Suryakumar Yadav: ಅಲ್ಲಿಗೂ ನಾನು ಬರುವೆ: ಕ್ರಿಕೆಟ್ ಲೋಕದಲ್ಲಿ ದೊಡ್ಡ ಹೆಜ್ಜೆ ಇಡುವ ಸೂಚನೆ ಕೊಟ್ಟ ಸೂರ್ಯಕುಮಾರ್

India vs New Zealand, 2nd T20I: ಟೀಮ್ ಇಂಡಿಯಾದ ಏಕದಿನ ಮತ್ತು ಟಿ20 ಕ್ರಿಕೆಟ್​ನಲ್ಲಿ ಕಣಕ್ಕಿಳಿಯುತ್ತಿರುವ ಸೂರ್ಯಕುಮಾರ್ ಯಾದವ್ ಇದೀಗ ಕ್ರಿಕೆಟ್ ಲೋಕದಲ್ಲಿ ಮತ್ತೊಂದು ದೊಡ್ಡ ಹೆಜ್ಜೆ ಇಡುವ ಬಗ್ಗೆ ಸೂಚನೆ ನೀಡಿದ್ದಾರೆ.

Suryakumar Yadav: ಅಲ್ಲಿಗೂ ನಾನು ಬರುವೆ: ಕ್ರಿಕೆಟ್ ಲೋಕದಲ್ಲಿ ದೊಡ್ಡ ಹೆಜ್ಜೆ ಇಡುವ ಸೂಚನೆ ಕೊಟ್ಟ ಸೂರ್ಯಕುಮಾರ್
Suryakumar Yadav press conference
TV9kannada Web Team

| Edited By: Vinay Bhat

Nov 21, 2022 | 11:03 AM

ವಿರಾಟ್ ಕೊಹ್ಲಿ (Virat Kohli), ರೋಹಿತ್ ಶರ್ಮಾ, ಕೆಎಲ್ ರಾಹುಲ್ ಅವರಂತಹ ಅನುಭವಿ ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ನ್ಯೂಜಿಲೆಂಡ್​ನಲ್ಲಿ ಯಂಗ್ ಇಂಡಿಯ (India vs New Zealand) ದ್ವಿತೀಯ ಟಿ20 ಪಂದ್ಯದಲ್ಲಿ ಅಮೋಘ ಪ್ರದರ್ಶನ ತೋರಿದೆ. ಮೊದಲ ಟಿ20 ಪಂದ್ಯ ಮಳೆಗೆ ಆಹುತಿಯಾದರೆ, ಎರಡನೇ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav) ಆರ್ಭಟಿಸಿದರು. ವಿಶ್ವ ಶ್ರೇಷ್ಠ ಬೌಲಿಂಗ್ ಪಡೆಯನ್ನು ಹೊಂದಿರುವ ನ್ಯೂಜಿಲೆಂಡ್ ತಂಡದ ಬೆವರಿಳಿಸಿದ ಸೂರ್ಯ ಅಜೇಯ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದರು. ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್​ನಲ್ಲೂ ತಂಡಕ್ಕೆ ಆಸರೆಯಾಗಿದ್ದ ಇವರು ಇಲ್ಲೂ ಗೆಲುವು ತಂದುಕೊಡುವಲ್ಲಿ ನೆರವಾಗುತ್ತಿದ್ದಾರೆ. ಟಿ20 ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಂದೇ ವರ್ಷ ಎರಡನೇ ಶತಕ ಸಿಡಿಸಿದ ಸೂರ್ಯ ಇಂದು ಟೀಮ್ ಇಂಡಿಯಾದ ಅತ್ಯಮೂಲ್ಯ ಆಟಗಾರನಾಗಿ ಹೊರಹೊಮ್ಮಿದ್ದಾರೆ.

