
ರಾಂಚಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ತಮ್ಮ ಶತಕದ ಮೂಲಕ ಅಭಿಮಾನಿಗಳ ಹೃದಯ ಗೆದ್ದರೆ, ಇತ್ತ ಲಕ್ನೋದಲ್ಲಿ ನಡದ ದೇಶಿ ಟೂರ್ನಿ ಸೈಯದ್ ಮುಷ್ತಾಕ್ ಅಲಿ ಟಿ20 (Syed Mushtaq Ali T20) ಟೂರ್ನಮೆಂಟ್‌ನಲ್ಲಿ 18 ವರ್ಷದ ಆಯುಷ್ ಮ್ಹಾತ್ರೆ ಮತ್ತೊಂದು ಶತಕದ ಇನ್ನಿಂಗ್ಸ್ ಆಡಿದ್ದಾರೆ. ಟೂರ್ನಮೆಂಟ್‌ನಲ್ಲಿ ಸತತ ಎರಡನೇ ಶತಕ ಬಾರಿಸಿದ ಮ್ಹಾತ್ರೆ (Ayush Mhatre) ಆಂಧ್ರಪ್ರದೇಶ ವಿರುದ್ಧದ ಪಂದ್ಯದಲ್ಲಿ ಕೇವಲ 59 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಒಂಬತ್ತು ಸಿಕ್ಸರ್‌ಗಳೊಂದಿಗೆ ಅಜೇಯ 104 ರನ್ ಸಿಡಿಸಿದರು. ಮ್ಹಾತ್ರೆ ಅವರ ಈ ಇನ್ನಿಂಗ್ಸ್‌ನ ಬಲದಿಂದ ಮುಂಬೈ, ಆಂಧ್ರಪ್ರದೇಶವನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿತು.
ಮೇಲೆ ಹೇಳಿದಂತೆ ಈ ಟೂರ್ನಿಯಲ್ಲಿ ಆಯುಷ್ ಮ್ಹಾತ್ರೆ ಸತತ ಎರಡನೇ ಶತಕ ಬಾರಿಸಿದ್ದಾರೆ. ಈ ಪಂದ್ಯಕ್ಕೂ ಮುನ್ನ ನಡೆದಿದ್ದ ವಿದರ್ಭ ವಿರುದ್ಧದ ಪಂದ್ಯದಲ್ಲಿಯೂ ಆಯುಷ್ ಶತಕ ಸಿಡಿಸಿದ್ದರು. ಆ ಪಂದ್ಯದಲ್ಲೂ ಮ್ಹಾತ್ರೆ ಅಜೇಯ ಶತಕ ಸಿಡಿಸಿ ಪೆವಿಲಿಯನ್‌ಗೆ ಮರಳಿದರು. ಕಳೆದ ಎರಡು ಟಿ20 ಪಂದ್ಯಗಳಲ್ಲಿ ಮ್ಹಾತ್ರೆ 214 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಇದರೊಂದಿಗೆ, ಮ್ಹಾತ್ರೆ ಪ್ರಸಕ್ತ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಆಯುಷ್ ಆಡಿರುವ ಮೂರು ಪಂದ್ಯಗಳಲ್ಲಿ 232 ರನ್ ಬಾರಿಸಿದ್ದಾರೆ.
ಆಯುಷ್ ಹೊರತಾಗಿ ತುಷಾರ್ ದೇಶಪಾಂಡೆ ಮತ್ತು ಸೂರ್ಯಕುಮಾರ್ ಯಾದವ್ ಕೂಡ ಮುಂಬೈ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ದೇಶಪಾಂಡೆ ನಾಲ್ಕು ಓವರ್‌ಗಳಲ್ಲಿ ಕೇವಲ 25 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಪಡೆದರೆ, ಸೂರ್ಯಕುಮಾರ್ ಯಾದವ್ 21 ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿ ತಮ್ಮ ಉತ್ತಮ ಫಾರ್ಮ್ ಅನ್ನು ಮುಂದುವರಿಸಿದರು.
18 ವರ್ಷದ ಆಯುಷ್ ಆರ್ಭಟಕ್ಕೆ ರೋಹಿತ್ ಶರ್ಮಾ ವಿಶ್ವದಾಖಲೆ ಧ್ವಂಸ
ಭಾನುವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಮತ್ತೊಂದು ಪಂದ್ಯದಲ್ಲಿ ಪಂಜಾಬ್ ಪರ ಆಡುತ್ತಿರುವ ಅಭಿಷೇಕ್ ಶರ್ಮಾ, ಶಮಿ ಮತ್ತು ಆಕಾಶ್ ದೀಪ್ರಂತಹ ಟೀಂ ಇಂಡಿಯಾ ಬೌಲರ್ಗಳನ್ನು ಒಳಗೊಂಡ ಬಂಗಾಳ ತಂಡದ ವಿರುದ್ಧ ಕೇವಲ 52 ಎಸೆತಗಳಲ್ಲಿ 148 ರನ್ ಬಾರಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 16 ಸಿಕ್ಸರ್‌ಗಳು ಮತ್ತು 8 ಬೌಂಡರಿಗಳು ಸೇರಿದ್ದವು. ಕೇವಲ 12 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅಭಿಷೇಕ್, ಕೇವಲ 32 ಎಸೆತಗಳಲ್ಲಿ ಶತಕ ಸಿಡಿಸಿದರು. ಅಭಿಷೇಕ್ ಅವರ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಪಂಜಾಬ್ ಬಂಗಾಳ ವಿರುದ್ಧ 310 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಬಂಗಾಳ ಕೇವಲ 198 ರನ್ ಗಳಿಸಲು ಸಾಧ್ಯವಾಯಿತು. ಗಮನಾರ್ಹವಾಗಿ, ತಂಡದ ನಾಯಕ ಅಭಿಮನ್ಯು ಈಶ್ವರನ್ 66 ಎಸೆತಗಳಲ್ಲಿ ಅಜೇಯ 130 ರನ್ ಗಳಿಸಿದರು. ಆದರೆ ಈಶ್ವರನ್ ಹೋರಾಟದ ಹೊರತಾಗಿಯೂ ಬಂಗಾಳ ತಂಡವು 112 ರನ್‌ಗಳಿಂದ ಪಂದ್ಯವನ್ನು ಸೋತಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