ತಮಿಳುನಾಡು ವಿಕೆಟ್ ಕೀಪರ್, ಬ್ಯಾಟರ್ ನಾರಾಯನ್ ಜಗದೀಶನ್ ಸದ್ಯ ಸಾಗುತ್ತಿರುವ ವಿಜಯ್ ಹಜಾರೆ ಟ್ರೋಫಿಯಲ್ಲಿ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಈಗಾಗಲೇ ಸತತವಾಗಿ ನಾಲ್ಕು ಶತಕ ಸಿಡಿಸಿ ಅಬ್ಬರಿಸಿರುವ ಜಗದೀಶನ್ ಇದೀಗ ಇಂದು ನಡೆದ ಪಂದ್ಯದಲ್ಲೂ ಮಿಂಚಿನ ಬ್ಯಾಟಿಂಗ್ ಪ್ರದರ್ಶಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಜಗದೀಶನ್ ಅರುಣಾಚಲ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಕೇವಲ 141 ಎಸೆತಗಳಲ್ಲಿ 25 ಫೋರ್ ಹಾಗೂ 15 ಸಿಕ್ಸರ್ ಸಿಡಿಸಿ ಬರೋಬ್ಬರಿ 277 ರನ್ ಚಚ್ಚಿದ್ದಾರೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದ ಜಗದೀಶನ್ ಕೇವಲ 76 ಎಸೆತಗಳಲ್ಲಿ ಶತಕ ಬಾರಿಸಿದರು. ನಂತರ ಕೂಡ ತನ್ನ ಸ್ಫೊಟಕ ಬ್ಯಾಟಿಂಗ್ ಮುಂದುವರೆಸಿದ ಇವರು ಮುಂದಿನ 100 ರನ್ ಗಳಿಸಲು ತೆಗೆದುಕೊಂಡಿದ್ದು 38 ಎಸೆತಗಳನ್ನು. ದ್ವಿಶತಕಕ್ಕೆ ಸುಮ್ಮನಾಗದ ಜಗದೀಶನ್ ಒಟ್ಟು 277 ರನ್ ಗಳಿಸಿ 42ನೇ ಓವರ್ನಲ್ಲಿ ಔಟಾದರು. ಈ ಮೂಲಕ ರೋಹಿತ್ ಶರ್ಮಾ ದಾಖಲೆಯನ್ನೂ ಪುಡಿಗಟ್ಟಿದ್ದಾರೆ.
ರೋಹಿತ್ ಶರ್ಮಾ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ 2014ರ ನವೆಂಬರ್ 13ರಂದು ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಏಕದಿನ ಕ್ರಿಕೆಟ್‌ನ ಸಾರ್ವಕಾಲಿಕ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲಿಸಿದರರು. ಇವರು 173 ಎಸೆತಗಳಲ್ಲಿ 33 ಫೋರ್ ಮತ್ತು 9 ಅದ್ಭುತ ಸಿಕ್ಸರ್‌ಗಳನ್ನು ಸಿಡಿಸಿ 264 ರನ್ ಚಚ್ಚಿದ್ದರು. ಇದು ಏಕದಿನ ಕ್ರಿಕೆಟ್ ಲೋಕದಲ್ಲಿ ಭಾರತೀಯ ಬ್ಯಾಟರ್ ಒಬ್ಬ ಗಳಿಸಿದ ಗರಿಷ್ಠ ಮೊತ್ತವಾಗಿತ್ತು.
ಆದರೀಗ ಹಿಟ್ಮ್ಯಾನ್ ದಾಖಲೆಯನ್ನು ಜಗದೀಶನ್ 277 ರನ್ ಗಳಿಸುವ ಮೂಲಕ ಪುಡಿ ಪುಡಿ ಮಾಡಿದ್ದಾರೆ. ಅಷ್ಟೇ ಅಲ್ಲದೆ ಲಿಸ್ಟ್-A ಕ್ರಿಕೆಟ್ ಇತಿಹಾಸದಲ್ಲೇ ಒಬ್ಬ ಬ್ಯಾಟರ್ ಬಾರಿಸಿದ ಗರಿಷ್ಠ ಸ್ಕೋರ್ ಇದಾಗಿದೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಜಗದೀಶನ್ (5* ಶತಕ) ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರನಾಗಿದ್ದಾರೆ. ಜೊತೆಗೆ ಲಿಸ್ಟ್-ಎ ಪಂದ್ಯದಲ್ಲಿ ಸತತವಾಗಿ 5 ಪಂದ್ಯಗಳಲ್ಲಿ ಶತಕ ಸಿಡಿಸಿದ ಮೊದಲ ಬ್ಯಾಟರ್ ಎಂಬ ಸಾಧನೆ ಮಾಡಿದ್ದಾರೆ.
ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 2002 ರಲ್ಲಿ ಗ್ಲಾಮೋರ್ಗನ್ ವಿರುದ್ಧ ಇಂಗ್ಲೆಂಡ್ನ ಅಲಿಸ್ಟರ್ ಬ್ರೌನ್ 268 ರನ್ ಗಳಿಸಿದ್ದು ಈವರೆಗೆ ದಾಖಲಾಗಿದ್ದ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿತ್ತು. ನಂತರದ ಸ್ಥಾನದಲ್ಲಿ ರೋಹಿತ್ ಶರ್ಮಾ ಇದ್ದರು. ಆದರೀಗ ಈ ಎಲ್ಲ ದಾಖಲೆ ಮುರಿದ ಜಗದೀಶನ್ ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದಾರೆ.
196.45 ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ನಾರಾಯನ್ ಜಗದೀಶನ್ ಈಗ ಕ್ರಿಕೆಟ್ ಲೋಕದಲ್ಲಿ ಯಾರೂ ಮಾಡಿರದ ಸಾಧನೆ ಮಾಡಿದ್ದಾರೆ. ಈ ಪಂದ್ಯಕ್ಕೂ ಮುನ್ನ ಇವರು ವಿಜಯ್ ಹಜಾರೆ ಟ್ರೋಫಿಯ ಆಂಧ್ರಪ್ರದೇಶ ವಿರುದ್ಧದ ಪಂದ್ಯದಲ್ಲಿ ಅಜೇಯ 114 ರನ್, ಛತ್ತೀಸ್ಗಡ್ ವಿರುದ್ಧ 107 ರನ್, ಗೋವಾ ವಿರುದ್ಧ 168 ರನ್ ಹಾಗೂ ಹರಿಯಾಣ ವಿರುದ್ಧ 128 ರನ್ ಗಳಿಸಿದ್ದರು.
ಅರುಣಾಚಲ ವಿರುದ್ಧದ ಈ ಪಂದ್ಯದಲ್ಲಿ ಜಗದೀಶನ್ ಜೊತೆಗೆ ಸಾಯ್ ಸುದರ್ಶನ್ ಕೂಡ 102 ಎಸೆತಗಳಲ್ಲಿ 154 ರನ್ ಬಾರಿಸಿದರು. ಮೊದಲ ವಿಕೆಟ್ಗೆ ಇವರಿಬ್ಬರು ಬರೋಬ್ಬರಿ 416 ರನ್ಗಳ ಜೊತೆಯಾಟ ಆಡಿದರು. ಅಂತಿಮವಾಗಿ ತಮಿಳುನಾಡು ತಂಡ ಈ ಪಂದ್ಯದಲ್ಲಿ 50 ಓವರ್ಗೆ 2 ವಿಕೆಟ್ ನಷ್ಟಕ್ಕೆ 506 ರನ್ ಕಲೆಹಾಕಿತು.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಜಗದೀಶನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ 7 ಏಳು ಪಂದ್ಯಗಳನ್ನು ಆಡಿದ್ದರು. ಐಪಿಎಲ್ 2022 ಮೆಗಾ ಹರಾಜಿನಲ್ಲಿ ಇವರನ್ನು ಸಿಎಸ್ಕೆ ಫ್ರಾಂಚೈಸಿ ಮೂಲಬೆಲೆ 20 ಲಕ್ಷ ಕೊಟ್ಟು ಖರೀದಿ ಮಾಡಿತ್ತು.
Published On - 2:03 pm, Mon, 21 November 22