Syed Mushtaq Ali Trophy 2021: ಬಲಿಷ್ಠ ಮುಂಬೈಗೆ ಸೋಲುಣಿಸಿ ಕರ್ನಾಟಕ ಶುಭಾರಂಭ
Syed Mushtaq Ali Trophy 2021: ಈ ಗುರಿಯನ್ನು ಬೆನ್ನತ್ತಿದ ಮುಂಬೈ ತಂಡಕ್ಕೆ ಅಜಿಂಕ್ಯ ರಹಾನೆ ಉತ್ತಮ ಆರಂಭ ಒದಗಿಸಿದರು. 54 ಎಸೆತಗಳಲ್ಲಿ 75 ರನ್ ಬಾರಿಸಿದ ರಹಾನೆ ಒಂದು ಹಂತದಲ್ಲಿ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು.
ಸೈಯದ್ ಮುಷ್ತಾಕ್ ಅಲಿ ಟ್ರೋಫಿ- 2021 ರಲ್ಲಿ ಕರ್ನಾಟಕ ತಂಡ ಶುಭಾರಂಭ ಮಾಡಿದೆ. ಬಲಿಷ್ಠ ಮುಂಬೈ ವಿರುದ್ದದ ಪಂದ್ಯದಲ್ಲಿ 9 ರನ್ಗಳ ರೋಚಕ ಜಯ ಸಾಧಿಸುವ ಮೂಲಕ ಗೆಲುವಿನ ಖಾತೆ ತೆರೆದಿದೆ. ಗ್ರೂಪ್ -ಬಿ ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ನಾಯಕ ಅಜಿಂಕ್ಯ ರಹಾನೆ ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಕರ್ನಾಟಕಕ್ಕೆ ಉತ್ತಮ ಆರಂಭ ಸಿಕ್ಕಿರಲಿಲ್ಲ. ಮೊದಲ ಓವರ್ನ ಮೊದಲ ಎಸೆತದಲ್ಲಿ ಮಯಾಂಕ್ ಅಗರ್ವಾಲ್ ಶೂನ್ಯಕ್ಕೆ ಔಟಾದರೆ, 3ನೇ ಓವರ್ನಲ್ಲಿ 5 ರನ್ಗಳಿಸಿದ ದೇವದತ್ ಪಡಿಕ್ಕಲ್ ವಿಕೆಟ್ ಒಪ್ಪಿಸಿದರು.
ಈ ಹಂತದಲ್ಲಿ ಜೊತೆಗೂಡಿದ ನಾಯಕ ಮನೀಷ್ ಪಾಂಡೆ ಹಾಗೂ ಕರುಣ್ ನಾಯರ್ ಉತ್ತಮ ಜೊತೆಯಾಟವಾಡಿದರು. 3ನೇ ವಿಕೆಟ್ಗೆ 149 ರನ್ಗಳ ಜೊತೆಯಾಟದ ಕಾಣಿಕೆ ನೀಡಿದ ಈ ಜೋಡಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಅಷ್ಟೇ ಅಲ್ಲದೆ 19 ಓವರ್ವರೆಗೂ ವಿಕೆಟ್ ಒಪ್ಪಿಸದೇ ಸ್ಪರ್ಧಾತ್ಮಕ ಮೊತ್ತ ಪೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.
ಅದರಂತೆ 64 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 7 ಬೌಂಡರಿಯೊಂದಿಗೆ ಮನೀಷ್ ಪಾಂಡೆ 84 ರನ್ ಬಾರಿಸಿದರೆ, ಕರುಣ್ ನಾಯರ್ 2 ಸಿಕ್ಸ್ ಹಾಗೂ 6 ಬೌಂಡರಿಗಳೊಂದಿಗೆ 54 ಎಸೆತಗಳಲ್ಲಿ 72 ರನ್ ಕಲೆಹಾಕಿದರು. ಈ ಇಬ್ಬರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ತಂಡವು ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 166 ರನ್ ಪೇರಿಸಿತು.
