Syed Mushtaq Ali Trophy 2021: ರೋಚಕ ಜಯದೊಂದಿಗೆ ಫೈನಲ್​ಗೆ ಲಗ್ಗೆಯಿಟ್ಟ ಕರ್ನಾಟಕ

| Updated By: ಝಾಹಿರ್ ಯೂಸುಫ್

Updated on: Nov 20, 2021 | 4:26 PM

Syed Mushtaq Ali Trophy 2021: 177 ರನ್​ಗಳ ಬೃಹತ್ ಗುರಿ ಬೆನ್ನತ್ತಿದ ವಿರ್ದಭ ತಂಡವು ಭರ್ಜರಿ ಆರಂಭ ಪಡೆಯಿತು. ಆರಂಭಿಕರಾದ ಅಥರ್ವ ಥೈಡೆ ಹಾಗೂ ಗಣೇಶ್ ಸತೀಶ್ ಅಬ್ಬರಿಸಿದ್ದರು.

Syed Mushtaq Ali Trophy 2021: ರೋಚಕ ಜಯದೊಂದಿಗೆ ಫೈನಲ್​ಗೆ ಲಗ್ಗೆಯಿಟ್ಟ ಕರ್ನಾಟಕ
ಸಾಂದರ್ಭಿಕ ಚಿತ್ರ
Follow us on

ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ (Syed Mushtaq Ali Trophy 2021)  2ನೇ ಸೆಮಿಫೈನಲ್​ನಲ್ಲಿ ವಿದರ್ಭ ವಿರುದ್ದ ರೋಚಕ ಜಯ ಸಾಧಿಸಿ ಕರ್ನಾಟಕ (Karnataka) ತಂಡ ಫೈನಲ್​ಗೆ ಪ್ರವೇಶಿಸಿದೆ. ಇದಕ್ಕೂ ಮುನ್ನ ಟಾಸ್ ಗೆದ್ದ ವಿದರ್ಭ ತಂಡದ ನಾಯಕ ಬೌಲಿಂಗ್ ಆಯ್ದುಕೊಂಡರು. ಆದರೆ ಈ ನಿರ್ಧಾರವನ್ನು ತಲೆಕೆಳಗಾಗುವಂತೆ ಕರ್ನಾಟಕ ತಂಡ ಭರ್ಜರಿ ಆರಂಭ ಪಡೆಯಿತು. ಇಂದಿನ ಪಂದ್ಯದಲ್ಲಿ ರೋಹನ್ ಕದಮ್ ಜೊತೆ ಆರಂಭಿಕನಾಗಿ ಕಣಕ್ಕಿಳಿದ ಮನೀಷ್ ಪಾಂಡೆ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ವಿಕೆಟ್​ಗೆ 132 ರನ್ ಕಲೆಹಾಕಿದ ಈ ಜೋಡಿ ತಂಡಕ್ಕೆ ಭರ್ಜರಿ ಆರಂಭ ಒದಗಿಸಿದ್ದರು. ಅದರಲ್ಲೂ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ರೋಹನ್ ಕದಮ್ ವಿದರ್ಭ ಬೌಲರುಗಳ ಬೆಂಡೆತ್ತಿದರು. ಅದರಂತೆ 4 ಸಿಕ್ಸ್​ ಹಾಗೂ 7 ಬೌಂಡರಿಯೊಂದಿಗೆ 56 ಎಸೆತಗಳಲ್ಲಿ 87 ರನ್ ಬಾರಿಸಿ ಕದಮ್ ಔಟಾದರು.

