T10 League 2022: ಯುಎಇನಲ್ಲಿ ನಡೆಯುತ್ತಿರುವ ಟಿ10 ಲೀಗ್ನ 4ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿದೆ. ಡೆಲ್ಲಿ ಬುಲ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕ್ರಿಸ್ ಲಿನ್ ನಾಯಕತ್ವದ ಅಬುಧಾಬಿ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಟೀಮ್ ಅಬುಧಾಬಿ ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 19 ರನ್ಗೆ ಕ್ರಿಸ್ ಲಿನ್ (4) ಹಾಗೂ ಅಲೆಕ್ಸ್ ಹೇಲ್ಸ್ (14) ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಈ ಹಂತದಲ್ಲಿ ಕಣಕ್ಕಿಳಿದ ಬ್ರೆಂಡನ್ ಕಿಂಗ್ ಸ್ಪೋಟಕ ಇನಿಂಗ್ಸ್ ಆಡಿದರು.
ಕ್ರೀಸ್ಗೆ ಆಗಮಿಸುತ್ತಿದ್ದಂತೆ ಡೆಲ್ಲಿ ಬುಲ್ಸ್ ಬೌಲರ್ಗಳ ಬೆಂಡೆತ್ತಲಾರಂಭಿಸಿದ ಕಿಂಗ್ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಪರಿಣಾಮ ಕೇವಲ 27 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 5 ಫೋರ್ನೊಂದಿಗೆ ಅಜೇಯ 64 ರನ್ ಸಿಡಿಸಿದರು. ಮತ್ತೊಂದೆಡೆ ವಿನ್ಸ್ 26 ರನ್ಗಳ ಕಾಣಿಕೆ ನೀಡಿದರು. ಈ ಭರ್ಜರಿ ಜೊತೆಯಾಟದ ನೆರವಿನಿಂದ ಅಬುಧಾಬಿ ತಂಡವು ನಿಗದಿತ 10 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 120 ರನ್ ಕಲೆಹಾಕಿತು.
121 ರನ್ಗಳ ಕಠಿಣ ಗುರಿ ಪಡೆದ ಡೆಲ್ಲಿ ಬುಲ್ಸ್ ತಂಡ ಸ್ಪೋಟಕ ಆರಂಭ ಪಡೆಯಿತು. ಆರಂಭಿಕ ಟಾಮ್ ಬ್ಯಾಂಟನ್ 19 ರನ್ಗಳಿಸಿ ಔಟಾದರೆ, ರಿಲೀ ರೊಸ್ಸೊ 18 ರನ್ಗೆ ಇನಿಂಗ್ಸ್ ಅಂತ್ಯಗೊಳಿಸಿದರು. ಆದರೆ ಅಷ್ಟರಲ್ಲಾಗಲೇ ಈ ಆರಂಭಿಕ ಜೋಡಿ 4.2 ಓವರ್ಗಳಲ್ಲಿ 48 ರನ್ಗಳನ್ನು ಕಲೆಹಾಕಿದ್ದರು.
ಈ ಭರ್ಜರಿ ಆರಂಭವನ್ನು ಮುಂದುವರೆಸಿದ ಜೋರ್ಡಾನ್ ಕೋಕ್ಸ್ 12 ಎಸೆತಗಳಲ್ಲಿ 18 ರನ್ ಚಚ್ಚಿದರು. ಇನ್ನು 12 ಎಸೆತಗಳಲ್ಲಿ 20 ರನ್ ಬಾರಿಸುವ ಮೂಲಕ ಟಿಮ್ ಡೇವಿಡ್ ಕೂಡ ಉಪಯುಕ್ತ ಕಾಣಿಕೆ ನೀಡಿದರು. ಆ ಬಳಿಕ ಬಂದ ಇಮಾದ್ ವಾಸಿಂ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಪರಿಣಾಮ 9 ಓವರ್ ಮುಕ್ತಾಯದ ವೇಳೆಗೆ ಡೆಲ್ಲಿ ಬುಲ್ಸ್ ತಂಡವು 108 ರನ್ ಕಲೆಹಾಕಿತು.
