ವಿಶ್ವಕಪ್ ಟ್ರೋಫಿಯೊಂದಿಗೆ ವಿಮಾನ ಹತ್ತಿದ ಚಾಂಪಿಯನ್ಸ್, ಮೋದಿ ಭೇಟಿಗೆ ಮುಹೂರ್ತ ಫಿಕ್ಸ್
ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಫೈನಲ್ನಲ್ಲಿ ಭಾರತ ಗೆದ್ದ ಕಪ್ ಎತ್ತಿಹಿಡಿದು ಸಂಭ್ರಮಿಸಿದ ಟೀಂ ಇಂಡಿಯಾ ವಿಮಾನ ಹತ್ತಿದೆ. ಬೆರಿಲ್ ಚಂಡಮಾರುತ ಹಿನ್ನೆಲೆಯಲ್ಲಿ ಬಾರ್ಬಡೋಸ್ನಲ್ಲೇ ಉಳಿದುಕೊಂಡಿದ್ದ ಭಾರತ ತಂಡ ಇದೀಗ ಬಾರ್ಬಡೋಸ್ನಿಂದ ವಿಮಾನ ಏರಿದ್ದು, ನಾಳೆ (ಜುಲೈ 04) ಬೆಳಗ್ಗೆ ದೆಹಲಿಗೆ ಬಂದಿಳಿಯಲಿದೆ. ಇನ್ನು ಚಾಂಪಿಯನ್ಸ್ ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಸಮಯ ನಿಗದಿಯಾಗಿದೆ.
ಟಿ20 ವಿಶ್ವ ಚಾಂಪಿಯನ್ ಭಾರತ ತಂಡ ಬಾರ್ಬಡೋಸ್ನಿಂದ ತವರಿಗೆ ಪ್ರಯಾಣ ಬೆಳೆಸಿದೆ. ಈ ವಿಚಾರವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ಟಿ20 ವಿಶ್ವಕಪ್ ಟ್ರೋಫಿಯ ವಿಡಿಯೊ ಹಾಕಿ ನಾವು ಮರಳುತ್ತಿದ್ದೇವೆ ಎಂದು ಬರೆದುಕೊಂಡಿದೆ. ಇನ್ನು ಕ್ಯಾಪ್ಟನ್ ರೋಹಿತ್ ಶರ್ಮಾ ಕೂಡ ತವರಿಗೆ ಮರಳುತ್ತಿರುವುದಾಗಿ ವಿಮಾನದಲ್ಲಿ ವಿಶ್ವಕಪ್ ಹಿಡಿದುಕೊಂಡ ನಿಂತಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಬುಧವಾರ ಬಾರ್ಬಡೋಸ್ನಿಂದ ವಿಮಾನ ಹತ್ತಿರುವ ಟೀಮ್ ಇಂಡಿಯಾ ಗುರುವಾರ (ಜುಲೈ 04) ಬೆಳಗ್ಗೆ ನವದೆಹಲಿಗೆ ಬಂದಿಳಿಯಲಿದೆ. ಬಿಸಿಸಿಐ ವ್ಯವಸ್ಥೆ ಮಾಡಿರುವ ವಿಶೇಷ ವಿಮಾನದಲ್ಲಿ ಆಟಗಾರರು ಮತ್ತವರ ಕುಟುಂಬಸ್ಥರು, ಬಿಸಿಸಿಐ ಅಧಿಕಾರಿಗಳು ಸೇರಿ ಇಡೀ ತಂಡ ಭಾರತಕ್ಕೆ ಮರಳಲಿದ್ದಾರೆ. ಚಾಂಪಿಯನ್ಸ್ ವಿಶ್ವಕಪ್ನೊಂದಿಗೆ ಫೈನಲ್ ಗೆದ್ದ ಐದು ದಿನಗಳ ನಂತರ ತವರಿಗೆ ಬಂದಿಳಿಯಲಿದ್ದಾರೆ.
