂಲಕ ಎಲ್ಲರ ಗಮನ ಸೆಳೆದ ಬಿಷ್ಣೋಯ್ ವಿಂಡೀಸ್ ಕಾಡಿದರು.
ಅಷ್ಟೇ ಅಲ್ಲದೆ 11ನೇ ಓವರ್ನಲ್ಲಿ ರೋಸ್ಟನ್ ಚೇಸ್ ಅವರನ್ನು ಎಲ್ಬಿ ಬಲೆಗೆ ಬೀಳಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ತಮ್ಮ ವಿಕೆಟ್ ಖಾತೆ ತೆರೆದರು. ಇದರ ಬೆನ್ನಲ್ಲೇ ಸ್ಪೋಟಕ ಬ್ಯಾಟ್ಸ್ಮನ್ ರೋವ್ಮನ್ ಪೊವೆಲ್ ವಿಕೆಟ್ ಪಡೆದು ಟೀಮ್ ಇಂಡಿಯಾಗೆ 4ನೇ ಯಶಸ್ಸು ತಂದುಕೊಟ್ಟರು.
ಇನ್ನು ನಾಲ್ಕು ಓವರ್ ಬೌಲಿಂಗ್ ಮಾಡಿದ ರವಿ ಬಿಷ್ಣೋಯ್ ಕೇವಲ 17 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು. ಈ ಮೂಲಕ ಟೀಮ್ ಇಂಡಿಯಾ ಪರ ಪದಾರ್ಪಣೆ ಟಿ20 ಪಂದ್ಯದಲ್ಲಿ ಅತೀ ಕಡಿಮೆ ರನ್ ನೀಡಿದ ಸ್ಪಿನ್ನರ್ಗಳ ಪಟ್ಟಿಯಲ್ಲಿ ರವಿ ಬಿಷ್ಣೋಯ್ ಕೂಡ ಸ್ಥಾನ ಪಡೆದರು.
17 ರನ್ ನೀಡಿ 2 ವಿಕೆಟ್ ಉರುಳಿಸಿ ಬಿಷ್ಣೋಯ್ ಪದಾರ್ಪಣೆ ಪಂದ್ಯದಲ್ಲಿ ಅತೀ ಕಡಿಮೆ ನೀಡಿದ 3ನೇ ಬೌಲರ್ ಎನಿಸಿಕೊಂಡರು. ಇದಕ್ಕೂ ಮುನ್ನ ಪ್ರಗ್ಯಾನ್ ಓಜಾ 2009 ರಲ್ಲಿ ಬಾಂಗ್ಲಾದೇಶದ ವಿರುದ್ದ 21 ರನ್ ನೀಡಿ 4 ವಿಕೆಟ್ ಉರುಳಿಸಿ ದಾಖಲೆ ಬರೆದಿದ್ದರು. ಇನ್ನು 2ನೇ ಸ್ಥಾನದಲ್ಲಿ ಅಕ್ಷರ್ ಪಟೇಲ್ ಇದ್ದು, 2015 ರಲ್ಲಿ ಅಕ್ಷರ್ ಪಟೇಲ್ ಜಿಂಬಾಬ್ವೆ ವಿರುದ್ದ 17 ರನ್ ನೀಡಿ 3 ಪಡೆದಿದ್ದರು.
ಇದೀಗ ರವಿ ಬಿಷ್ಣೋಯ್ ಕೂಡ ಕೇವಲ 17 ರನ್ ನೀಡಿ 2 ವಿಕೆಟ್ ಪಡೆಯುವ ಮೂಲಕ ಪದಾರ್ಪಣೆ ಪಂದ್ಯದಲ್ಲಿ ಅತೀ ಕಡಿಮೆ ರನ್ ನೀಡಿದ ಟೀಮ್ ಇಂಡಿಯಾದ ಮೂರನೇ ಬೌಲರ್ ಎಂಬ ದಾಖಲೆಯನ್ನು ಬರೆದಿದ್ದಾರೆ.
Published On - 9:07 pm, Wed, 16 February 22