SMAT T20: ಸರ್ವೀಸಸ್ ವಿರುದ್ಧ ಕರ್ನಾಟಕ ತಂಡಕ್ಕೆ ಭರ್ಜರಿ ಜಯ
Syed Mushtaq Ali T20 Trophy: ಈ ಗೆಲುವಿನೊಂದಿಗೆ ಗ್ರೂಪ್-ಸಿ ನಲ್ಲಿ ಆಡಿರುವ 6 ಪಂದ್ಯಗಳಲ್ಲಿ ಕರ್ನಾಟಕ ತಂಡವು 5 ಗೆಲುವು ದಾಖಲಿಸಿದಂತಾಗಿದೆ.
Syed Mushtaq Ali T20 Trophy: ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಸಿ ಗ್ರೂಪ್ನ ಪಂದ್ಯದಲ್ಲಿ ಸರ್ವೀಸ್ ವಿರುದ್ಧ ಕರ್ನಾಟಕ (Karantaka) ತಂಡವು ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ (Mayank Agarwal) ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದರು. ನಾಯಕನ ನಿರ್ಧಾರವನ್ನು ಸಮರ್ಥಿಸುವಂತೆ ದಾಳಿ ಸಂಘಟಿಸಿದ ಕರ್ನಾಟಕ ತಂಡದ ಬೌಲರ್ಗಳು ಪವರ್ಪ್ಲೇನಲ್ಲಿ ಕೇವಲ 33 ರನ್ ನೀಡಿ 2 ವಿಕೆಟ್ ಉರುಳಿಸಿದ್ದರು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ಅಮಿತ್ ಪಚ್ಚರ 24 ಎಸೆತಗಳಲ್ಲಿ 35 ರನ್ ಬಾರಿಸುವ ಮೂಲಕ ತಂಡಕ್ಕೆ ಆಸರೆಯಾದರು. ಈ ಹಂತದಲ್ಲಿ ದಾಳಿಗಿಳಿದ ಕೃಷ್ಣಪ್ಪ ಗೌತಮ್ ಅಮಿತ್ ಅವರನ್ನು ಎಲ್ಬಿ ಬಲೆಗೆ ಕೆಡವಿದರು.
ಇನ್ನು ಸರ್ವೀಸಸ್ ತಂಡದ ನಾಯಕ ರಜತ್ ಪಲಿವಾಲ್ರನ್ನು ಕೇವಲ 7 ರನ್ಗೆ ಔಟ್ ಮಾಡುವ ಮೂಲಕ ಜಗದೀಶ್ ಸುಚಿತ್ ಕರ್ನಾಟಕ ತಂಡಕ್ಕೆ ಮತ್ತೊಂದು ಯಶಸ್ಸು ತಂದುಕೊಟ್ಟರು. ಇದಾದ ಬಳಿಕ ಸರ್ವೀಸ್ ತಂಡದ ಯಾವುದೇ ಬ್ಯಾಟ್ಸ್ಮನ್ಗಳಿಗೂ ಕ್ರೀಸ್ ಕಚ್ಚಿ ನಿಲ್ಲಲು ಕರ್ನಾಟಕ ಬೌಲರ್ಗಳು ಬಿಡಲಿಲ್ಲ ಎಂದರೆ ತಪ್ಪಾಗಲಾರದು.
ಏಕೆಂದರೆ ಉತ್ತಮ ಆರಂಭ ಪಡೆದರೂ ಸರ್ವೀಸ್ ತಂಡವು ಅಂತಿಮವಾಗಿ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕಲೆಹಾಕಿದ್ದು ಕೇವಲ 129 ರನ್ಗಳು ಮಾತ್ರ.
130 ರನ್ಗಳ ಟಾರ್ಗೆಟ್ ಪಡೆದ ಕರ್ನಾಟಕ ಪರ ಯುವ ಆರಂಭಿಕ ಆಟಗಾರ ಎಲ್ಆರ್ ಚೇತನ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಒಂದೆಡೆ 16 ರನ್ಗಳಿಸಿ ಮಯಾಂಕ್ ಅಗರ್ವಾಲ್ ಔಟಾದರೆ, ಮತ್ತೊಂದೆಡೆ ಚೇತನ್ ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಂತೆ 52 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 6 ಫೋರ್ನೊಂದಿಗೆ ಅಜೇಯ 61 ರನ್ ಬಾರಿಸಿದರು.
ಇನ್ನು ಚೇತನ್ಗೆ ಉತ್ತಮ ಸಾಥ್ ನೀಡಿದ ಮನೀಷ್ ಪಾಂಡೆ ಅಜೇಯ 37 ರನ್ ಬಾರಿಸುವ ಮೂಲಕ 18.1 ಓವರ್ನಲ್ಲಿ ತಂಡವನ್ನು ಗುರಿಮುಟ್ಟಿಸಿದರು. ಈ ಮೂಲಕ ಕರ್ನಾಟಕ ತಂಡವು 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಗ್ರೂಪ್-ಸಿ ನಲ್ಲಿ ಆಡಿರುವ 6 ಪಂದ್ಯಗಳಲ್ಲಿ ಕರ್ನಾಟಕ ತಂಡವು 5 ಗೆಲುವು ದಾಖಲಿಸಿದಂತಾಗಿದೆ. ಇನ್ನು ಕರ್ನಾಟಕ ತಂಡವು ಈ ಸಲ ಸೋತಿರುವುದು ಕೇವಲ ಕೇರಳ ವಿರುದ್ಧ ಮಾತ್ರ.
ಕರ್ನಾಟಕ ಪ್ಲೇಯಿಂಗ್ 11: ಮಯಾಂಕ್ ಅಗರ್ವಾಲ್ (ನಾಯಕ) , ಮನೀಷ್ ಪಾಂಡೆ , ಅಭಿನವ್ ಮನೋಹರ್ , ಮನೋಜ್ ಭಾಂಡಗೆ , ಕೃಷ್ಣಪ್ಪ ಗೌತಮ್ , ಲುವ್ನಿತ್ ಸಿಸೋಡಿಯಾ ( ವಿಕೆಟ್ ಕೀಪರ್ ) , ಜಗದೀಶ ಸುಚಿತ್ , ವಿಜಯ್ ಕುಮಾರ್ ವೈಶಾಕ್ , ವಿಧ್ವತ್ ಕಾವೇರಪ್ಪ , ವಾಸುಕಿ ಕೌಶಿಕ್ , ಎಲ್ಆರ್ ಚೇತನ್, ಶ್ರೇಯಸ್ ಗೋಪಾಲ್
ಸರ್ವೀಸಸ್ ಪ್ಲೇಯಿಂಗ್ 11: ರಾಹುಲ್ ಸಿಂಗ್ , ಅಂಶುಲ್ ಗುಪ್ತಾ , ಅಮಿತ್ ಪಚ್ಚರ , ರಜತ್ ಪಲಿವಾಲ್ (ನಾಯಕ) , ವಿಕಾಸ್ ಹತ್ವಾಲಾ , ದೇವೇಂದ್ರ ಲೋಹ್ಚಾಬ್ ( ವಿಕೆಟ್ ಕೀಪರ್ ) , ಅರ್ಜುನ್ ಶರ್ಮಾ , ಪುಲ್ಕಿತ್ ನಾರಂಗ್ , ದಿವೇಶ್ ಪಠಾನಿಯಾ , ಮೋಹಿತ್ ಕುಮಾರ್ , ನಿತಿನ್ ಯಾದವ್ , ಪಿ ರೇಖಾಡೆ.