ಸದ್ಯ ಟೀಮ್ ಇಂಡಿಯಾದ ಏಕದಿನ ಮತ್ತು ಟಿ20 ಕ್ರಿಕೆಟ್​ನಲ್ಲಿ ಕಣಕ್ಕಿಳಿಯುತ್ತಿರುವ ಸೂರ್ಯಕುಮಾರ್ ಇದೀಗ ಕ್ರಿಕೆಟ್ ಲೋಕದಲ್ಲಿ ಮತ್ತೊಂದು ದೊಡ್ಡ ಹೆಜ್ಜೆ ಇಡುವ ಬಗ್ಗೆ ಸೂಚನೆ ನೀಡಿದ್ದಾರೆ. ಪಂದ್ಯ ಮುಗಿದ ಬಳಿಕ ಟೆಸ್ಟ್ ಕ್ರಿಕೆಟ್​ನಲ್ಲಿ ಆಡುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಸೂರ್ಯ, ನಾನು ಅಲ್ಲಿಗೂ ಬರುತ್ತೇನೆ, ಆ ಅವಕಾಶ ಕೂಡ ಸಿಗುತ್ತದೆ ಎಂದು ಹೇಳಿದ್ದಾರೆ. ”ನಾವು ಕ್ರಿಕೆಟ್ ಆಡಲು ಶುರು ಮಾಡಿದ್ದೇ ಕೆಂಪು ಚೆಂಡಿನಲ್ಲಿ. ನಾನು ಕೂಡ ನನ್ನ ಮುಂಬೈ ತಂಡದ ಪರ ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದೇನೆ. ಅದು ಒಕೆ ಅನ್ನಿಸುತ್ತದೆ. ನನಗೆ ಟೆಸ್ಟ್ ಕ್ರಿಕೆಟ್ ಬಗ್ಗೆ ಒಂದಿಷ್ಟು ಐಡಿಯಾ ಇದೆ. ನಾನು ಆ ಮಾದರಿಯ ಕ್ರಿಕೆಟ್ ಆಡಲು ಇಷ್ಟಪಡುತ್ತೇನೆ. ಆದಷ್ಟು ಬೇಗ ನನಗೆ ಟೆಸ್ಟ್ ಕ್ಯಾಪ್ ಸಿಗುತ್ತದೆ ಎಂಬ ನಂಬಿಕೆ ಇದೆ,” ಎಂದು ಸೂರ್ಯ ಹೇಳಿದ್ದಾರೆ.

“ನಾನು ಯಾವಾಗಲೂ ನನ್ನ ಹಿಂದಿನ ದಿನಗಳನ್ನು ಮೇಲುಕು ಹಾಕುತ್ತಾ ಇರುತ್ತೇನೆ. ಒಬ್ಬನೇ ಕೋಣೆಯಲ್ಲಿದ್ದಾಗ ಅಥವಾ ನನ್ನ ಹೆಂಡತಿಯೊಂದಿಗೆ ಪ್ರಯಾಣಿಸುವಾಗ, ಎರಡು-ಮೂರು ವರ್ಷಗಳ ಹಿಂದೆ ಪರಿಸ್ಥಿತಿ ಹೇಗಿತ್ತು ಎಂದು ನಾವು ಮಾತನಾಡುತ್ತೇವೆ. ಹಾಗೂ ಹಿಂದಿನ ಪರಿಸ್ಥಿತಿಗೆ ಹೋಲಿಸಿದರೆ ಈಗ ಯಾವರೀತಿ ಇದೆ, ಅಂದಿನಿಂದ ಈಗ ಏನು ಬದಲಾಗಿದೆ ಎಂದು ಚರ್ಚಿಸುತ್ತೇವೆ. ನಿಜ ಹೇಳಬೇಕೆಂದರೆ ಆ ಸಮಯದಲ್ಲಿ ಸ್ವಲ್ಪ ಹತಾಶನಾಗಿದ್ದೆ. ಆದರೆ ನಾನು ಆ ಸಂದರ್ಭದಲ್ಲಿ ಏನನ್ನು ಮಾಡಲು ಸಾಧ್ಯ ಎಂದು ಧನಾತ್ಮಕವಾಗಿ ಯೋಚಿಸುತ್ತಿದ್ದೆ. ಬ್ಯಾಟಿಂಗ್ ಮಾಡುವಾಗ ಒಂದು ಉದ್ದೇಶವಿಟ್ಟುಕೊಂಡು ಬ್ಯಾಟ್ ಮಾಡುತ್ತೇನೆ. ಮತ್ತು ಅದನ್ನು ನಾನು ತುಂಬಾ ಆನಂದಿಸುತ್ತೇನೆ. ಅಭ್ಯಾಸದ ವೇಳೆ ಮಾಡಿದ್ದನ್ನು ಇಲ್ಲಿ ಪ್ರಯೋಗಿಸುತ್ತೇನೆ” – ಸೂರ್ಯಕುಮಾರ್ ಯಾದವ್.