ಮತ್ತೊಂದೆಡೆ ಮನೀಷ್ ಪಾಂಡೆ ಕೂಡ ಅರ್ಧಶತಕ ಪೂರೈಸಿದರು. 3 ಸಿಕ್ಸ್ ಹಾಗೂ 2 ಬೌಂಡರಿಯೊಂದಿಗೆ 42 ಎಸೆತಗಳಲ್ಲಿ 54 ರನ್ ಬಾರಿಸಿ ಪಾಂಡೆ ಕೂಡ ವಿಕೆಟ್ ಒಪ್ಪಿಸಿದರು. ಅಷ್ಟರಲ್ಲಾಗಲೇ ಕರ್ನಾಟಕ ತಂಡವು 17 ಓವರ್​ನಲ್ಲಿ 150ರ ಗಡಿದಾಟಿತ್ತು. ಆ ಬಳಿಕ ಬಂದ ಅಭಿನವ್ ಮನೋಹರ್ 13 ಎಸೆತಗಳಲ್ಲಿ 2 ಸಿಕ್ಸ್, 2 ಫೋರ್​ನೊಂದಿಗೆ 27 ರನ್ ಬಾರಿಸಿದರು. 18 ಓವರ್​ ಮುಕ್ತಾಯದ ವೇಳೆಗೆ 174 ರನ್​ಗಳಿಸಿದ್ದ ಕರ್ನಾಟಕ ನಾಟಕೀಯ ಕುಸಿತಕ್ಕೊಳಗಾಯಿತು.

ಕರುಣ್ ನಾಯರ್ (5), ಅನಿರುದ್ಧ್ ಜೋಶಿ (0), ಶರತ್ (0), ಸುಚಿತ್ (0) ಬ್ಯಾಕ್ ಟು ಬ್ಯಾಕ್ ವಿಕೆಟ್ ಒಪ್ಪಿಸಿದರು. ಪರಿಣಾಮ ಕರ್ನಾಟಕ ತಂಡವು ಅಂತಿಮ ಓವರ್​ನಲ್ಲಿ ಕಲೆಹಾಕಿದ್ದು ಕೇವಲ 1 ರನ್​ ಮಾತ್ರ. ಅದರಂತೆ ಕರ್ನಾಟಕ ತಂಡವು ನಿಗದಿತ 20 ಓವರ್​ನಲ್ಲಿ 7 ವಿಕೆಟ್ ನಷ್ಟಕ್ಕೆ 176 ರನ್​ಗೆ ಇನಿಂಗ್ಸ್​ ಅಂತ್ಯಗೊಳಿಸಿತು.

177 ರನ್​ಗಳ ಬೃಹತ್ ಗುರಿ ಬೆನ್ನತ್ತಿದ ವಿರ್ದಭ ತಂಡವು ಭರ್ಜರಿ ಆರಂಭ ಪಡೆಯಿತು. ಆರಂಭಿಕರಾದ ಅಥರ್ವ ಥೈಡೆ ಹಾಗೂ ಗಣೇಶ್ ಸತೀಶ್ ಅಬ್ಬರಿಸಿದ್ದರು. ಪರಿಣಾಮ ಮೊದಲ ವಿಕೆಟ್​ಗೆ 5 ಓವರ್​ನಲ್ಲಿ 46 ರನ್​ ಮೂಡಿಬಂತು. ಈ ಹಂತದಲ್ಲಿ ಕೆಸಿ ಕಾರ್ಯಪ್ಪ ಕರ್ನಾಟಕಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಸುಚಿತ್ ಎಸೆತದಲ್ಲಿ ಗಣೇಶ್ ಸತೀಶ್ (31) ಕೂಡ ವಿಕೆಟ್ ಒಪ್ಪಿಸಿದರು. ಇದಾಗ್ಯೂ ವಿದರ್ಭ ರನ್​ ಗತಿಯನ್ನು ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ. ಪರಿಣಾಮ ಮೊದಲ 10 ಓವರ್​ನಲ್ಲಿ 81 ರನ್​ ಕಲೆಹಾಕಿತು.

12ನೇ ಓವರ್ ಎಸೆದ ಕರುಣ್ ನಾಯರ್ ಕರ್ನಾಟಕಕ್ಕೆ ಮೂರನೇ ಯಶಸ್ಸು ತಂದುಕೊಟ್ಟರೆ, ಅದರ ಬೆನ್ನಲ್ಲೇ ಕೆಸಿ ಕಾರ್ಯಪ್ಪ ಮತ್ತೊಂದು ವಿಕೆಟ್ ಉರುಳಿಸಿದರು. ಅದರಂತೆ ಕೊನೆಯ 6 ಓವರ್​ಗಳಲ್ಲಿ ವಿದರ್ಭ ತಂಡಕ್ಕೆ 64 ರನ್​ಗಳ ಅವಶ್ಯಕತೆಯಿತ್ತು. ಇದೇ ದರ್ಶನ್ ಕೂಡ ಒಂದು ವಿಕೆಟ್ ಕಬಳಿಸಿದರು. ಅಂತಿಮ 4 ಓವರ್​ಗಳಲ್ಲಿ ವಿದರ್ಭ ತಂಡವು 46 ರನ್​ಗಳ ಟಾರ್ಗೆಟ್ ಪಡೆಯಿತು.

