Suryakumar Yadav: ಟೀಮ್ ಇಂಡಿಯಾ ಪರ ಯಾರೂ ಮಾಡದ ದಾಖಲೆ ನಿರ್ಮಿಸಿದ ಸೂರ್ಯ..!
Suryakumar Yadav: ಈ ಮೂಲಕ ಟೀಮ್ ಇಂಡಿಯಾ ಪರ ಯಾರೂ ಮಾಡದ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ 2006 ರಿಂದ ಟಿ20 ಕ್ರಿಕೆಟ್ ಆಡುತ್ತಿದೆ.
Updated on: Oct 05, 2022 | 1:25 PM

ಟಿ20 ಕ್ರಿಕೆಟ್ನಲ್ಲಿ ಸಿಡಿಲಬ್ಬರದ ಸಿಡಿಲಮರಿಯಾಗಿ ಗುರುತಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ ಇದೀಗ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಪರ ಯಾರೂ ಮಾಡದ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಟೀಮ್ ಇಂಡಿಯಾ 2006 ರಿಂದ ಟಿ20 ಕ್ರಿಕೆಟ್ ಆಡುತ್ತಿದೆ. ಆದರೆ ಇದುವರೆಗೆ ಯಾವುದೇ ಬ್ಯಾಟ್ಸ್ಮನ್ ಒಂದು ವರ್ಷದ ಅವಧಿಯಲ್ಲಿ 800 ರನ್ ಕಲೆಹಾಕಿರಲಿಲ್ಲ. ಇದೀಗ 2022 ರಲ್ಲಿ ಬರೋಬ್ಬರಿ 801 ರನ್ ಬಾರಿಸುವ ಮೂಲಕ ಸೂರ್ಯಕುಮಾರ್ ಯಾದವ್ ಹೊಸ ಇತಿಹಾಸ ನಿರ್ಮಿಸಿದ್ದಾರೆ.

ಈ ಮೂಲಕ ಟಿ20 ಕ್ರಿಕೆಟ್ನಲ್ಲಿ ಒಂದೇ ವರ್ಷದಲ್ಲಿ 800+ ರನ್ ಬಾರಿಸಿದ ವಿಶ್ವದ ಮೂರನೇ ಹಾಗೂ ಭಾರತದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಒಂದೇ ವರ್ಷದಲ್ಲಿ ಅತ್ಯಧಿಕ ಸಿಕ್ಸ್ ಬಾರಿಸಿದ ದಾಖಲೆ ಕೂಡ ಸೂರ್ಯನ ಪಾಲಾಗಿದೆ.

ಸೂರ್ಯಕುಮಾರ್ ಯಾದವ್ ಈ ವರ್ಷ ಟಿ20 ಕ್ರಿಕೆಟ್ನಲ್ಲಿ ಬರೋಬ್ಬರಿ 51 ಸಿಕ್ಸ್ ಸಿಡಿಸಿದ್ದರು. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಒಂದು ವರ್ಷದಲ್ಲಿ 50 ಸಿಕ್ಸ್ಗಳನ್ನು ಬಾರಿಸಿದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.

ಇದರ ಜೊತೆಗೆ 801 ರನ್ ಬಾರಿಸುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾ ಪರ ಒಂದು ವರ್ಷದಲ್ಲಿ ಅತ್ಯಧಿಕ ರನ್ ಬಾರಿಸಿದ ವಿಶೇಷ ದಾಖಲೆಯನ್ನು ನಿರ್ಮಿಸಿದ್ದಾರೆ. ಹಾಗೆಯೇ ಈ ಸಾಧನೆ ಮಾಡಿದ ವಿಶ್ವದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಸದ್ಯ ಈ ಪಟ್ಟಿಯಲ್ಲಿ ಪಾಕಿಸ್ತಾನದ ಮೊಹಮ್ಮದ್ ರಿಜ್ವಾನ್ ಅಗ್ರಸ್ಥಾನದಲ್ಲಿದ್ದಾರೆ. ರಿಜ್ವಾನ್ 2021 ರಲ್ಲಿ ಒಟ್ಟು 1326 ರನ್ ಕಲೆಹಾಕಿದ್ದರು. ಹಾಗೆಯೇ 2021 ರಲ್ಲಿ 939 ರನ್ ಬಾರಿಸಿದ ಪಾಕ್ ತಂಡದ ನಾಯಕ ಬಾಬರ್ ಆಜಂ 2ನೇ ಸ್ಥಾನದಲ್ಲಿದ್ದಾರೆ.

ಇದೀಗ 2022 ರಲ್ಲಿ 801 ರನ್ ಬಾರಿಸಿರುವ ಸೂರ್ಯಕುಮಾರ್ ಯಾದವ್ ಟಿ20 ವಿಶ್ವಕಪ್ ಮೂಲಕ ಬಾಬರ್ ಆಜಂ ದಾಖಲೆ ಮುರಿಯಲಿದ್ದಾರಾ ಕಾದು ನೋಡಬೇಕಿದೆ.
