
ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾ (Team India) ಇಲ್ಲಿಯವರೆಗೆ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಏಕದಿನ ಸರಣಿಯನ್ನು ಸೋತ ನಂತರ, ಇದೀಗ ಟಿ20 ಸರಣಿ ಕೂಡ ಸೋಲಿನೊಂದಿಗೆ ಆರಂಭವಾಗಿದೆ. ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಆ ಬಳಿಕ ನಡೆದ ಎರಡನೇ ಟಿ20 ಪಂದ್ಯದಲ್ಲಿ ತಂಡದ ಬ್ಯಾಟಿಂಗ್ ವೈಫಲ್ಯದಿಂದಾಗಿ ಹೀನಾಯ ಸೋಲನ್ನು ಎದುರಿಸಬೇಕಾಯಿತು. ಆದಾಗ್ಯೂ, ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಅತಿದೊಡ್ಡ ಕಳವಳವೆಂದರೆ ಪ್ರಸ್ತುತ ನಾಯಕ ಸೂರ್ಯಕುಮಾರ್ ಯಾದವ್ (Suryakumar Yadav) ಅವರ ಕಳಪೆ ಫಾರ್ಮ್. ನಾಯಕನಾಗಿ ಯಶಸ್ಸು ಸಾಧಿಸಿರುವ ಸೂರ್ಯ ಆಟಗಾರನಾಗಿ ಮಾತ್ರ ಪದೇಪದೇ ಎಡವುತ್ತಿದ್ದಾರೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಟಿ20 ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಿತು. ಮೂರು ವರ್ಷಗಳ ನಂತರ ಈ ಮೈದಾನದಲ್ಲಿ ಟೀಂ ಇಂಡಿಯಾ ಟಿ20 ಪಂದ್ಯವನ್ನು ಆಡಿತ್ತು. ಆದರೆ 3 ವರ್ಷಗಳ ಬಳಿಕವೂ ತಂಡದ ಬ್ಯಾಟಿಂಗ್ ವಿಭಾಗದ ಪ್ರದರ್ಶನ ಸಪ್ಪೆಯಾಗಿತ್ತು. ಟೀಂ ಇಂಡಿಯಾ 3 ವರ್ಷಗಳ ಹಿಂದೆ ಅಂದರೆ 2022 ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಈ ಮೈದಾನದಲ್ಲಿ ಪಂದ್ಯವನ್ನಾಡಿತ್ತು. ಆ ಪಂದ್ಯದಲ್ಲಿ ತಂಡವು ಕೇವಲ 31 ರನ್‌ಗಳಿಗೆ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ಬಾರಿ, ನಾಲ್ಕು ವಿಕೆಟ್‌ಗಳು 32 ರನ್‌ಗಳಿಗೆ ಪತನಗೊಂಡವು. ಆ ಪಂದ್ಯದಂತೆಯೇ, ಈ ಪಂದ್ಯದಲ್ಲೂ ಸೂರ್ಯಕುಮಾರ್ ಯಾದವ್ ಮತ್ತೊಮ್ಮೆ ವಿಫಲರಾದರು.