It’s coming home 🏆#TeamIndia pic.twitter.com/Pxx4KGASb8
— BCCI (@BCCI) July 3, 2024
ಇದನ್ನೂ ಓದಿ: ಬಾರ್ಬಡೋಸ್‌ನಲ್ಲಿ ಚಂಡಮಾರುತ: ಕೆರಿಬಿಯನ್ ದ್ವೀಪದಲ್ಲೇ ಉಳಿದ ಟಿಮ್ ಇಂಡಿಯಾ
View this post on Instagram
ಮೋದಿ ಭೇಟಿಯಾಗಲಿರುವ ಟೀಂ ಇಂಡಿಯಾ
ಇನ್ನು ನಾಳೆ(ಜುಲೈ 04) ಬೆಳಗ್ಗೆ ಟೀಂ ಇಂಡಿಯಾ ನವದೆಹಲಿಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದ್ದು, ಬಳಿಕ ವಿಶ್ವಕಪ್ ಟ್ರೋಫಿಯೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದೆ. ಜುಲೈ 4, ಬೆಳಗ್ಗೆ 11 ಗಂಟೆಗೆ ಭಾರತ ತಂಡ, ನರೇಂದ್ರ ಮೋದಿ ನಿವಾಸಕ್ಕೆ ಭೇಟಿ ನೀಡಲಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮಾಹಿತಿ ನೀಡಿದ್ದಾರೆ.
ಜೂ.29ರಂದು ನಡೆದ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 176 ರನ್ ಕಲೆಹಾಕಿದರೆ, ಸೌತ್ ಆಫ್ರಿಕಾ ತಂಡವು 169 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಭಾರತ ತಂಡವು 7 ರನ್ಗಳಿಂದ ಜಯ ಸಾಧಿಸಿ ಟಿ20 ವಿಶ್ವಕಪ್ ಗೆದ್ದುಕೊಂಡಿತ್ತು.
ಟಿ 20 ವಿಶ್ವಕಪ್ ಫೈನಲ್ನಲ್ಲಿ ಭಾರತ ಗೆದ್ದ ಕೆಲವೇ ಗಂಟೆಗಳ ನಂತರ ಬೆರಿಲ್ ಚಂಡಮಾರುತವು ದ್ವೀಪ ರಾಷ್ಟ್ರಕ್ಕೆ ಅಪ್ಪಳಿಸಿತ್ತು. ಗಂಟೆಗೆ 130 ಕಿ.ಮೀ.ಗೂ ವೇಗವಾಗಿ ಗಾಳಿ ಬೀಸುತ್ತಿರುವುದರಿಂದ ಪ್ರವಾಸಿಗರಿಗೆ ಒಳಾಂಗಣದಲ್ಲೇ ಉಳಿದುಕೊಳ್ಳುವಂತೆ ಎಚ್ಚರಿಕೆ ನೀಡಲಾಗಿತ್ತು. ಅಲ್ಲದೇ ಬಾರ್ಬಡಾಸ್‌ನಲ್ಲಿ ನಿಷೇದಾಜ್ಞೆ ಜಾರಿ ಮಾಡಿ ಜನರಿಗೆ ಮನೆಗಳಿಂದ ಹೊರಬರದಂತೆ ಸೂಚಿಸಲಾಗಿತ್ತು. ಜತೆಗೆ ವಿಮಾನ ನಿಲ್ದಾಣಗಳು ಬಂದ್ ಆಗಿತ್ತು. ಹೀಗಾಗಿ ಭಾರತ ತಂಡ ಬಾರ್ಬಡೋಸ್ನ ಹೊಟೇಲ್‌ನಲ್ಲೇ ಉಳಿದುಕೊಂಡಿತ್ತು.
ಇನ್ನಷ್ಟು ಕ್ರಿಕೆಟ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:14 pm, Wed, 3 July 24