ಕೊನೆಯ ಓವರ್ನಲ್ಲಿ ಡೆಲ್ಲಿ ಬುಲ್ಸ್ ತಂಡವು 13 ರನ್ಗಳ ಟಾರ್ಗೆಟ್ ಪಡೆಯಿತು. ಅಂತಿಮ ಓವರ್ ಎಸೆದ ನವೀನ್ ಉಲ್ ಹಕ್ ಮೊದಲ 2 ಎಸೆತದಲ್ಲಿ ಕೇವಲ 2 ರನ್ ನೀಡಿದರು. ಮೂರನೇ ಎಸೆತದಲ್ಲಿ ಇಮಾದ್ ವಾಸಿಂ ಭರ್ಜರಿ ಫೋರ್ ಬಾರಿಸಿದರು. ನಾಲ್ಕನೇ ಎಸೆತದಲ್ಲಿ ಮತ್ತೆರಡು ರನ್ ಕಲೆಹಾಕಿದರು. 5ನೇ ಎಸೆತವನ್ನು ಲಾಂಗ್ ಆಫ್ನತ್ತ ಬಾರಿಸಿದ ಇಮಾದ್ 2 ರನ್ ಓಡಿದರು. ಅದರಂತೆ ಅಂತಿಮ ಎಸೆತದಲ್ಲಿ ಡೆಲ್ಲಿ ಬುಲ್ಸ್ಗೆ 3 ರನ್ಗಳ ಅವಶ್ಯಕತೆಯಿತ್ತು.
ಇತ್ತ ಪ್ರೇಕ್ಷಕರನ್ನು ತುದಿಗಾಲಲ್ಲಿರಿಸಿದ ಅಂತಿಮ ಎಸೆತವನ್ನು ಇಮಾದ್ ವಾಸಿಂ ಲಾಂಗ್ ಆನ್ನತ್ತ ಹೊಡೆದರು. ಆದರೆ ಅತ್ಯುತ್ತಮ ಫೀಲ್ಡಿಂಗ್ ಮೂಲಕ ಚೆಂಡನ್ನು ತಡೆದ ಅಬುಧಾಬಿ ತಂಡವು ಕೇವಲ 2 ರನ್ ಮಾತ್ರ ಬಿಟ್ಟು ಕೊಟ್ಟರು. ಪರಿಣಾಮ ಡೆಲ್ಲಿ ಬುಲ್ಸ್ 5 ವಿಕೆಟ್ ಕಳೆದುಕೊಂಡು 120 ರನ್ಗಳಿಸಲಷ್ಟೇ ಶಕ್ತರಾದರು. ಇದರೊಂದಿಗೆ ಅಂತಿಮ ಎಸೆತದವರೆಗೆ ಸಾಗಿದ್ದ ಪಂದ್ಯವು ಟೈನಲ್ಲಿ ಅಂತ್ಯಗೊಂಡಿತು. ಇನ್ನು ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಅರ್ಧಶತಕ ಸಿಡಿಸಿದ್ದ ಬ್ರೆಂಡನ್ ಕಿಂಗ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿಯಿತು.
ಟೀಮ್ ಅಬುಧಾಬಿ ಪ್ಲೇಯಿಂಗ್ ಇಲೆವೆನ್: ಕ್ರಿಸ್ ಲಿನ್ (ನಾಯಕ) , ಅಲೆಕ್ಸ್ ಹೇಲ್ಸ್ , ಜೇಮ್ಸ್ ವಿನ್ಸ್ ( ವಿಕೆಟ್ ಕೀಪರ್ ) , ಬ್ರಾಂಡನ್ ಕಿಂಗ್ , ಅಬಿದ್ ಅಲಿ , ಪೀಟರ್ ಹ್ಯಾಟ್ಜೋಗ್ಲೋ , ಆಂಡ್ರ್ಯೂ ಟೈ , ಅಲಿಶನ್ ಶರಾಫು , ಆದಿಲ್ ರಶೀದ್ , ಅಮದ್ ಬಟ್ , ನವೀನ್-ಉಲ್-ಹಕ್
ಡೆಲ್ಲಿ ಬುಲ್ಸ್ ಪ್ಲೇಯಿಂಗ್ ಇಲೆವೆನ್: ಟಾಮ್ ಬ್ಯಾಂಟನ್ (ವಿಕೆಟ್ ಕೀಪರ್) , ರಿಲೀ ರೊಸ್ಸೊ , ಜೋರ್ಡಾನ್ ಕಾಕ್ಸ್ , ಟಿಮ್ ಡೇವಿಡ್ , ಇಮಾದ್ ವಾಸಿಮ್ , ಆಸಿಫ್ ಖಾನ್ , ಡ್ವೇನ್ ಬ್ರಾವೋ (ನಾಯಕ) , ಕೀಮೋ ಪಾಲ್ , ಶಿರಾಜ್ ಅಹ್ಮದ್ , ರಿಚರ್ಡ್ ಗ್ಲೀಸನ್ , ವಕಾಸ್ ಮಕ್ಸೂದ್.