ಈ ಪಂದ್ಯದಲ್ಲಿ ಟೀಂ ಇಂಡಿಯಾ 23 ರನ್‌ಗಳಿಗೆ ಎರಡು ವಿಕೆಟ್‌ಗಳನ್ನು ಕಳೆದುಕೊಂಡಾಗ ಕ್ರೀಸ್ಗೆ ಕಾಲಿಟ್ಟ ನಾಯಕ ಸೂರ್ಯ ಮತ್ತೊಮ್ಮೆ, ಜೋಶ್ ಹೇಜಲ್‌ವುಡ್ ವಿರುದ್ಧ ಸಂಪೂರ್ಣ ಶರಣಾದರು. ಮೊದಲ ಟಿ20 ಪಂದ್ಯದಲ್ಲಿ ಉತ್ತಮ ಲಯದಲ್ಲಿ ಕಾಣಿಸಿಕೊಂಡಿದ್ದ ಸೂರ್ಯ ಬಿಗ್ ಇನ್ನಿಂಗ್ಸ್ ಆಡುವ ಸುಳಿವು ನೀಡಿದ್ದರು. ಆದರೆ ಮಳೆಯಿಂದಾಗಿ ಆ ಪಂದ್ಯ ಪೂರ್ಣಗೊಳ್ಳಲಿಲ್ಲ. ಆದರೆ 2ನೇ ಟಿ20 ಪಂದ್ಯದಲ್ಲಿ ಸೂರ್ಯ ಬ್ಯಾಟ್ ಅಬ್ಬರಿಸಲಿಲ್ಲ. ವಾಸ್ತವವಾಗಿ ಹೇಜಲ್‌ವುಡ್ ಎಸೆದ ಎರಡನೇ ಎಸೆತದಲ್ಲಿ ವಿಕೆಟ್ ಕೀಪರ್ ಜೋಶ್ ಇಂಗ್ಲಿಸ್ ಸೂರ್ಯಕುಮಾರ್ಗೆ ಜೀವದಾನ ನೀಡಿದರು. ಆದಾಗ್ಯೂ ಈ ಜೀವದಾನದ ಲಾಭ ಪಡೆಯದ ಸೂರ್ಯ ಮುಂದಿನ ಎಸೆತದಲ್ಲಿಯೇ ಇಂಗ್ಲಿಸ್‌ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಈ ಇನ್ನಿಂಗ್ಸ್‌ನಲ್ಲಿ ಸೂರ್ಯ ನಾಲ್ಕು ಎಸೆತಗಳನ್ನು ಎದುರಿಸಿ ಕೇವಲ ಒಂದು ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು.
ಇತ್ತೀಚಿಗೆ ಮುಗಿದ ಏಷ್ಯಾಕಪ್ನಲ್ಲಿ ಫೈನಲ್ ಸೇರಿದಂತೆ ಬಹುತೇಕ ಎಲ್ಲಾ ಪಂದ್ಯಗಳಲ್ಲಿ ಸೂರ್ಯ ಸಂಪೂರ್ಣವಾಗಿ ವಿಫಲರಾದರು. ಆಡಿದ ಆರು ಇನ್ನಿಂಗ್ಸ್‌ಗಳಲ್ಲಿ ಕೇವಲ 72 ರನ್ ಗಳಿಸಿದರು. ಐಸಿಸಿ ಟಿ20 ಶ್ರೇಯಾಂಕದಲ್ಲಿ ಮಾಜಿ ನಂಬರ್ ಒನ್ ಬ್ಯಾಟ್ಸ್‌ಮನ್‌ನ ಈ ವೈಫಲ್ಯವು ನಿಖರವಾಗಿ ಒಂದು ವರ್ಷದಿಂದ ಮುಂದುವರೆದಿದೆ. ಜುಲೈ 2024 ರಲ್ಲಿ ಟಿ20 ತಂಡದ ನಾಯಕರಾದಾಗಿನಿಂದ, ಸೂರ್ಯ ಅವರ ಫಾರ್ಮ್ ಏರಿಳಿತದಿಂದ ಕೂಡಿದೆ. ಈ ಅವಧಿಯಲ್ಲಿ 22 ಇನ್ನಿಂಗ್ಸ್‌ಗಳನ್ನಾಡಿರುವ ಸೂರ್ಯ ಕೇವಲ ಎರಡು ಅರ್ಧಶತಕ ಮಾತ್ರ ಬಾರಿಸಿದ್ದಾರೆ.