ದರ್ಶನ್ ಎಂಬಿ ಎಸೆದ 18ನೇ ಓವರ್​ನಲ್ಲಿ 15 ರನ್​ ಬಾರಿಸುವ ಮೂಲಕ ವಿದರ್ಭ ಬ್ಯಾಟರ್​ಗಳು ಮತ್ತೆ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಅದರಂತೆ ಕೊನೆಯ 2 ಓವರ್​ಗಳಲ್ಲಿ 27 ರನ್​ಗಳ ಗುರಿ ಪಡೆಯಿತು. ವಿಜಯಕುಮಾರ್ ವೈಶಾಖ್ ಎಸೆದ 19ನೇ ಓವರ್​ನ ಮೊದಲ ಎಸೆತದಲ್ಲೇ ಅಕ್ಷಯ್ ಕರ್ನೆವಾರ್ ಸಿಕ್ಸ್ ಸಿಡಿಸಿದರು. ಅಷ್ಟೇ ಅಲ್ಲದೆ ಕೊನೆಯ ಎಸೆತದಲ್ಲಿ ಬೌಂಡರಿ ಬಾರಿಸಿ 13 ರನ್ ಕಲೆಹಾಕಿದರು.

ಕೊನೆಯ ಓವರ್​ನಲ್ಲಿ ವಿದರ್ಭ ತಂಡಕ್ಕೆ ಗೆಲ್ಲಲು 14 ರನ್​ಗಳ ಅವಶ್ಯಕತೆಯಿತ್ತು. ಅಂತಿಮ ಓವರ್​ನ ಮೊದಲ ಎಸೆತದಲ್ಲೇ ವಿದ್ಯಾಧರ್ ಪಾಟೀಲ್ ಅಕ್ಷಯ್ ಕರ್ನೆವಾರ್ (22) ವಿಕೆಟ್ ಪಡೆದರು. 2ನೇ ಎಸೆತದಲ್ಲಿ ಕೇವಲ 1 ರನ್​ ನೀಡಿದರು. 3ನೇ ಎಸೆತದಲ್ಲಿ ವೈಡ್ ಎಸೆದರು. ಪರಿಣಾಮ ವಿದರ್ಭ ತಂಡಕ್ಕೆ ಕೊನೆಯ 4 ಎಸೆತಗಳಲ್ಲಿ 12 ರನ್​ ಬೇಕಿತ್ತು. ಹೆಚ್ಚುವರಿ ಎಸೆತದಲ್ಲಿ 1 ರನ್ ನೀಡಿದರು. 4ನೇ ಎಸೆತದಲ್ಲಿ ಮತ್ತೆ 1 ರನ್. ಕೊನೆಯ 2 ಎಸೆತಗಳಲ್ಲಿ 10 ರನ್ ಬೇಕಿತ್ತು. 5ನೇ ಎಸೆತದಲ್ಲಿ 1 ರನ್. ಕೊನೆಯ ಎಸೆತದಲ್ಲಿ ಬೌಂಡರಿ ನೀಡಿದರೂ, ಕರ್ನಾಟಕ ತಂಡವು 4 ರನ್​ಗಳ ರೋಚಕ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಕರ್ನಾಟಕ ತಂಡವು ಫೈನಲ್ ಪ್ರವೇಶಿಸಿದೆ. ಫೈನಲ್​ನಲ್ಲಿ ತಮಿಳುನಾಡು ಹಾಗೂ ಕರ್ನಾಟಕ ತಂಡಗಳು ಮುಖಾಮುಖಿಯಾಗಲಿದೆ.

ಇದನ್ನೂ ಓದಿ: Rohit Sharma: ಶಾಹಿದ್ ಅಫ್ರಿದಿ ವಿಶ್ವ ದಾಖಲೆ ಮುರಿದ ಹಿಟ್​ಮ್ಯಾನ್ ರೋಹಿತ್ ಶರ್ಮಾ

Published On - 4:25 pm, Sat, 20 November 21