ಈ ಗುರಿಯನ್ನು ಬೆನ್ನತ್ತಿದ ಮುಂಬೈ ತಂಡಕ್ಕೆ ಅಜಿಂಕ್ಯ ರಹಾನೆ ಉತ್ತಮ ಆರಂಭ ಒದಗಿಸಿದರು. 54 ಎಸೆತಗಳಲ್ಲಿ 75 ರನ್ ಬಾರಿಸಿದ ರಹಾನೆ ಒಂದು ಹಂತದಲ್ಲಿ ಇಡೀ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು. ಆದರೆ ಕರ್ನಾಟಕ ಬೌಲರುಗಳ ಸಾಂಘಿಕ ಪ್ರದರ್ಶನದಿಂದಾಗಿ ಮುಂಬೈ ತಂಡ ಉಳಿದ ಬ್ಯಾಟರುಗಳು ಕ್ರೀಸ್ ಕಚ್ಚಿ ನಿಲ್ಲಲಾಗಲಿಲ್ಲ. ಅದರಂತೆ ಅಂತಿಮವಾಗಿ 6 ವಿಕೆಟ್ ನಷ್ಟಕ್ಕೆ 157 ರನ್ಗಳಿಸಿ 9 ರನ್ಗಳಿಂದ ಸೋಲೊಪ್ಪಿಕೊಂಡಿತು. ಕರ್ನಾಟಕ ಪರ ಕೆಸಿ ಕಾರ್ಯಪ್ಪ 3 ವಿಕೆಟ್ ಪಡೆದು ಮಿಂಚಿದರೆ, ಕೃಷ್ಣಪ್ಪ ಗೌತಮ್ 2 ವಿಕೆಟ್ ಪಡೆದು ಗಮನ ಸೆಳೆದರು.
ಕರ್ನಾಟಕ ಪ್ಲೇಯಿಂಗ್ 11: ಮಯಾಂಕ್ ಅಗರ್ವಾಲ್ , ದೇವದತ್ ಪಡಿಕ್ಕಲ್ , ಮನೀಶ್ ಪಾಂಡೆ (ನಾಯಕ) , ಕರುಣ್ ನಾಯರ್ , ಶರತ್ ಬಿಆರ್ ( ವಿಕೆಟ್ ಕೀಪರ್) , ಕೃಷ್ಣಪ್ಪ ಗೌತಮ್ , ವಿದ್ಯಾಧರ್ ಪಾಟೀಲ್ , ಅನಿರುದ್ಧ್ ಜೋಶಿ , ಪ್ರತೀಕ್ ಜೈನ್ , ಕೆ ಸಿ ಕಾರ್ಯಪ್ಪ , ಪ್ರಸಿದ್ಧ್ ಕೃಷ್ಣ
ಮುಂಬೈ ಪ್ಲೇಯಿಂಗ್ 11: ಯಶಸ್ವಿ ಜೈಸ್ವಾಲ್ , ಪೃಥ್ವಿ ಶಾ , ಅಜಿಂಕ್ಯ ರಹಾನೆ (ನಾಯಕ) , ಆದಿತ್ಯ ತಾರೆ (ವಿಕೆಟ್ ಕೀಪರ್) , ಶಿವಂ ದುಬೆ , ತುಷಾರ್ ದೇಶಪಾಂಡೆ , ಸಿದ್ಧೇಶ್ ಲಾಡ್ , ಅಥರ್ವ ಅಂಕೋಲೇಕರ್ , ಅಮನ್ ಹಕೀಮ್ ಖಾನ್ , ತನುಷ್ ಕೋಟ್ಯಾನ್ , ಮೋಹಿತ್ ಅವಸ್ತಿ
ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಎಲ್ಲರನ್ನು ಹಿಂದಿಕ್ಕಿದ ಬಾಬರ್
ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!
ಇದನ್ನೂ ಓದಿ: T20 World Cup 2021: ಸೆಹ್ವಾಗ್-ಗಂಭೀರ್ ದಾಖಲೆ ಮುರಿದ ಕೆಎಲ್ ರಾಹುಲ್-ರೋಹಿತ್ ಶರ್ಮಾ
(Syed Mushtaq Ali Trophy 2021 Group B: Karnataka to win over Mumbai)