2024 ರ ಅಕ್ಟೋಬರ್ 12 ರಂದು ಬಾಂಗ್ಲಾದೇಶ ವಿರುದ್ಧ ತಮ್ಮ ಕೊನೆಯ ಅರ್ಧಶತಕ ಬಾರಿಸಿದ್ದ ಸೂರ್ಯಕುಮಾರ್ಗೆ ಅಂದಿನಿಂದ ಒಂದೊಳ್ಳೆ ಇನ್ನಿಂಗ್ಸ್ ಆಡಲು ಸಾಧ್ಯವಾಗಿಲ್ಲ. ಸೂರ್ಯ ಕಳೆದ 365 ದಿನಗಳಲ್ಲಿ ಒಟ್ಟು 16 ಟಿ20 ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿದ್ದು, ಒಂದೇ ಒಂದು ಅರ್ಧಶತಕ ಬಾರಿಸಿಲ್ಲ. ಇನ್ನೂ ಆತಂಕಕಾರಿ ಸಂಗತಿಯೆಂದರೆ, ಈ 16 ಇನ್ನಿಂಗ್ಸ್‌ಗಳಲ್ಲಿ, ಅವರು ಎರಡು ಬಾರಿ ಮಾತ್ರ 25 ಕ್ಕೂ ಹೆಚ್ಚು ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವುಗಳಲ್ಲಿ ಒಂದು ಏಷ್ಯಾಕಪ್ ಗ್ರೂಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅಜೇಯ 47 ರನ್ ಆಗಿದ್ದರೆ, ಇನ್ನೊಂದು ಮಳೆಯಿಂದಾಗಿ ರದ್ದಾದ ಆಸ್ಟ್ರೇಲಿಯಾ ವಿರುದ್ಧದ ಕೊನೆಯ ಪಂದ್ಯದಲ್ಲಿ ಬಾರಿಸಿದ್ದ 39 ರನ್.
IND vs AUS: 3ನೇ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಬಿಗ್ ರಿಲೀಫ್
ಸೂರ್ಯ ಕಳೆದೊಂದು ವರ್ಷದಲ್ಲಿ ಅರ್ಧಶತಕ ಬಾರಿಸಿಲ್ಲ ಎನ್ನುವುದರ ಜೊತೆಗೆ, ಕ್ರೀಸ್‌ನಲ್ಲಿ ಉಳಿಯಲು ನಡೆಸುತ್ತಿರುವ ಹೋರಾಟವೂ ಕಳವಳಕಾರಿಯಾಗಿದೆ. 2025 ರಲ್ಲಿ, ಸೂರ್ಯ ಆಡಿರುವ 13 ಇನ್ನಿಂಗ್ಸ್‌ಗಳಲ್ಲಿ 14 ರ ಸರಾಸರಿಯಲ್ಲಿ ಕೇವಲ 140 ರನ್ ಗಳಿಸಿದ್ದಾರೆ. ಅತ್ಯಂತ ಆಶ್ಚರ್ಯಕರ ಅಂಶವೆಂದರೆ ಅವರ ಸ್ಟ್ರೈಕ್ ರೇಟ್. ಸೂರ್ಯ ಈ ರನ್‌ಗಳನ್ನು ಕೇವಲ 113 ರ ಸ್ಟ್ರೈಕ್ ರೇಟ್‌ನಲ್ಲಿ ಗಳಿಸಿದ್ದಾರೆ, ಇದು ಅವರ ವೃತ್ತಿಜೀವನದ ಸ್ಟ್ರೈಕ್ ರೇಟ್ 163 ಗಿಂತ ಗಮನಾರ್ಹವಾಗಿ ಕಡಿಮೆಯಾಗಿದೆ. ಸ್ಪಷ್ಟವಾಗಿ, ಸೂರ್ಯ ಅವರ ಕಳಪೆ ಪ್ರದರ್ಶನವು ಕೆಲವೇ ತಿಂಗಳುಗಳ ದೂರದಲ್ಲಿರುವ ಟಿ20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾಕ್ಕೆ ಒಳ್ಳೆಯ ಸುದ್ದಿಯಲ್ಲ ಎಂಬುದಂತು ಖಚಿತವಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:26 pm, Sat, 1 November 25