ಮಂಗಳವಾರ 3ನೇ ಟಿ20 : ವಿಲಿಯಮ್ಸನ್ ಔಟ್:

ಸದ್ಯ ಮೂರು ಪಂದ್ಯಗಳ ಟಿ20 ಭಾರತ 1-0 ಮುನ್ನಡೆ ಪಡೆದುಕೊಂಡಿದೆ. ಉಳಿದಿರುವ ಒಂದು ಪಂದ್ಯ ನವೆಂಬರ್ 22 ಮಂಗಳವಾರದಂದು ನೆಪಿಯರ್​ನ ಮಕ್​ಲಿನ್ ಪಾರ್ಕ್​ನಲ್ಲಿ ನಡೆಯಲಿದೆ. ಇದರಲ್ಲಿ ಭಾರತ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ. ಸೋತರೆ ಸಮಬಲ ಆಗಲಿದೆ. ಹೀಗಾಗಿ ಮಾನ ಉಳಿಸಿಕೊಳ್ಳಲು ಕಿವೀಸ್ ಪಡೆ ಈ ಪಂದ್ಯವನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಆದರೆ, ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಅಂತಿಮ ಮೂರನೇ ಟಿ20 ಪಂದ್ಯದಿಂದ ಹೊರಬಿದ್ದಿದ್ದಾರೆ.

ಇದನ್ನೂ ಓದಿ

ಪೂರ್ವ ನಿಯೋಜಿತ ವೈದ್ಯಕೀಯ ತಪಾಸಣೆ ಇರುವ ಕಾರಣ ತೃತೀಯ ಟಿ20 ಯಲ್ಲಿ ಕೇನ್ ಕಣಕ್ಕಿಳಿಯುತ್ತಿಲ್ಲ ಎಂದು ಸೋಮವಾರ ನ್ಯೂಜಿಲೆಂಡ್ ಕ್ರಿಕೆಟ್ (NZC) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇವರ ಬದಲು ಆಕ್ಲೆಂಡ್ ಏಸಸ್ ಬ್ಯಾಟ್ಸ್‌ಮನ್ ಮಾರ್ಕ್ ಚಾಪ್‌ಮನ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಏಕದಿನ ಪಂದ್ಯ ಆರಂಭವಾಗುವ ಹೊತ್ತಿಗೆ ವಿಲಿಯಮ್ಸನ್ ತಂಡವನ್ನು ಸೇರಿಕೊಳ್ಳಲಿದ್ದಾರೆ. ಕೇನ್ ಅಲಭ್ಯತೆಯಲ್ಲಿ ನ್ಯೂಜಿಲೆಂಡ್ ತಂಡವನ್ನು ಮೂರನೇ ಟಿ20 ಪಂದ್ಯದಲ್ಲಿ ಟಿಮ್ ಸೌಥೀ ನಾಯಕನಾಗಿ ಮುನ್ನಡೆಸಲಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada